ಭಾರತದಲ್ಲಿ ₹100 ಕೋಟಿಗೂ ಹೆಚ್ಚು ಆದಾಯ ಘೋಷಿಸುವವರ ಸಂಖ್ಯೆ ಕಳೆದ ಐದು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದ್ದು, 2025-26ರ ಮೌಲ್ಯಮಾಪನ ವರ್ಷದಲ್ಲಿ 576ಕ್ಕೆ ತಲುಪಿದೆ ಎಂದು ಆದಾಯ ತೆರಿಗೆ ರಿಟರ್ನ್ಸ್ ಡೇಟಾ ಬಹಿರಂಗಪಡಿಸಿದೆ.

ನವದೆಹಲಿ (ಜು.28): ಭಾರತದಲ್ಲಿ ಅತ್ಯಧಿಕ ಆದಾಯ ಗಳಿಸುವ ವ್ಯಕ್ತಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, 2025-26ರ ಮೌಲ್ಯಮಾಪನ ವರ್ಷದಲ್ಲಿ (AY'26) ಸಲ್ಲಿಕೆಯಾದ ಆದಾಯ ತೆರಿಗೆ ರಿಟರ್ನ್ಸ್ (ITR) ಪ್ರಕಾರ ಬರೋಬ್ಬರಿ 576 ವ್ಯಕ್ತಿಗಳು ತಮ್ಮ ಒಟ್ಟು ಆದಾಯ ₹100 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಎಂದು ಘೋಷಿಸಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಈ ಸಂಖ್ಯೆಯು 4 ಪಟ್ಟು ಹೆಚ್ಚಳ ಕಂಡಿದೆ ಎಂದು ಲೋಕಸಭೆಗೆ ಸೋಮವಾರ ಮಾಹಿತಿ ನೀಡಲಾಗಿದೆ. ದೇಶದಲ್ಲಿ ಬಿಲಿಯನೇರ್‌ಗಳ (ಶತಕೋಟ್ಯಾಧಿಪತಿಗಳು) ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆಯೇ ಮತ್ತು ಈ ವಿಷಯದಲ್ಲಿ ಭಾರತವು ವಿಶ್ವದ ಪ್ರಮುಖ ದೇಶಗಳಲ್ಲಿ ಒಂದಾಗಿದೆಯೇ ಎಂಬ ಪ್ರಶ್ನೆಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಐಟಿ ಕಾಯ್ದೆಯಲ್ಲಿ 'ಬಿಲಿಯನೇರ್' ಪದಕ್ಕೆ ವ್ಯಾಖ್ಯಾನವಿಲ್ಲ!

ತಮ್ಮ ಲಿಖಿತ ಉತ್ತರದಲ್ಲಿ ಸ್ಪಷ್ಟಪಡಿಸಿದ ಸಚಿವರು, "ಆದಾಯ ತೆರಿಗೆ ಕಾಯ್ದೆ 2025 ಅಥವಾ ಹಿಂದಿನ ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ 'ಬಿಲಿಯನೇರ್' (Billionaire) ಎಂಬ ಪದಕ್ಕೆ ಯಾವುದೇ ಶಾಸನಬದ್ಧ ವ್ಯಾಖ್ಯಾನವಿಲ್ಲ," ಎಂದು ತಿಳಿಸಿದ್ದಾರೆ. ಆದರೆ, 2025-26ರ ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸಲಾದ ಐಟಿಆರ್‌ಗಳಲ್ಲಿ ₹100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಒಟ್ಟು ಆದಾಯವನ್ನು ಹೊಂದಿರುವ ವ್ಯಕ್ತಿಗಳ ಸಂಖ್ಯೆ 576ಕ್ಕೆ ತಲುಪಿದೆ. ಇದು 2021-22ರ ಮೌಲ್ಯಮಾಪನ ವರ್ಷದಲ್ಲಿದ್ದ 142 ವ್ಯಕ್ತಿಗಳಿಗೆ ಹೋಲಿಸಿದರೆ ತೀವ್ರ ಪ್ರಮಾಣದ (4 ಪಟ್ಟು) ಏರಿಕೆಯಾಗಿದೆ.

ಕಳೆದ 5 ವರ್ಷಗಳ ಅಂಕಿ-ಅಂಶಗಳ ಚಿತ್ರಣ

ವರದಿಯ ಪ್ರಕಾರ, ₹100 ಕೋಟಿ ಹಾಗೂ ಅದಕ್ಕಿಂತ ಹೆಚ್ಚಿನ ಒಟ್ಟು ಆದಾಯ ಹೊಂದಿರುವ ವ್ಯಕ್ತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಈ ಕೆಳಗಿನಂತೆ ಬದಲಾಗಿದೆ:

2021-22 (AY'22): 142 ವ್ಯಕ್ತಿಗಳಿದ್ದರೆ, 2022-23 (AY'23) ರಲ್ಲಿ 301, 2023-24 (AY'24)ರಲ್ಲಿ ಸ್ವಲ್ಪ ಕುಸಿತ ಕಂಡು 284 ವ್ಯಕ್ತಿಗಳು, 2024-25 (AY'25)ರಲ್ಲಿ 415 ವ್ಯಕ್ತಿಗಳು ಹಾಗೂ 2025-26 (AY'26)ರಲ್ಲಿ 576 ವ್ಯಕ್ತಿಗಳು ಶತಕೋಟ್ಯಧಿಪತಿಗಳಾಗಿದ್ದಾರೆ.

ಉದ್ಯೋಗ ಮಾರುಕಟ್ಟೆ ಚೇತರಿಕೆ, ನಿರುದ್ಯೋಗ ದರ ಇಳಿಕೆ

ಆದಾಯ ಮತ್ತು ಸಂಪತ್ತಿನ ಕೇಂದ್ರೀಕರಣವು ಆದಾಯ ಅಸಮಾನತೆ, ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಒಳಗೊಳ್ಳುವಿಕೆಯ ಆರ್ಥಿಕ ಬೆಳವಣಿಗೆಯ ಮೇಲೆ ಉಂಟುಮಾಡುವ ಪ್ರಭಾವದ ಕುರಿತು ಸರ್ಕಾರ ಯಾವುದಾದರೂ ಅಧ್ಯಯನ ನಡೆಸಿದೆಯೇ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಚೌಧರಿ, "ವಾರ್ಷಿಕ ನಿಯತಕಾಲಿಕ ಕಾರ್ಮಿಕ ಪಡೆ ಸಮೀಕ್ಷೆ (PLFS) ವರದಿಯು, ನಗರ ಮತ್ತು ಗ್ರಾಮೀಣ ಎರಡೂ ಪ್ರದೇಶಗಳಲ್ಲಿ ಕಾರ್ಮಿಕ ಮಾರುಕಟ್ಟೆಯು ಕೋವಿಡ್-ಪೂರ್ವ ಮಟ್ಟಕ್ಕಿಂತ ಮೀರಿ ಚೇತರಿಸಿಕೊಂಡಿರುವುದನ್ನು ತೋರಿಸಿದೆ," ಎಂದಿದ್ದಾರೆ.

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ನಿರುದ್ಯೋಗ ದರವು 2022 ರಲ್ಲಿದ್ದ ಶೇಕಡಾ 3.6 ರಿಂದ 2025 ರ ವೇಳೆಗೆ ಶೇಕಡಾ 3.1 ಕ್ಕೆ ಕುಸಿದಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. "ಆದಾಯ ಮತ್ತು ಸಂಪತ್ತಿನ ಅಸಮಾನತೆಯನ್ನು ಕಡಿಮೆ ಮಾಡಲು, ವ್ಯಾಪಕ ಆಧಾರಿತ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಹಾಗೂ ಒಳಗೊಳ್ಳುವಿಕೆಯ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಪ್ರಗತಿಪರ ಆದಾಯ ತೆರಿಗೆ ವ್ಯವಸ್ಥೆ ಮತ್ತು ಆಹಾರ, ಆರೋಗ್ಯ, ಶಿಕ್ಷಣ, ವಸತಿ ಹಾಗೂ ಸಾಮಾಜಿಕ ಭದ್ರತೆಯ ಮೇಲಿನ ಸರ್ಕಾರಿ ವೆಚ್ಚದ ಹೆಚ್ಚಳ ಸೇರಿದೆ," ಎಂದು ಸಚಿವರು ಹೇಳಿದ್ದಾರೆ.