ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭಿಸಿದ ಓಲಾ;ತಮ್ಮದೇ ಇ- ಸ್ಕೂಟರ್ ಬಳಕೆ ಬಗ್ಗೆ ಮಾಹಿತಿ ನೀಡಿದ ಸಿಇಒ
ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಬೇಕೆಂದು ಖಾಸಗಿ ಸಾರಿಗೆ ಸಂಘಟನೆಗಳು ಆಗ್ರಹಿಸುತ್ತಿರುವ ಬೆನ್ನಲ್ಲೇ ಓಲಾ ಕ್ಯಾಬ್ಸ್ ಬೆಂಗಳೂರಿನಲ್ಲಿ ತನ್ನ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭಿಸಿದೆ. ಈ ಬಾರಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಇ-ಬೈಕ್ ಗಳನ್ನೇ ಬಳಸುತ್ತಿದ್ದು, ತಮ್ಮದೇ ಸಂಸ್ಥೆಯ ಎಸ್ 1 ಸ್ಕೂಟರ್ ಗಳನ್ನು ಬಳಸುತ್ತಿರೋದಾಗಿ ಕಂಪನಿ ಸಿಇಒ ಮಾಹಿತಿ ನೀಡಿದ್ದಾರೆ.
ಬೆಂಗಳೂರು (ಸೆ.16): ಓಲಾ ಕ್ಯಾಬ್ಸ್ ಬೆಂಗಳೂರಿನಲ್ಲಿ ತನ್ನ ಬೈಕ್ ಟ್ಯಾಕ್ಸಿ ಸೇವೆಯನ್ನು ಪುನರಾರಂಭಿಸಿದ್ದು, ಎಲ್ಲವೂ ಎಲೆಕ್ಟ್ರಿಕ್ ಬೈಕ್ ಗಳೇ ಆಗಿರಲಿವೆ ಎಂದು ಸಂಸ್ಥೆ ಸಿಇಒ ಭವಿಷ್ ಅಗರ್ ವಾಲ್ ಶನಿವಾರ ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಇಂದಿನಿಂದ (ಸೆ.16) ಓಲಾ ಬೈಕ್ ಟ್ಯಾಕ್ಸಿ ಸೇವೆ ಮರು ಪ್ರಾರಂಭವಾಗಿದ್ದು, ಎಲ್ಲವೂ ಎಲೆಕ್ಟ್ರಿಕ್ ಬೈಕ್ ಗಳೇ ಆಗಿದ್ದು, ನಮ್ಮ ಸ್ವಂತ ಎಸ್ 1 ಸ್ಕೂಟರ್ ಗಳನ್ನೇ ಬಳಸಲಾಗುತ್ತಿದೆ ಎಂದು ಭವಿಷ್ ತಿಳಿಸಿದ್ದಾರೆ. ಇನ್ನು 5 ಕಿ.ಮೀ. ದೂರದ ಪ್ರಯಾಣಕ್ಕೆ 25ರೂ. ಹಾಗೂ 10ಕಿ.ಮೀ. ಅಂತರಕ್ಕೆ 50ರೂ. ಬಾಡಿಗೆ ವಿಧಿಸಲಾಗುವುದು. ಅಲ್ಲದೆ, ಮುಂದಿನ ಕೆಲವೇ ತಿಂಗಳಲ್ಲಿ ಈ ಸೇವೆಯನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಕೂಡ ಓಲಾ ಬೈಕ್ ಟ್ಯಾಕ್ಸಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು, ಆದರೆ, ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಬೈಕ್ ಸೇವೆ ಪ್ರಾರಂಭಿಸಲಾಗಿದೆ. ಕರ್ನಾಟಕ ಸರ್ಕಾರ 2021ರ ಜುಲೈನಲ್ಲೇ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನೀತಿಯನ್ನು ಪರಿಚಯಿಸಿತ್ತು. ಅಲ್ಲದೆ, ದೇಶದಲ್ಲೇ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನೀತಿ ಪರಿಚಯಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಗಳಿಸಿತ್ತು. ಆದರೆ, ಇಲ್ಲಿಯ ತನಕ ಯಾವುದೇ ಕ್ಯಾಬ್ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇವೆ ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ.
2022ರ ಡಿಸೆಂಬರ್ ನಲ್ಲಿ ಕರ್ನಾಟಕ ಸಾರಿಗೆ ಇಲಾಖೆ ತನ್ನ ಮೊದಲ ಇ-ಬೈಕ್ ಟ್ಯಾಕ್ಸಿ ಪರವಾನಗಿಯನ್ನು (ಲೈಸೆನ್ಸ್) ದ್ವಿಚಕ್ರ ವಾಹನ ಬಾಡಿಗೆ ಕಂಪನಿ ಬೌನ್ಸ್ ಗೆ ( Bounce) ನೀಡಿತ್ತು. ಆದರೆ, ಈ ಕಂಪನಿ ಇನ್ನಷ್ಟೇ ತನ್ನ ಸೇವೆಗಳನ್ನು ಪ್ರಾರಂಭಿಸಬೇಕಿದೆ. ಅಲ್ಲದೆ, ಈ ಕಂಪನಿ ಸದ್ಯ ತನ್ನ ಗಮನವನ್ನು ಎಲೆಕ್ಟ್ರಿಕ್ ಸ್ಕೂಟರ್ ಗಳ ಉತ್ಪಾದನೆಗೆ ಕೇಂದ್ರೀಕರಿಸಿದೆ. ಪ್ರಸ್ತುತ ರಾಪಿಡೊ (Rapido ) ಹಾಗೂ ಊಬರ್ ( Uber) ಬೆಂಗಳೂರಿನಲ್ಲಿ ನಾನ್ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸುತ್ತಿವೆ. ಈ ವಾರದ ಪ್ರಾರಂಭದಲ್ಲಷ್ಟೇ ರಾಜ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ರಾಪಿಡೊ ಬೈಕ್ ಟ್ಯಾಕ್ಸಿಗಳನ್ನು ಕಾಯಂ ಆಗಿ ನಿರ್ಬಂಧಿಸುವ ನಿಟ್ಟಿನಲ್ಲಿ ಸರ್ಕಾರ ಯೋಚನೆ ಮಾಡುತ್ತಿದೆ ಎಂಬ ಮಾಹಿತಿ ನೀಡಿದ್ದರು.
ಕಡಿಮೆ ಬೆಲೆಗೆ ಲಭ್ಯವಿದೆ ಇವಿ ಸ್ಕೂಟರ್, ಇಲ್ಲಿದೆ ಭಾರತದ ಕೈಗೆಟುಕುವ ದರದ ದ್ವಿಚಕ್ರ ವಾಹನ ಲಿಸ್ಟ್!
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿರ್ಬಂಧಿಸುವಂತೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸೆ.11ರಂದು ಪ್ರತಿಭಟನೆ ನಡೆಸಿತ್ತು. ಬೈಕ್ ಟ್ಯಾಕ್ಸಿಗಳು ತಮ್ಮ ಆದಾಯವನ್ನು ತಗ್ಗಿಸುತ್ತಿದ್ದು, ಜೀವನನಿರ್ವಹಣೆಗೆ ಅಡ್ಡಿಯಾಗಿವೆ ಎಂದು ಸಂಘಟನೆಗಳು ದೂರಿದ್ದವು. ಈ ಸಂದರ್ಭದಲ್ಲಿ ಬೈಕ್ ಟ್ಯಾಕ್ಸಿ ನಿರ್ಬಂಧಿಸುವ ಕುರಿತು ಕಾನೂನು ತಜ್ಞರ ಅಭಿಪ್ರಾಯವನ್ನು ಕೇಳೋದಾಗಿ ಕರ್ನಾಟಕ ಸರ್ಕಾರ ಭರವಸೆ ನೀಡಿತ್ತು.
ಬೈಕ್ ಟ್ಯಾಕ್ಸಿಗೆ ವಿರೋಧ ವ್ಯಕ್ತವಾಗುತ್ತಿರೋದು ಕರ್ನಾಟಕದಲ್ಲಿ ಮಾತ್ರವಲ್ಲ, ಈ ಹಿಂದೆ ಅನೇಕ ರಾಜ್ಯಗಳಲ್ಲಿ ಇದಕ್ಕೆ ಸಂಕಷ್ಟ ಎದುರಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಓಲಾ, ಊಬರ್ ಹಾಗೂ ರಾಪಿಡೋ ಸೇರಿದಂತೆ ಜನಪ್ರಿಯ ಕಂಪನಿಗಳ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿ ದೆಹಲಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಅಲ್ಲದೆ, ಈ ನಿಯಮ ಮೀರುವ ಸಂಸ್ಥೆ ಮೇಲೆ 1ಲಕ್ಷ ರೂ. ದಂಡ ವಿಧಿಸೋದಾಗಿಯೂ ಎಚ್ಚರಿಸಿತ್ತು.
ಸುಲಭ, ಸುಗಮ ರೈಡ್ ಅನುಭವ ನೀಡುವ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್!
ಜೂನ್ ನಲ್ಲಿ ದೆಹಲಿ ಹೈಕೋರ್ಟ್ ಆದೇಶವೊಂದಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್, ನಿಯಮಗಳು ರೂಪುಗೊಳ್ಳುವ ತನಕ ಕಾರ್ಯಿರ್ವಹಿಸುವಂತೆ ಬೈಕ್ ಟ್ಯಾಕ್ಸಿ ಸಂಸ್ಥೆಗಳಿಗೆ ಸೂಚನೆ ನೀಡಿತ್ತು. ಹೊಸ ನಿಯಮಗಳನ್ನು ಜುಲೈ 31ರೊಳಗೆ ರೂಪಿಸೋದಾಗಿ ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿತ್ತು. ದೆಹಲಿ ಮೋಟಾರ್ ವಾಹನ ಸಂಸ್ಥೆಗಳು ಹಾಗೂ ಪೂರೈಕೆ ಸೇವಾದಾರರ ಯೋಜನೆ ಅಂತಿಮಗೊಳಿಸಲು ದೆಹಲಿ ಸರ್ಕಾರಕ್ಕೆ ನೀಡಿದ ಗಡುವನ್ನು ಕಳೆದ ತಿಂಗಳು ಸುಪ್ರೀಂ ಕೋರ್ಟ್ ಸೆ.30ರ ತನಕ ವಿಸ್ತರಿಸಿತ್ತು. ಮಹಾರಾಷ್ಟ್ರದಲ್ಲಿ ಕೂಡ ದೆಹಲಿ ಮಾದರಿಯಲ್ಲೇ ಬೈಕ್ ಟ್ಯಾಕ್ಸಿ ಸೇವೆಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು.