*ಸುಂಕರಹಿತ ಆಮದಿಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ತಗ್ಗಿದ ಸೋಯಾಬೀನ್ ಎಣ್ಣೆ ದರ*20 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಸೋಯಾಬೀನ್ ಎಣ್ಣೆ ಆಮದಿನ ಮೇಲೆ ಸಂಪೂರ್ಣ ಸುಂಕ ವಿನಾಯ್ತಿ*ತಾಳೆ ಎಣ್ಣೆ ಮೇಲೆ ಶೇ. 5.5 ಆಮದು ಸುಂಕ

ನವದೆಹಲಿ (ಮೇ 25): ಸೋಯಾಬೀನ್ ಎಣ್ಣೆ (Soyabean oil) ಅಗ್ಗವಾದ ಹಿನ್ನೆಲೆಯಲ್ಲಿ ಭಾರತದ ತಾಳೆ ಎಣ್ಣೆ (palm oil) ಆಮದು (Import) ಶೇ.19ರಷ್ಟು ಕುಸಿತ ಕಂಡು 11 ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆಯಿದೆ. ತಾಳೆ ಎಣ್ಣೆಯ ರಫ್ತಿನ (Export) ಮೇಲೆ ಅತೀದೊಡ್ಡ ಉತ್ಪಾದಕ ರಾಷ್ಟ್ರವಾದ ಇಂಡೋನೇಷ್ಯಾ (Indonesia) ಇತ್ತೀಚೆಗೆ ನಿಷೇಧ ವಿಧಿಸಿರುವುದು ಹಾಗೂ ಕೇಂದ್ರ ಸರ್ಕಾರ ಸೋಯಾಬೀನ್ ಎಣ್ಣೆಯ ಸುಂಕರಹಿತ ಆಮದಿಗೆ ಅವಕಾಶ ಕಲ್ಪಿಸಿರುವ ಕಾರಣ ತಾಳೆ ಎಣ್ಣೆ ಆಮದು ತಗ್ಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. 

ಅಕ್ಟೋಬರ್ 31ಕ್ಕೆ ಮುಗಿಯುವ 2021-22ನೇ ವ್ಯವಹಾರಿಕ ವರ್ಷದಲ್ಲಿ ಭಾರತದ ತಾಳೆ ಎಣ್ಣೆ ಆಮದು 6.7 ಮಿಲಿಯನ್ ಟನ್ ಗೆ ಕುಸಿದಿತ್ತು. 2010-11ನೇ ಸಾಲಿನ ಬಳಿಕ ಇದು ಅತ್ಯಂತ ಕನಿಷ್ಠ ಮಟ್ಟದ ಆಮದಾಗಿದೆ. ಇನ್ನು ಸೋಯಾಬೀನ್ ಎಣ್ಣೆ ಆಮದು ಈ ವರ್ಷ ಶೇ.57ರಷ್ಟು ಏರಿಕೆ ಕಾಣುವ ಮೂಲಕ ದಾಖಲೆಯ 4.5 ಮಿಲಿಯನ್ ಟನ್ ತಲುಪುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ. 

Sugar Export:ಜೂ.1ರಿಂದ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ; ಬೆಲೆಯೇರಿಕೆಗೆ ಸರ್ಕಾರದ ಮೂಗುದಾರ

ಈ ಹಿಂದೆ ಭಾರತದಲ್ಲಿ ಜೂನ್ ಶಿಪ್ಪಮೆಂಟ್ ನಲ್ಲಿ ಕಚ್ಚಾ ತಾಳೆ ಎಣ್ಣೆಯನ್ನು ಉತ್ಪಾದನಾ ವೆಚ್ಚ, ವಿಮೆ ಹಾಗೂ ಸಾಗಣೆ ಸೇರಿದಂತೆ ಪ್ರತಿ ಟನ್ ಗೆ 1,775 ಡಾಲರ್ ಗೆ ಮಾರಾಟ ಮಾಡಲಾಗುತ್ತಿತ್ತು. ಕಚ್ಚಾ ಸೋಯಾಬೀನ್ ಎಣ್ಣೆ ಪ್ರತಿ ಟನ್ ಗೆ 1,845 ಡಾಲರ್ ಗೆ ಮಾರಾಟವಾಗುತ್ತಿತ್ತು. ಅಂದ್ರೆ ತಾಳೆ ಎಣ್ಣೆಯು ಸೋಯಾಬೀನ್ ಎಣ್ಣೆಗಿಂತ ಕಡಿಮೆ ಬೆಲೆ ಹೊಂದಿತ್ತು. ಆದ್ರೆ ಕಚ್ಚಾ ತಾಳೆ ಎಣ್ಣೆ ಮೇಲೆ ಶೇ. 5.5 ಆಮದು ಸುಂಕ ವಿಧಿಸಿದ ಬಳಿಕ ಭಾರತದ ಖರೀದಿದಾರರಿಗೆ ಪ್ರತಿ ಟನ್ ಗೆ 1,873 ಡಾಲರ್ ಗೆ ಲಭಿಸುತ್ತಿದೆ. ತಾಳೆ ಎಣ್ಣೆ ರಫ್ತಿನ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಮೂರು ವಾರಗಳ ಬಳಿಕ ಇಂಡೋನೇಷ್ಯಾ ಹಿಂತೆಗೆದುಕೊಂಡಿದೆ. ಆದರೆ, ದೇಶೀಯ ಬಳಕೆಗೆ ಎಷ್ಟು ಅಡುಗೆ ತೈಲವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ತನಕ ಇಂಡೋನೇಷ್ಯಾದಿಂದ ಪೂರೈಕೆ ಪ್ರಾರಂಭವಾಗುವುದು ಕಷ್ಟವಿದೆ ಎಂದು ಹೇಳಲಾಗುತ್ತಿದೆ. 

ಅಡುಗೆ ಎಣ್ಣೆ ಸುಂಕರಹಿತ ಆಮದಿಗೆ ಅವಕಾಶ 
ತಲಾ 20 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಸೋಯಾಬೀನ್ ಎಣ್ಣೆ (Soyabean oil) ಹಾಗೂ ಕಚ್ಚಾ ಸೂರ್ಯಕಾಂತಿ ಎಣ್ಣೆ (Sunflower) ಆಮದಿನ ಮೇಲೆ ಭಾರತ ಸರ್ಕಾರ ಸಂಪೂರ್ಣ ಸುಂಕ ವಿನಾಯ್ತಿ ನೀಡಿದೆ. ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ ಅಡುಗೆ ಎಣ್ಣೆ ಸುಂಕರಹಿತ ಆಮದು 2022-23 ಆರ್ಥಿಕ ಸಾಲಿಗೆ ಮಾತ್ರವಲ್ಲ, 2023-24ನೇ ಸಾಲಿಗೂ ಅನ್ವಯಿಸಲಿದೆ. ಅಂದರೆ 2024ರ ಮಾರ್ಚ್ 31ರ ತನಕ ಒಟ್ಟು 80 ಲಕ್ಷ ಎಂಟಿ ಕಚ್ಚಾ ಸೋಯಾಬೀನ್ ತೈಲ ಹಾಗೂ ಕಚ್ಚಾ ಸೂರ್ಯಕಾಂತಿ ಎಣ್ಣೆಯನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳಬಹುದಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಗಗನಕ್ಕೇರಿರುವ ಅಡುಗೆ ಎಣ್ಣೆ ಬೆಲೆ ತಗ್ಗಿಸಲು ಹಾಗೂ ಹಣದುಬ್ಬರ ನಿಯಂತ್ರಣಕ್ಕೆ ಈ ಸುಂಕ ವಿನಾಯ್ತಿ ನೆರವು ನೀಡುವ ನಿರಿಕ್ಷೆಯಿದೆ. 

ಡಿಜಿಲಾಕರ್‌ನೊಂದಿಗೆ ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಸಲ್ಲಿಸುವುದು ಇನ್ನಷ್ಟು ಸುಲಭ!

ಉಕ್ರೇನ್ ಮೇಲೆ ರಷ್ಯಾದ ದಾಳಿಯಿಂದಾಗಿ ವನಸ್ಪತಿ ತೈಲಗಳ ಬೆಲೆ ತಗ್ಗಿಸೋದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಕಳೆದ ಕೆಲವು ತಿಂಗಳಿಂದ ದೇಶದಲ್ಲಿ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ ದಾಖಲಿಸಿತ್ತು. ಭಾರತವು 2/3ರಷ್ಟು ಅಡುಗೆ ಎಣ್ಣೆಯನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ರಷ್ಯಾ -ಉಕ್ರೇನ್ ಯುದ್ಧದಿಂದ ಕಪ್ಪು ಸಮುದ್ರ ಪ್ರದೇಶದಿಂದ ಪೂರೈಕೆಯಾಗುತ್ತಿದ್ದ ಸೂರ್ಯಕಾತಿ ಎಣ್ಣೆ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.