ಯುಪಿಐ ಪಾವತಿಗೆ ಇಎಂಐ ಸೌಲಭ್ಯ; ಹೊಸ ಸೇವೆ ಪರಿಚಯಿಸಿದ ಐಸಿಐಸಿಐ ಬ್ಯಾಂಕ್
'ಈಗ ಖರೀದಿಸಿ, ನಂತರ ಪಾವತಿಸಿ' ಸೇವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಈಗ ಇಂಥ ಸೇವೆ ಪಡೆಯಲು ಅರ್ಹತೆ ಗಳಿಸಿದ ಗ್ರಾಹಕರಿಗೆ ಐಸಿಐಸಿಐ ಬ್ಯಾಂಕ್ ಇಎಂಐ ಸೌಲಭ್ಯ ನೀಡಲು ಮುಂದಾಗಿದೆ. ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮಾಡಿದ ಯುಪಿಐ ಪಾವತಿಗಳಿಗೆ ಐಸಿಐಸಿಐ ಬ್ಯಾಂಕ್ ಇಎಂಐ ಸೌಲಭ್ಯ ನೀಡಲಿದೆ.
ನವದೆಹಲಿ (ಏ.11): ಯುಪಿಐ ಪಾವತಿಗೆ ಇಎಂಐ ಸೌಲಭ್ಯ ನೀಡುವ ಹೊಸ ಸೇವೆಯನ್ನು ಐಸಿಐಸಿಐ ಬ್ಯಾಂಕ್ ಪರಿಚಯಿಸಿದೆ. ಕ್ಯುಆರ್ ಕೋಡ್ ಸ್ಕ್ಯಾನ್ ಮೂಲಕ ಮಾಡಿದ ಯುಪಿಐ ಪಾವತಿಗಳಿಗೆ ಇಎಂಐ ಸೌಲಭ್ಯ ನೀಡೋದಾಗಿ ಐಸಿಐಸಿಐ ಬ್ಯಾಂಕ್ ಮಂಗಳವಾರ ಘೋಷಿಸಿದೆ. ಐಸಿಐಸಿಐ ಬ್ಯಾಂಕ್ ನ 'ಈಗ ಖರೀದಿಸಿ, ನಂತರ ಪಾವತಿಸಿ' ಸೇವೆಯನ್ನು ಪಡೆಯಲು ಅರ್ಹತೆ ಗಳಿಸಿದ ಗ್ರಾಹಕರು ಈ ಇಎಂಐ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ರೀತಿಯ ಸೌಲಭ್ಯವನ್ನು ಬ್ಯಾಂಕ್ ಮೊದಲ ಬಾರಿಗೆ ನೀಡುತ್ತಿದ್ದು, ಇದರಿಂದ ಲಕ್ಷಾಂತರ ಗ್ರಾಹಕರಿಗೆ ನೆರವಾಗಲಿದೆ ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ. ಗ್ರಾಹಕರು ವ್ಯಾಪಾರಿಗಳ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಯುಪಿಐ ಪಾವತಿ ಮಾಡಿ ಈಗ ಉತ್ಪನ್ನಗಳು ಅಥವಾ ಸೇವೆಗಳನ್ನು ತಕ್ಷಣಕ್ಕೆ ಪಡೆಯಬುದಾಗಿದೆ. ಆ ನಂತರ ಇಎಂಐ ಮೂಲಕ ಆ ಹಣವನ್ನು ಪಾವತಿ ಮಾಡಬಹುದು ಎಂದು ಐಸಿಐಸಿಐ ಬ್ಯಾಂಕ್ ಮಾಹಿತಿ ನೀಡಿದೆ. ಎಲೆಕ್ಟ್ರಾನಿಕ್ಸ್, ದಿನಸಿ, ಫ್ಯಾಷನ್ ಉಡುಪುಗಳು, ಪ್ರವಾಸ ಹಾಗೂ ಹೋಟೆಲ್ ಬುಕ್ಕಿಂಗ್ ಸೇರಿದಂತೆ ವಿವಿಧ ವರ್ಗಗಳಲ್ಲಿ ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ. ಗ್ರಾಹಕರು 10,000 ರೂ. ಮೇಲ್ಪಟ್ಟ ವಹಿವಾಟಿನ ಮೊತ್ತಕ್ಕೆ ಮಾತ್ರ ಇಎಂಐ ಸೌಲಭ್ಯ ಲಭ್ಯವಿದ್ದು, ಮೂರು, ಆರು ಅಥವಾ ಒಂಭತ್ತು ತಿಂಗಳ ಸರಳ ಕಂತುಗಳಲ್ಲಿ ಪಾವತಿಸಬಹುದಾಗಿದೆ. ಪೇ ಲೇಟರ್ ಇಎಂಐ ಸೌಲಭ್ಯವನ್ನು ಶೀಘ್ರದಲ್ಲೇ ಆನ್ ಲೈನ್ ಶಾಪಿಂಗ್ ಗೆ ಕೂಡ ವಿಸ್ತರಿಸಲಾಗುವುದು ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ.
'ಇತ್ತೀಚಿನ ದಿನಗಳಲ್ಲಿ ಗರಿಷ್ಠ ಪಾವತಿಗಳನ್ನು ಯುಪಿಐ ಮೂಲಕ ಮಾಡಲಾಗುತ್ತಿದೆ. ಇದರ ಜೊತೆಗೆ ಗ್ರಾಹಕರು ಬ್ಯಾಂಕ್ ನ ;ಈಗ ಖರೀದಿಸಿ, ನಂತರ ಪಾವತಿಸಿ' ಸೇವೆಯ ಪೇ ಲೇಟರ್ ನಿಂದ ಯುಪಿಐ ವಹಿವಾಟನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವುದನ್ನು ನಾವು ಗಮನಿಸಿದ್ದೇವೆ' ಎಂದು ಐಸಿಐಸಿಐ ಬ್ಯಾಂಕ್ ಡಿಜಿಟಲ್ ಚಾನೆಲ್ ಮುಖ್ಯಸ್ಥ ಬ್ರಿಜಿತ್ ಭಾಸ್ಕರ್ ತಿಳಿಸಿದ್ದಾರೆ.
EPFO:ಉಮಂಗ್ ಆ್ಯಪ್ ಮೂಲಕ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡೋದು ಹೇಗೆ?
ಪೇ ಲೇಟರ್ ಮೂಲಕ ಇಎಂಐ ಸೌಲಭ್ಯ ಪಡೆಯೋದು ಹೇಗೆ?
*ಯಾವುದೇ ಭೌತಿಕ ಮಳಿಗೆಗೆ ಭೇಟಿ ನೀಡಿ ನಿಮ್ಮ ಆಯ್ಕೆಯ ಉತ್ಪನ್ನ ಅಥವಾ ಸೇವೆ ಆಯ್ಕೆ ಮಾಡಿ.
*ಪಾವತಿ ಮಾಡಲು ಐ ಮೊಬೈಲ್ ಪೇ ಆ್ಯಪ್ ಬಳಸಿ ಹಾಗೂ ‘Scan any QR’ಆಯ್ಕೆ ಆರಿಸಿ.
*ವಹಿವಾಟಿನ ಮಿತಿ 10,000ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ ಪೇಲೇಟರ್ ಇಎಂಐ ಆಯ್ಕೆಯನ್ನು ಆರಿಸಿ.
*3, 6 ಅಥವಾ 9 ತಿಂಗಳ ಅವಧಿಯನ್ನು ಆಯ್ಕೆ ಮಾಡಿ.
*ಪಾವತಿಯನ್ನು ದೃಢೀಕರಿಸಿದ್ರೆ ಸಾಕು, ವಹಿವಾಟು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ 14ನೇ ಕಂತು ಯಾವಾಗ ಸಿಗುತ್ತೆ? ಈ ಯೋಜನೆ ಸೇರ್ಪಡೆ ಹೇಗೆ,ಅಗತ್ಯ ದಾಖಲೆಗಳು ಯಾವುವು?
ಪೇ ಲೇಟರ್ ಬಾಕಿಗಳು ನಿಮ್ಮ ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆಯಿಂದ ಅಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ ಎಂದು ಐಸಿಐಸಿಐ ಬ್ಯಾಂಕ್ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. ಪೇ ಲೇಟರ್ ಐಸಿಐಸಿಐ ಬ್ಯಾಂಕ್ ಡಿಜಿಟಲ್ ಕ್ರೆಡಿಟ್ ಉತ್ಪನ್ನವಾಗಿದ್ದು, 2018ರಲ್ಲಿ ಬಿಡುಗಡೆಗೊಳಿಸಲಾಯಿತು. ಈ ಮೊದಲೇ ಬ್ಯಾಂಕ್ ಅನುಮೋದನೆ ಪಡೆದಿರುವ ಗ್ರಾಹಕರಿಗೆ ಈ ಸೌಲಭ್ಯ ಲಭ್ಯವಿದೆ.
ಇ-ಕಾಮರ್ಸ್ ತಾಣಗಳಲ್ಲಿ ಜನಪ್ರಿಯ
ಇ-ಕಾಮರ್ಸ್ ತಾಣಗಳು ಗ್ರಾಹಕರನ್ನು ಸೆಳೆಯಲು ಅನೇಕ ಆಫರ್, ಡಿಸ್ಕೌಂಟ್ ಗಳನ್ನು ಆಗಾಗ ಘೋಷಿಸುತ್ತಲೇ ಇರುತ್ತವೆ. ಇಂಥ ಮಾರುಕಟ್ಟೆ ತಂತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರೋದು 'ಈಗ ಖರೀದಿಸಿ, ನಂತರ ಪಾವತಿಸಿ' ಅಥವಾ ಬಿಎನ್ ಪಿಲ್. ಈ ವಿಧಾನದಲ್ಲಿ ಗ್ರಾಹಕರಿಗೆ ಇ-ಕಾಮರ್ಸ್ ತಾಣಗಳು ವಸ್ತುಗಳ ಖರೀದಿಗೆ ಬಡ್ಡಿರಹಿತ ಕಿರು ಅವಧಿಯ ಸಾಲಗಳನ್ನು ಒದಗಿಸುತ್ತಿವೆ. ಹೀಗಾಗಿ ಈ ಸಾಲ ಬಳಸಿಕೊಂಡು ಗ್ರಾಹಕರು ವಸ್ತುಗಳನ್ನು ಖರೀದಿಸಿ, ಆ ಬಳಿಕ ಬಡ್ಡಿರಹಿತ ಇಎಂಐಗಳ ಮೂಲಕ ಪಾವತಿ ಮಾಡಬಹುದು. ಬಿಎನ್ ಪಿಎಲ್ ಪ್ಲ್ಯಾನ್ ಗಳು ಕ್ರೆಡಿಟ್ ಕಾರ್ಡ್ ಅಥವಾ ಇತರ ಕ್ರೆಡಿಟ್ ವಿಧಾನಗಳಿಗಿಂತ ಹೆಚ್ಚು ಪ್ರಯೋಜನಕಾರಿ. ಏಕೆಂದ್ರೆ ಇದಕ್ಕೆ ಯಾವುದೇ ಬಡ್ಡಿ ಪಾವತಿಸಬೇಕಾಗಿಲ್ಲ.