ನವದೆಹಲಿ [ಸೆ.08]: ದೇಶದಲ್ಲಿನ ಕಪ್ಪು ಹಣ ನಿಗ್ರಹ, ಭಯೋತ್ಪಾದನೆಗೆ ಹಣ ಪೂರೈಕೆ ಸ್ಥಗಿತ ಸೇರಿ ಇನ್ನಿತರ ಮಹತ್ತರ ಉದ್ದೇಶ ವನ್ನಿಟ್ಟುಕೊಂಡು ಕೇಂದ್ರ ಸರ್ಕಾರ 500 ರು. ಮತ್ತು 1000 ರು. ಮುಖಬೆಲೆಯ ನೋಟುಗಳನ್ನು 2016ರಲ್ಲಿ ರದ್ದು ಮಾಡಿತ್ತು. ಆದರೆ, ಕೇಂದ್ರ ಸರ್ಕಾರದ ಈ ಹಠಾತ್‌ ಕ್ರಮವು ಭಾರತದ ಗ್ರಾಹಕರ ಖರೀದಿ ಸಾಮರ್ಥ್ಯವೇ ಕುಸಿಯುವಂತೆ ಮಾಡಿದೆ. ತನ್ಮೂಲಕ ಹಿಂಜರಿತಕ್ಕೆ ಕಾರಣವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ವರದಿಯೇ ಹೇಳಿದೆ.

ಅಪನಗದೀಕರಣದಿಂದಾಗಿ ಗ್ರಾಹಕ ಉಪಯೋಗಿ ವಸ್ತುಗಳ ಸಾಲಗಳ ವಿತರಣೆ ಪ್ರಮಾಣ ಕುಸಿತದ ಹಾದಿ ಹಿಡಿಯಿತು. ಸತತ ಆರು ವರ್ಷಗಳ ಕಾಲ ಏರಿಕೆ ಕಂಡಿದ್ದ ಆ ಸಾಲಗಳ ಪ್ರಮಾಣ 2017ರ ಮಾರ್ಚ್ ಅಂತ್ಯಕ್ಕೆ 20,791 ಕೋಟಿ ರು. ತಲುಪಿತ್ತು. ಆದರೆ ಅಪನಗದೀಕರಣದ ಬಳಿಕ ಶೇ.73ರಷ್ಟುಕುಸಿದು, 5,623 ಕೋಟಿ ರು.ಗೆ ಜಾರಿತು. 2017-18ರಲ್ಲಿ 5.2ರಷ್ಟು, 2018-19ರಲ್ಲಿ ಶೇ.68ರಷ್ಟುಕುಸಿತ ಕಂಡುಬಂದಿದೆ. ಈಗಲೂ ಕುಸಿತ ನಿಂತಿಲ್ಲ. ಹೀಗಾಗಿ ಗ್ರಾಹಕರ ಬಳಕೆ ಸಾಮರ್ಥ್ಯದಲ್ಲಿ ಹಿಂಜರಿತವಾಗಿದೆ ಎಂದು ವರದಿ ವಿವರಿಸಿದೆ. ನೋಟು ಅಪನಗದೀಕರಣದ ಬಳಿಕ ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳ ಆದಾಯವು ಕುಂಠಿತಗೊಂಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ 14ನೇ ಹಣಕಾಸು ಆಯೋಗದ ಸದಸ್ಯ ಗೋವಿಂದರಾವ್‌, ‘ಗ್ರಾಹಕೋಪಯೋಗಿ ವಸ್ತುಗಳ ಸಾಲದ ವಿತರಣೆ ಪ್ರಮಾಣ ಅಪನಗದೀಕರಣದ ಬಳಿಕ ಕುಸಿಯಲು ಪ್ರಮುಖವಾಗಿ ಎರಡು ಕಾರಣಗಳು ಇವೆ. ಮೊದಲನೆಯದಾಗಿ, ನೋಟುರದ್ದತಿಯಿಂದಾಗಿ ಸಣ್ಣ ಕೈಗಾರಿಕೆಗಳಿಗೆ ಹಣದ ಕೊರತೆ ಉಂಟಾಯಿತು. ಹೀಗಾಗಿ ಅವುಗಳು ಬಂದ್‌ ಆದವು. ಎರಡನೆಯದಾಗಿ, ನಿರುದ್ಯೋಗ, ಆದಾಯ ನಷ್ಟಮತ್ತಿತರ ಕಾರಣಗಳಿಂದಾಗಿ ಜನರ ಬಳಿ ಹಣಕ್ಕೆ ಕೊರತೆ ಉಂಟಾಯಿತು. ಖರೀದಿ ನಡೆಯದ ಕಾರಣ ಸರಕುಗಳ ದಾಸ್ತಾನು ಹೆಚ್ಚಾಯಿತು. ಆದರೆ ಇದಕ್ಕೆ ಕೇಂದ್ರ ಸರ್ಕಾರವನ್ನು ಹೊಣೆ ಮಾಡಲು ಆಗದು. ಸಣ್ಣ ಕೈಗಾರಿಕೆಗಳ ಬಗ್ಗೆ ಸರ್ಕಾರ ಸಮೀಕ್ಷೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.