ನವದೆಹಲಿ(ಜ.05): ಇತ್ತೀಚಿಗಷ್ಟೇ ಬ್ಯಾಂಕ್ ಆಫ್ ಬರೋಡಾದೊಂದಿಗೆ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸಿದ್ದ ಬ್ಯಾಂಕ್ ಯೂನಿಯನ್‌ಗಳು ಈಗ ಮತ್ತೆ ಎರಡು ದಿನ ಬಂದ್ ಗೆ  ಕರೆ ನೀಡಿವೆ.

ಕೇಂದ್ರ ಸರ್ಕಾರ ನೌಕರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಾರ್ವಜನಿಕ ವಲಯದ ಕೆಲ ಬ್ಯಾಂಕ್ ಉದ್ಯೋಗಿಗಳು ಜನವರಿ 8 ಮತ್ತು 9 ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ 10 ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸಾರ್ವಜನಿಕ ರಂಗದ ಎರಡು ಬ್ಯಾಂಕ್‌ ನೌಕರರ ಸಂಘಟನೆಗಳು ಬೆಂಬಲ ಸೂಚಿಸಿವೆ.

ದಿ ಆಲ್‌ ಇಂಡಿಯಾ ಬ್ಯಾಂಕ್‌ ಎಂಪ್ಲಾಯೀಸ್‌ ಅಸೋಸಿಯೇಶನ್‌ (ಐಐಬಿಇಎ) ಮತ್ತು ಬ್ಯಾಂಕ್‌ ಎಂಪ್ಲಾಯೀಸ್‌ ಫೆಡರೇಶನ್‌ ಆಫ್ ಇಂಡಿಯಾ, ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಶನ್‌(ಐಬಿಎ)ಗೆ ಮುಷ್ಕರದ ಬಗ್ಗೆ ಮಾಹಿತಿ ನೀಡಿರುವುದಾಗಿ ತಿಳಿಸಿವೆ.

ಇನ್ನು ಬ್ಯಾಂಕ್ ನೌಕರರ ಮುಷ್ಕರದಿಂದ ಹಣಕಾಸು ವಹಿವಾಟಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

ಗ್ರಾಹಕರೇ ಗಮನಿಸಿ: ಮುಂದಿನ ವಾರ ಮೂರು ದಿನ ಬ್ಯಾಂಕ್ ಬಂದ್!