ಪ್ಯಾನ್‌ - ಆಧಾರ್‌ ಲಿಂಕ್‌ಗೆ ಶುಲ್ಕ ರದ್ದುಪಡಿಸಲು ಆಗ್ರಹ

ಕೇಂದ್ರ ಸರ್ಕಾರವು ಪ್ಯಾನ್‌- ಆಧಾರ್‌ ಲಿಂಕ್‌ ಮಾಡಲು ಒಂದು ಸಾವಿರ ದಂಡ ವಿಧಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು.

Demand for abolition of fee for PAN-Aadhaar link  snr

ಮೈಸೂರು : ಕೇಂದ್ರ ಸರ್ಕಾರವು ಪ್ಯಾನ್‌- ಆಧಾರ್‌ ಲಿಂಕ್‌ ಮಾಡಲು ಒಂದು ಸಾವಿರ ದಂಡ ವಿಧಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು.

ಕೇಂದ್ರ ಸರ್ಕಾರ ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ ಲಿಂಕ್‌ ಮಾಡಬೇಕು ಎಂದು ಘೋಷಿಸಿರುವುದು ಸ್ವಾಗತಾರ್ಹ. ಇದರಿಂದ ಕಪ್ಪು ಹಣ ವರ್ಗಾವಣೆ ತಡೆಯಬಹುದು. ಆದರೆ ಪಾನ್‌ ಕಾರ್ಡ್‌ ಆಧಾರ್‌ ಅನ್ನು ಲಿಂಕ್‌ ಮಾಡಲು ಇಲಾಖೆ, ಜನತೆಗೆ ಸಾವಿರ ರೂ. ದಂಡ ವಿಧಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಆದಾಯ ತೆರಿಗೆ ಇಲಾಖೆ ದೇಶದ ಜನರಿಗೆ ಮೊದಲಿನಿಂದಲೂ ಪಾನ್‌- ಆಧಾರ್‌ ಲಿಂಕ್‌ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ದೃಶ್ಯಮಾಧ್ಯಮ ಹಾಗೂ ದಿನಪತ್ರಿಕೆಯಲ್ಲಿ ಜಾಗೃತಿ ಮೂಡಿಸಿಲ್ಲ. ಕೆಲವರಿಗೆ ಆಧಾರ್‌ ಮತ್ತು ಪ್ಯಾನ್‌ ಲಿಂಕ್‌ ಆಗಿದ್ದರೂ ಸೈಬರ್‌ ಕೇಂದ್ರಗಳಲ್ಲಿ ಅನಧಿಕೃತವಾಗಿ ಒಂದೊಂದು ಸಾವಿರ ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ದೇಶದಲ್ಲಿ ಈಗಾಗಲೇ ಜನರು ಪಾನ್‌ ಮಾಡಿಸೋಕೆ . 200 ರಿಂದ 250 ಮತ್ತು ಆಧಾರ್‌ಗೆ . 100 ರಿಂದ 150 ವೆಚ್ಚ ಮಾಡಿದ್ದಾರೆ. ಈಗ ಎರಡನ್ನೂ ಮಾಡೋಕೆ . 1000 ಕೊಡಬೇಕು. ಇದೇನಾ ಅಚ್ಚೇ ದಿನ್‌ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಪಾನ್‌- ಆಧಾರ್‌ ಲಿಂಕ್‌ ಮಾಡಲು ಹೊರಡಿಸಿರುವ ಸಾವಿರ ರೂ. ದಂಡವನ್ನು ಹಿಂದಕ್ಕೆ ಪಡೆಯಬೇಕು. ರೈತರ, ಬಡಜನರ ಭಾರ ಇಳಿಸಬೇಕು ಎಂದು ಅವರು ಕೋರಿದ್ದಾರೆ.

ಜಿಲ್ಲಾಧ್ಯಕ್ಷ ತೇಜಸ್‌ ಲೋಕೇಶ್‌ಗೌಡ, ಶಾಂತರಾಜೇ ಅರಸ್‌, ವಿಜಯೇಂದ್ರ, ಮೊಗಣ್ಣಾಚಾರ್‌, ಸಿ.ಎಚ್‌. ಕೃಷ್ಣಯ್ಯ, ಅನಿಲ್‌, ಲತಾ ರಂಗನಾಥ್‌, ಪ್ರಜೀಶ್‌, ನರಸಿಂಹೇಗೌಡ, ನಿತ್ಯಾನಂದ, ಮಧುವನ ಚಂದ್ರು, ರಾಧಾಕೃಷ್ಣ ಮೊದಲಾದವರು ಇದ್ದರು.

ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ

ಕೊಳ್ಳೇಗಾಲ

ಸರ್ಕಾರ ಪಾನ್‌ ಕಾರ್ಡ್‌ಗೆ ಆಧಾರ್‌ ಜೋಡಣೆಗೆ ದಂಡ ವಿಧಿಸಿರುವ ಕ್ರಮ ಸರಿಯಲ್ಲ, ಕೂಡಲೆ ನಿಲ್ಲಿಸಬೇಕು. ಈ ಬಾರಿ ಚುನಾವಣೆಯಲ್ಲಿ ಆಯೋಗ ನ್ಯಾಯ ಸಮ್ಮತವಾಗಿ ಮಾಡುವ ಮೂಲಕ ಅಕ್ರಮವನ್ನು ತಡೆಗಟ್ಟಬೇಕೆಂದು ಆಗ್ರಹಿಸಿ, ರೈತ ಸಂಘ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಆರ್‌ಎಂಸಿಯಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಬಳಿಕ ಪ್ರವಾಸಿ ಮಂದಿರ, ತಾಪಂ ಸರ್ಕಲ್‌, ಎಂ.ಜಿ.ಎಸ್‌.ವಿ ರಸ್ತೆ, ಗುರುಕಾರ್‌ ವೃತ್ತ, ಡಾ. ರಾಜ್‌ ಕುಮಾರ್‌ ರಸ್ತೆ, ಡಾ. ಅಂಬೇಡ್ಕರ್‌ ರಸ್ತೆ ಮೂಲಕ ಉಪವಿಭಾಗಾಧಿಕಾರಿ ಕಚೇರಿ ಬಳಿ ತೆರಳಿ ಗ್ರೇಡ್‌ 2 ತಹಸೀಲ್ದಾರ್‌ ಶಿವಕುಮಾರ್‌ಗೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಸರ್ಕಾರಗಳು ಪಾನ್‌ಕಾರ್ಡ್‌ ಜೋಡಣೆ ನೆಪದಲ್ಲಿ ಸಾವಿರದ ನೂರು, ಸಾವಿರದ ಇನ್ನೂರು ರು. ದಂಡ ವಸೂಲಿ ಮಾಡುತ್ತಿದೆ. ಇದು ರೈತರಿಗೆ, ಬಡವರಿಗೆ ತೊಂದರೆಯಾಗಲಿದೆ.

ಉದ್ಯಮಿಗಳಿಗೆ ಲಾಭ ಮಾಡಿಕೊಡಲು ಸರ್ಕಾರ ಕೈಗೊಂಡ ಈ ಕ್ರಮ ಸಮಂಜಸವಲ್ಲ ಎಂದು ಆಕ್ರೋಶ ಹೊರಹಾಕಿದರು.

ಚುನಾವಣೆಯಲ್ಲಿ ಹಣ ಪಡೆದು ಮತ ಹಾಕುವ ಹಾಗೂ ಹಣ ನೀಡಿ ಮತ ಪಡೆಯುವವರ ವಿರುದ್ಧ ಶಿಸ್ತು ಕ್ರಮ ಆಗಬೇಕು, ಅಕ್ರಮಕ್ಕೆ ಮುಂದಾಗುವವ ಅಭ್ಯರ್ಥಿಗಳು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಟ್ಟು ನಿಟ್ಟಿನ ಕ್ರಮ ಜಾರಿಯಾಗಬೇಕು, ಹಣ ಪಡೆದು ಅಮಿಷಕ್ಕೊಳಗಾಗಿ ಮತ ನೀಡವವರ ಮತದಾನದ ಗುರುತಿನ ಚೀಟಿ ರದ್ದುಗೊಳಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ರೈತರು, ನಾಗರಿಕರ ಅನುಕೂಲಕ್ಕಾಗಿ ಯೋಜನೆ ಜಾರಿಗೆ ತರಬೇಕೆ ವಿನಃ ಪಾನ್‌ಕಾರ್ಡ್‌ ಜೋಡಣೆ ಹೆಸರಲ್ಲಿ ಸುಲಿಗೆ ಮಾಡುವುದು ಸರಿಯಲ್ಲ, ಈ ಪ್ರಕ್ರಿಯೆ ಉಚಿತ ಕೈಗೊಳ್ಳಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ನಾವ್ಯಾರು ಸಹಾ ಈ ಜೋಡಣೆ ವೇಳೆ ಪಾಲ್ಗೊಳ್ಳಲ್ಲ, ಇದರಿಂದ ಸರ್ಕಾರಕ್ಕೆ ನೂರು ಕೋಟಿಯಷ್ಟುಲಾಭಾಂಶ ದೊರಕಲಿದೆ. ಅದಕ್ಕಾಗಿ ಸಾರ್ವಜನಿಕರು, ಬಡವರಿಗೆ ಬರೆ ಎಳೆದು ಸುಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರಲ್ಲದೆ, ಆಯೋಗ ನ್ಯಾಯಸಮ್ಮತ ಚುನಾವಣೆ ನಡೆಸಬೇಕು,

ಅಕ್ರಮದಲ್ಲಿ ಸಹಕಾರ ನೀಡುವ ಅಧಿಕಾರಿಗಳು ಮತ್ತು ಅಕ್ರಮಕ್ಕೆ ತಾವು ಭಾಗಿಯಾಗುವ ಮತದಾರರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು, ಹಣ, ಹೆಂಡದ ಆಮಿಷವೊಡ್ಡುವವರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಆಗಬೇಕು ಎಂದು ಆಗ್ರಹಿಸಿದರು

ರೈತ ಮುಖಂಡ ಮಧುವನಹಳ್ಳಿ ಬಸವರಾಜು, ಚಾರ್ಲಿ, ಜಾನ್‌, ಭಾಸ್ಕರ್‌, ಜೋಯೇಲ್‌, ಪೆರಿಯನಾಯಗಂ, ಲಾರೆನ್ಸ್‌, ಶಿವಮ್ಮ, ಸ್ವಾಮಿ, ಅಮುಲ್‌ ರಾಜ್‌, ಸಿದ್ದರಾಜು, ಮಹದೇವ, ಈರಮ್ಮ, ಬಾಲರಾಜು ಇದ್ದರು.

Latest Videos
Follow Us:
Download App:
  • android
  • ios