ಜಾಗತಿಕ ಸಂಕಷ್ಟದ ಮಧ್ಯೆ ಭಾರತ ಉಜ್ವಲ; ಛಿದ್ರಗೊಂಡಿರುವ ವಿಶ್ವಕ್ಕೆ ಮೋದಿ ನಾಯಕತ್ವ ಅತ್ಯಂತ ನಿರ್ಣಾಯಕ: WEF ಮುಖ್ಯಸ್ಥ
ಮೋದಿ ನಾಯಕತ್ವಕ್ಕೆ ವಿಶ್ವ ಆರ್ಥಿಕ ವೇದಿಕೆ ಸಂಸ್ಥಾಪಕ ಹೊಗಳಿಕೆ ಮಳೆ ಸುರಿಸಿದ್ದು, ಛಿದ್ರಗೊಂಡ ವಿಶ್ವಕ್ಕೆ ಮೋದಿ ನಾಯಕತ್ವ ಅತ್ಯಂತ ಮಹತ್ವದ್ದು ಎಂದು ಹೇಳಿದ್ದಾರೆ. ಭಾರತದ ಜಿ20 ನಾಯಕತ್ವ ವಿಶ್ವದ ಸಮನಾದ ಬೆಳವಣಿಗೆಗೆ ಸಹಕಾರಿ ಎಂದೂ ಕ್ಲೌಸ್ ಶ್ವಾಬ್ ಬಣ್ಣಿಸಿದ್ದಾರೆ.

ದಾವೋಸ್: ಛಿದ್ರಗೊಂಡಿರುವ ವಿಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಬಹುವಾಗಿ ಶ್ಲಾಘಿಸಿರುವ ‘ವಿಶ್ವ ಆರ್ಥಿಕ ವೇದಿಕೆ’ಯ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲೌಸ್ ಶ್ವಾಬ್, ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತವೊಂದೇ ಪ್ರಕಾಶಮಾನವಾಗಿ ಕಾಣಿಸುತ್ತಿದೆ ಎಂದು ಬಣ್ಣಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ‘ವಿಶ್ವ ಆರ್ಥಿಕ ವೇದಿಕೆ’ಯ (ಡಬ್ಲ್ಯುಇಎಫ್) ವಾರ್ಷಿಕ ಸಮಾವೇಶದಲ್ಲಿ ಗುರುವಾರ ಭಾರತದ ರಿಸೆಪ್ಷನ್ ಸೆಂಟರ್‌ಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಕ್ಲೌಸ್ ಶ್ವಾಬ್, ‘ಜಿ20 ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಂಡಿರುವ ಭಾರತ ತನ್ನ ಅತ್ಯಂತ ತುರ್ತು ಸವಾಲುಗಳ ನಿರ್ವಹಣೆಯಲ್ಲಿ ಮಹತ್ವದ ಬೆಳವಣಿಗೆ ಸಾಧಿಸುವ ಜೊತೆಜೊತೆಗೆ ಇಡೀ ವಿಶ್ವಕ್ಕೆ ಸಮನಾದ ಬೆಳವಣಿಗೆ ಅವಕಾಶವನ್ನು ಒದಗಿಸಿಕೊಡುತ್ತಿದೆ. ಭಾರತಕ್ಕೆ ಜಿ20 ಅಧ್ಯಕ್ಷತೆಯು ಅತ್ಯಂತ ಮಹತ್ವಪೂರ್ಣವಾದ ಸಮಯದಲ್ಲಿ ಬಂದಿದ್ದು, ಛಿದ್ರಗೊಂಡಿರುವ ಇಂದಿನ ವಿಶ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಅತ್ಯಂತ ನಿರ್ಣಾಯಕವಾದುದು’ ಎಂದು ಹೇಳಿದರು.
ಜೊತೆಗೆ ‘ಇಲ್ಲಿ, ಭಾರತದ (India) ಸಚಿವರ ನಿಯೋಗ ಮತ್ತು ಉನ್ನತ ಉದ್ಯಮ ನಾಯಕರನ್ನು (Leaders) ಭೇಟಿ ಮಾಡಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ಸಂತಸವಾಗಿದೆ. ನವೀಕರಿಸಬಹುದಾದ ಇಂಧನ (Renewable Energy) ವಲಯಲ್ಲಿ ಮಹತ್ವದ ಸಾಧನೆ ಮೂಲಕ ಜಾಗತಿಕ ತಾಪಮಾನ ಇಳಿಕೆ, ಜಾಗತಿಕ ಆರೋಗ್ಯ ವ್ಯವಸ್ಥೆಗೆ ನೀಡಿರುವ ಕೊಡುಗೆ, ಮಹಿಳೆಯರ ಆರ್ಥಿಕ ಸಬಲೀಕರಣದ ಮೂಲಕ ಅಭಿವೃದ್ಧಿ, ಮೂಲಸೌಕರ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ಮೊದಲಾದ ವಿಷಯದಲ್ಲಿ ಭಾರತದ ಸಾಧನೆಯನ್ನು ನಾನು ಅಪಾರವಾಗಿ ಮೆಚ್ಚಿಕೊಳ್ಳುತ್ತೇನೆ. ಆರ್ಥಿಕತೆ (Economy) ಅಸ್ತ್ರದ ಮೂಲಕ ಭೌಗೋಳಿಕ ಬದಲಾವಣೆ ಯತ್ನದ ಬಿಕ್ಕಟ್ಟುಗಳು ಮತ್ತು ಭೌಗೋಳಿಕ ಸಂಕಷ್ಟಗಳ ನಡುವೆಯೂ ಭಾರತ ಈಗಲೂ ಹೊಳೆಯುವ ನಕ್ಷತ್ರವಾಗಿ ಗೋಚರಿಸುತ್ತಿದೆ’ ಎಂದು ಕ್ಲೌಸ್ ಶ್ವಾಬ್ (Klaus Schwab) ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿ: ಮುಂದಿನ 20 ವರ್ಷ ಭಾರತದ ಆರ್ಥಿಕತೆ ವಿಶ್ವದಲ್ಲೇ ಅತ್ಯಂತ ವೇಗದ ಪ್ರಗತಿ
ಇದೇ ವೇಳೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ವಿಶ್ವ ಆರ್ಥಿಕ ವೇದಿಕೆ (World Economic Forum), ‘ಭಾರತದೊಂದಿಗೆ 40 ವರ್ಷಗಳ ಸುದೀರ್ಘ ಸಂಬಂಧ ಅತ್ಯಂತ ಮೌಲ್ಯಯುತವಾಗಿದ್ದು ಮತ್ತು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಜಿ20 ಅಧ್ಯಕ್ಷತೆ ಹೊಂದಿರುವ ಭಾರತದೊಂದಿಗೆ ನಾವು ನಮ್ಮ ಸಹಕಾರವನ್ನು ಮುಂದುವರೆಸ ಬಯಸುತ್ತೇವೆ’ ಎಂದಿದೆ.
ಕ್ಲೌಸ್ ಹೇಳಿದ್ದೇನು..?
- ಭಾರತ ಅತ್ಯಂತ ತುರ್ತು ಸವಾಲುಗಳ ನಿರ್ವಹಣೆಯಲ್ಲಿ ಮಹತ್ವದ ಬೆಳವಣಿಗೆ ಸಾಧಿಸಿದೆ
- ಇದರ ಜೊತೆಗೆ ಸಮಾನವಾದ ಅವಕಾಶವನ್ನು ಇಡೀ ವಿಶ್ವಕ್ಕೂ ಭಾರತ ಒದಗಿಸಿಕೊಡುತ್ತಿದೆ
- ಭಾರತಕ್ಕೆ ಜಿ20 ಅಧ್ಯಕ್ಷತೆಯು ಅತ್ಯಂತ ಮಹತ್ವಪೂರ್ಣ ಸಮಯದಲ್ಲಿ ಒದಗಿ ಬಂದಿದೆ
- ಹಲವು ಕ್ಷೇತ್ರಗಳಲ್ಲಿ ಭಾರತದ ಸಾಧನೆಯನ್ನು ನಾನು ಅಪಾರವಾಗಿ ಮೆಚ್ಚಿಕೊಳ್ಳುತ್ತೇನೆ
- ವಿಶ್ವ ಆರ್ಥಿಕ ವೇದಿಕೆಯ ಸಂಸ್ಥಾಪಕ ಕ್ಲೌಸ್ ಶ್ವಾಬ್ ಅವರಿಂದ ಪ್ರಶಂಸೆಯ ಸುರಿಮಳೆ
- ಹಿಂಜರಿತ ಕಾಣಿಸಿಕೊಂಡರೂ ಭಾರತಕ್ಕೆ ಏನೂ ಆಗದು ಎಂದು ಹೇಳಿದ್ದ ವೇದಿಕೆ
ಇದನ್ನೂ ಓದಿ: ವಿಶ್ವದಲ್ಲಿ ಆರ್ಥಿಕ ಹಿಂಜರಿತ ಆದರೂ ಲಾಭದಲ್ಲಿ ಭಾರತ