Isak Munda Success Story : ಹಸಿವು ಮರೆಯಲು ಯುಟ್ಯೂಬ್ ಚಾನೆಲ್ ಶುರು ಮಾಡಿದವನ ಯಶೋಗಾಥೆ
ಕೆಲಸದ ಮೇಲೆ ಆಸಕ್ತಿ, ಛಲವಿದ್ದರೆ ಯಾವುದೂ ಕಷ್ಟವಲ್ಲ. ಉದ್ಯೋಗವಿಲ್ಲವೆಂದು ಸರ್ಕಾರಕ್ಕೆ ಬೈತಾ,ಕೈಕಟ್ಟಿ ಕುಳಿತುಕೊಳ್ಳುವ ಬದಲು ಏನಾದ್ರೂ ಮಾಡಬೇಕೆಂಬ ಉತ್ಸಾಹದಲ್ಲಿ ರಣಾಂಗಣಕ್ಕಿಳಿದ್ರೆ ಯಶಸ್ಸು ಹುಡುಕಿಕೊಂಡು ಬರುತ್ತದೆ. ಇದಕ್ಕೆ ಬುಡಕಟ್ಟು ಜನಾಂಗದ ಯುಟ್ಯೂಬರ್ ಉತ್ತಮ ನಿದರ್ಶನ.
ಕೊರೊನಾ (Corona) ಲಾಕ್ ಡೌನ್ (Lockdown) ಜನರ ಬದುಕನ್ನು ಬದಲಿಸಿದೆ. ಅನೇಕರು ಹೊಸ ದಾರಿ ಕಂಡುಕೊಳ್ಳಲು ಕೊರೊನಾ ಕಾರಣವಾಗಿದೆ. ಕೊರೊನಾ ಲಾಕ್ ಡೌನ್ ನಲ್ಲಿ ಮನೆಯಲ್ಲಿದ್ದ ಜನರು ಹೊಸ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಅದ್ರಲ್ಲಿ ಐಸಾಕ್ ಮುಂಡಾ (Isak Munda) ಕೂಡ ಒಬ್ಬರು. ಲಾಕ್ ಡೌನ್ ನಲ್ಲಿ ಹಸಿವು ಮರೆಯಲು ಯುಟ್ಯೂಬ್ ನೋಡದೆ ಹೋಗಿದ್ರೆ ಮುಂಡಾ ಈಗ್ಲೂ ಎಲ್ಲೋ ಕೂಲಿ ಮಾಡ್ತಾ ಹೊಟ್ಟೆ ತುಂಬಿಸಿಕೊಳ್ಳಬೇಕಿತ್ತು. ಆದ್ರೆ ಮಕ್ಕಳ ಜೊತೆ ಯುಟ್ಯೂಬ್ ನೋಡ್ತಾ ತಾನೂ ಯುಟ್ಯೂಬರ್ ಆಗುವ ಛಲತೊಟ್ಟ ಮುಂಡಾ ಈಗ ಗೆದ್ದು ತೋರಿಸಿದ್ದಾರೆ. ಯುಟ್ಯೂಬರ್ ಆಗಿ ಲಕ್ಷಾಂತರ ರೂಪಾಯಿ ಗಳಿಸುತ್ತಿರುವ ಬುಡಕಟ್ಟು ಜನಾಂಗದ ವ್ಯಕ್ತಿಯ ಕಥೆಯನ್ನು ನಾವಿಂದು ಹೇಳ್ತೇವೆ.
ಐಸಾಕ್ ಮುಂಡಾ ಯಾರು ? : ಒಡಿಶಾದ ಸಂಬಲ್‌ಪುರ ಜಿಲ್ಲೆಯ ಬುಡಕಟ್ಟು ಜನಾಂಗದಲ್ಲಿ ವಾಸಿಸುತ್ತಿರುವ ವ್ಯಕ್ತಿ ಐಸಾಕ್ ಮುಂಡಾ. ಕೂಲಿ ಮಾಡ್ತಿದ್ದ ಮುಂಡಾ ಲಾಕ್ ಡೌನ್ ಕಾರಣಕ್ಕೆ ಊರಿಗೆ ಹೋಗಿದ್ದರು. ಅಲ್ಲಿ ಮಕ್ಕಳ ಜೊತೆ ಯುಟ್ಯೂಬ್ ನೋಡಿದ್ದಾರೆ. ಆ ವೇಳೆ ಯುಟ್ಯೂಬರ್ ಆಗೋದು ಹೇಗೆ ಎಂಬ ಜಾಹೀರಾತು ಕೂಡ ಕಿವಿಗೆ ಬಿದ್ದಿದೆ. ಯಾವುದೇ ಖರ್ಚಿಲ್ಲದ ಈ ಪ್ರಯತ್ನವನ್ನು ನಾನ್ಯಾಕೆ ಮಾಡಬಾರದು ಎಂಬ ಆಲೋಚನೆ ಬಂದಿದೆ. ಇದನ್ನು ಮುಂಡಾ ಕಾರ್ಯರೂಪಕ್ಕೆ ತಂದಿದ್ದಾರೆ.
ಇದನ್ನೂ ಓದಿ: LPG PRICE HIKE: ಅಕ್ಟೋಬರ್ 2021ರ ಬಳಿಕ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ ಬೆಲೆ ₹50 ಹೆಚ್ಚಳ!
ಮುಂಡಾ ಯುಟ್ಯೂಬ್ ಪಯಣ : ಯುಟ್ಯೂಬ್ ಶುರು ಮಾಡುವುದ್ರಿಂದ ಹಿಡಿದು ಇಷ್ಟರ ಮಟ್ಟಿಗೆ ಯಶಸ್ಸು ಸಾಧಿಸುವುದು ಸುಲಭವಾಗಿರಲಿಲ್ಲ. ಮೊದಲು ಯುಟ್ಯೂಬ್ ಹೇಗೆ ರಚಿಸಬೇಕು ಎಂಬುದನ್ನು ಮುಂಡಾ ಕಲಿತರು. ನಂತ್ರ 3 ಸಾವಿರ ರೂಪಾಯಿ ನೀಡಿ ಸ್ಮಾರ್ಟ್ಫೋನ್ ಖರೀದಿ ಮಾಡಿದ್ರು. ಕೇವಲ 7ನೇ ತರಗತಿ ಮುಗಿಸಿರುವ ಮುಂಡಾ ಮೊದಲ ವಿಡಿಯೋವನ್ನು 2020ರಲ್ಲಿ ಅಪ್ಲೋಡ್ ಮಾಡಿದ್ರು. ಅನ್ನದ ಜೊತೆ ಉದ್ದಿನಬೇಳೆ ಸಾರು, ಟೊಮೆಟೊ ಮತ್ತು ಮೆಣಸಿನಕಾಯಿ ತಿನ್ನುವ ವಿಡಿಯೋವನ್ನು ಹಾಕಿದ್ದರು.
ಊಟ ಮುಗಿಸಿದ ಅವರು ವೀಕ್ಷಕರಿಗೆ ಧನ್ಯವಾದ ಹೇಳಿದ ವಿಡಿಯೋವನ್ನು ಒಂದು ವಾರದವರೆಗೆ ಯಾರೂ ನೋಡಿರಲಿಲ್ಲ. ಆದ್ರೆ ಇದ್ರಿಂದ ಬೇಸರಗೊಳ್ಳದ ಐಸಾಕ್, ಯುಟ್ಯೂಬ್ ಪ್ರಚಾರದ ಬಗ್ಗೆ ತಿಳಿದುಕೊಂಡರು. ನಂತ್ರ ಫೇಸ್ಬುಕ್ ಖಾತೆ ತೆರೆದ ಐಸಾಕ್ ಯುಟ್ಯೂಬ್ ಲಿಂಕ್ ಅಲ್ಲಿ ಹಾಕಿದ್ದರು. ಅದ್ರಲ್ಲಿ 10-12 ಜನ ವೀಕ್ಷಣೆ ಮಾಡಿದ್ದರಂತೆ. ನಂತ್ರ ಒಡಿಶಾದ ಪ್ರಸಿದ್ಧ ಖಾದ್ಯ ಬಾಸಿ ಪಖಾಲಾ ತಿನ್ನುವ ವಿಡಿಯೋ ಹಾಕಿದ್ರು. ಇದು ಜನರ ಗಮನ ಸೆಳೆಯಿತು. ಒಂದೇ ವಾರದಲ್ಲಿ 20000 ಕ್ಕೂ ಹೆಚ್ಚು ಚಂದಾದಾರರಾದರು. ಅಷ್ಟೇ ಅಲ್ಲ, ಅಮೆರಿಕ, ಬ್ರೆಜಿಲ್, ಮಂಗೋಲಿಯಾ ದೇಶಗಳಲ್ಲಿಯೂ ಅವರ ವೀಡಿಯೋಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಇದನ್ನೂ ಓದಿ: ಮುಂಬೈ ಮೂಲದ ಯುನಿಕಾರ್ನ್ ಮೇಲೆ ಐಟಿ ದಾಳಿ: 224 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆ
8 ಲಕ್ಷಕ್ಕೂ ಹೆಚ್ಚು ಚಂದಾದಾರರು : ಎರಡು ವರ್ಷಗಳ ನಂತರ, ಐಸಾಕ್ ಮುಂಡಾ ಅವರ ಚಾನಲ್ 'ಐಸಾಕ್ ಮುಂಡಾ ಈಟಿಂಗ್' ಸುಮಾರು 8 ಲಕ್ಷ ಚಂದಾದಾರರನ್ನು ಹೊಂದಿದೆ. ಅವರ ವೀಡಿಯೊವನ್ನು 100 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲಿ ಅವರ ಬಗ್ಗೆ ಚರ್ಚಿಸಿದ್ದರು. ಐಸಾಕ್ ಮುಂಡಾ ತಮ್ಮ ಬಡ ಮನೆ ಮತ್ತು ಹಳ್ಳಿಯ ಜೀವನದ ಬಗ್ಗೆ ವೀಡಿಯೊಗಳನ್ನು ಮಾಡುತ್ತಾರೆ.
ಮೊದಲ ಗಳಿಕೆ 5 ಲಕ್ಷ ರೂಪಾಯಿ : ಆಗಸ್ಟ್ 2020 ಐಸಾಕ್ ಮುಂಡಾ ಗಳಿಕೆ ಶುರುವಾಗಿತ್ತಂತೆ. ಮೊದಲ ಬಾರಿ 5 ಲಕ್ಷ ರೂಪಾಯಿ ಸಿಕ್ಕಿತ್ತಂತೆ. ಅದನ್ನು ಮನೆ ಕಟ್ಟಲು ಹಾಗೂ ಕುಟುಂಬಸ್ಥರ ಆರ್ಥಿಕ ಸಂಕಷ್ಟ ನಿವಾರಿಸಿಲು ನೀಡಿದ್ದ ಮುಂಡಾ ಸಾಮರ್ಥ್ಯಕ್ಕೆ ತಕ್ಕಂತೆ ನೆರೆಯವರಿಗೆ ಸಹಾಯ ಮಾಡ್ತಾರೆ. ಪ್ರತಿ ದಿನ ಮುಂಡಾ ವಿಡಿಯೋ ಹಾಕುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಮುಂಡಾ ವಿಡಿಯೋ ಹಾಕ್ತಾರೆ. ಆದ್ರೆ ಕೂಲಿ ಮಾಡಿ ಅತಿ ಕಡಿಮೆ ಹಣ ಗಳಿಸುತ್ತಿದ್ದ ಮುಂಡಾ ಈಗ ತಿಂಗಳಿಗೆ 3 ಲಕ್ಷದವರೆಗೆ ಹಣ ಗಳಿಸ್ತಿದ್ದಾರೆ.