ಬಾಲಿವುಡ್‌ನ ಖ್ಯಾತ ಖಳನಾಯಕ ಡ್ಯಾನಿ ಡೆನ್ಜೊಂಗ್ಪಾ ಅವರ ನೈಜ ಆದಾಯದ ಮೂಲ ನಟನೆಯಲ್ಲ, ಬದಲಿಗೆ ಅವರ ಬೃಹತ್ ಮದ್ಯದ ಉದ್ಯಮವಾಗಿದೆ. ಈಶಾನ್ಯ ಭಾರತದಲ್ಲಿ 'ಯುಕ್ಸಮ್ ಬ್ರೂವರೀಸ್' ಸ್ಥಾಪಿಸಿದ ಇವರು, ₹40 ಕೋಟಿಯ ಮಾಸ್ಟರ್ ಪ್ಲಾನ್ ಮೂಲಕ ವಿಜಯ ಮಲ್ಯ ಅವರ ಕಂಪನಿಗೆ ಸೆಡ್ಡು ಹೊಡೆದಿದ್ದರು.

ಬಾಲಿವುಡ್ ಚಿತ್ರರಂಗದಲ್ಲಿ ಖಳನಾಯಕನ ಪಾತ್ರಗಳಿಗೆ ಹೊಸ ಆಯಾಮ ನೀಡಿದ ಹಿರಿಯ ನಟರಲ್ಲಿ ಡ್ಯಾನಿ ಡೆನ್ಜೊಂಗ್ಪಾ ಪ್ರಮುಖರು. ಗಂಭೀರ ಧ್ವನಿ, ವಿಭಿನ್ನ ನೋಟ ಮತ್ತು ಪ್ರಭಾವಶಾಲಿ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಅವರು, ಹಲವು ದಶಕಗಳ ಕಾಲ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ, ತೆರೆಯ ಮೇಲೆ ಖಳನಾಯಕನಾಗಿ ಗುರುತಿಸಿಕೊಂಡಿರುವ ಡ್ಯಾನಿ ಅವರ ಜೀವನದ ಮತ್ತೊಂದು ಮುಖ ಅನೇಕರಿಗೆ ಅಷ್ಟಾಗಿ ಪರಿಚಿತವಿಲ್ಲ. ನಟನೆಯ ಜೊತೆಗೆ ಅವರು ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅವರ ನಿಜಜೀವನದ ಕಥೆ ಯಾವುದೇ ಥ್ರಿಲ್ಲರ್ ಚಲನಚಿತ್ರಕ್ಕೂ ಕಡಿಮೆಯಿಲ್ಲ.

ಡ್ಯಾನಿ ಅವರ ನೈಜ ಆದಾಯದ ಪ್ರಮುಖ ಮೂಲ ನಟನೆಯಲ್ಲ! ಬದಲಿಗೆ, ತಮ್ಮ ಸ್ವಂತ ಶ್ರಮದಿಂದ ಕಟ್ಟಿ ಬೆಳೆಸಿದ ಭಾರಿ ಮದ್ಯದ ವ್ಯವಹಾರ ಈ ಉದ್ಯಮದಲ್ಲಿ ಅವರು ಭಾರತದ ಪ್ರಮುಖ ಮದ್ಯದ ದೊರೆ ಎನಿಸಿಕೊಂಡಿದ್ದ ವಿಜಯ ಮಲ್ಯ ಅವರಿಗೇ ಸೆಡ್ಡು ಹೊಡೆದು ಈಶಾನ್ಯ ಭಾರತದಲ್ಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು ಎಂಬುದು ಹಲವರಿಗೆ ತಿಳಿಯದ ಕುತೂಹಲಕಾರಿ ಸತ್ಯ.

ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರೂ, ಹುಟ್ಟೂರು ಸಿಕ್ಕಿಂ ಮೇಲಿನ ಪ್ರೀತಿ ಮತ್ತು ಅಲ್ಲಿನ ಜೀವನಶೈಲಿಯೊಂದಿಗಿನ ನಂಟನ್ನು ಡ್ಯಾನಿ ಎಂದಿಗೂ ಕಳೆದುಕೊಳ್ಳಲಿಲ್ಲ. ಇದೇ ಬಾಂಧವ್ಯ ಮುಂದೆ ಅವರನ್ನು ಉದ್ಯಮ ಕ್ಷೇತ್ರದತ್ತ ಕರೆದೊಯ್ದಿತು. ತಮ್ಮ ಊರಿನ ಹೆಸರನ್ನೇ ಬ್ರೂವರಿ ಸಂಸ್ಥೆಗೆ ಇಟ್ಟು, ಮದ್ಯ ತಯಾರಿಕೆ ಮತ್ತು ಮಾರಾಟದ ವ್ಯವಹಾರದಲ್ಲಿ ತೊಡಗಿಸಿಕೊಂಡರು. ಕ್ರಮೇಣ ಈ ಉದ್ಯಮವನ್ನು ವಿಸ್ತರಿಸಿ, ಈಶಾನ್ಯ ಭಾರತದ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆಯುವ ಪ್ರಯತ್ನ ಮಾಡಿದರು.

ಪ್ರಸಿದ್ಧಿಯ ಉತ್ತುಂಗದಲ್ಲಿದ್ದಾಗಲೂ ವರ್ಷದಲ್ಲಿ ಕನಿಷ್ಠ ಆರು ತಿಂಗಳನ್ನು ಸಿಕ್ಕಿಂನಲ್ಲಿ ತಮ್ಮ ಕುಟುಂಬದೊಂದಿಗೆ ಕಳೆಯಲು ನಿರ್ಧರಿಸಿದರು. ಈ ವೇಳೆಯಲ್ಲಿಯೇ ಅವರಿಗೆ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುವ ಹಾಗೂ ಉದ್ಯೋಗ ಸೃಷ್ಟಿಸುವ ಆಲೋಚನೆ ಬಂದಿತು.

1987ರಲ್ಲಿ ಡ್ಯಾನಿ ತಮ್ಮ ಹುಟ್ಟೂರಾದ 'ಯುಕ್ಸಮ್' (Yuksom) ಗ್ರಾಮದ ಹೆಸರಿನಲ್ಲಿ 'ಯುಕ್ಸಮ್ ಬ್ರೂವರೀಸ್' ಕಂಪನಿಯನ್ನು ಪ್ರಾರಂಭಿಸಿದರು. ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಸಂಸ್ಥೆಯು ಕಾಲಕ್ರಮೇಣ ಬೆಳೆದು, ಈಶಾನ್ಯ ಭಾರತದ ಅತಿ ದೊಡ್ಡ ಬ್ರೂವರಿಯಾಗಿ ಹಾಗೂ ಭಾರತದ ಮೂರನೇ ಅತಿ ದೊಡ್ಡ ಮದ್ಯ ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಿತು.

ಸಿಕ್ಕಿಂನಲ್ಲಿ ಜನಿಸಿದ ಡ್ಯಾನಿ ಅವರಿಗೆ ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬ ತೀವ್ರ ಆಸೆಯಿತ್ತು. ಆದರೆ 1960ರ ದಶಕದಲ್ಲಿ ಭಾರತ-ಚೀನಾ ನಡುವೆ ಭುಗಿಲೆದ್ದ ಯುದ್ಧದ ಭೀಕರತೆ ಹಾಗೂ ಹಿಂಸಾಚಾರವನ್ನು ಕಂಡ ಅವರ ತಾಯಿ, ಮಗನನ್ನು ಸೇನೆಗೆ ಸೇರದಂತೆ ತಡೆದರು. ತಾಯಿಯ ಮಾತಿಗೆ ಗೌರವ ನೀಡಿದ ಡ್ಯಾನಿ ತಮ್ಮ ಗಮನವನ್ನು ಸಂಗೀತ ಹಾಗೂ ನಟನೆಯತ್ತ ಹೊರಳಿಸಿದರು.

ಪುಣೆಯ ಪ್ರಸಿದ್ಧ 'ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ' ಸಂಸ್ಥೆಯಲ್ಲಿ ನಟನಾ ಕೋರ್ಸ್‌ಗೆ ಸೇರಿದ ಅವರು, ತರಬೇತಿ ಮುಗಿಸಿ ಬಾಲಿವುಡ್ ಪ್ರವೇಶಿಸಿದರು. ಸಿಕ್ಕಿಂ ರಾಜ್ಯದಿಂದ ಬಂದು ಇಡೀ ದೇಶದಲ್ಲೇ ಅತ್ಯಂತ ಖ್ಯಾತ ನಟನಾಗಿ ಹೊರಹೊಮ್ಮಿದ ಮೊದಲ ನಟ ಎಂಬ ಕೀರ್ತಿಗೆ ಅವರು ಭಾಜನರಾದರು.

ವಿಜಯ ಮಲ್ಯಗೆ ಬಿಗ್ ಶಾಕ್: ₹40 ಕೋಟಿಯ ಮಾಸ್ಟರ್ ಪ್ಲಾನ್

2005ರಲ್ಲಿ ಡ್ಯಾನಿ ಒಡಿಶಾದಲ್ಲಿ ಡೆನ್ಜಾಂಗ್ ಬ್ರೂವರೀಸ್ ಸ್ಥಾಪಿಸುವ ಮೂಲಕ ತಮ್ಮ ಬ್ಯುಸಿನೆಸ್ ವಿಸ್ತರಿಸಿದರು. 2009ರಲ್ಲಿ ವಿಜಯ ಮಲ್ಯ ಒಡೆತನದ ಬೃಹತ್ ಸಂಸ್ಥೆ ಯುನೈಟೆಡ್ ಬ್ರೂವರೀಸ್ (UB Group) ಈಶಾನ್ಯ ಭಾರತದ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಸಿದ್ಧತೆ ನಡೆಸಿತ್ತು. UB ಯಂತಹ ಮಲ್ಟಿ-ಮಿಲಿಯನ್ ಡಾಲರ್ ಕಂಪನಿ ಮಾರುಕಟ್ಟೆಗೆ ಕಾಲಿಟ್ಟರೆ ತಮ್ಮ ಸ್ಥಳೀಯ ಉದ್ಯಮ ನೆಲಸಮವಾಗುತ್ತದೆ ಎಂಬುದನ್ನು ಅರಿತ ಡ್ಯಾನಿ, ಅತ್ಯಂತ ಚಾಣಾಕ್ಷ ನಡೆ ಇಟ್ಟರು. ಅಸ್ಸಾಂ ಮೂಲದ 'ರೈನೋ ಏಜೆನ್ಸೀಸ್ ಲಿಮಿಟೆಡ್' ಕಂಪನಿಯನ್ನು ಬರೋಬ್ಬರಿ ₹40 ಕೋಟಿ ನೀಡಿ ಡ್ಯಾನಿ ಸ್ವಾಧೀನಪಡಿಸಿಕೊಂಡರು. ಈ ಒಂದು ಮಾಸ್ಟರ್ ಪ್ಲಾನ್‌ನಿಂದಾಗಿ ವಿಜಯ ಮಲ್ಯ ಅವರ ಯುನೈಟೆಡ್ ಬ್ರೂವರೀಸ್ ಈಶಾನ್ಯ ಭಾರತದಲ್ಲಿ ನೆಲೆಯೂರುವುದು ಸಂಪೂರ್ಣವಾಗಿ ನಿಂತೇ ಹೋಯ್ತು. ಜೊತೆಗೆ ಈ ವ್ಯವಹಾರವು ಈಶಾನ್ಯ ಭಾರತದ ಮಾರುಕಟ್ಟೆಯಲ್ಲಿ ಡ್ಯಾನಿ ಅವರ ಉದ್ಯಮದ ವ್ಯಾಪ್ತಿಯನ್ನು ವಿಸ್ತರಿಸಲು ನೆರವಾಯಿತು.

ಬ್ರೂವರಿಯೇ ನನ್ನ ಜೀವನಾಧಾರ!

2009ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಉದ್ಯಮದ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಡ್ಯಾನಿ, ನನ್ನ ಬಳಿ ಸಿಕ್ಕಿಂನಲ್ಲಿ ಮೂರು ಬ್ರೂವರಿಗಳಿವೆ. ಅವುಗಳೇ ನನ್ನ ನಿಜವಾದ ಬ್ರೆಡ್ ಮತ್ತು ಬಟರ್. ನಟನೆ ಎಂಬುದು ಕೇವಲ ಆಕಸ್ಮಿಕವಾಗಿ ನಡೆದುಹೋಯಿತು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು. ವರದಿಗಳ ಪ್ರಕಾರ ಡ್ಯಾನಿ ಡೆನ್ಜೊಂಗ್ಪಾ ಅವರ ಒಟ್ಟು ಆಸ್ತಿ ಮೌಲ್ಯ ಸರಿಸುಮಾರು ₹83 ಕೋಟಿಗೂ ಅಧಿಕ.

ಮುಂಬೈನ ಬೇಸಿಗೆಯ ಬಿಸಿಲನ್ನು ದ್ವೇಷಿಸುತ್ತಿದ್ದ ಅವರು, ಕೇವಲ ನವೆಂಬರ್‌ನಿಂದ ಜನವರಿಯ ನಡುವೆ ಚಳಿಗಾಲದಲ್ಲಿ ಮಾತ್ರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು. ಭಾನುವಾರಗಳಂದು ಸಂಪೂರ್ಣವಾಗಿ ರಜೆ ಪಡೆಯುತ್ತಿದ್ದ ಅವರು, ತಮಗೆ ಇಷ್ಟಬಂದಾಗ ಮಾತ್ರ ಅಭಿನಯಿಸುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಡ್ಯಾನಿ ಚಿತ್ರಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. 2010ರಲ್ಲಿ 'ಎಂಥಿರನ್' ಚಿತ್ರದಲ್ಲಿ ಪ್ರಮುಖ ಖಳನಾಯಕನಾಗಿ ಕಾಣಿಸಿಕೊಂಡ ಬಳಿಕವೂ ಅವರು ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. 'ಬೇಬಿ' ಮತ್ತು 'ನಾಮ್ ಶಬಾನಾ' ಚಿತ್ರಗಳಲ್ಲಿಯೂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸೂರಜ್ ಬರ್ಜಾತ್ಯ ನಿರ್ದೇಶನದ 'ಉಂಚೈ' ಚಿತ್ರದಲ್ಲಿ 2022ರಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಅನುಪಮ್ ಖೇರ್, ಬೋಮನ್ ಇರಾನಿ ಸೇರಿದಂತೆ ಹಲವು ಹಿರಿಯ ಕಲಾವಿದರೊಂದಿಗೆ ಅವರು ಅಭಿನಯಿಸಿದ್ದರು. ನಂತರದ ದಿನಗಳಲ್ಲಿ ಚಿತ್ರಗಳ ಆಯ್ಕೆಯಲ್ಲಿ ಹೆಚ್ಚು ವಿರಾಮ ಮತ್ತು ವೈಯಕ್ತಿಕ ಬದುಕಿಗೆ ಆದ್ಯತೆ ನೀಡಿದರು.

ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಡ್ಯಾನಿ ಅವರಿಗೆ 2003ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಶಕಗಳ ಕಾಲ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಅವರು, ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ.