*ಜೂನ್ 1ರಿಂದ ಅಕ್ಟೋಬರ್ 31ರ ತನಕ ಸಕ್ಕರೆ ರಫ್ತಿಗೆ ಅವಕಾಶವಿಲ್ಲ*CXL ಹಾಗೂ TRQ ಕೋಟಾದಡಿ ಯುರೋಪಿಯನ್ ಯೂನಿಯನ್ ಹಾಗೂ ಯುಎಸ್ ಗೆ ರಫ್ತು ಮಾಡಲು ನಿರ್ಬಂಧವಿಲ್ಲ*ಈ ಕುರಿತು ಅಧಿಸೂಚನೆ ಹೊರಡಿಸಿರುವ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ
ನವದೆಹಲಿ (ಮೇ 25): ದೇಶೀಯ ಮಾರುಕಟ್ಟೆಯಲ್ಲಿನ ಲಭ್ಯತೆ ಹೆಚ್ಚಿಸಲು ಹಾಗೂ ಏರಿಕೆಯಾಗುತ್ತಿರುವ ಬೆಲೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸಕ್ಕರೆ (Sugar) ರಫ್ತಿನ (Export) ಮೇಲೆ ಜೂನ್ 1ರಿಂದ ಅನ್ವಯವಾಗುವಂತೆ ನಿರ್ಬಂಧ ( restriction) ವಿಧಿಸಿದೆ. ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (DGDT) ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಗೋಧಿ ರಫ್ತಿನ ಮೇಲೆ ಸರ್ಕಾರ ನಿಷೇಧ ಹೇರಿತ್ತು.
'2022ರ ಜೂನ್ 1ರಿಂದ ಅನ್ವಯಿಸುವಂತೆ 2022ರ ಅಕ್ಟೋಬರ್ 31ರ ತನಕ ಅಥವಾ ಮುಂದಿನ ಆದೇಶಗಳು ಬರುವ ತನಕ ಇವೆರಡರಲ್ಲಿ ಯಾವುದು ಬೇಗವೋ ಅಲ್ಲಿಯವರೆಗೆ ಸಕ್ಕರೆ ನಿರ್ದೇಶನಾಲಯ (Directorate of Sugar), ಆಹಾರ ಹಾಗೂ ಸಾರ್ವಜನಿಕ ವಿತರಣೆ ಇಲಾಖೆ (DFPD), ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ (Ministry of Consumer Affairs, Food & Public Distribution) ನಿರ್ದಿಷ್ಟ ಅನುಮತಿಯಿದ್ದರೆ ಮಾತ್ರ ಸಕ್ಕರೆ ರಫ್ತಿಗೆ ಅವಕಾಶ ನೀಡಲಾಗುವುದು' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
Ban On Wheat Export:ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ
ರಫ್ತಿಗೆ ಅನುಮತಿ ನೀಡುವ ಸಂಪೂರ್ಣ ಪ್ರಕ್ರಿಯೆಯನ್ನು ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ (DFPD) ನಿರ್ವಹಿಸಲಿದೆ ಎಂದು ಕೂಡ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಸಿಎಕ್ಸ್ ಎಲ್ (CXL)ಹಾಗೂ ಟಿಆರ್ ಕ್ಯು (TRQ) ಕೋಟಾದಡಿ ಯುರೋಪಿಯನ್ ಯೂನಿಯನ್ (EU) ಹಾಗೂ ಅಮೆರಿಕಕ್ಕೆ (US) ರಫ್ತು ಮಾಡಲು ಯಾವುದೇ ನಿರ್ಬಂಧವಿಲ್ಲ ಎಂದು ಕೂಡ ಅಧಿಸೂಚನೆಯಲ್ಲಿ ವಿವರಿಸಲಾಗಿದೆ. ಪ್ರತಿ ವರ್ಷ ಸಕ್ಕರೆ ಋತು ಅಕ್ಟೋಬರ್ ನಿಂದ ಸೆಪ್ಟೆಂಬರ್ ತನಕ ಇರುತ್ತದೆ. ಅಂದ್ರೆ ಈ ಸಾಲಿನ ಸಕ್ಕರೆ ಋತು (Sugar Season) 2021 ಅಕ್ಟೋಬರ್ ನಿಂದ 22 ಸೆಪ್ಟೆಂಬರ್ ತನಕ.
2017-18, 2018-19 ಹಾಗೂ 2019-20 ಸಕ್ಕರೆ ಋತುಗಳಲ್ಲಿ ಕ್ರಮವಾಗಿ 6.2 ಎಲ್ ಎಂಟಿ, 38 ಎಲ್ ಎಂಟಿ ಹಾಗೂ 59.60 ಎಲ್ ಎಂಟಿ ಸಕ್ಕರೆಯನ್ನು ರಫ್ತು ಮಾಡಲಾಗಿದೆ. ಇನ್ನು 2021-22ನೇ ಸಾಲಿನಲ್ಲಿ 60ಎಲ್ ಎಂಟಿ ಸಕ್ಕರೆಯನ್ನು ರಫ್ತು ಮಾಡುವ ಗುರಿಯಿತ್ತು, ಆದ್ರೆ 70 ಎಲ್ ಎಂಟಿ ಸಕ್ಕರೆ ರಫ್ತು ಮಾಡಲಾಗಿದೆ. ಪ್ರಸಕ್ತ ಸಕ್ಕರೆ ಋತು ಅಂದ್ರೆ 2021-22ನೇ ಸಾಲಿನಲ್ಲಿ 90 ಎಲ್ಎಂಟಿ ಸಕ್ಕರೆ ರಫ್ತು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರಲ್ಲಿ ಸುಮಾರು 82 ಎಲ್ ಎಂಟಿ ಸಕ್ಕರೆಯು ಸಕ್ಕರೆ ಮಿಲ್ ಗಳಿಂದ ರಫ್ತಿಗಾಗಿ ರವಾನೆಯಾಗಿದೆ. ಇನ್ನು ಸುಮಾರು 78 ಎಲ್ಎಂಟಿ ಸಕ್ಕರೆ ಈಗಾಗಲೇ ರಫ್ತು ಆಗಿದೆ. ಅಂದ್ರೆ 2021-22 ಸಾಲಿನಲ್ಲಿ ಐತಿಹಾಸಿಕ ದಾಖಲೆಯ ಪ್ರಮಾಣದಲ್ಲಿ ಸಕ್ಕರೆ ರಫ್ತಾಗಿದೆ.
ಪ್ರಸಕ್ತ ಸಾಲಿನಲ್ಲಿ ಭಾರತ ಜಗತ್ತಿನ ಎರಡನೇ ಅತೀದೊಡ್ಡ ಸಕ್ಕರೆ ಉತ್ಪಾದಕ ಹಾಗೂ ಎರಡನೇ ದೊಡ್ಡ ರಫ್ತು ರಾಷ್ಟ್ರವಾಗಿದೆ. ಬ್ರೆಜೆಲ್ ಜಗತ್ತಿನ ಅತೀದೊಡ್ಡ ಸಕ್ಕರೆ ರಫ್ತು ರಾಷ್ಟ್ರವಾಗಿದೆ. ಬ್ರೆಜೆಲ್ ನಲ್ಲಿ ಈ ವರ್ಷ ಸಕ್ಕರೆ ಉತ್ಪಾದನೆ ಕಡಿಮೆಯಾಗಿದ್ದು, ತೈಲ ಬೆಲೆಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಮಿಲ್ ಗಳು ಕಬ್ಬು ಆಧಾರಿತ ಎಥಾನಲ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಸಕ್ಕರೆ ಬೆಲೆ ಏರಿಕೆಯಾಗುತ್ತಿದೆ.
ಸಕ್ಕರೆ ಉತ್ಪಾದನೆ, ಬಳಕೆ, ರಫ್ತು ಹಾಗೂ ದೇಶಾದ್ಯಂತ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿನ ಸಕ್ಕರೆ ಬೆಲೆ ಸೇರಿದಂತೆ ಸಕ್ಕರೆ ವಲಯಕ್ಕೆ ಸಂಬಂಧಿಸಿದ ಪ್ರತಿ ಹಂತವನ್ನು ಸರ್ಕಾರ ನಿರಂತರ ನಿಯಂತ್ರಿಸುತ್ತ ಬಂದಿದೆ.
ಭಾರತದಲ್ಲಿ ಸಕ್ಕರೆ ಸಗಟು ದರ ಪ್ರತಿ ಕ್ವಿಂಟಾಲ್ ಗೆ 3,150ರೂ.-3,500 ರೂ. ನಡುವೆ ಇದೆ. ಇನ್ನು ಚಿಲ್ಲರೆ ದರ ಕೂಡ ನಿಯಂತ್ರಣದಲ್ಲಿದ್ದು, ಸಕ್ಕರೆ ಕೆಜಿಗೆ 36ರೂ.-44ರೂ. ಇದೆ.
