ಹೊಸ ತೆರಿಗೆ ವ್ಯವಸ್ಥೆಯಲ್ಲಿ ವಾರ್ಷಿಕ 7.27ಲಕ್ಷ ರೂ. ತನಕದ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ: ನಿರ್ಮಲಾ ಸೀತಾರಾಮನ್
2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಹೊಸ ಆದಾಯ ತೆರಿಗೆ ವ್ಯವಸ್ಥೆ ಅಡಿಯಲ್ಲಿ 7ಲಕ್ಷ ರೂ. ತನಕ ವಾರ್ಷಿಕ ಆದಾಯ ಹೊಂದಿರೋರಿಗೆ ಆದಾಯ ತೆರಿಗೆ ರಿಯಾಯ್ತಿ ನೀಡಲಾಗಿತ್ತು. ಆದರೆ, ಈಗ ಈ ಮಿತಿಯನ್ನು 7.27ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅಲ್ಲದೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ 50,000ರೂ. ತನಕ ತೆರಿಗೆ ಕಡಿತದ ಪ್ರಯೋಜನವನ್ನು ಕೂಡ ಪರಿಚಯಿಸಿರುವ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.
ಉಡುಪಿ (ಜು.15): ವಾರ್ಷಿಕ 7.27ಲಕ್ಷ ರೂ. ಗಳಿಕೆ ಹೊಂದಿರೋರಿಗೆ ಆದಾಯ ತೆರಿಗೆ ವಿನಾಯ್ತಿ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯಮ ವರ್ಗದ ಜನರಿಗೆ ಅನೇಕ ತೆರಿಗೆ ಪ್ರಯೋಜನಗಳನ್ನು ಒದಗಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಉಡುಪಿಯಲ್ಲಿ ಮಾಹಿತಿ ನೀಡಿದ್ದಾರೆ. ಸರ್ಕಾರ ಸಮಾಜದ ಯಾವುದೇ ವರ್ಗವನ್ನು ಕೂಡ ಬಿಟ್ಟಿಲ್ಲ. 2023-24ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ 7ಲಕ್ಷ ರೂ. ತನಕ ವಾರ್ಷಿಕ ಆದಾಯ ಹೊಂದಿರೋರಿಗೆ ಆದಾಯ ತೆರಿಗೆ ವಿನಾಯ್ತಿ ನೀಡಲು ನಿರ್ಧರಿಸಿದ ಬಳಿಕ ಕೆಲವೊಂದು ವಿಚಾರಗಳಲ್ಲಿ ಅನಿಶ್ಚಿತತೆ ಕಾಡಿತ್ತು. ಅದರಲ್ಲಿ ಮುಖ್ಯವಾದದ್ದು 7ಲಕ್ಷ ರೂ.ಗಿಂತ ಸ್ವಲ್ಪ ಅಧಿಕ ಆದಾಯ ಹೊಂದಿರೋರು ಏನು ಮಾಡ್ಬೇಕು ಎಂಬುದು. ಈ ಹಿನ್ನೆಲೆಯಲ್ಲಿ ನಾವು ಒಂದು ತಂಡವಾಗಿ ಕುಳಿತು ಚರ್ಚಿಸಿ, ಹೊಸ ತರಿಗೆ ವ್ಯವಸ್ಥೆಯಲ್ಲಿ ತೆರಿಗೆ ವಿನಾಯ್ತಿ ಮಿತಿಯನ್ನು 7ಲಕ್ಷ ರೂ.ನಿಂದ 7.27ಲಕ್ಷ ರೂ.ಗೆ ಏರಿಕೆ ಮಾಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅಂದರೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಹೆಚ್ಚುವರಿ 27 ಸಾವಿರ ರೂ. ವಿನಾಯ್ತಿ ನೀಡಲಾಗಿದೆ. ಅಲ್ಲದೆ, ಹೊಸ ತೆರಿಗೆ ವ್ಯವಸ್ಥೆಯಲ್ಲಿ 50,000ರೂ. ತನಕ ತೆರಿಗೆ ಕಡಿತದ ಪ್ರಯೋಜನವನ್ನು (ಸ್ಟ್ಯಾಂಡರ್ಡ್ ಡಿಡಕ್ಷನ್ ) ಕೂಡ ಪರಿಚಯಿಸಲಾಗಿದೆ ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ.
ಹೊಸ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ತೆರಿಗೆ ಕಡಿತಗಳನ್ನು ನೀಡಿಲ್ಲ ಎಂಬ ಬಗ್ಗೆ ಸಾಕಷ್ಟು ದೂರುಗಳಿದ್ದವು. ಈ ಹಿನ್ನೆಲೆಯಲ್ಲಿ 50,000ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ನೀಡಲಾಗಿದೆ. ಹಾಗೆಯೇ ತೆರಿಗೆ ಪಾವತಿ ಹಾಗೂ ಕ್ಲಿಷ್ಟಕರವಾದ ಭಾಗಗಳನ್ನು ಸರಳೀಕರಿಸಿರೋದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಿದ ಅವರು, ಕಿರು, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೆ (MSME) ಮೀಸಲಿಟ್ಟಿರುವ ಒಟ್ಟು ಬಜೆಟ್ 2013-14ನೇ ಸಾಲಿನಲ್ಲಿ 3,185 ಕೋಟಿ ರೂ. ಇದ್ದು, 2023-24ನೇ ಸಾಲಿನಲ್ಲಿ 22,138 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ಅಂದರೆ 9 ವರ್ಷಗಳಲ್ಲಿ ಬಜೆಟ್ ಮೀಸಲು ಮೊತ್ತದಲ್ಲಿ ಸುಮಾರು ಏಳು ಪಟ್ಟು ಹೆಚ್ಚಳ ಮಾಡಲಾಗಿದೆ. ಇದು ಎಂಎಸ್ ಎಂಇ ವಲಯವನ್ನು ಸಶಕ್ತಗೊಳಿಸಲು ಸರ್ಕಾರಕ್ಕಿರುವ ಬದ್ಧತೆಯನ್ನು ತೋರಿಸುತ್ತದೆ ಎಂದು ಹಣಕಾಸು ಸಚಿವೆ ಅಭಿಪ್ರಾಯ ಪಟ್ಟರು.
ಕಿರು ಹಾಗೂ ಸಣ್ಣ ಉದ್ಯಮಗಳಿಗೆ ಸಾರ್ವಜನಿಕ ಸಂಗ್ರಹಣೆ ನೀತಿ ಅಡಿಯಲ್ಲಿ ಒಟ್ಟು ಸಂಗ್ರಹಣೆಯ ಶೇ.33ರಷ್ಟನ್ನು 158 ಕೇಂದ್ರೀಯ ಸಾರ್ವಜನಿಕ ವಲಯದ ಉದ್ಯಮಿಗಳು ಮಾಡಿದ್ದು, ಇವು ಎಂಎಸ್ ಎಂಇ ಉದ್ಯಮಗಳಾಗಿವೆ. ಇದು ಇಲ್ಲಿಯ ತನಕದ ಅತ್ಯಧಿಕ ಸಂಗ್ರಹಣೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇನ್ನುಎಂಎಸ್ ಎಂಇ ಹಾಗೂ ಇತರ ಸಂಸ್ಥೆಗಳು ಖರೀದಿದಾರರು ಪಾವತಿ ಮಾಡದ ಹಿನ್ನೆಲೆಯಲ್ಲಿ ಯಾವುದೇ ಹಣಕಾಸಿನ ಸಮಸ್ಯೆ ಎದುರಿಸಬಾರದು ಎಂಬ ಕಾರಣಕ್ಕೆ ಸರ್ಕಾರ TReDS ಪ್ಲಾಟ್ ರ್ಫಾರ್ಮ್ ಪರಿಚಯಿಸಿದೆ ಎಂದು ಹೇಳಿದರು. ಇನ್ನು ONDC (ಒಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್) ಎಂಎಸ್ ಎಂಇ ಉದ್ಯಮಗಳು ದೊಡ್ಡ ಪ್ರಮಾಣದ ಗ್ರಾಹಕರನ್ನು ತಲುಪಲು ನೆರವು ನೀಡಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
GST Council Meeting: ಕ್ಯಾನ್ಸರ್ ಮೆಡಿಸಿನ್‌ಗೆ ವಿನಾಯಿತಿ, ಸಿನಿಮಾ ಹಾಲ್‌ಗಳಲ್ಲಿ ಆಹಾರದ ಮೇಲಿನ ತೆರಿಗೆ ಕಡಿತ
ಶುಕ್ರವಾರ ಉಡುಪಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಣಕಾಸು ಸಚಿವೆ ಈ ಎಲ್ಲ ಮಾಹಿತಿ ನೀಡಿದ್ದಾರೆ. ಉಡುಪಿಯ ಅದಮಾರು ಮಠ ಹಾಗೂ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಿರ್ಮಲಾ ಸೀತಾರಾಮನ್ , ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಜೆಮ್ಸ್ ಹಾಗೂ ಜ್ಯುವೆಲ್ಲರಿ (IIGJ) ಕಾಮನ್ ಫೆಸಿಲಿಟಿ ಕೇಂದ್ರವನ್ನು ಕೂಡ ಉದ್ಘಾಟಿಸಿದರು.