ಸ್ವಉದ್ಯೋಗಿಗಳು, ಸಣ್ಣ ವ್ಯಾಪಾರಿಗಳ ಮನೆ ಕನಸು ನನಸಾಗಿಸಲು ಕೇಂದ್ರದ ಚಿಂತನೆ, ಪಿಎಂ ಆವಾಸ್ ಯೋಜನೆ ವಿಸ್ತರಣೆ ಸಾಧ್ಯತೆ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ (ಪಿಎಂಎವೈ) ನಗರಗಳಲ್ಲಿ ವಾಸಿಸುತ್ತಿರುವ ಬಡವರಿಗೆ ನೀಡುತ್ತಿರುವ ಸಹಾಯಧನವನ್ನು ಇನ್ನಷ್ಟು ಜನರಿಗೆ ವಿಸ್ತರಿಸಲು ಕೇಂದ್ರ ಯೋಜನೆ ರೂಪಿಸುತ್ತಿದೆ. ಹಾಗೆಯೇ ಸಹಾಯಧನದ ಮೊತ್ತ ಹೆಚ್ಚಳಕ್ಕೂ ಚಿಂತನೆ ನಡೆಸುತ್ತಿದೆ. 

Pradhan Mantri Awas Yojana may allow bigger home loans to many more people anu

ನವದೆಹಲಿ (ಏ.24): ದೇಶದಲ್ಲಿ ಚುನಾವಣಾ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ (ಪಿಎಂಎವೈ) ನಗರಗಳಲ್ಲಿ ವಾಸಿಸುತ್ತಿರುವ ಬಡವರಿಗೆ ನೀಡುತ್ತಿರುವ ಸಹಾಯಧನದ ಗಾತ್ರ ಹಾಗೂ ಮಹತ್ವದ ವಿಸ್ತರಣೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ಪ್ರಸ್ತುತ ಪಿಎಂ ಆವಾಸ್ ಯೋಜನೆಯಡಿಯಲ್ಲಿ ಮನೆ ಖರೀದಿಸೋರು ಗರಿಷ್ಠ 2.67 ಲಕ್ಷ ರೂ. ತನಕ ಬಡ್ಡಿ ವೆಚ್ಚವನ್ನು ಉಳಿತಾಯ ಮಾಡಬಹುದಾಗಿದೆ. ಈ ಯೋಜನೆಯಡಿ ಗೃಹಸಾಲದ ಅವಧಿ ಗರಿಷ್ಠ 20 ವರ್ಷ. ನಗರ ಪ್ರದೇಶಗಳಲ್ಲಿ ವಾರ್ಷಿಕ 18 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರೋರು ಈ ಯೋಜನೆ ಪ್ರಯೋಜನ ಪಡೆಯಬಹುದು. ಈ ಯೋಜನೆಯನ್ನು ಸ್ವ ಉದ್ಯೋಗಿಗಳು, ಅಂಗಡಿ ಮಾಲೀಕರು ಹಾಗೂ ಸಣ್ಣ ವ್ಯಾಪಾರಿಗಳಿಗೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಅಲ್ಲದೆ, ಮನೆಯ ವಿಸ್ತೀರ್ಣ ಹಾಗೂ ಬೆಲೆಯಲ್ಲಿ ಹೆಚ್ಚಳ ಮಾಡುವ ಮೂಲಕ ಇನ್ನಷ್ಟು ಫಲಾನುಭವಿಗಳನ್ನು ತಲುಪುವ ಯೋಚನೆ ಸರ್ಕಾರಕ್ಕಿದೆ. 

35 ಲಕ್ಷ ರೂ. ಬೆಲೆಬಾಳುವ ಮನೆಗಳಿಗೆ ಮನೆ ಖರೀದಿದಾರರು 30 ಲಕ್ಷ ರೂ. ತನಕ ಗೃಹಸಾಲದ ಮೇಲೆ ಸಬ್ಸಿಡಿ ಪಡೆಯಬಹುದಾದ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದೆ ಎಂದು ಹೇಳಲಾಗಿದೆ. ಇದು ಮೆಟ್ರೋ ಹಾಗೂ ಮೆಟ್ರೋ ಅಲ್ಲದ ನಗರಗಳಿಗೆ ಕೂಡ ಅನ್ವಯಿಸಲಿದೆ. ಪ್ರಸ್ತುತ ಇರುವ ನಿಯಮಗಳ ಪ್ರಕಾರ ಮನೆ ಖರೀದಿದಾರ ಗರಿಷ್ಠ 12 ಲಕ್ಷ ರೂ. ತನಕ ಗೃಹಸಾಲಕ್ಕೆ ಸಬ್ಸಿಡಿ ಪಡೆಯಬಹುದಾಗಿದೆ. ಇನ್ನು ಮನೆ ಖರೀದಿಸುವ ವ್ಯಕ್ತಿಯ ಆದಾಯ 18 ಲಕ್ಷ ರೂ. ಮೀರಬಾರದು.

ಬಾಡಿಗೆ, ಸ್ಲಂನಲ್ಲಿರುವವರ ಮನೆ ಕನಸು ನನಸಾಗಿಸಲು ಹೊಸ ಯೋಜನೆ,ನಿರ್ಮಲಾ ಸೀತಾರಾಮ್ ಘೋಷಣೆ!

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯನ್ನು (CLSS) ಕೇಂದ್ರ ಸರ್ಕಾರ  2021ರಲ್ಲಿ ಕೊನೆಗೊಳಿಸಿದೆ. ಆದಾಯದ ಆಧಾರದಲ್ಲಿ ಗೃಹಸಾಲಕ್ಕೆ ಸಬ್ಸಿಡಿ ನೀಡಲಾಗುತ್ತಿದೆ. CLSS ಅಡಿಯಲ್ಲಿ 25 ಲಕ್ಷ ಮನೆಗಳಿಗೆ ಹಣಕಾಸಿನ ನೆರವು ನೀಡಲಾಗಿದೆ. ಇನ್ನು 59,000 ಕೋಟಿ ರೂ. ಮೌಲ್ಯದ ಸಬ್ಸಿಡಿಯನ್ನು ಐದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಲಾಗಿದೆ. 

2024-25ನೇ ಸಾಲಿನ ಮಧ್ಯಂತರ ಬಜೆಟ್ ನಲ್ಲಿ ಈ ವಸತಿ ಯೋಜನೆಗೆ 80,671 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.  ಬಾಡಿಗೆ ಮನೆ, ಸ್ಲಂ, ಅನಧಿಕೃತ ಕಾಲೋನಿಗಳಲ್ಲಿ ವಾಸವಿರುವ ಮಧ್ಯಮ ವರ್ಗದ ಕುಟುಂಬಗಳ ಮನೆ ಖರೀದಿ ಅಥವಾ ಮನೆ ಕಟ್ಟಲು ಹೊಸ ಯೋಜನೆ ಘೋಷಿಸಲಾಗುತ್ತದೆ ಎಂದು ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. 

ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಯೋಜನೆಯಡಿ ಈಗಾಗಲೇ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ 5 ವರ್ಷದಲ್ಲಿ 2 ಕೋಟಿ ಮನೆ ನಿರ್ಮಾಣವಾಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆ ಹಣಕಾಸನ್ನು ಶೇಕಡಾ 66ರಿಂದ 79,000 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಕೂಡ ವಿತ್ತ ಸಚಿವೆ ಬಜೆಟ್ ಭಾಷಣದಲ್ಲಿ ನೀಡಿದ್ದರು. 

2015ರಲ್ಲಿ ಪ್ರಾರಂಭಗೊಂಡ ಪಿಎಂಎವೈ-ಯು ಅಡಿಯಲ್ಲಿ ಮನೆ ಖರೀದಿಸಲು ಬಯಸೋ ಮಧ್ಯಮ ಆದಾಯ ವರ್ಗ (ಎಂಐಜಿ)ಕ್ಕೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ಸೌಲಭ್ಯವನ್ನು 2017ನೇ ಸಾಲಿನ ತನಕ ನೀಡಲು ಸರ್ಕಾರ ಅನುಮೋದನೆ ನೀಡಿತ್ತು. ಆದ್ರೆ ನಂತರ ಈ ಯೋಜನೆಯನ್ನು 2020ರ ಮಾರ್ಚ್ ತನಕ ವಿಸ್ತರಿಸಲಾಯಿತು. ಆದ್ರೆ ಮತ್ತೆ ಪಿಎಂಎವೈ-ಯು ಯೋಜನೆಯನ್ನು 2021ರ ಮಾರ್ಚ್ ತನಕ ವಿಸ್ತರಿಸಿತ್ತು. 

PMAY ಅಡಿ ಮನೆ ಸಾಲ ಸಬ್ಸಿಡಿ ನೀಡಲು ನಿರಾಕರಿಸಿದ ಬ್ಯಾಂಕ್‌ಗೆ ಶಾಕ್: ಕೇಸ್ ಗೆದ್ದ ಗ್ರಾಹಕ

ಪಿಎಂಎವೈ ಯೋಜನೆಯಲ್ಲಿ ಮಧ್ಯಮ ಆದಾಯ ವರ್ಗವನ್ನು ಎರಡು ಸ್ಲ್ಯಾಬ್‍ಗಳಾಗಿ ವಿಂಗಡಿಸಲಾಗಿದೆ. 6,00,001ರೂ. - 12,00,000ರೂ. ವಾರ್ಷಿಕ ಆದಾಯ ಹೊಂದಿರೋ ಕುಟುಂಬವನ್ನು ಮಧ್ಯಮ ಆದಾಯ ವರ್ಗ (ಎಂಐಜಿ)-1ಕ್ಕೆ ಸೇರಿಸಲಾಗಿದೆ. 12,00,001ರೂ.-18,00,000ರೂ. ವಾರ್ಷಿಕ ಆದಾಯ ಹೊಂದಿರೋ ಕುಟುಂಬವನ್ನು ಮಧ್ಯಮ ಆದಾಯ ವರ್ಗ (ಎಂಐಜಿ)-||ಕ್ಕೆ ಸೇರಿಸಲಾಗಿದೆ. ಅಂದ್ರೆ ಆರು ಲಕ್ಷದಿಂದ 18ಲಕ್ಷದ ತನಕ ವಾರ್ಷಿಕ ಆದಾಯ ಹೊಂದಿರೋರು ಗೃಹ ಸಾಲದ ಮೇಲೆ ಸಬ್ಸಿಡಿ ಪಡೆಯಲು ಅರ್ಹರಾಗಿದ್ದಾರೆ.

Latest Videos
Follow Us:
Download App:
  • android
  • ios