FD interest rate : ಅಕ್ಟೋಬರ್‌ ಒಂದು ಬರ್ತಿದ್ದಂತೆ ಕೆಲ ನಿಯಮಗಳಲ್ಲಿ ಬದಲಾವಣೆಯಾಗಿದೆ. ಬ್ಯಾಂಕ್‌ ಎಫ್‌ ಡಿಯಲ್ಲೂ ಬದಲಾವಣೆಯಾಗಿದೆ. ಇದು ಯಾರ ಮೇಲೆ ಪರಿಣಾಮ ಬೀರಲಿದೆ ಎಂಬ ಮಾಹಿತಿ ಇಲ್ಲಿದೆ.

ಬ್ಯಾಂಕಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಅಂದರೆ FD ಹೊಂದಿರುವವರು ಎಫ್‌ ಡಿ ಹೊಸ ನಿಯಮಕ್ಕೆ ಸಂಬಂಧಿಸಿದಂತೆ ಭಯಪಡ್ಬೇಕಾಗಿಲ್ಲ. ಎಲ್ಲ ಎಫ್‌ ಡಿಗಳಿಗೂ ಹೊಸ ಬಡ್ಡಿ ದರದ ನಿಯಮ ಅನ್ವಯ ಆಗ್ತಿಲ್ಲ. 3 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಎಫ್ ಡಿ ಮಾಡುವ ಅಥವಾ ರಿನ್ಯೂ ಮಾಡುವ ಗ್ರಾಹಕರಿಗೆ ಈ ಬದಲಾವಣೆ ಅನ್ವಯವಾಗಲಿದೆ.

ಎಫ್‌ ಡಿ ಬಡ್ಡಿ ದರದಲ್ಲಿ ಬದಲಾವಣೆ ಯಾರಿಗೆ?

ಹೊಸ ನಿಯಮದ ಪ್ರಕಾರ ನಿಮ್ಮ ಎಫ್‌ ಡಿ 3 ಕೋಟಿಗಿಂತ ಕಡಿಮೆ ಇದ್ದರೆ, ಅಕ್ಟೋಬರ್ 1ರಿಂದ ನಿಮ್ಮ ಬಡ್ಡಿದರ ಇದ್ದಕ್ಕಿದ್ದಂತೆ ಬದಲಾಗುವುದಿಲ್ಲ. ಈಗಾಗಲೇ ಮಾಡಿರುವ ಎಫ್‌ ಡಿ ಕೂಡ ಅದೇ ಬಡ್ಡಿದರ ಮತ್ತು ಷರತ್ತುಗಳ ಪ್ರಕಾರ ಮುಂದುವರಿಯುತ್ತದೆ. 3 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಎಫ್‌ ಡಿಗೆ ಮಾತ್ರ ಬದಲಾವಣೆ ಆಗಿದ್ದು, ಇಂತಹ ಎಫ್‌ ಡಿಗಳನ್ನು ಬಲ್ಕ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತದೆ. ಇವುಗಳಿಗೆ ಬ್ಯಾಂಕ್ಗಳು ನೀಡುವ ಬಡ್ಡಿದರವನ್ನು ತಮ್ಮ ವೆಬ್ಸೈಟ್ನಲ್ಲಿ ಸ್ಪಷ್ಟವಾಗಿ ಪ್ರಕಟಿಸಬೇಕು.

ಪ್ರತಿ ಕೆಲಸದ ದಿನ ಬೆಳಗ್ಗೆ 10 ಗಂಟೆಯೊಳಗೆ ಬಲ್ಕ್ ಡೆಪಾಸಿಟ್ನ ಬಡ್ಡಿದರವನ್ನು ವೆಬ್ಸೈಟ್ನಲ್ಲಿ ಹಾಕಬೇಕು. ಇದ್ರಿಂದ ದೊಡ್ಡ ಮೊತ್ತದ ಎಫ್‌ ಡಿ ಮಾಡುವವರು ಅಥವಾ ಹಳೆಯ ಎಫ್‌ ಡಿಯನ್ನು ರಿನ್ಯೂ ಮಾಡುವವರು ಮೊದಲೇ ಬಡ್ಡಿದರ ಎಷ್ಟಿದೆ ಅಂತ ತಿಳಿದುಕೊಳ್ಳಬಹುದು.

ಇನ್ನೊಂದು ಪ್ರಮುಖ ಬದಲಾವಣೆ ಏನೆಂದರೆ, ಬ್ಯಾಂಕ್ ಮೊದಲೇ ಪ್ರಕಟಿಸಿರುವ ಬಡ್ಡಿದರವನ್ನೇ ಆ ಎಫ್‌ ಡಿಗೆ ಅನ್ವಯಿಸಬೇಕು. ಒಂದೇ ಬ್ಯಾಂಕ್ನಲ್ಲಿ ಒಂದೇ ದಿನ ಮಾಡಲಾಗುವ ಸಮಾನ ಬಲ್ಕ್ ಡೆಪಾಸಿಟ್ಗಳಿಗೆ ಒಂದೇ ಬಡ್ಡಿದರ ಇರಬೇಕು. ಬೇರೆ ಶಾಖೆಯಲ್ಲಿ ಎಫ್‌ ಡಿ ಮಾಡಿದ್ದೀರಿ ಅಥವಾ ಬೇರೆ ಬ್ಯಾಂಕಿಂಗ್ ಮಾಧ್ಯಮ ಬಳಸಿದ್ದೀರಿ ಎನ್ನುವ ಕಾರಣಕ್ಕೆ ಬಡ್ಡಿದರ ಬದಲಾಗಬಾರದು.

ಇನ್ನು ಈಗಾಗಲೇ ಎಫ್‌ ಡಿ ಮಾಡಿಟ್ಟುಕೊಂಡಿರುವವರಿಗೆ ಈ ನಿಯಮದಿಂದ ತಕ್ಷಣ ಯಾವುದೇ ಬದಲಾವಣೆ ಇಲ್ಲ. ಉದಾಹರಣೆಗೆ ನಿಮ್ಮ ಬಳಿ 5 ಲಕ್ಷ, 10 ಲಕ್ಷ, 50 ಲಕ್ಷ ಅಥವಾ 2 ಕೋಟಿಯ ಎಫ್‌ ಡಿ ಇದ್ದರೆ, ಅಕ್ಟೋಬರ್ 1ರಂದು ಈ ನಿಯಮದ ಕಾರಣಕ್ಕೆ ನಿಮ್ಮ ಬಡ್ಡಿದರ ಬದಲಾಗುವುದಿಲ್ಲ.

ದೊಡ್ಡ ಮೊತ್ತದ ಎಫ್‌ ಡಿ ಮಾಡುವಾಗ ಬಡ್ಡಿದರದ ಬಗ್ಗೆ ಗ್ರಾಹಕರಿಗೆ ಮೊದಲೇ ಸ್ಪಷ್ಟ ಮಾಹಿತಿ ಸಿಗಬೇಕು ಅನ್ನೋ ಉದ್ದೇಶದಿಂದ ಆರ್ ಬಿಐ (RBI) ಈ ಬದಲಾವಣೆ ಮಾಡಿದೆ. ಆರ್‌ ಬಿಐ ಜುಲೈ 30, 2026ರಂದು ಪರಿಷ್ಕೃತ ನಿಯಮಗಳನ್ನು ಪ್ರಕಟಿಸಿದ್ದು, ಅಕ್ಟೋಬರ್ 1ರಿಂದ ಇದು ಜಾರಿಗೆ ಬಂದಿದೆ.