ಆಧಾರ್-ಪ್ಯಾನ್ ಜೋಡಣೆ ವಿಳಂಬ, ಸರ್ಕಾರದ ಬೊಕ್ಕಸ ಸೇರಿದ 600 ಕೋಟಿ;ಇನ್ನೂ ಲಿಂಕ್ ಆಗಿಲ್ಲ 11.48 ಕೋಟಿ ಪ್ಯಾನ್
ಪ್ರಸ್ತುತ ಪ್ಯಾನ್ ಕಾರ್ಡ್ ಅನ್ನು ಆಧಾರ್ ಗೆ ಲಿಂಕ್ ಮಾಡಲು ವಿಳಂಬ ಶುಲ್ಕ ಪಾವತಿಸಬೇಕು.ಆದರೂ ಇನ್ನೂ 1.48 ಕೋಟಿ ಪ್ಯಾನ್ ಕಾರ್ಡ್ ಗಳು ಆಧಾರ್ ಜೊತೆಗೆ ಲಿಂಕ್ ಆಗಿಲ್ಲ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರ ಸಂಸತ್ತಿಗೆ ನೀಡಿದೆ.
ನವದೆಹಲಿ (ಫೆ.6): ಆಧಾರ್ ಜೊತೆಗೆ ಪ್ಯಾನ್ ಜೋಡಣೆಯಲ್ಲಿನ ವಿಳಂಬಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ದಂಡದ ರೂಪದಲ್ಲಿ 600 ಕೋಟಿ ರೂ.ಗಿಂತಲೂ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಿದೆ. ಸುಮಾರು 11.48 ಕೋಟಿ ಕಾಯಂ ಖಾತೆ ಸಂಖ್ಯೆಗಳು (ಪ್ಯಾನ್ ) ಇನ್ನೂ ಕೂಡ ಆಧಾರ್ ಜೊತೆಗೆ ಜೋಡಣೆಯಾಗಿಲ್ಲ ಎಂದು ಸಂಸತ್ತಿಗೆ ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ಲೋಕಸಭೆಗೆ ಲಿಖಿತ ಹೇಳಿಕೆ ನೀಡಿದ್ದು, ವಿನಾಯ್ತಿ ನೀಡಲಾಗಿರುವ ವರ್ಗಗಳನ್ನು ಹೊರತುಪಡಿಸಿ 2024ರ ಜನವರಿ 29ರ ತನಕ ಆಧಾರ್ ಜೊತೆಗೆ ಲಿಂಕ್ ಆಗದ ಪ್ಯಾನ್ ಗಳ ಸಂಖ್ಯೆ 11.48 ಕೋಟಿ ಇದೆ ಎಂಬ ಮಾಹಿತಿ ನೀಡಿದ್ದಾರೆ. ಪ್ಯಾನ್ ಹಾಗೂ ಆಧಾರ್ ಜೋಡಣೆಗೆ ನೀಡಲಾಗಿದ್ದ ಅಂತಿಮ ಗಡುವಾದ 2023ರ ಜೂನ್ 30ರ ಬಳಿಕ ಈ ಕೆಲಸ ಮಾಡಿದ ವ್ಯಕ್ತಿಗೆ ವಿಧಿಸಲಾಗಿರುವ 1,000ರೂ. ವಿಳಂಬ ಶುಲ್ಕದಿಂದ ಸರ್ಕಾರಕ್ಕೆ ಎಷ್ಟು ಹಣ ಬಂದಿದೆ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.
2023ರ ಜುಲೈ 1ರಿಂದ 2024ರ ಜನವರಿ 31ರ ತನಕ ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡದ ವ್ಯಕ್ತಿಗಳಿಂದ ಒಟ್ಟು 601.97 ಕೋಟಿ ರೂ. ಸಂಗ್ರಹಿಸಲಾಗಿದೆ. ಎಂದು ಪಂಕಜ್ ಚೌಧರಿ ಮಾಹಿತಿ ನೀಡಿದ್ದಾರೆ. ಆಧಾರ್ ಜೊತೆಗೆ ಪ್ಯಾನ್ ಲಿಂಕ್ ಮಾಡಲು 2023ರ ಜೂನ್ 30 ಅಂತಿಮ ಗಡುವಾಗಿತ್ತು. ಜೂನ್ 30ರ ಗಡುವು ಕೂಡ ತಪ್ಪಿಹೋದಲ್ಲಿ, ಪಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ. ಆದರೆ, ಆ ನಂತರದ 30 ದಿನಗಳಲ್ಲಿ ಇದನ್ನು ಸಕ್ರಿಯಗೊಳಿಸಿಕೊಳ್ಳಬಹುದು. 1 ಸಾವಿರ ರೂಪಾಯಿ ಶುಲ್ಕವನ್ನು ಪಾವತಿಸಿ ನಿಗದಿತ ಪ್ರಾಧಿಕಾರಕ್ಕೆ ಆಧಾರ್‌ಅನ್ನು ತಿಳಿಸಿ ಲಿಂಕ್ ಮಾಡಬಹುದು ಎಂದು ಹಣಕಾಸು ಸಚಿವಾಲಯವು ತಿಳಿಸಿತ್ತು. ಅಲ್ಲದೆ, ಟಿಡಿಎಸ್ ಹಾಗೂ ಟಿಸಿಎಸ್ ಅನ್ನು ಅತ್ಯಧಿಕ ದರದಲ್ಲಿ ಕಡಿತಗೊಳಿಸಲಾಗುವುದು ಎಂದು ತಿಳಿಸಿತ್ತು.
ಆಧಾರ್ ಸಂಖ್ಯೆ ಇದ್ದರೆ ಸಾಕು ತಕ್ಷಣ ಪ್ಯಾನ್ ಕಾರ್ಡ್ ಪಡೆಯಬಹುದು, ಅದು ಹೇಗೆ? ಇಲ್ಲಿದೆ ಮಾಹಿತಿ
ಒಮ್ಮೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಸಾಧ್ಯವಾಗೋದಿಲ್ಲ.ಅಲ್ಲದೆ, ಬ್ಯಾಂಕ್ ಖಾತೆ ತೆರೆಯಲು, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಹಾಗೂ ಡಿಮ್ಯಾಟ್ ಖಾತೆ ತೆರೆಯಲು ಸಾಧ್ಯವಾಗೋದಿಲ್ಲ. ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಕೂಡ ತೊಂದರೆ ಎದುರಾಗುತ್ತದೆ.
ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆಯಿಂದ ಜಮ್ಮು ಕಾಶ್ಮೀರ, ಅಸ್ಸಾಂ, ಮೇಘಾಲಯದ ಜನರಿಗೆ ವಿನಾಯಿತಿ ನೀಡಲಾಗಿತ್ತು. ಇದರೊಂದಿಗೆ 1961 ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಅನಿವಾಸಿ ಭಾರತೀಯರಿಗೆ, ಭಾರತೀಯ ಪ್ರಜೆಗಳಲ್ಲದವರಿಗೆ ವಿನಾಯಿತಿ ನೀಡಲಾಗಿತ್ತು. ಜೊತೆಗೆ 80 ವರ್ಷ ಮೀರಿದವರಿಗೂ ಇದರಿಂದ ವಿನಾಯ್ತಿ ನೀಡಲಾಗಿತ್ತು.
ಪ್ಯಾನ್ - ಆಧಾರ್ ಲಿಂಕ್‌ಗೆ ಶುಲ್ಕ ರದ್ದುಪಡಿಸಲು ಆಗ್ರಹ
ಇ-ಪ್ಯಾನ್ ಸೌಲಭ್ಯ ಯಾರಿಗೆ ಸಿಗುತ್ತೆ?
ಆಧಾರ್ ಸಂಖ್ಯೆ ಹೊಂದಿರೋರಿಗೆ ತಕ್ಷಣವೇ ಪ್ಯಾನ್ ಕಾರ್ಡ್ ಅಥವಾ ಇ-ಪ್ಯಾನ್ ಕಾರ್ಡ್ ಪಡೆಯೋ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಇ-ಪ್ಯಾನ್ ಕಾರ್ಡ್ ಅನ್ನು ಪಿಡಿಎಫ್ ನಮೂನೆಯಲ್ಲಿ ಅರ್ಜಿದಾರರಿಗೆ ನೀಡಲಾಗುತ್ತದೆ. ಹಾಗೆಯೇ ಇದಕ್ಕೆ ಯಾವುದೇ ಶುಲ್ಕ ಕೂಡ ಪಾವತಿಸಬೇಕಾಗಿಲ್ಲ. ಇನ್ನು ಇ-ಪ್ಯಾನ್ ಡಿಜಿಟಲ್ ಸಹಿ ಹೊಂದಿರುವ ಪ್ಯಾನ್ ಕಾರ್ಡ್ ಆಗಿದ್ದು, ಆಧಾರ್ ಕಾರ್ಡ್ ಇ-ಕೆವೈಸಿ ಮಾಹಿತಿಗಳನ್ನು ಆಧರಿಸಿ ಇದನ್ನು ನೀಡಲಾಗುತ್ತದೆ. ಈ ಸೇವೆ ಎಲ್ಲ ವೈಯಕ್ತಿಕ ತೆರಿಗೆದಾರರಿಗೂ ಲಭ್ಯವಿದೆ. ಆಧಾರ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಇದ್ದರೆ ಸಾಕು, ನೀವು ಇ-ಪ್ಯಾನ್ ಕಾರ್ಡ್ ಅನ್ನು ಸುಲಭವಾಗಿ ಡೌನ್ ಲೋಡ್ ಮಾಡಬಹುದು.