ನವದೆಹಲಿ(ಅ.16): ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಹಾಗೂ ಆರ್​ಬಿಐ ಮಾಜಿ ಗವರ್ನರ್​ ರಘುರಾಮ್​ ರಾಜನ್​ ಅವರ ಆಡಳಿತಾವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್​ಗಳು ದುಸ್ಥಿತಿ ತಲುಪಿದ್ದವು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ವಿಭಾಗದ ಸಭೆ ಉದ್ದೇಶಿಸಿ ಮಾತನಾಡಿದ ನಿರ್ಮಲಾ, ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಅಧೋಗತಿಗೆ ತಲುಪಲು ಸಿಂಗ್-ರಾಜನ್ ಜೋಡಿಯೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಚೈತನ್ಯ ತುಂಬುವುದು ತಮ್ಮ ಆದ್ಯ ಕರ್ತವ್ಯ ಎಂದಿರುವ ವಿತ್ತ ಸಚಿವೆ, ಈ ಹಿಂದಿನ ಸರ್ಕಾರ ಮಾಡಿದ ತಪ್ಪನ್ನು ಸರಿಪಡಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಹೇಳಿದ್ದಾರೆ.

ರಘುರಾಮ್ ರಾಜನ್​ ಆರ್​ಬಿಐ ಗವರ್ನರ್​ ಆಗಿದ್ದ ಸಂದರ್ಭದಲ್ಲಿ ಪ್ರಭಾವಿಶಾಲಿ ವ್ಯಕ್ತಿಗಳಿಗೆ ಒಂದು ಫೋನ್​ ಕರೆ ಮೂಲಕ ಸಾಲ ಸಿಗುತ್ತಿತ್ತು. ಅದರಿಂದ ಉಂಟಾದ ತೊಂದರೆಗಳನ್ನು ನಾವು ಎದುರಿಸುತ್ತಿದ್ದೇವೆ ಎಂದು ನಿರ್ಮಲಾ ನೇರವಾಗಿಯೇ ಆರೋಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್​ ಪನಗರಿಯಾ, ಪ್ರೊ. ಜಗದೀಶ್​ ಭಾಗ್ವತಿ ಮತ್ತು ನ್ಯೂಯಾರ್ಕ್​ನಲ್ಲಿರುವ ಭಾರತದ ಕೌನ್ಸಿಲ್​ ಜನರಲ್​  ಸಂದೀಪ್​ ಚಕ್ರವರ್ತಿ ಭಾಗವಹಿಸಿದ್ದರು.