ನಿವೃತ್ತಿ ಬದುಕಿಗಾಗಿ ಒಂದಿಷ್ಟು ಉಳಿತಾಯ ಮಾಡಬೇಕು ಎಂಬ ಕನಸು ಯಾರಿಗಿಲ್ಲ ಹೇಳಿ? ಆದರೆ, ಬಡವರ್ಗದ ಜನರಿಗೆ ಉಳಿತಾಯ ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ಈ ಹಿನ್ನೆಲೆಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಎಷ್ಟು ಪಿಂಚಣಿ ಸಿಗುತ್ತೆ?
Business Desk:ನಿವೃತ್ತಿ ಬದುಕಿಗಾಗಿ ಉಳಿತಾಯ ಮಾಡಲು ಇಂದು ಅನೇಕ ಯೋಜನೆಗಳು ಲಭ್ಯವಿವೆ. ಆದರೆ, ಬಹುತೇಕ ಎಲ್ಲ ಯೋಜನೆಗಳು ತಿಂಗಳಿಗೆ ನಿಗದಿತ ಆದಾಯ ಹೊಂದಿರುವ, ಅನುಕೂಲಸ್ಥರಿಗೆ ಮಾತ್ರ ಮೀಸಲಾಗಿವೆ. ಈ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಕೂಡ ತಮ್ಮ ನಿವೃತ್ತಿ ಬದುಕಿಗೆ ಒಂದಿಷ್ಟು ಕೂಡಿಡಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. 15 ಸಾವಿರ ರೂ.ಗಿಂತ ಕಡಿಮೆ ಆದಾಯ ಹೊಂದಿರುವ 60 ವರ್ಷ ಮೇಲ್ಪಟ್ಟ ವ್ಯಕ್ತಿ ಈ ಯೋಜನೆಯಡಿ ಮಾಸಿಕ ಮೂರು ಸಾವಿರ ರೂ. ಪಿಂಚಣಿ ಪಡೆಯಬಹುದು. ಈ ಯೋಜನೆಗೆ ನೀವು ಎಷ್ಟು ಕೊಡುಗೆ ನೀಡುತ್ತೀರೋ ಅಷ್ಟೇ ಮೊತ್ತದ ಕೊಡುಗೆಯನ್ನು ಸರ್ಕಾರ ಕೂಡ ನೀಡುತ್ತದೆ. ಅಂದರೆ ನೀವು ಈ ಯೋಜನೆಯಲ್ಲಿ ಪ್ರತಿ ತಿಂಗಳು 100ರೂ. ಹೂಡಿಕೆ ಮಾಡುತ್ತ ಬಂದಿದ್ದರೆ, ಸರ್ಕಾರ ಕೂಡ 100ರೂ. ಕೊಡುಗೆ ನೀಡುತ್ತ ಬಂದಿರುತ್ತದೆ. ಹಾಗಾದ್ರೆ ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಯಲ್ಲಿ ಯಾರು ಹೂಡಿಕೆ ಮಾಡೋದು ಹೇಗೆ? ಯಾವೆಲ್ಲ ದಾಖಲೆಗಳು ಅಗತ್ಯ? ಇಲ್ಲಿದೆ ಮಾಹಿತಿ.
ಯಾರು ಅರ್ಹರು?
ಬೀದಿಬದಿ ವ್ಯಾಪಾರಿಗಳು, ಚಾಲಕರು, ಟೈಲರ್, ಕಟ್ಟಡ ನಿರ್ಮಾಣ ಕಾರ್ಮಿಕರು, ಮಧ್ಯಾಹ್ನದ ಬಿಸಿಯೂಟ ಯೋಜನೆ ಕಾರ್ಮಿಕರು, ರಿಕ್ಷಾ ಚಾಲಕರು, ಬೀಡಿ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಪಿಎಂ ಶ್ರಮ ಯೋಗಿ ಮನ್ ಧನ್ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಯಡಿಯಲ್ಲಿ ಸರ್ಕಾರ ಇವರಿಗೆ ಪಿಂಚಣಿ ನೀಡುತ್ತದೆ. ಸರ್ಕಾರದ ಇತರ ಯಾವುದೇ ಯೋಜನೆ ಫಲಾನುಭವಿಯಲ್ಲದ ಯಾವುದೇ ಅಸಂಘಟಿತ ವಲಯದ 18 ವರ್ಷದಿಂದ 40 ವರ್ಷದೊಳಗಿನ ಕಾರ್ಮಿಕರು ಈ ಯೋಜನೆ ಪ್ರಯೋಜನ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿ ಮಾಸಿಕ 15,000ರೂ.ಗಿಂತ ಕಡಿಮೆ ವೇತನ ಹೊಂದಿರಬೇಕು.
ಸಾಲದ ಮೇಲಿನ ಕನಿಷ್ಠ ಬಡ್ಡಿದರ ಹೆಚ್ಚಳ ಮಾಡಿದ SBI; ಸಾಲಗಾರರ ಮೇಲೆ ಹೆಚ್ಚಿದ ಹೊರೆ
ಯಾವೆಲ್ಲ ದಾಖಲೆಗಳು ಅಗತ್ಯ?
ಈ ಯೋಜನೆ ಪ್ರಾರಂಭಿಸಲು ನೀವು ಬ್ಯಾಂಕ್ ಉಳಿತಾಯ ಖಾತೆ ಹಾಗೂ ಆಧಾರ್ ಕಾರ್ಡ್ ಹೊಂದಿರೊದು ಕಡ್ಡಾಯ. ಇನ್ನು ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಠ ವಯೋಮತಿ 18 ವರ್ಷ ಹಾಗೂ ಗರಿಷ್ಠ ವಯೋಮತಿ 40 ವರ್ಷ.
ನೋಂದಣಿ ಮಾಡೋದು ಎಲ್ಲಿ?
ಈ ಯೋಜನೆಯಲ್ಲಿ ನೋಂದಣಿ ಮಾಡಲು ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ತೆರಳಿ ನೋಂದಣಿ ಮಾಡಬಹುದು. ಇನ್ನು ಕಾರ್ಮಿಕರು ಸಾಮಾನ್ಯ ಸೇವಾ ಕೇಂದ್ರದ ಸೈಟ್ ನಲ್ಲಿ ಖಾತೆ ತರೆಯಬಹುದು. ಈ ಯೋಜನೆಗಾಗಿ ಸರ್ಕಾರ ವೆಬ್ ಪೋರ್ಟಲ್ ಕೂಡ ರಚಿಸಿದೆ. ಈ ಸೌಲಭ್ಯಗಳ ಮೂಲಕ ಕಲೆ ಹಾಕಿದ ಎಲ್ಲ ಮಾಹಿತಿಗಳನ್ನು ಭಾರತ ಸರ್ಕಾರಕ್ಕೆ ಕಳುಹಿಸಲಾಗುತ್ತದೆ.
ಜ.30, 31ರಂದು ಬ್ಯಾಂಕ್ ಸಂಘಟನೆಗಳಿಂದ ಮುಷ್ಕರ?
ಎಷ್ಟು ಹೂಡಿಕೆ ಮಾಡಬೇಕು?
18 ವರ್ಷ ವಯಸ್ಸಿನವರು ತಿಂಗಳಿಗೆ 55ರೂ. ಹೂಡಿಕೆ ಮಾಡಬೇಕು. 19 ವರ್ಷದವರು 58ರೂ., 20 ವರ್ಷದವರು 61ರೂ. ಹೂಡಿಕೆ ಮಾಡಬೇಕು. ಇನ್ನು 21 ವರ್ಷದವರು 64ರೂ. ಹೂಡಿಕೆ ಮಾಡಬೇಕು. ಇನ್ನು 22 ನೇ ವಯಸ್ಸಿನವರು 68ರೂ., 23ನೇ ವಯಸ್ಸಿನವರು 72 ರೂ. ಹೂಡಿಕೆ ಮಾಡಬೇಕು. ಇನ್ನು 24 ವಯಸ್ಸಿನವರು ಮಾಸಿಕ 76ರೂ., 25 ವಯಸ್ಸಿನವರಿಗೆ 80ರೂ. ಹಾಗೂ 26ನೇ ವಯಸ್ಸಿನವರು 85 ರೂ., 27ನೇ ವಯಸ್ಸಿನವರು 90 ರೂ., 28ನೇ ವಯಸ್ಸಿನವರು 95ರೂ. ಹೂಡಿಕೆ ಮಾಡಬೇಕು. ಹೀಗೆ 40 ವಯಸ್ಸಿನ ತನಕ ಬೇರೆ ಬೇರೆ ಮೊತ್ತವನ್ನು ಹೂಡಿಕೆ ಮಾಡಬೇಕು. 40ನೇ ವಯಸ್ಸಿನಲ್ಲಿ 200ರೂ. ಹೂಡಿಕೆ ಮಾಡಬೇಕು.
