ನವದೆಹಲಿ(ಆ.20): ಕೇಂದ್ರ ಸರ್ಕಾರ ಇತ್ತೀಚೆಗೆ ಜಂಟಿ ಕಾರ್ಯದರ್ಶಿಯ 10 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, 6000ಕ್ಕೂ ಅಧಿಕ ಅಭ್ಯರ್ಥಿಗಳು ಆಸಕ್ತಿ ತೋರಿಸಿ ಅರ್ಜಿ ಹಾಕಿದ್ದಾರೆ. 

ಸಿಬ್ಬಂದಿ ನೇಮಕ ಸಚಿವಾಲಯವು ಗುತ್ತಿಗೆ ಆಧಾರದಲ್ಲಿ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಮುಂದಾಗಿದ್ದು, 6077 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

10 ಇಲಾಖೆಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 30 ಕೊನೆಯ ದಿನವಾಗಿತ್ತು. ನಿರ್ದಿಷ್ಟ ವಿಭಾಗದ ಒಂದು ಹುದ್ದೆಗೆ ಗರಿಷ್ಠ 1,100 ಅರ್ಜಿಗಳು ಬಂದಿದ್ದರೆ, ಅತಿ ಕಡಿಮೆ ಎಂದರೆ 290 ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದೀಗ ಮೊದಲ ಹಂತದ ಅರ್ಜಿ ಪರಿಶೀಲನೆ, ಪರಿಷ್ಕರಣೆ ಮತ್ತು ಆಯ್ಕೆಯ ಪ್ರಕ್ರಿಯೆಯನ್ನು ಇಲಾಖೆ ಆರಂಭಿಸಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ. 

ಕಾರ್ಯದರ್ಶಿಗಳ ಆಯ್ಕೆ ಸಮಿತಿ 2017ರ ಫೆಬ್ರವರಿಯಲ್ಲಿ ಸಲ್ಲಿಸಿದ ವರದಿಯಲ್ಲಿ, 1995-2002ರ ನಡುವೆ ಯುಪಿಎಸ್‌ಸಿ ನೇಮಕಾತಿ ಪ್ರಮಾಣ ಕಡಿಮೆಯಾಗಿದ್ದರಿಂದ ಜಂಟಿ ಕಾರ್ಯದರ್ಶಿ, ನಿರ್ದೇಶಕ, ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳ ಕೊರತೆ ಕಂಡುಬಂದಿದೆ ಎಂದು ಹೇಳಿತ್ತು. 
ನೀತಿ ಆಯೋಗ ತನ್ನ ಮೂರು ವರ್ಷಗಳ ಕಾರ್ಯಸೂಚಿಯಲ್ಲಿ ಖಾಸಗಿ ವಲಯದ ತಜ್ಞರ ಸೇವೆಯನ್ನು ಸರ್ಕಾರಿ ವಲಯದಲ್ಲಿ ಬಳಸುವ ಪ್ರಸ್ತಾವನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.