ಚುನಾವಣಾ ಬಾಂಡ್ ಗಳೇ ರಾಜಕೀಯ ಪಕ್ಷಗಳ ತಿಜೋರಿ; 2018ರಿಂದ ಇಲ್ಲಿಯ ತನಕ 10,791ಕೋಟಿ ರೂ. ಸಂಗ್ರಹ
2018ರಲ್ಲಿ ಚುನಾವಣಾ ಬಾಂಡ್ ಗಳನ್ನು ಪರಿಚಯಿಸಿದ ಬಳಿಕ ರಾಜಕೀಯ ಪಕ್ಷಗಳು ವಿವಿಧ ಅನಾಮಧೇಯ ದಾನಿಗಳಿಂದ ಸಂಗ್ರಹಿಸಿರುವ ಒಟ್ಟು ಮೊತ್ತ 10,791ಕೋಟಿ ರೂ. ತಲುಪಿದೆ. ಈ ವರ್ಷದ ಜುಲೈನಲ್ಲಿ ನಡೆದ ಮಾರಾಟದಲ್ಲಿ ರಾಜಕೀಯ ಪಕ್ಷಗಳು ದಾನಿಗಳಿಂದ 389.50 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಸ್ವೀಕರಿಸಿವೆ.
ನವದೆಹಲಿ (ನ.8): ಮುಂದಿನ ಎರಡು ತಿಂಗಳಲ್ಲಿ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಅಕ್ಟೋಬರ್ 1 ಮತ್ತು 10 ರ ನಡುವೆ 22ನೇ ಬಾರಿ ಅನಾಮಧೇಯ ಚುನಾವಣಾ ಬಾಂಡ್‌ಗಳ (ಇಬಿ) ಮಾರಾಟ ನಡೆಸಿ 545 ಕೋಟಿ ರೂ. ಸ್ವೀಕರಿಸಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ದಾಖಲೆಗಳು ತಿಳಿಸಿವೆ. ಇದರಿಂದ 2018ರಲ್ಲಿ ಚುನಾವಣಾ ಬಾಂಡ್ ಯೋಜನೆ ಪರಿಚಯಸಿದ ಬಳಿಕ ಭಾರತದಲ್ಲಿ ವಿವಿಧ ಅನಾಮಧೇಯ ದಾನಿಗಳಿಂದ ಪಕ್ಷಗಳು ಸಂಗ್ರಹಿಸಿದ ಒಟ್ಟು ಮೊತ್ತ 10,791ಕೋಟಿ ರೂ.ಗೆ ತಲುಪಿದೆ. ಈ ವರ್ಷದ ಜುಲೈನಲ್ಲಿ ಈ ಹಿಂದಿನ ಮಾರಾಟದಲ್ಲಿ ದಾನಿಗಳಿಂದ ರಾಜಕೀಯ ಪಕ್ಷಗಳು 389.50 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಸ್ವೀಕರಿಸಿವೆ. ಇತ್ತೀಚಿನ ಹಂತದಲ್ಲೇ 542.25 ಕೋಟಿ ರೂ. ಮೌಲ್ಯದ 738 ಚುನಾವಣಾ ಬಾಂಡ್‌ಗಳನ್ನು ಪಕ್ಷಗಳು ನಗದೀಕರಿಸಿವೆ ಎಂದು ನಿವೃತ್ತ ಕಮಾಂಡರ್ ಲೋಕೇಶ್ ಕೆ.ಬಾತ್ರ ಅವರ ಆರ್ ಟಿಐ ಅರ್ಜಿಗೆ ಎಸ್ ಬಿಐ ನೀಡಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದೆ. ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಲು ಇರುವ ಏಕೈಕ ಅಧಿಕೃತ ಬ್ಯಾಂಕ್ ಎಸ್ ಬಿಐ ಆಗಿದೆ.
ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಇದೇ ತಿಂಗಳಲ್ಲಿ ನಡೆಯಲಿದ್ದರೆ, ಗುಜರಾತ್ ನಲ್ಲಿ ಡಿಸೆಂಬರ್ ಗೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಗಳನ್ನು ನಗದೀಕರಿಸುತ್ತಿವೆ. ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29 ಎ ಅಡಿಯಲ್ಲಿ ನೋಂದಣಿಗೊಂಡಿರುವ ರಾಜಕೀಯ ಪಕ್ಷಗಳು ಮಾತ್ರ ಚುನಾವಣಾ ಬಾಂಡ್ ಗಳನ್ನು ಹೊಂದಲು ಅವಕಾಶವಿದೆ. ಅಲ್ಲದೆ, ಈ ಪಕ್ಷಗಳು ಹಿಂದಿನ ಸಾಮಾನ್ಯ ಚುನಾವಣೆಯಲ್ಲಿ ಶೇ.1ಕ್ಕಿಂತ ಕಡಿಮೆ ಮತಗಳನ್ನು ಪಡೆದಿರಬಾರದು. ಇಂಥ ರಾಜಕೀಯ ಪಕ್ಷಗಳು ಮಾತ್ರ ಚುನಾವಣಾ ಬಾಂಡ್ ಗಳನ್ನು ಪಡೆಯಲು ಅರ್ಹತೆ ಹೊಂದಿವೆ.
Wedding Business: ನ. 4ರಿಂದ ಡಿ.14ರ ತನಕ ದೇಶಾದ್ಯಂತ 32 ಲಕ್ಷ ವಿವಾಹ: ₹3.75 ಲಕ್ಷ ಕೋಟಿ ವ್ಯವಹಾರದ ನಿರೀಕ್ಷೆ
ಚುನಾವಣಾ ಬಾಂಡ್ ಯೋಜನೆ ಪ್ರಶ್ನಿಸಿ ಸಲ್ಲಿಸಿರುವ ಬಾಕಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 6ಕ್ಕೆ ಮುಂದೂಡಿದೆ. ಅನಾಮಧೇಯ ಬಾಂಡ್ ಗಳನ್ನು ಸ್ವೀಕರಿಸಲು ಅನುವು ಮಾಡಿಕೊಟ್ಟ ಹಣಕಾಸು ಕಾಯ್ದೆ 2017ರ ನಿಬಂಧನೆಗಳನ್ನು ಪ್ರಶ್ನಿಸಿ 2017ರಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.
ಎಸ್ ಬಿಐ ನೀಡಿರುವ ಅಂಕಿಅಂಶಗಳ ಪ್ರಕಾರ ಅಕ್ಟೋಬರ್ ಹಂತದಲ್ಲಿ 67 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಹೈದರಾಬಾದ್ ಮುಖ್ಯ ಕಚೇರಿಯಲ್ಲಿ ನಗದೀಕರಿಸಲಾಗಿದೆ. ನವದೆಹಲಿ ಮುಖ್ಯ ಕಚೇರಿಯಲ್ಲಿ 285 ಕೋಟಿ ರೂ. ಹಾಗೂ ಕೋಲ್ಕತ್ತ ಮುಖ್ಯ ಕಚೇರಿಯಲ್ಲಿ 143 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಗಳನ್ನು ನಗದೀಕರಿಸಲಾಗಿದೆ. ಇನ್ನು ಎಸ್ ಬಿಐ ಅಂಕಿಅಂಶಗಳ ಪ್ರಕಾರ ಎಸ್ ಬಿಐ ಹೈದರಾಬಾದ್ ಮುಖ್ಯ ಶಾಖೆಯಿಂದ 117 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ ಗಳನ್ನು ಖರೀದಿಸಲಾಗಿದೆ. ಹಾಗೆಯೇ ಚೆನ್ನೈ ಶಾಖೆಯಿಂದ 115 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ ಗಳನ್ನು ಖರೀದಿಸಲಾಗಿದೆ. ಮಾರಾಟವಾಗಿರುವ ಶೇ.96ರಷ್ಟು ಚುನಾವಣಾ ಬಾಂಡ್ ಗಳು ಒಂದು ಕೋಟಿ ರೂ. ಮುಖಬೆಲೆ ಹೊಂದಿವೆ.
Business Idea : ಹತ್ತು ಸಾವಿರಕ್ಕಿಂತ ಕಡಿಮೆ ಬಂಡವಾಳದಲ್ಲಿ ಶುರು ಮಾಡಿ ಈ ಬ್ಯುಸಿನೆಸ್
ಆಸಕ್ತಿಕರ ಸಂಗತಿಯೆಂದ್ರೆ ಚುನಾವಣಾ ಬಾಂಡ್ ಗಳ ಮೂಲಕ ಸ್ವೀಕರಿಸಿದ ಮೊತ್ತದ ಬಗ್ಗೆ ಈ ತನಕ ಯಾವುದೇ ಪ್ರಮುಖ ರಾಜಕೀಯ ಪಕ್ಷಗಳು ಬಾಯಿ ಬಿಟ್ಟಿಲ್ಲ. ಇನ್ನು ಚುನಾವಣಾ ಬಾಂಡ್ ಗಳನ್ನು ಸಾರ್ವಜನಿಕ ವಲಯದ ಬ್ಯಾಂಕ್ ಮಾರಾಟ ಮಾಡುತ್ತಿರುವ ಕಾರಣ ಯಾವ ರಾಜಕೀಯ ಪಕ್ಷಕ್ಕೆ ಯಾರು ಹಣ ನೀಡುತ್ತಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ತಿಳಿಯುತ್ತದೆ ಎಂದು ಮೂಲಗಳು ತಿಳಿಸಿವೆ.
ದಾನಿಗಳು 2018ರಲ್ಲಿ Rs 1,056.73 ಕೋಟಿ ರೂ., 2019ರಲ್ಲಿ 5,071.99 ಕೋಟಿ ರೂ. , 2020ರಲ್ಲಿ 363.96 ಕೋಟಿ ರೂ., 2021ರಲ್ಲಿ1502.29 ಕೋಟಿ ರೂ. ಹಾಗೂ 2022ರಲ್ಲಿ 2,797ಕೋಟಿ ರೂ. ಹಣವನ್ನು ಚುನಾವಣಾ ಬಾಂಡ್ ಗಳ ಮೂಲಕ ನೀಡಿದ್ದಾರೆ ಎಂದು ಎಸ್ ಬಿಐ ಮಾಹಿತಿ ನೀಡಿದೆ.