ಚಿನ್ನದ ದರ ಹೆಚ್ಚಿದರೂ ಆಭರಣ ಉದ್ದಿಮೆ ನಷ್ಟದಲ್ಲಿ!
ಚಿನ್ನದ ದರ ಹೆಚ್ಚಿದರೂ ಆಭರಣ ಉದ್ದಿಮೆ ನಷ್ಟದಲ್ಲಿ!| ಚಿನ್ನ ಕೊಳ್ಳೋರೇ ಇಲ್ಲ: ಕಳೆದ ವರ್ಷದ ಅರ್ಧಕ್ಕೆ ಖರೀದಿ ಇಳಿಕೆ
ಮುಂಬೈ(ಆ.17): ಸಾಮಾನ್ಯವಾಗಿ ಚಿನ್ನದ ದರ ಏರಿದಾಗಲೆಲ್ಲ ಖುಷಿಪಡುತ್ತಿದ್ದ ಚಿನ್ನಾಭರಣ ವ್ಯಾಪಾರಿಗಳು ಕೆಲ ತಿಂಗಳಿನಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದರೂ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಕಾರಣ, ಲಾಕ್‌ಡೌನ್ ಹಾಗೂ ಆರ್ಥಿಕ ಹಿಂಜರಿಕೆಯಿಂದಾಗಿ ಚಿನ್ನಕ್ಕೆ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ತಗ್ಗಿದೆ.
ದೇಶದ ಅತ್ಯಂತ ಪ್ರತಿಷ್ಠಿತ ಚಿನ್ನಾಭರಣ ಮಾರುಕಟ್ಟೆಯಾದ ಮುಂಬೈನ ಜವೇರಿ ಬಜಾರ್‌ನಲ್ಲಿ ಇನ್ನೂ ಅನೇಕ ಚಿನ್ನಾಭರಣ ಅಂಗಡಿಗಳು ಲಾಕ್‌ಡೌನ್ ನಂತರ ತೆರೆದೇ ಇಲ್ಲ. ಚಿನ್ನಾಭರಣ ತಯಾರಿಸುವ ಕುಶಲಕರ್ಮಿಗಳು ಕೂಡ ಹಳ್ಳಿಗಳಿಗೆ ವಲಸೆ ಹೋಗಿದ್ದಾರೆ. ತೆರೆದಿರುವ ಅಂಗಡಿಗಳಿಗೂ ಗ್ರಾಹಕರು ಬಹಳ ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕಳೆದ 40-50 ವರ್ಷಗಳಿಂದ ಇಷ್ಟುನೀರಸ ಹಾಗೂ ನಷ್ಟದ ವ್ಯಾಪಾರವನ್ನು ನಾವು ನೋಡಿಲ್ಲ ಎಂದು ಚಿನ್ನಾಭರಣ ವ್ಯಾಪಾರಿಗಳು ಹೇಳುತ್ತಿದ್ದಾರೆ.
ದೇಗುಲದಲ್ಲಿ ಅಪಾರ ಚಿನ್ನಾಭರಣ ಕದ್ದೋಡಿದ ಕಳ್ಳರು
ಲಾಕ್‌ಡೌನ್‌ನಿಂದಾಗಿ ಅನೇಕರು ಆರ್ಥಿಕ ನಷ್ಟಅನುಭವಿಸಿ ತಮ್ಮಲ್ಲಿರುವ ಚಿನ್ನವನ್ನೇ ಅಡ ಇಡುತ್ತಿದ್ದಾರೆ. ಇನ್ನು ಅನೇಕರು ಚಿನ್ನದ ಬೆಲೆ ದುಬಾರಿಯಾಗಿರುವುದರಿಂದ ಮತ್ತು ಕೈಯಲ್ಲಿ ಸಾಕಷ್ಟುಹಣವಿಲ್ಲದೆ ಇರುವುದರಿಂದ ಮದುವೆ ಮತ್ತು ಶುಭ ಸಮಾರಂಭಗಳಿಗೆ ಚಿನ್ನ ಕೊಳ್ಳುವುದನ್ನು ಕಡಿಮೆ ಮಾಡುತ್ತಿದ್ದಾರೆ. ಇದೇ ವೇಳೆ, ಕೊರೋನಾ ವೈರಸ್ ಭೀತಿಯಿಂದ ಜನರು ಚಿನ್ನಾಭರಣ ಮಳಿಗೆಗಳಿಗೆ ಬರುವುದು ಕೂಡ ಕಡಿಮೆಯಾಗುತ್ತಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವ ಹೊಸ ತಲೆಮಾರಿನವರು ಹೆಚ್ಚಾಗಿ ಭೌತಿಕ ಚಿನ್ನ ಕೊಳ್ಳದೆ ಡಿಜಿಟಲ್ ಚಿನ್ನ ಕೊಳ್ಳುತ್ತಿದ್ದಾರೆ. ಇವೆಲ್ಲಾ ಕಾರಣಗಳಿಂದಾಗಿ ಚಿನ್ನಕ್ಕೆ ಬೇಡಿಕೆಯಿಲ್ಲದಂತಾಗಿದೆ.
ಮೃತ ಮಹಿಳೆ ಮೇಲಿನ ಬಂಗಾರವನ್ನೂ ಬಿಡಲಿಲ್ಲ ಆಸ್ಪತ್ರೆ!
ಮೂಲಗಳ ಪ್ರಕಾರ ಕಳೆದ ವರ್ಷದ ಮೊದಲಾರ್ಧದಲ್ಲಿ ನಡೆದ ಚಿನ್ನದ ವ್ಯಾಪಾರದ ಅರ್ಧದಷ್ಟುಮಾತ್ರ ಈ ವರ್ಷದ ಮೊದಲ ಆರು ತಿಂಗಳಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನು, ಚಿನ್ನದ ಬೆಲೆ ಕಳೆದ ವರ್ಷಕ್ಕಿಂತ ಶೇ.30ರಷ್ಟುಏರಿಕೆಯಾಗಿರುವುದರಿಂದ ತಮ್ಮಲ್ಲಿರುವ ಚಿನ್ನವನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಅದೇ ವೇಳೆ, ಆಕರ್ಷಕ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಸಾಲ ಸಿಗುತ್ತಿರುವುದರಿಂದ ಜನರು ಚಿನ್ನ ಅಡ ಇರಿಸಿ ಸಾಲ ಕೊಳ್ಳುವುದು ಹೆಚ್ಚುತ್ತಿದೆ. ಒಟ್ಟಾರೆ ಈ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ.76ರಷ್ಟುಕುಸಿದಿದೆ. ಇದು 2008ರ ಆರ್ಥಿಕ ಹಿಂಜರಿತದ ನಂತರ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದ ಬೇಡಿಕೆಯಾಗಿದೆ.