ಆರ್‌ಬಿಐಗೂ ಈರುಳ್ಳಿ ಬಿಸಿ| ಈರುಳ್ಳಿ ಬೆಲೆ ಏರಿಕೆ: ಬಡ್ಡಿ ದರ ಕಡಿತಕ್ಕೆ ಆರ್‌ಬಿಐ ಹಿಂದೇಟು| ಯಥಾಸ್ಥಿತಿ ಕಾಯ್ದುಕೊಂಡ ಭಾರತೀಯ ರಿಸವ್‌ರ್‍ ಬ್ಯಾಂಕ್‌

ಮುಂಬೈ(ಡಿ.06): ದೇಶದ ಆರ್ಥಿಕಾಭಿವೃದ್ಧಿ ದರ ಆರು ವರ್ಷಗಳ ಕನಿಷ್ಠಕ್ಕೆ ಜಾರಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳ ಬಡ್ಡಿ ದರವನ್ನು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಕಡಿತಗೊಳಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಈರುಳ್ಳಿ, ಟೊಮೆಟೋದಂತಹ ತರಕಾರಿಗಳ ಬೆಲೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಹಣದುಬ್ಬರ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕಾಭಿವೃದ್ಧಿಗಿಂತ ಹಣದುಬ್ಬರಕ್ಕೇ ಆದ್ಯತೆ ನೀಡಿರುವ ಆರ್‌ಬಿಐ ಬಡ್ಡಿ ದರಗಳನ್ನು ಕಡಿತಗೊಳಿಸದೇ ಇರಲು ನಿರ್ಧರಿಸಿದೆ. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದ, 6 ಸದಸ್ಯರು ಇರುವ ಹಣಕಾಸು ನೀತಿ ಸಮಿತಿಯು ಗುರುವಾರದ ಸಭೆಯಲ್ಲಿ ಬಡ್ಡಿ ದರ ಇಳಿಕೆ ಮಾಡದಿರುವ ಕುರಿತು ಸರ್ವಾನುಮತದ ನಿರ್ಧಾರ ಕೈಗೊಂಡಿದೆ.

ಈವರೆಗೆ ಸತತ ಐದು ಬಾರಿ ಬಡ್ಡಿ ದರ ಕಡಿತಗೊಳಿಸಿದ್ದ ಆರ್‌ಬಿಐ, ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಆರನೇ ಬಾರಿಗೂ ಅದೇ ಕ್ರಮ ಕೈಗೊಳ್ಳಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿತ್ತು. ಆದರೆ ಈವರೆಗೆ ಶೇ.1.35ರಷ್ಟುಬಡ್ಡಿ ದರ ಇಳಿಕೆ ಮಾಡಿದ್ದರೂ, ಗ್ರಾಹಕರಿಗೆ ಶೇ.0.44ರಷ್ಟುಬಡ್ಡಿ ದರ ಮಾತ್ರವೇ ವರ್ಗಾವಣೆಯಾಗಿದೆ. ಅದೂ ಅಲ್ಲದೆ ಈರುಳ್ಳಿಯಂತಹ ತರಕಾರಿಗಳ ಬೆಲೆ ಗಗನಕ್ಕೇರಿರುವುದರಿಂದ ಹಣದುಬ್ಬರ ಆರ್‌ಬಿಐನ ಗುರಿಯಾದ ಶೇ.4 ಅನ್ನು ಮೀರಿ ಅಕ್ಟೋಬರ್‌ನಲ್ಲಿ ಶೇ.4.7ಕ್ಕೆ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಬಡ್ಡಿ ದರ ಕಡಿತಗೊಳಿಸದೇ ಇರಲು ಆರ್‌ಬಿಐ ಉದ್ದೇಶಿಸಿದೆ.

ಸಹಕಾರಿ ಬ್ಯಾಂಕುಗಳಿಗೆ ಮೂಗುದಾರ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಿಎಂಸಿ ಬ್ಯಾಂಕ್‌ ಪ್ರಕರಣದಿಂದ ಎಚ್ಚೆತ್ತಿರುವ ಆರ್‌ಬಿಐ, 500 ಕೋಟಿ ರು. ಮೇಲ್ಪಟ್ಟು ವ್ಯವಹಾರ ನಡೆಸುವ ನಗರ ಸಹಕಾರಿ ಬ್ಯಾಂಕುಗಳನ್ನು ‘ಬೃಹತ್‌ ಸಾಲ ಮಾಹಿತಿ ಶೇಖರಣಾ ಕೇಂದ್ರ’ದ ವ್ಯಾಪಿಗೆ ತರಲು ಉದ್ದೇಶಿಸಿದೆ. ಇದರಿಂದ ನಗರ ಸಹಕಾರಿ ಬ್ಯಾಂಕುಗಳ ಹಣಕಾಸು ಸಂಕಷ್ಟದ ಕುರಿತು ಆರ್‌ಬಿಐಗೆ ಮೊದಲೇ ಮಾಹಿತಿ ಸಿಗಲಿದೆ.

ಬಿಟ್‌ಕಾಯಿನ್‌ ರೀತಿ ಆರ್‌ಬಿಐನಿಂದ ‘ಲಕ್ಷ್ಮೀ’?

ಬಿಟ್‌ಕಾಯಿನ್‌ ರೀತಿ ಭಾರತೀಯ ರಿಸವ್‌ರ್‍ ಬ್ಯಾಂಕ್‌ ಕೂಡ ಕ್ರಿಪ್ಟೋ ಕರೆನ್ಸಿ ಹೊರತರುವುದು ಬಹುತೇಕ ಖಚಿತವಾಗಿದೆ. ರಿಸವ್‌ರ್‍ ಬ್ಯಾಂಕ್‌ ಬಿಡುಗಡೆ ಮಾಡುವ ಡಿಜಿಟಲ್‌ ಕರೆನ್ಸಿ ಬಗ್ಗೆ ಈಗಲೇ ಮಾತನಾಡುವುದಕ್ಕೆ ಕಾಲ ಪಕ್ವವಾಗಿಲ್ಲ. ಆ ನಿಟ್ಟಿನಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂದು ಗವರ್ನರ್‌ ಶಕ್ತಿಕಾಂತ ದಾಸ್‌ ತಿಳಿಸಿದ್ದಾರೆ. ‘ಲಕ್ಷ್ಮೇ’ ಹೆಸರಿನಲ್ಲಿ ಆರ್‌ಬಿಐ ಡಿಜಿಟಲ್‌ ಕರೆನ್ಸಿ ತರಲಿದೆ ಎಂಬ ಸುದ್ದಿಗಳು ಕೇಳಿಬಂದಿದ್ದವು. ಆ ವರದಿಗಳಿಗೆ ಗವರ್ನರ್‌ ಹೇಳಿಕೆ ಪುಷ್ಟಿನೀಡುವಂತಿದೆ.

ಜಿಡಿಪಿ ಶೇ.6.1ರಿಂದ ಶೇ.5ಕ್ಕೆ ಕಡಿತ

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಪ್ರಗತಿ ದರ ಶೇ.6.1ರಷ್ಟಿರಲಿದೆ ಎಂದು ಭವಿಷ್ಯ ನುಡಿದಿದ್ದ ಆರ್‌ಬಿಐ, ಇದೀಗ ತನ್ನ ಲೆಕ್ಕಾಚಾರವನ್ನು ಶೇ.5ಕ್ಕೆ ಕಡಿತಗೊಳಿಸಿದೆ. ಸೆಪ್ಟೆಂಬರ್‌ನಲ್ಲಿ ಜಿಡಿಪಿ 6 ವರ್ಷಗಳ ಕನಿಷ್ಠವಾದ ಶೇ.4.5ಕ್ಕೆ ಇಳಿದಿದೆ ಎಂದು ಸರ್ಕಾರವೇ ಹೇಳಿತ್ತು. ಅದರ ಬೆನ್ನಲ್ಲೇ ಆರ್‌ಬಿಐ ಕೂಡ ತನ್ನ ಪ್ರಗತಿ ದರ ಮುನ್ಸೂಚನೆಯನ್ನು ಕಡಿತಗೊಳಿಸಿದೆ.