ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುವಾಗ ಅವರ ಸೀರೆ ಕೂಡ ಗಮನಸೆಳೆಯುತ್ತದೆ. ದೇಶದ ಸಂಸ್ಕೃತಿಯನ್ನು ಸಾರುವ ಕಲಾವಿದರಿಗೆ ಗೌರವ ನೀಡುವ ಸೀರೆಯನ್ನು ಅವರು ಈ ಸಮಯದಲ್ಲಿ ಧರಿಸುತ್ತಾರೆ.
ನವದೆಹಲಿ (ಫೆ.1): ಕೇಂದ್ರ ಬಜೆಟ್ ದಿನ ನಿರ್ಮಲಾ ಸೀತಾರಾಮನ್ ಧರಿಸುವ ಸೀರೆ ಕಳೆದ ಏಳು ವರ್ಷಗಳಿಂದಲೂ ಗಮನ ಸೆಳೆದಿದೆ.ವಿಶಿಷ್ಟವಾದ ಕಸೂತಿಯೊಂದಿಗೆ ಅವರು ಧರಿಸಿದ ವಿಭಿನ್ನ ಬಣ್ಣದ ಸೀರೆಗಳು ವಿಭಿನ್ನ ಕಥೆಯನ್ನು ಹೇಳುತ್ತವೆ. ಈ ವರ್ಷ ನಿರ್ಮಲಾ ಸೀತಾರಾಮನ್ ಅವರ ದಾಖಲೆಯ 8ನೇ ಬಜೆಟ್ ಇದಾಗಿದೆ. ಈ ಬಾರಿ ಅವರು ಮೀನಿನ ಥೀಮ್‌ನ ಕಸೂತಿ, ಚಿನ್ನದ ಅಂಚು ಹೊಂದಿರುವ ಕೆನೆ ಬಣ್ಣದ ಕೈಮಗ್ಗದ ರೇಷ್ಮೆ ಸೀರೆಯನ್ನು ಧರಿಸಿ ಬಜೆಟ್ ಮಂಡಿಸಲಿದ್ದಾರೆ. ದೇಶದ ಅತ್ಯಂತ ಪ್ರಖ್ಯಾತ ಮಧುಬನಿ ಕಲೆಗೆ ನೀಡುವ ಗೌರವಾರ್ಥ ಅವರು ಈ ಸೀರೆ ಧರಿಸಿ ದೇಶದ ಅಯವ್ಯಯ ಮಂಡನೆ ಮಾಡಲಿದ್ದಾರೆ. ಈ ಸೀರೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ ನೀಡಿದ್ದರು.
ಮಧುಬನಿ ಕಲೆ ಬಿಹಾರದ ಮಿಥಿಲಾ ಪ್ರದೇಶದ ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರವಾಗಿದೆ. ಇದು ತನ್ನ ಆಕರ್ಷಕ ಬಣ್ಣಗಳು ಮತ್ತು ಸಾಂಕೇತಿಕ ಪ್ರಾತಿನಿಧ್ಯಗಳಿಗೆ ಹೆಸರುವಾಸಿಯಾಗಿದೆ. ದುಲಾರಿ ದೇವಿ ತಮಗೆ ಕೆಲಸ ನೀಡಿದ್ದ ಕರ್ಪೂರಿ ದೇವಿ ಅವರಿಂದ ಕಲಾ ಪ್ರಕಾರವನ್ನು ಆರಿಸಿಕೊಂಡರು. ಕರ್ಪೂರಿ ದೇವಿ ಶ್ರೇಷ್ಠ ವರ್ಣಚಿತ್ರಗಾರ್ತಿಯಾಗಿದ್ದವು. ಅವರ ಅಡಿಯಲ್ಲಿ ಕೆಲಸ ಮಾಡಿದ್ದ ದುಲಾರಿ ದೇವಿ, ಜೀವನದಲ್ಲಿ ಕಠಿಣ ಸವಾಲುಗಳನ್ನು ಎದುರಿಸಿದ್ದರು. ಬಾಲ್ಯವಿವಾಹ, ಏಡ್ಸ್ ಮತ್ತು ಭ್ರೂಣಹತ್ಯೆಯಂತಹ ವಿಷಯಗಳ ಬಗ್ಗೆ ತಮ್ಮ ವರ್ಣಚಿತ್ರಗಳ ಮೂಲಕ ಜಾಗೃತಿ ಮೂಡಿಸಿದ್ದರು. ಶ್ರೀಮತಿ ದೇವಿ ಕನಿಷ್ಠ 10,000 ವರ್ಣಚಿತ್ರಗಳನ್ನು ರಚಿಸಿದ್ದಾರೆ, ಇವು 50 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಪ್ರದರ್ಶಿಸಲ್ಪಟ್ಟಿವೆ.
ಮಿಥಿಲಾ ಕಲಾ ಸಂಸ್ಥಾನದಲ್ಲಿ ಕ್ರೆಡಿಟ್ ಔಟ್ರೀಚ್ ಕಾರ್ಯಕ್ರಮವೊಂದಕ್ಕಾಗಿ ಹಣಕಾಸು ಸಚಿವರು ಮಧುಬನಿಗೆ ಭೇಟಿ ನೀಡಿದ್ದಾಗ, ಅವರು ದುಲಾರಿ ದೇವಿ ಅವರನ್ನು ಭೇಟಿಯಾಗಿದ್ದರು. ಬಿಹಾರದಲ್ಲಿ ಮಧುಬನಿ ಕಲೆಯ ಕುರಿತು ಅವರೊಂದಿಗೆ ಚರ್ಚೆ ಮಾಡಿದ್ದರು. ಆ ಸಂದರ್ಭದಲ್ಲಿ ದುಲಾರಿ ದೇವಿ ಅವರು ಹಣಕಾಸು ಸಚಿವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಲ್ಲದ, ಸಾಧ್ಯವಾದಲ್ಲಿ ಬಜೆಟ್ ದಿನದಂದು ಧರಿಸುವಂತೆ ಅವರಿಗೆ ಮನವಿ ಮಾಡಿದ್ದರು.
ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ತೆರಳುವ ಮುನ್ನ ತಮ್ಮ ಅಧಿಕಾರಿಗಳ ತಂಡದೊಂದಿಗೆ ನಾರ್ತ್ ಬ್ಲಾಕ್ ಕಚೇರಿಯ ಹೊರತೆ ಸಾಂಪ್ರದಾಯಿಕ ಸೀರೆಯುಟ್ಟು ಬ್ರೀಫ್‌ಕೇಸ್ ಫೋಟೋಗೆ ಪೋಸ್ ನೀಡಿದರು.
ಹಲವು ವರ್ಷಗಳಿಂದ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ದಿನದ ಉಡುಗೆ ತೊಡುಗೆಗಳು: 2019 ರಲ್ಲಿ ತಮ್ಮ ಮೊದಲ ಬಜೆಟ್ ಮಂಡನೆಗಾಗಿ, ಸೀತಾರಾಮನ್ ಅವರು ಚಿನ್ನದ ಅಂಚು ಹೊಂದಿದ್ದ ಸರಳವಾದ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯನ್ನು ಧರಿಸಿದ್ದರು. ಬಜೆಟ್ ದಾಖಲೆಗಳನ್ನು ಸಾಗಿಸಲು ದಶಕಗಳಿಂದ ಬಳಕೆಯಲ್ಲಿದ್ದ ಲೆದರ್ ಬ್ರೀಫ್‌ಕೇಸ್ ಅನ್ನು ಕೆಂಪು ಬಟ್ಟೆಯಲ್ಲಿ ಸುತ್ತಿದ ಸಾಂಪ್ರದಾಯಿಕ 'ಬಹಿ-ಖಾತಾ'ದೊಂದಿಗೆ ಬದಲಾಯಿಸಿದ್ದರು.
2020 ರಲ್ಲಿ, ಅವರು ಬಜೆಟ್ ಮಂಡಿಸಲು ಹಳದಿ-ಚಿನ್ನದ ರೇಷ್ಮೆ ಸೀರೆಯನ್ನು ಆರಿಸಿಕೊಂಡರು. ಅದಾದ ಒಂದು ವರ್ಷದ ನಂತರ, ಸಚಿವರು ಇಕಾಟ್ ಮಾದರಿಗಳು ಮತ್ತು ಹಸಿರು ಅಂಚನ್ನು ಹೊಂದಿದ್ದ ಕೆಂಪು ಮತ್ತು ಮಾಸಲು ಬಿಳಿ ರೇಷ್ಮೆ ಪೋಚಂಪಳ್ಳಿ ಸೀರೆಯನ್ನು ಧರಿಸಿ ಬಜೆಟ್ ಮಂಡಿಸಿದರು. ಪೋಚಂಪಳ್ಳಿ ಇಕಾಟ್ ಅನ್ನು ಸಾಂಪ್ರದಾಯಿಕವಾಗಿ ತೆಲಂಗಾಣದಲ್ಲಿ ತಯಾರಿಸಲಾಗುತ್ತದೆ. 2022 ರಲ್ಲಿ, ಹಣಕಾಸು ಸಚಿವರು ಮಾಸಲು ಬಿಳಿ ಗಡಿ ವಿವರಗಳನ್ನು ಹೊಂದಿರುವ ತುಕ್ಕು ಕಂದು ಬಣ್ಣದ ಬೊಮ್ಕೈ ಸೀರೆಯನ್ನು ಆರಿಸಿಕೊಂಡಿದ್ದರು.
Union Budget 2025 Live Updates: ಬಜೆಟ್ ಮಂಡಿಸಲು ಸಂಸತ್ತಿಗೆ ತೆರಳಿದ ನಿರ್ಮಲಾ ಸೀತರಾಮನ್
2023 ರಲ್ಲಿ ಕೇಂದ್ರ ಬಜೆಟ್ ಮಂಡಿಸುವಾಗ ಸೀತಾರಾಮನ್ ಅವರು ಕಸೂತಿ ದಾರದಿಂದ ಮಾಡಿದ ಕೆಂಪು ಮತ್ತು ಕಪ್ಪು ಬಣ್ಣದ ಟೆಂಪಲ್ ಬಾರ್ಡರ್ ಸೀರೆಯನ್ನು ಧರಿಸಿದ್ದರು. ಕಳೆದ ವರ್ಷ, ಅವರು ಕಾಂತ ಕರಕುಶಲತೆಯೊಂದಿಗೆ ನೀಲಿ ಟಸ್ಸರ್ ರೇಷ್ಮೆ ಸೀರೆಯನ್ನು ಧರಿಸಿದ್ದರು. ಟಸ್ಸರ್ ರೇಷ್ಮೆ ತನ್ನ ವಿಶಿಷ್ಟ ವಿನ್ಯಾಸ ಮತ್ತು ಚಿನ್ನದ ಹೊಳಪಿಗೆ ಹೆಸರುವಾಸಿಯಾಗಿದೆ.
Union Budget 2025: ಕೇಂದ್ರ ಬಜೆಟ್ ದಿನ 10 ಗ್ರಾಮ್ ಚಿನ್ನದ ಬೆಲೆ 82310 ರೂಪಾಯಿ!
ನಿರ್ಮಲಾ ಸೀತಾರಾಮನ್ ಅವರ ಸತತ 8 ನೇ ಬಜೆಟ್: ಸೀತಾರಾಮನ್ ಇಂದು ಬೆಳಿಗ್ಗೆ 11 ಗಂಟೆಗೆ ತಮ್ಮ ಸತತ ಎಂಟನೇ ಬಜೆಟ್ ಮಂಡಿಸುತ್ತಿದ್ದಾರೆ. ದಿವಂಗತ ಮೊರಾರ್ಜಿ ದೇಸಾಯಿ ಅವರು ಗರಿಷ್ಠ ಸಂಖ್ಯೆಯ ಬಜೆಟ್ ಭಾಷಣಗಳನ್ನು (10) ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಆದರೆ ಇವು ಸತತವಾಗಿರಲಿಲ್ಲ. ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಒಂಬತ್ತು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಹಣಕಾಸು ಸಚಿವರ ಬಜೆಟ್ ಭಾಷಣವು ಸರ್ಕಾರದ ಹಣಕಾಸು ನೀತಿಗಳು, ಆದಾಯ ಮತ್ತು ವೆಚ್ಚದ ಪ್ರಸ್ತಾವನೆಗಳು, ತೆರಿಗೆ ಸುಧಾರಣೆಗಳು ಮತ್ತು ಇತರ ಮಹತ್ವದ ಘೋಷಣೆಗಳನ್ನು ವಿವರಿಸುತ್ತದೆ.
