ಕಳೆದ ತಿಂಗಳಷ್ಟೇ ಎಸ್ ಬಿಐ ಎಂಸಿಎಲ್ ಆರ್ ಹೆಚ್ಚಳ ಮಾಡಿತ್ತು. ಈಗ ಮತ್ತೊಮ್ಮೆ ಒಂದು ವರ್ಷ ಅವಧಿಯ ಸಾಲಗಳ ಮೇಲಿನ ಎಂಸಿಎಲ್ಆರ್ ಹೆಚ್ಚಳ ಮಾಡಿದೆ. ಇದ್ರಿಂದ ಎಸ್ ಬಿಐಯಿಂದ ಸಾಲ ಪಡೆದವರ ಮೇಲಿನ ಹೊರೆ ಮತ್ತಷ್ಟು ಹೆಚ್ಚಿದೆ.  

ನವದೆಹಲಿ (ಜ.14): ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಒಂದು ವರ್ಷ ಅವಧಿಯ ಸಾಲಗಳ ಮೇಲಿನ ಕನಿಷ್ಠ ಬಡ್ಡಿದರ ಅಥವಾ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರವನ್ನು (ಎಂಸಿಎಲ್ ಆರ್) 10 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿದೆ. ಇದ್ರಿಂದ ಎಂಸಿಎಲ್ ಆರ್ ದರ ಶೇ. 8.4ಕ್ಕೆ ಏರಿಕೆಯಾಗಿದೆ. ಎಂಸಿಎಲ್ ಆರ್ ಏರಿಕೆಯಿಂದ ವಿವಿಧ ಸಾಲಗಳ ಇಎಂಐ ಮೊತ್ತ ಹೆಚ್ಚಲಿದೆ. ಬಹುತೇಕ ಗೃಹ, ವಾಹನ ಹಾಗೂ ವೈಯಕ್ತಿಕ ಸಾಲಗಳು ಎಂಸಿಎಲ್ ಆರ್ ಜೊತೆಗೆ ಬೆಸೆದುಕೊಂಡಿವೆ. ಆದರೆ, ಎಂಸಿಎಲ್ ಆರ್ ಫ್ಲೋಟಿಂಗ್ ಬಡ್ಡಿದರದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಫಿಕ್ಸೆಡ್ ಅಥವಾ ಸ್ಥಿರ ಬಡ್ಡಿದರದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಎಸ್ ಬಿಐ ಕಳೆದ ತಿಂಗಳು ಕೂಡ ಆಯ್ದ ಅವಧಿಯ ಸಾಲಗಳ ಮೇಲಿನ ಕನಿಷ್ಠ ಬಡ್ಡಿದರ ಹೆಚ್ಚಳ ಮಾಡಿತ್ತು. ಆಗ ಎಂಸಿಎಲ್ ಆರ್ ಅನ್ನು 25 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋ ದರ ಹೆಚ್ಚಳ ಮಾಡಿದ್ರೆ ಬ್ಯಾಂಕ್ ಗಳು ಕೂಡ ಬಡ್ಡಿದರ ಏರಿಕೆ ಮಾಡುತ್ತವೆ. 

ಎಂಸಿಎಲ್ ಆರ್ (MCLR) ಏರಿಕೆಯಿಂದ ಗ್ರಾಹಕರ ಇಎಂಐ ಮೊತ್ತ ಹೆಚ್ಚಲಿದೆ. ವಾಹನ, ಗೃಹ ಹಾಗೂ ವೈಯಕ್ತಿಕ ಸಾಲ ಸೇರಿದಂತೆ ಬಹುತೇಕ ಸಾಲಗಳು ಎಂಸಿಲ್ ಆರ್ ಜೊತೆಗೆ ಲಿಂಕ್ ಆಗಿರುತ್ತವೆ. ಇನ್ನು ಇಎಂಐ ಮೊತ್ತದಲ್ಲಿ ಎಷ್ಟು ಹೆಚ್ಚಳವಾಗುತ್ತದೆ ಎಂಬುದು ಸಾಲದ ಮೊತ್ತ, ಅವಧಿ ಹಾಗೂ ಬ್ಯಾಂಕ್ ವಿಧಿಸಿರುವ ಬಡ್ಡಿದರವನ್ನು ಅವಲಂಬಿಸಿರುತ್ತದೆ. ಎಂಸಿಎಲ್ಆರ್ ಗಿಂತ ಮೊದಲು ಬ್ಯಾಂಕ್ ಗಳು ತಮ್ಮ ಪ್ರಮುಖ ಗ್ರಾಹಕರಿಗೆ ಬೇಸ್ ರೇಟ್ ಗಿಂತ ಕಡಿಮೆ ದರಕ್ಕೆ ಸಾಲ ನೀಡುತ್ತಿದ್ದವು. ಹಾಗೆಯೇ ಇತರ ಗ್ರಾಹಕರಿಗೆ ಹೆಚ್ಚಿನ ಬಡ್ಡಿದರ ವಿಧಿಸುತ್ತಿದ್ದವು. ಹಣದುಬ್ಬರಕ್ಕೆ ಕಡಿವಾಣ ಹಾಕಲು ಬ್ಯಾಂಕ್ ಗಳು ಬಡ್ಡಿದರ ಹೆಚ್ಚಳ ಮಾಡುತ್ತವೆ. ಹಣದುಬ್ಬರವನ್ನು ಶೇ.2-6ಕ್ಕಿಂತ ಕಡಿಮೆ ಪ್ರಮಾಣಕ್ಕೆ ತರುವುದು ಬ್ಯಾಂಕ್ ಗಳ ಮುಖ್ಯ ಗುರಿಯಾಗಿದೆ.

Women Finance: ಮಹಿಳೆಗೂ ಇರಲಿ ಬ್ಯಾಂಕಿಂಗ್ ಜ್ಞಾನ

ಎಂಸಿಎಲ್ ಆರ್ ಅಂದ್ರೇನು?
ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (MCLR) ಎಂದರೆ ಬ್ಯಾಂಕ್ ಗಳು ಗ್ರಾಹಕರಿಗೆ ಸಾಲ ನೀಡುವ ಕನಿಷ್ಠ ಬಡ್ಡಿದರ. ವಿವಿಧ ಮಾದರಿಯ ಸಾಲಗಳ ಬಡ್ಡಿ ದರಗಳನ್ನು ನಿರ್ಧರಿಸಲು 2016 ರಲ್ಲಿ ಆರ್ ಬಿಐ ಎಂಸಿಎಲ್ ಆರ್ ಪರಿಚಯಿಸಿತು. ಸರಳವಾಗಿ ಹೇಳಬೇಕೆಂದ್ರೆ ಎಂಸಿಎಲ್ ಆರ್ ಅನ್ನೋದು ಬ್ಯಾಂಕ್ ಗಳು ಸಾಲ ನೀಡಲು ಅನುಸರಿಸುವ ಬಡ್ಡಿಯ ಮಾನದಂಡ. ಈ ವಿಧಾನದಲ್ಲಿ ಸಾಲದ ಮೇಲಿನ ಬಡ್ಡಿ ನಿಗದಿಗೆ ಕನಿಷ್ಠ ದರವನ್ನು ಅನುಸರಿಸಲಾಗುತ್ತದೆ. ಇದಕ್ಕಿಂತ ಕಡಿಮೆ ದರದಲ್ಲಿ ಬ್ಯಾಂಕ್ ಗಳು ಸಾಲ ನೀಡುವುದಿಲ್ಲ. 

ಇ-ಬ್ಯಾಂಕ್ ಗ್ಯಾರಂಟಿ ಸೌಲಭ್ಯ ಪ್ರಾರಂಭಿಸಿದ ಎಸ್ ಬಿಐ; ಗ್ರಾಹಕರಿಗೇನು ಲಾಭ?

ಬಡ್ಡಿ ಹೆಚ್ಚಳಕ್ಕೆ ಕಾರಣವೇನು?
ಆರ್ ಬಿಐ ರೆಪೋ ದರ (Repo rate) ಹೆಚ್ಚಳ ಮಾಡಿದಾಗ ಬ್ಯಾಂಕ್ ಗಳು ಕೂಡ ಸಾಲಗಳ ಮೇಲಿನ ಬಡ್ಡಿದರ (Interest rate) ಹೆಚ್ಚಳ ಮಾಡುತ್ತವೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್ ಬಿಐ (RBI) 2022ರಲ್ಲಿ ಐದು ಬಾರಿ ರೆಪೋ ದರ (Repo rate)ಏರಿಕೆ ಮಾಡಿದೆ. ಡಿಸೆಂಬರ್ 7ರಂದು ಆರ್ ಬಿಐ ರೆಪೋ ದರವನ್ನು 35 ಮೂಲಾಂಕಗಳಷ್ಟು ಹೆಚ್ಚಳ ಮಾಡಿದೆ. ಇದರಿಂದ ರೆಪೋ ದರ ಶೇ.6.25ಕ್ಕೆ ಏರಿಕೆಯಾಗಿದೆ. ಇದೇ ಕಾರಣಕ್ಕೆ ಎಸ್ ಬಿಐ ಕೂಡ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದೆ.