ಬಂಗಾರ ಕೊಳ್ಳೋರು ಗಮನಿಸಿ; 2019ರ ದೀಪಾವಳಿಗೆ ಚಿನ್ನ ಖರೀದಿಸಿದವರಿಗೆ ಮೂರೇ ವರ್ಷದಲ್ಲಿ ಸಿಕ್ತು ಶೇ.60 ರಿಟರ್ನ್ಸ್
ಭೌತಿಕ ಚಿನ್ನದಲ್ಲಿ ಹೂಡಿಕೆ ಮಾಡೋಕ್ಕಿಂತ ಗೋಲ್ಡ್ ಇಟಿಎಫ್ ಬೆಸ್ಟ್ ಎನ್ನುತ್ತಾರೆ. ಆದರೆ, 2019ರ ದೀಪಾವಳಿಗೆ ಚಿನ್ನ ಖರೀದಿಸಿದವರಿಗೆ ಮೂರೇ ವರ್ಷದಲ್ಲಿ ಶೇ.60 ರಿಟರ್ನ್ಸ್ ಸಿಕ್ಕಿದೆ.
Business Desk: ದೀಪಾವಳಿ ಅಂದ್ರೆ ಬೆಳಕಿನ ಹಬ್ಬ. ಹೊಸ ಬಟ್ಟೆಯ ಜೊತೆಗೆ ಚಿನ್ನ ಅಥವಾ ಬೆಳ್ಳಿಯಂತಹ ಅಮೂಲ್ಯ ವಸ್ತುಗಳ ಖರೀದಿಗೆ ಇದು ಶುಭ ಸಮಯ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಇದೇ ಕಾರಣಕ್ಕೆ ದೀಪಾವಳಿ ಸಂದರ್ಭದಲ್ಲಿ ಬರುವ ಧಂತೇರಸ್ ದಿನ ಚಿನ್ನ ಖರೀದಿಸೋದು ಸಂಪ್ರದಾಯ. ಈಗಾಗಲೇ ಅನೇಕರು ಧಂತೇರಸ್ ದಿನ ಚಿನ್ನ ಖರೀದಿಗೆ ಹಣ ಹೊಂದಿಸುವ ಕೆಲಸದಲ್ಲಿ ತೊಡಗಿರಬಹುದು. ಕೆಲವರು ಪ್ರಕಾರ ಭೌತಿಕ ಚಿನ್ನದ ನಾಣ್ಯ ಅಥವಾ ಆಭರಣ ಖರೀದಿಸುವ ಬದಲು ಇಟಿಎಫ್ ಮೇಲೆ ಹೂಡಿಕೆ ಮಾಡೋದು ಉತ್ತಮ. ಆದರೆ, ಕಳೆದ ಮೂರು ವರ್ಷಗಳಲ್ಲಿ ಭೌತಿಕವಾಗಿ ಚಿನ್ನ ಖರೀದಿಸಿದವರಿಗೆ ಉತ್ತಮ ರಿಟರ್ನ್ಸ್ ಬಂದಿದೆ. ಹೂಡಿಕೆ ತಜ್ಞರ ಪ್ರಕಾರ 2019ರ ಡಿಸೆಂಬರ್ ನಲ್ಲಿ ಚಿನ್ನ ಖರೀದಿಸಿದವರಿಗೆ ಅಧಿಕ ರಿಟರ್ನ್ಸ್ ಸಿಕ್ಕಿದೆ. ಶೇ.60ರಷ್ಟು ರಿಟರ್ನ್ಸ್ ಪಡೆದಿದ್ದಾರೆ. ಹೀಗಾಗಿ ಚಿನ್ನದ ಮೇಲಿನ ಹೂಡಿಕೆ ಉತ್ತಮ ರಿಟರ್ನ್ಸ್ ನೀಡಿದೆ ಎಂದೇ ಹೇಳಬಹುದು.
ಗೋಲ್ಡ್ ಇಟಿಎಫ್ vs ಭೌತಿಕ ಚಿನ್ನ
ಭೌತಿಕ ಚಿನ್ನದ ಮೇಲಿನ ಹೂಡಿಕೆಯಿಂದ ಸಿಕ್ಕಿರುವ ರಿಟರ್ನ್ಸ್ ಇತರ ಅನೇಕ ಹೂಡಿಕೆಗಳಿಂದ ಹೆಚ್ಚಿದೆ. ಗೋಲ್ಡ್ ಎಕ್ಸ್ ಚೇಂಜ್ ಟ್ರೇಡೆಡ್ ಫಂಡ್ಸ್ ಗಿಂತ (ETFs) ಭೌತಿಕ ಚಿನ್ನದ ಮೇಲಿನ ಹೂಡಿಕೆ ಉತ್ತಮ ರಿಟರ್ನ್ಸ್ ನೀಡಿದೆ. ಗೋಲ್ಡ್ ಇಟಿಎಫ್ ಗಳು ಸರಾಸರಿ ಶೇ.55ರಷ್ಟು ಗಳಿಕೆ ನೀಡಿದ್ದರೆ, ಭೌತಿಕ ಚಿನ್ನದ ಮೇಲಿನ ಹೂಡಿಕೆ ಶೇ.60ರಷ್ಟು ರಿಟರ್ನ್ಸ್ ನೀಡಿದೆ.
7 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ: ಬಂಗಾರ ಹೂಡಿಕೆ ಮಾಡ್ಬೋದಾ, ಬೇಡ್ವಾ.. ಇಲ್ಲಿದೆ ಟಿಪ್ಸ್!
ಚಿನ್ನ ಖರೀದಿಯಲ್ಲೂ ರಿಸ್ಕ್ ಇದೆ
ಚಿನ್ನದ ಬೆಲೆ ಹಾವೇಣಿ ಆಟದಂತೆ ಮೇಲಕ್ಕೇರಿ ಕೆಳಗಿಳಿಯೋದು ಸಾಮಾನ್ಯ. ಚಿನ್ನದ ಬೆಲೆಯಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತಲೇ ಇರುತ್ತದೆ. ಹೀಗಾಗಿ ಚಿನ್ನದ ಮೇಲಿನ ಹೂಡಿಕೆಯಲ್ಲಿ ಕೂಡ ರಿಸ್ಕ್ ಇದ್ದೇಇದೆ. ಇನ್ನು ಚಿನ್ನದ ಬೆಲೆ ಮೇಲೆ ಅನೇಕ ಅಂಶಗಳು ಪರಿಣಾಮ ಬೀರುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಬೆಳವಣಿಗೆಗಳು ಕೂಡ ಚಿನ್ನದ ಬೆಲೆಯ ಏರಿಳಿತಕ್ಕೆ ಕಾರಣವಾಗುತ್ತವೆ. ಪ್ರಸ್ತುತ ರಷ್ಯಾ-ಉಕ್ರೇನ್ ಸಂಘರ್ಷ ಹಾಗೂ ಇಸ್ರೇಲ್-ಹಮಾಸ್ ವಿವಾದ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೂಡ ಇದು ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗಲು ಕಾರಣವಾಗುವ ಸಾಧ್ಯತೆಯಿದೆ.
ಈ ಬಾರಿ ಬೇಡಿಕೆ ಕಡಿಮೆ ಸಾಧ್ಯತೆ
ಭಾರತದಲ್ಲಿ ಈ ವರ್ಷ ಕೆಲವು ಪ್ರದೇಶಗಳಲ್ಲಿ ವಿಪರೀತ ಮಳೆಯಾಗಿದ್ದರೆ ಇನ್ನೂ ಕೆಲವು ಕಡೆ ಕಡಿಮೆಯಾಗಿದೆ. ಇದರಿಂದ ರೈತರಿಗೆ ಉತ್ತಮ ಫಸಲು ಸಿಕ್ಕಿಲ್ಲ. ಕೆಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದರೆ, ಇನ್ನೂ ಕೆಲವೆಡೆ ಬರ ಕಾಣಿಸಿಕೊಂಡಿದೆ. ಪರಿಣಾಮ ರೈತರ ಆದಾಯ ತಗ್ಗಿದೆ. ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಗ್ರಾಮೀಣ ಪ್ರದೇಶದಿಂದಲೇ ಬರುವ ಕಾರಣ ಈ ಬಾರಿ ಧಂತೇರಸ್ ದಿನ ಚಿನ್ನದ ಖರೀದಿ ಪ್ರಮಾಣ ತುಸು ತಗ್ಗುವ ಸಾಧ್ಯತೆ ಕೂಡ ಇದೆ. ಚಿನ್ನದ ಬೆಲೆಯಲ್ಲಿ ಏರಿಕೆಯಾಗಿರುವ ಕಾರಣ ಇದು ಗ್ರಾಮೀಣ ಭಾಗದ ಜನರ ಖರೀದಿ ಸಾಮರ್ಥ್ಯವನ್ನು ತಗ್ಗಿಸುವ ನಿರೀಕ್ಷೆಯಿದೆ.
Gold Investment: ಬರೀ ಚಿನ್ನ ಕೊಳ್ಳೋದಲ್ಲ, ಹೀಗೂ ಮಾಡಬಹುದು ಹೂಡಿಕೆ
ಅಪತ್ಕಾಲದಲ್ಲಿ ಕೈಹಿಡಿಯುವ ಮಿತ್ರ
ಚಿನ್ನ ಅಪತ್ಕಾಲದಲ್ಲಿ ಕೈ ಹಿಡಿಯುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಹೀಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡಿದ್ರೆ ಕೈ ಸುಟ್ಟುಕೊಳ್ಳುವ ಅಪಾಯ ಇತರ ಹೂಡಿಕೆಗಳಿಗಿಂತ ತುಸು ಕಡಿಮೇನೆ. ಹೀಗಿರುವಾಗ ಚಿನ್ನದ ಬೆಲೆ ತಗ್ಗಿರುವಾಗ ಅದರ ಮೇಲೆ ಹೂಡಿಕೆ ಮಾಡೋದ್ರಿಂದ ಮುಂದೆ ಗಳಿಕೆಯಂತೂ ಸಿಕ್ಕೇಸಿಗುತ್ತದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ಜಗತ್ತಿನ ಬಹುತೇಕ ಆರ್ಥಿಕತೆಗಳು ಹಣದುಬ್ಬರ ಸಮಸ್ಯೆ ಎದುರಿಸುತ್ತಿವೆ. ಇನ್ನು ಜಾಗತಿಕ ಮಟ್ಟದಲ್ಲಿನ ಕೆಲವು ಬೆಳವಣಿಗೆಗಳು ಕೂಡ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.