ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇನ್ನು 5 ವರ್ಷದಲ್ಲಿ ಅಂದರೆ, 2014 ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ಏರಿಸುವ ಬೃಹತ್ ಗುರಿ ಹಾಕಿಕೊಂಡಿದೆ. ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲೂ ಇದಕ್ಕೆ ಆದ್ಯತೆ ನೀಡಲಾಗಿದೆ. 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗುವುದು ಭಾರತಕ್ಕೆ ಏಕೆ ಮುಖ್ಯ? ಇದು ಸಾಧ್ಯವೇ? ಮಾಹಿತಿ ಇಲ್ಲಿದೆ. 

ಸದ್ಯ ಭಾರತದ ಆರ್ಥಿಕತೆ 2.8 ಲಕ್ಷ  ಕೋಟಿ ಡಾಲರ್

ಸದ್ಯ ಭಾರತದ ಆರ್ಥಿಕತೆ 2.8 ಲಕ್ಷ ಕೋಟಿ ಡಾಲರ್. ಈ ವರ್ಷವೇ ಭಾರತದ ಆರ್ಥಿಕತೆ 3 ಲಕ್ಷ ಕೋಟಿ ಡಾಲರ್ ತಲುಪಲಿದೆ. ಈ ಮೂಲಕ ವಿಶ್ವದ 6 ನೇ ಅತಿ ದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಲಿದೆ.

ಇನ್ನು ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಖಾತೆಗೆ ಹಣ ಹಾಕುವಂತಿಲ್ಲ!

ಖರೀದಿ ಶಕ್ತಿಯ ಆಧಾರವನ್ನು ಗಮನಿಸುವುದಾದರೆ ಚೀನಾ ಮತ್ತು ಅಮೆರಿಕ ಬಿಟ್ಟರೆ ಭಾರತ ೩ನೇ ಸ್ಥಾನದಲ್ಲಿದೆ. ಇನ್ನು ಸದ್ಯ 2 ನೇ ಸ್ಥಾನದಲ್ಲಿರುವ ಚೀನಾ ಕೇವಲ 5 ವರ್ಷದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಭಾರತ ವಿಶ್ವದ 3 ನೇ ಅತಿ ದೊಡ್ಡ ಆರ್ಥಿಕತೆಯಾಗಿ ಅಭಿವೃದ್ಧಿ ಹೊಂದಲಿದೆ ಎಂದು ಹೇಳಲಾಗುತ್ತಿದೆ.

5 ವರ್ಷದಲ್ಲಿ 1 ಲಕ್ಷ ಕೋಟಿ ಡಾಲರ್ ಏರಿಕೆ!

ಸ್ವಾತಂತ್ರ್ಯಾನಂತರದ 55 ವರ್ಷಗಳಲ್ಲಿ ಅಂದರೆ 2007 ರ ವರೆಗೆ ಭಾರತದ ಆರ್ಥಿಕತೆ 1 ಲಕ್ಷ ಕೋಟಿ ಡಾಲರ್‌ಗೆ ತಲುಪಿತ್ತು. ನಂತರದ 7 ವರ್ಷದಲ್ಲಿ 2 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಯಿತು. ಅಲ್ಲಿಂದ 2014 ರಿಂದ 2019 ರ ವರೆಗೆ ಅಂದರೆ ಕೇವಲ 5 ವರ್ಷದಲ್ಲಿ ಭಾರತದ ಆರ್ಥಿಕತೆ 2 ಲಕ್ಷ ಕೋಟಿ ಡಾಲರ್ ನಿಂದ 3 ಲಕ್ಷ ಕೋಟಿ ಡಾಲರ್‌ಗೆ ಏರಿಕೆಯಾಗುತ್ತಿದೆ. ಹಾಗಾಗಿ ಇನ್ನು 5 ವರ್ಷದಲ್ಲಿ ಮತ್ತೆರಡು ಲಕ್ಷ ಕೋಟಿ ಡಾಲರ್ ಏರಿಕೆ ಅಸಾಧ್ಯವೇನಲ್ಲ ಎಂಬುದು ಕೇಂದ್ರ ಸರ್ಕಾರದ ವಿಶ್ವಾಸ.

27.86 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌: ಆದಾಯ ಎಲ್ಲಿಂದ? ಖರ್ಚು ಹೇಗೆ?

5 ಲಕ್ಷ  ಕೋಟಿಗೆ ಏರಿಕೆಯಾಗಲು ಜಿಡಿಪಿ ಶೇ.8 ರಷ್ಟು  ಬೆಳೆಯಬೇಕು

5 ಲಕ್ಷ ಕೋಟಿ ಡಾಲರ್‌ನ ಕನಸು ನನಸಾಗಲು ಭಾರತದ ಜಿಡಿಪಿ ಅಥವಾ ಒಟ್ಟು ದೇಶೀಯ ಉತ್ಪನ್ನ ಪ್ರತಿ ವರ್ಷ ಕನಿಷ್ಠ 8 % ಬೆಳೆಯಬೇಕು ಎಂದು ಸಮೀಕ್ಷೆಗಳು ಅಭಿಪ್ರಾಯಪಡುತ್ತಿವೆ. ಆದರೆ ಕಳೆದ ಐದು ವರ್ಷದಲ್ಲಿ ಜಿಡಿಪಿ ಈ ದರದಲ್ಲಿ ಬೆಳೆಯುತ್ತಿಲ್ಲ. 2019 ರಲ್ಲಿ ಜಿಡಿಪಿ ಬೆಳವಣಿಗೆಯು ಇಳಿಮುಖವಾಗಿ ಸಾಗಿತ್ತು. 2017-18  ರಲ್ಲಿ 7.2 ರಷ್ಟಿ ದ್ದ ಜಿಡಿಪಿ 6.8 ಕ್ಕೆ ಕುಸಿತ ಕಂಡಿತ್ತು. ಆದರೆ ಏಪ್ರಿಲ್ 2019 ರಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ, ಪ್ರಸಕ್ತ ವರ್ಷದ ಭಾರತದ ಜಿಡಿಪಿಯು 7.3 ರಷ್ಟಿದ್ದು 2020- 21 ರ ವೇಳೆಗೆ 7.5 ರಷ್ಟಾಗಲಿದೆ ಎಂದಿದ್ದು ಕೇಂದ್ರದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಈ ಬೆಳವಣಿಗೆ ಸಾಧ್ಯವೇ? ಸಾಧ್ಯವಾದರೆ ಏನಾಗುತ್ತದೆ?

ಸದ್ಯದ ಭಾರತದ ಜಿಡಿಪಿ 2.8 ಲಕ್ಷ ಕೋಟಿ ಡಾಲರ್. ಇನ್ನು 5 ವರ್ಷದಲ್ಲಿ ಇದು 5 ಲಕ್ಷ ಕೋಟಿಗೆ ಏರಿಕೆಯಾಗಬೇಕೆಂದರೆ, ಈಗಿರುವುದಕ್ಕಿಂತ ಒಂದೂವರೆ ಪಟ್ಟು ಕ್ಷಿಪ್ರವಾಗಿ ಆರ್ಥಿಕತೆ ಬೆಳವಣಿಗೆ ಹೊಂದಬೇಕು. 2014-18 ರ ವರೆಗಿನ ಸರಾಸರಿ ಬೆಳವಣಿಗೆ ದರ ಶೇ.8 ರಷ್ಟಿದೆ. ಆದರೆ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯತ್ತ ಸಾಗಬೇಕೆಂದರೆ ಈ ದರ ಶೇ.11.5 ಕ್ಕೆ ಏರಿಕೆಯಾಗಬೇಕು.

ಆಗ ಮಾತ್ರ ಭಾರತ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲು ಸಾಧ್ಯ. ಈ ಬೆಳವಣಿಗೆಯು ಹಣದುಬ್ಬರ ಮತ್ತು ರುಪಾಯಿ ಹಾಗೂ ಡಾಲರ್ ವಿನಿಮಯ ದರದ ಮೇಲೆ ಪರಿಣಾಮ ಬೀರುತ್ತದೆ. ಹಣದುಬ್ಬರ ಏರಿಕೆಯಾದರೆ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ. ಆಗ ಜನರ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಅದರಿಂದ ಸರಕುಗಳ ಬಳಕೆ ಕಡಿಮೆಯಾಗಿ ಅದು ಜಿಡಿಪಿ ಬೆಳವಣಿಗೆ
ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಂಪರ್: ಗೃಹ ಖರೀದಿ ನೀತಿ ಸೂಪರ್!

ಆದರೆ ಇದಕ್ಕಿಂತ ಹೆಚ್ಚಾಗಿ ಒಳ್ಳೆಯ ಬೆಳವಣಿಗೆಗಳು ಸಾಕಷ್ಟಾಗುತ್ತವೆ. ಜನರ ಜೀವನ ಮಟ್ಟ ಸುಧಾರಿಸುತ್ತದೆ. ಸ್ವಂತ ಮನೆ, ಉದ್ಯೋಗ ಇರುವವರ ಸಂಖ್ಯೆ ಹೆಚ್ಚುತ್ತದೆ. ಮೂಲಸೌಕರ್ಯಗಳು ಅಭಿವೃದ್ಧಿಯಾಗುವುದರಿಂದ ರಸ್ತೆ ಸಂಪರ್ಕ, ರೈಲ್ವೆ, ವಿಮಾನಯಾನ ಇತ್ಯಾದಿಗಳು ಸುಧಾರಿಸುತ್ತವೆ. ಕೃಷಿ ಕ್ಷೇತ್ರ ಮತ್ತು ಔದ್ಯೋಗಿಕ ಕ್ಷೇತ್ರಗಳು ಸಾಕಷ್ಟು ಸುಧಾರಿಸಬಹುದು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅಗಾಧ ಪ್ರಗತಿಯಾಗುತ್ತದೆ.

ಒಟ್ಟಿನಲ್ಲಿ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ರೂಪುಗೊಂಡರೆ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಲಯವೂ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಗಮನಾರ್ಹ ಬದಲಾವಣೆಗಳಾಗುತ್ತವೆ. ಹೆಚ್ಚಿನ ಬದಲಾವಣೆಗಳು ಧನಾತ್ಮಕವಾಗಿರಬಹುದು, ಆದರೆ ಒಂದಷ್ಟು ಋಣಾತ್ಮಕ ಬದಲಾವಣೆಗಳೂ ಆಗುತ್ತವೆ. 

5 ಲಕ್ಷ ಕೋಟಿ ಆರ್ಥಿಕತೆ ಅಭಿವೃದ್ಧಿ ಲಾಜಿಕ್ ಏನು? 

ಆರ್ಥಿಕತೆಯ ಅಭಿವೃದ್ಧಿಯಾದರೆ ತಲಾದಾಯ ಹೆಚ್ಚುತ್ತದೆ. ತಲಾದಾಯ ಹೆಚ್ಚಳವಾದರೆ, ಖರೀದಿ ಸಾಮರ್ಥ್ಯವೂ ಹೆಚ್ಚಿ, ಬೇಡಿಕೆ ಏರುತ್ತದೆ. ಬೇಡಿಕೆಯಲ್ಲಿನ ಹೆಚ್ಚಳಕ್ಕೆ ಅನುಗುಣವಾಗಿ ಉತ್ಪಾದಕತೆ ಹೆಚ್ಚುತ್ತದೆ. ಸೇವೆ ವಿಸ್ತಾರಗೊಳ್ಳುತ್ತದೆ. ಇದರಿಂದ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ. ತಲಾ ದಾಯ ಹೆಚ್ಚಳದಿಂದ ಉಳಿತಾಯವೂ ಹೆಚ್ಚುತ್ತದೆ. ಆರ್ಥಿಕತೆ ಹೆಚ್ಚಿದಂತೆ ದೇಶ ಕೂಡ ಹೆಚ್ಚು ಸಂಪದ್ಭರಿತವಾಗುತ್ತದೆ. ಜನರ ಜೀವನ ಮಟ್ಟವೂ ಸುಧಾರಿಸುತ್ತದೆ. ಇದೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗುರಿ.

ಈ ಸಾಧನೆಗೆ ಏನೆಲ್ಲಾ ಬದಲಾವಣೆ ಆಗಬೇಕು?

ಮೊದಲನೆಯದಾಗಿ, ಭಾರತದ ಬೆನ್ನುಲುಬಾದ ಕೃಷಿ ಉನ್ನತ ದರ್ಜೆಗೇರಬೇಕು. ದೇಶಾದ್ಯಂತ ವಿಶ್ವದರ್ಜೆಯ ಕೃಷಿ ಪದ್ಧತಿಗಳು ಜಾರಿಗೆ ಬರಬೇಕು. ಕೃಷಿ ಉತ್ಪಾದನೆ ಏರಿಕೆಯಾಗಬೇಕು. ಜೊತೆಗೆ ಉದ್ಯೋಗ ನಿರ್ಮಾಣವಾಗಿ, ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಬೇಕು. ಮೂಲ ಸೌಕರ್ಯ ವಲಯದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಾಗುತ್ತದೆ.

ಗುರಿ ಸಾಧನೆಗೆ ಸರ್ಕಾರದ ನೀಲನಕ್ಷೆ ಹೇಗಿದೆ ಗೊತ್ತಾ?

ದೇಶದ ಆರ್ಥಿಕತೆಯು ಕೇವಲ 5 ವರ್ಷದಲ್ಲಿ 5 ಲಕ್ಷ ಡಾಲರ್‌ಗೆ ಏರಿಕೆಯಾಗಬೇಕೆಂದರೆ ಅದಕ್ಕೆ ತಕ್ಕ ಅಡಿಪಾಯವೂ ಬೇಕು. ಕೇಂದ್ರ ಸರ್ಕಾರ ಈಗಾಗಲೇ ಆ ಸಿದ್ಧತೆಯಲ್ಲಿದೆ. ಹಾಗಾಗಿ ಮುಂದಿನ 5 ವರ್ಷಗಳಲ್ಲಿ ನಿರುದ್ಯೋಗ, ಸಾರಿಗೆ ಸಂಪರ್ಕ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಮುಂದಾಗಿರುವ ಸರ್ಕಾರ ಇದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕರಮ್ ಯೋಗಿ ಮಾನ್‌ಧನ್ ಯೋಜನೆಯನ್ನು ಜಾರಿಗೆ ತಂದಿದೆ.

ಜೊತೆಗೆ ಭಾರತ್ ಮಾಲಾ, ಸಾಗರ್ ಮಾಲಾ, ಒಳನಾಡು ಜಲಸಾರಿಗೆಗೆ ಹೆಚ್ಚೆಚ್ಚು ಅನುದಾನ ವಿಡುಗಡೆ ಮಾಡಲಾಗಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ, ಶೂನ್ಯ ಬಂಡವಾಳ ಕೃಷಿಗೆ ಉತ್ತೇಜನ ನೀಡಲಾಗಿದೆ. ರೈಲ್ವೆ ನಿಲ್ದಾಣಗಳ ಮೇಲ್ದರ್ಜೆಗೇರಿಸಲು ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಪ್ರಾಮುಖ್ಯತೆ ನೀಡಲಾಗಿದೆ. ನಗದು ವ್ಯವಹಾರದ ಬದಲಿಗೆ ಡಿಜಿಟಲ್ ವ್ಯವಹಾರ ಹೆಚ್ಚಿಸಲು ಬಜೆಟ್‌ನಲ್ಲೂ ಪ್ರಾಮುಖ್ಯತೆ ನೀಡಲಾಗಿದೆ.