ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯ. ಈಗಾಗಲೇ ಬಹುತೇಕರು ಈ ಕೆಲಸ ಮಾಡಿ ಮುಗಿಸಿದ್ದಾರೆ. ಇನ್ನೂ ಮಾಡದವರಿಗೆ 2023 ಮಾರ್ಚ್ 31ರ ತನಕ ಕಾಲಾವಕಾಶ ನೀಡಲಾಗಿದೆ. ಇದರೊಳಗೆ ಮಾಡಿ ಮುಗಿಸದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.
ನವದೆಹಲಿ (ನ.21): ನೀವು ಇನ್ನೂ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಲ್ವ? 2023ರ ಮಾರ್ಚ್ ಒಳಗೆ ನೀವು ಈ ಕೆಲ್ಸ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಇಂದು (ನ.21) ತಿಳಿಸಿದೆ. ಅಂದ ಹಾಗೇ ಈಗ ನೀವು ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು 1000ರೂ. ದಂಡ ಪಾವತಿಸಬೇಕು. ದಂಡವಿಲ್ಲದೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಸಿಬಿಡಿಟಿ 2022ರ ಮಾರ್ಚ್ 31ರ ತನಕ ಸಮಯಾವಕಾಶ ನೀಡಿತ್ತು. ಆ ಬಳಿಕ ಅಂದ್ರೆ 2022ರ ಏಪ್ರಿಲ್ 1ರ ಬಳಿಕ 500ರೂ. ದಂಡ ವಿಧಿಸಲಾಗುವುದು ಎಂದು ಸಿಬಿಡಿಟಿ ತಿಳಿಸಿತ್ತು. ಇನ್ನು 2022ರ ಜುಲೈ 1ರ ಬಳಿಕ ಈ ಕೆಲ್ಸ ಮಾಡಲು 500ರೂ. ಅಲ್ಲ 1000ರೂ. ದಂಡ ವಿಧಿಸೋದಾಗಿ ಸಿಬಿಡಿಟಿ ಮಾಹಿತಿ ನೀಡಿದೆ. ಈಗಾಗಲೇ ಕೇಂದ್ರ ಸರ್ಕಾರ ಪ್ಯಾನ್ -ಆಧಾರ್ ಜೋಡಣೆ ಅಂತಿಮ ಗಡುವನ್ನುಅನೇಕ ಬಾರಿ ವಿಸ್ತರಿಸಿದೆ.
ಪ್ಯಾನ್ ನಿಷ್ಕ್ರಿಯವಾದ್ರೆ ತೊಂದರೆ
2023ರ ಮಾರ್ಚ್ 31ರೊಳಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡದಿದ್ರೆ 2023ರ ಏಪ್ರಿಲ್ 1ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಒಮ್ಮೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ.ಅಲ್ಲದೆ, ಬ್ಯಾಂಕ್ ಖಾತೆ (Bank Account) ತೆರೆಯಲು, ಮ್ಯೂಚುವಲ್ ಫಂಡ್ ನಲ್ಲಿ (Mutual Fund) ಹೂಡಿಕೆ (Invest) ಮಾಡಲು ಹಾಗೂ ಡಿಮ್ಯಾಟ್ ಖಾತೆ (Demat account) ತೆರೆಯಲು ಸಾಧ್ಯವಾಗೋದಿಲ್ಲ. ಇನ್ನು 50 ಸಾವಿರ ರೂ.ಗಿಂತ ಅಧಿಕ ಮೊತ್ತದ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಹೀಗಾಗಿ ಪ್ಯಾನ್ ನಿಷ್ಕ್ರಿಯಗೊಂಡ್ರೆ ಬ್ಯಾಂಕಿಂಗ್ ಸೇವೆಗಳನ್ನು (Banking Services) ಪಡೆಯಲು ತೊಂದರೆಯಾಗುತ್ತದೆ.
ಸರ್ಕಾರಿ ನೌಕರರಿಗೆ ಶುಭ ಸುದ್ದಿ; ಹೊಸ ಮನೆ ಖರೀದಿಗೆ ಕಡಿಮೆ ಬಡ್ಡಿಯಲ್ಲಿ 25ಲಕ್ಷ ರೂ. ಸಾಲ!
ದಂಡ ಪಾವತಿಸೋದು ಹೇಗೆ?
ಆಧಾರ್ -ಪ್ಯಾನ್ ಲಿಂಕ್ ಮಾಡುವ ಮನವಿ ಸಲ್ಲಿಕೆಯಾಗುವ ಮುನ್ನ ದಂಡ ಕಟ್ಟಬೇಕು. ನೀವು ಈಗ ಆಧಾರ್ -ಪ್ಯಾನ್ ಲಿಂಕ್ ಮಾಡೋದಾದ್ರೆ 1000 ರೂ. ವಿಳಂಬ ಶುಲ್ಕ ಪಾವತಿಸಬೇಕು.
ಹಂತ 1: ಆಧಾರ್-ಪ್ಯಾನ್ ಲಿಂಕ್ ಮನವಿ ಸಲ್ಲಿಕೆ ಪ್ರಕ್ರಿಯೆ ಮುಂದುವರಿಸಲು https://onlineservices.tin.egov-nsdl.com/etaxnew/tdsnontds.jsp ಭೇಟಿ ನೀಡಿ.
ಹಂತ 2: ಆಧಾರ್-ಪ್ಯಾನ್ ಲಿಂಕ್ ಮನವಿ ಸಲ್ಲಿಕೆಗೆ ಚಲನ್ ಸಂಖ್ಯೆ/ಐಟಿಎನ್ ಎಸ್ 280 ಅಡಿಯಲ್ಲಿಪ್ರಕ್ರಿಯೆ ಮುಂದುವರಿಕೆ (Proceed under CHALLAN NO./ITNS 280) ಮೇಲೆ ಕ್ಲಿಕ್ ಮಾಡಿ.
ಹಂತ3: ಈಗ tax applicable ಆಯ್ಕೆ ಮಾಡಿ.
ಹಂತ 4: ಒಂದೇ ಚಲನ್ ನಲ್ಲಿ ಶುಲ್ಕ ಪಾವತಿಯನ್ನು ಮೈನರ್ ಹೆಡ್ 500 (ಶುಲ್ಕ) ಹಾಗೂ ಮೇಜರ್ ಹೆಡ್ 0021 (ಕಂಪನಿಗಳನ್ನು ಹೊರತುಪಡಿಸಿದ ಆದಾಯ ತೆರಿಗೆ ) ಅಡಿಯಲ್ಲಿ ಮಾಡಿರೋದನ್ನು ಖಚಿತಪಡಿಸಿ.
ಹಂತ 5: ಈಗ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ನಲ್ಲಿ ಯಾವುದು ನಿಮ್ಮ ಪಾವತಿ ವಿಧಾನ ಎಂಬುದನ್ನು ಆಯ್ಕೆ ಮಾಡಿ.
ಒಮ್ಮೆ ಪಾವತಿಯಾದ ಬಳಿಕ ತೆರಿಗೆದಾರರು 4-5 ದಿನಗಳಲ್ಲಿ ಪ್ಯಾನ್-ಆಧಾರ್ ಲಿಂಕ್ ಮನವಿ ಸಲ್ಲಿಕೆಗೆ ಪ್ರಯತ್ನಿಸುವಂತೆ ಶಿಫಾರಸ್ಸು ಮಾಡಲಾಗುತ್ತದೆ.
ಈ ಪಿಂಚಣಿದಾರರು ನವೆಂಬರ್ ನಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಾಗಿಲ್ಲ!
ಪ್ಯಾನ್-ಆಧಾರ್ ಲಿಂಕ್ ಮಾಡೋದು ಹೇಗೆ?
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ ಅನೇಕ ವಿಧಾನಗಳನ್ನು ಒದಗಿಸಿದೆ. ಇದರಲ್ಲಿ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್, ಎಸ್ ಎಂಎಸ್, ಎನ್ಎಸ್ ಡಿಎಲ್ (NSDL) ಅಥವಾ ಯುಟಿಐಐಎಲ್ (UTIIL) ಕಚೇರಿಗಳಿಗೆ ಭೇಟಿ ನೀಡೋ ಮೂಲಕ ಪ್ಯಾನ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.
