LPG Price Hike: ಅಕ್ಟೋಬರ್ 2021ರ ಬಳಿಕ ಮೊದಲ ಬಾರಿಗೆ ಗ್ಯಾಸ್ ಸಿಲಿಂಡರ್ ಬೆಲೆ ₹50 ಹೆಚ್ಚಳ!
ಅಂತಾರಾಷ್ಟ್ರೀಯ ಇಂಧನ ಬೆಲೆಗಳ ಏರಿಕೆಗೆ ಅನುಗುಣವಾಗಿ ದೇಶೀಯ ಅಡುಗೆ ಅನಿಲ ಬೆಲೆಯೂ ಏರಿಕೆಯಾಗಿದೆ.
ನವದೆಹಲಿ (ಮಾ. 22): ಅಂತಾರಾಷ್ಟ್ರೀಯ ಇಂಧನ ಬೆಲೆಗಳ ಏರಿಕೆಗೆ ಅನುಗುಣವಾಗಿ ದೇಶೀಯ ಅಡುಗೆ ಅನಿಲ (LPG) ದರವನ್ನು ಮಂಗಳವಾರ ಪ್ರತಿ ಸಿಲಿಂಡರ್‌ಗೆ ₹50 ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 14.2-ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ (Delhi) ₹ 949.50 ಆಗಲಿದ್ದು, ಅಕ್ಟೋಬರ್ ಆರಂಭದ ನಂತರ ಎಲ್‌ಪಿಜಿ ದರದಲ್ಲಿ ಮೊದಲ ಹೆಚ್ಚಳವಾಗಿದೆ.ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಹೊರತಾಗಿಯೂ ಅಕ್ಟೋಬರ್ ಆರಂಭದಿಂದಲೂ ಬೆಲೆಗಳು ಬದಲಾಗದೆ ಉಳಿದಿದ್ದವು.
5 ಕಿಲೋಗ್ರಾಂ (ಕೆಜಿ) ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ₹ 349 ಆಗಿದ್ದರೆ, 10 ಕೆಜಿ ಕಾಂಪೋಸಿಟ್ ಬಾಟಲ್ ₹ 669 ಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ. 19 ಕೆಜಿಯ ವಾಣಿಜ್ಯ ಸಿಲಿಂಡರ್ ಈಗ ₹ 2003.50 ಬೆಲೆಯಲ್ಲಿ ಲಭ್ಯವಿದೆ. ಇನ್ನು ಇನ್ನು ಸೋಮವಾರ ಬೆಳಗ್ಗೆ 6 ಗಂಟೆಯಿಂದ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಯು ತಲಾ 80 ಪೈಸೆಗಳಷ್ಟು ಹೆಚ್ಚಾಗಿದೆ, ಇದು ಡಿಸೆಂಬರ್ 1 2021 ರಿಂದ ಮೊದಲ ಪರಿಷ್ಕರಣೆಯಾಗಿದೆ.
ಇನ್ನು ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿರುವ ಕಾರಣ ವಿಶ್ವಾದ್ಯಂತ ದೂರಗಾಮಿ ಪರಿಣಾಮ ಬೀರಿದೆ. ಇದಕ್ಕೆ ಭಾರತ ಕೂಡ ಹೊರತಲ್ಲ. ದೇಶದಲ್ಲಿ ಪೆಟ್ರೋಲ್ ಹಾಗೂ ಅಗತ್ಯವಸ್ತುಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಕೊರೋನಾ ಹೊಡೆತದಿಂದ ನಲುಗುತ್ತಿರುವ ವಿವಿಧ ದೇಶಗಳಲ್ಲಿ ಯುದ್ಧದ ಪರಿಣಾಮವಾಗಿ ಹಣದುಬ್ಬರ ಏರಿಕೆಯಾಗುವುದು, ಮಾರುಕಟ್ಟೆಯಲ್ಲಿ ಏರಿಳಿತವಾಗುವುದು, ಯುರೋಪ್‌ನಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವುದು, ಚೀನಾದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರ ಮುಳುಗುವುದು, ಆಫ್ರಿಕಾದಲ್ಲಿ ಆಹಾರ ವಸ್ತುಗಳು ದುಬಾರಿಯಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: Russia-Ukraine War: ಭಾರತದ ಆರ್ಥಿಕತೆ ಮೇಲೆ ಉಕ್ರೇನ್ ಪರಿಣಾಮ: ಕೇಂದ್ರ ಸಚಿವೆ ನಿರ್ಮಲಾ
ಉಕ್ರೇನ್‌ನ ಕೃಷಿ ಉದ್ದಿಮೆಗಳು ಯುರೋಪ್‌ನ ಆಹಾರ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಸರಕು ಪೂರೈಸುತ್ತವೆ. ಜಗತ್ತಿನಲ್ಲೇ ಗೋಧಿ ಉತ್ಪಾದನೆಯಲ್ಲಿ ಉಕ್ರೇನ್ 5ನೇ ಸ್ಥಾನ ಪಡೆದಿದೆ. ಹೀಗಾಗಿ ಯುರೋಪ್ ಮತ್ತು ವಿವಿಧ ದೇಶಗಳಲ್ಲಿ ಉಕ್ರೇನ್‌ನಿಂದ ಆಮದಾಗುವ ಗೋಧಿ ಉತ್ಪನ್ನಗಳು ಹಾಗೂ ಆಹಾರೋತ್ಪನ್ನಗಳು ದುಬಾರಿಯಾಗುವ ಸಾಧ್ಯತೆಯಿದೆ.
ಈಗಾಗಲೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ದರ ದುಬಾರಿಯಾಗುತ್ತಿರುವುದರಿಂದ ಅನೇಕ ದೇಶಗಳಲ್ಲಿ ವಿದ್ಯುತ್ ಕೊರತೆ ಉಂಟಾಗಿ ಕೈಗಾರಿಕೆಗಳು ಉತ್ಪಾದನೆ ಕಡಿತಗೊಳಿಸಿವೆ. ಇದು ಹಣದುಬ್ಬರ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ.