ಹೊಸ ಫೋಟೋ ಬಳಸಿ: 15 ಕೆ.ಜಿ.ತೆಳ್ಳಗಾದ ಫೋಟೋ ಪೋಸ್ಟ್ ಮಾಡಿದ ಅಶ್ನೀರ್ ಗ್ರೋವರ್
ಭಾರತ್ ಪೇ ಸಹಸಂಸ್ಥಾಪಕ ಅಶ್ನೀರ್ ಗ್ರೋವರ್ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಪೋಸ್ಟ್ ಗಳ ಮೂಲಕ ಗಮನ ಸೆಳೆಯುತ್ತಲಿರುತ್ತಾರೆ. ಇತ್ತೀಚೆಗೆ ಇವರು ಮಾಡಿದ ಒಂದು ಟ್ವೀಟ್ ಎಲ್ಲರ ಗಮನ ಸೆಳೆಯುತ್ತಿದೆ. 15ಕೆಜಿ ತೂಕ ಕಳೆದುಕೊಂಡಿರುವ ಫೋಟೋ ಪೋಸ್ಟ್ ಮಾಡಿರುವ ಗ್ರೋವರ್ ತನ್ನ ಬಗ್ಗೆ ಏನೇ ಬರೆದರೂ ಹಳೆಯ ಫೋಟೋಗಳ ಬದಲು ಇದನ್ನು ಬಳಸುವಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ನವದೆಹಲಿ (ಮಾ.15):ಶಾರ್ಕ್ ಟ್ಯಾಂಕ್ ಇಂಡಿಯಾ ರಿಯಾಲಿಟಿ ಶೋನ ಮೊದಲ ಆವೃತ್ತಿಯಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡ ಬಳಿಕ ಫಿನ್ ಟೆಕ್ ಸಂಸ್ಥೆ ಭಾರತ್ ಪೇ ಸಹಸಂಸ್ಥಾಪಕ ಹಾಗೂ ಮಾಜಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅಶ್ನೀರ್ ಗ್ರೋವರ್ ಅನೇಕ ಹಿಂಬಾಲಕರನ್ನು ಪಡೆದಿದ್ದಾರೆ. ಈ ಶೋ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ನೇರ ಮಾತು ಹಾಗೂ ಹಾಸ್ಯಭರಿತ ಡೈಲಾಗ್ ಗಳ ಮೂಲಕ ಎಲ್ಲರ ಮನಗೆದ್ದ ಅವರು, ಅನೇಕ ಮೇಮ್ಸ್ ಗಳಿಗೆ ಕೂಡ ಸ್ಫೂರ್ತಿಯಾಗಿದ್ದರು. ಆದರೆ, ಕಳೆದ ವರ್ಷ ಭಾರತ್ ಪೇ ಮಾಜಿ ಎಂಡಿ ಅಶ್ನೀರ್ ಗ್ರೋವರ್ ಹಾಗೂ ಅವರ ಕುಟುಂಬದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ವಂಚನೆ ಹಾಗೂ ಹಣದ ದುರುಪಯೋಗ ಆರೋಪ ಮಾಡಿತ್ತು. 88.67 ಕೋಟಿ ರೂ. ಪರಿಹಾರ ನೀಡುವಂತೆಯೂ ಕೋರಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿಕೂಡ ಪ್ರಕಟವಾಗಿತ್ತು. ಇದಕ್ಕೆ ಸಂಬಂಧಿಸಿ ಆಗಾಗ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಲಿರುತ್ತದೆ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ ಪತ್ನಿ ಜೊತೆಗಿನ ತಮ್ಮ ಫೋಟೋ ಪೋಸ್ಟ್ ಮಾಡಿರುವ ಗ್ರೋವರ್ ಮಾಧ್ಯಮಗಳಿಗೊಂದು ಸರಳ ಮನವಿ ಕೂಡ ಮಾಡಿದ್ದಾರೆ. ಅದೇನೆಂದ್ರೆ ಅವರ ಬಗ್ಗೆ ಏನಾದ್ರೂ ಬರೆದು ಪ್ರಕಟಿಸುವಾಗ ಈ ಫೋಟೋ ಬಳಕೆ ಮಾಡುವಂತೆ ಕೋರಿದ್ದಾರೆ. ಏಕೆಂದ್ರೆ ಗ್ರೋವರ್ ಈಗ 15 ಕೆಜಿ ತೂಕ ಕಳೆದುಕೊಂಡಿದ್ದು, ಈ ಫೋಟೋದಲ್ಲಿ ಮೊದಲಿಗಿಂತ ಯಂಗ್ ಹಾಗೂ ಹ್ಯಾಂಡ್ ಸಮ್ ಆಗಿ ಕಾಣಿಸುತ್ತಿದ್ದಾರೆ.
ತಾನು 15ಕೆಜಿ ತೂಕ ಕಳೆದುಕೊಂಡಿದ್ದೇನೆ ಎಂಬುದನ್ನು ಕೂಡ ಗ್ರೋವರ್ ಈ ರೀತಿ ವಿನೂತನವಾಗಿ ತಿಳಿಸಿರೋದಕ್ಕೆ ಅನೇಕ ಜನರು ಟ್ವೀಟ್ ಕೂಡ ಮಾಡಿದ್ದಾರೆ. ತಾವು ಹಾಗೂ ಪತ್ನಿ ಮಾಧುರಿ ಜೈನ್ ಗ್ರೋವರ್ ಜೊತೆಯಾಗಿ ಇರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಗ್ರೋವರ್ ಹೀಗೆ ಬರೆದುಕೊಂಡಿದ್ದಾರೆ: 'ಮಾಧ್ಯಮ: ನನ್ನ ಬಗ್ಗೆ ಬರೆಯಲು ನಿಮಗೆ ಪಾವತಿಸಿದ್ರೆ ನೀವು ಏನೂ ಬೇಕಾದರೂ ಬರೆಯುತ್ತೀರಿ. ಈ ಬಗ್ಗೆ ನಾನು ದೂರುವುದಿಲ್ಲ. ಆದರೆ ನನ್ನದೊಂದು ಮನವಿಯಿದೆ. ಈ ಫೋಟೋವನ್ನು ಬಳಸಿಕೊಳ್ಳಿ. 15ಕೆಜಿ ತೂಕ ಕಳೆದುಕೊಂಡ ಬಳಿಕ ನನ್ನ ದಢೂತಿ ಶರೀರದ ಹಳೆಯ ಫೋಟೋ ನೋಡುವುದಕ್ಕಿಂತ ಕಷ್ಟದ ಕೆಲಸ ನನಗೆ ಬೇರೆಯಿಲ್ಲ. ಇಂಥ ಪೋಟೋ ಹೊಂದಿರುವ ಸ್ಟೋರಿಯನ್ನು ನಾನು ಓದುವುದು ಕೂಡ ಇಲ್ಲ. ಏಕೆಂದ್ರೆ ಕಣ್ಣಿಗೆ ಹಿತನೀಡುವುದು ಅತೀಮುಖ್ಯ' ಎಂದು ಟ್ವೀಟ್ ಮಾಡಿದ್ದಾರೆ.
ಗ್ರೋವರ್ ಅವರ ಟ್ವೀಟ್ ಗೆ ಅನೇಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು 'ಸ್ಪಾಟ್ ಆನ್' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ಓಕೆ, ಗಮನಿಸಲಾಗಿದೆ' ಎಂದಿದ್ದಾರೆ. ಮತ್ತೊಬ್ಬರು 'ನಿಮ್ಮ 15ಕೆಜಿ ತೂಕ ಇಳಿಕೆಯನ್ನು ನೀವು ಬಾಸ್ ರೀತಿಯಲ್ಲೇ ತಿಳಿಸುತ್ತಿದ್ದೀರಿ' ಎಂದು ಪ್ರತಿಕ್ರಿಯಿಸಿದ್ದಾರೆ.ಅಶ್ನೀರ್ ಗ್ರೋವರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಹಾಸ್ಯಭರಿತ ಹಾಗೂ ಆಕರ್ಷಕ ರೀತಿಯಲ್ಲಿ ಸಂಗತಿಗಳ ಬಗ್ಗೆ ಪೋಸ್ಟ್ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ ಕೂಡ.
ಕಳೆದ ತಿಂಗಳು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ಪರಿಶೀಲನಾ ಪ್ರಕ್ರಿಯೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿ ಗ್ರೋವರ್ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲ, ಆ ಟ್ವೀಟ್ ನಲ್ಲಿ ವಿಮಾನಿಲ್ದಾಣದಲ್ಲಿನ ದಟ್ಟಣೆ ತಪ್ಪಿಸಲು ಹಾಗೂ ತ್ವರಿತ ಸೇವೆ ಒದಗಿಸಲು ಒಂದಿಷ್ಟು ಸಲಹೆಗಳನ್ನು ಕೂಡ ನೀಡಿದ್ದರು. ಇವರ ಅಮೂಲ್ಯ ಸಲಹೆಗಳಿಗೆ ದೆಹಲಿ ವಿಮಾನನಿಲ್ದಾಣ ಪ್ರಾಧಿಕಾರ ಕೃತಜ್ಞತೆ ಸಲ್ಲಿಸಿ ಟ್ವೀಟ್ ಮಾಡಿತ್ತು ಕೂಡ. ಹೀಗೆ ಆಗಾಗ ತಾವು ನೋಡಿದ, ಸಲಹೆ ನೀಡಲು ಬಯಸಿದ ವಿಷಯಗಳ ಬಗ್ಗೆ ಗ್ರೋವರ್ ಟ್ವೀಟ್ ಮಾಡುತ್ತ ಗಮನ ಸೆಳೆಯುತ್ತಿರುತ್ತಾರೆ.
ವಜ್ರೋದ್ಯಮಿ ಜೈಮಿನ್ ಶಾ ಪುತ್ರಿ ದಿವಾ ಜೊತೆ ಗೌತಮ್ ಅದಾನಿ ಕಿರಿಯ ಪುತ್ರನ ನಿಶ್ಚಿತಾರ್ಥ!
ಅಶ್ನೀರ್ ಗ್ರೋವರ್ ಖ್ಯಾತ ರಿಯಾಲ್ಟಿ ಶೋ 'ಶಾರ್ಕ್ ಟ್ಯಾಂಕ್ ' ಆವೃತ್ತಿ 1ರ ತೀರ್ಪುಗಾರರಾಗಿ ಭಾಗವಹಿಸಿ ಖ್ಯಾತಿ ಗಳಿಸಿದ್ದರು. ಅಲ್ಲದೆ, ಆ ಕಾರ್ಯಕ್ರಮದಲ್ಲಿ ಹೊಸ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಕೂಡ ಮಾಡಿದ್ದರು.