ಇತ್ತೀಚೆಗೆ ವೈರಲ್‌ ಆಗಿರುವ ಆಡಿಯೋ ಕ್ಲಿಪ್‌ನಲ್ಲಿ, ರೇಮಂಡ್ ಗ್ರೂಪ್ ಅಧ್ಯಕ್ಷ ಗೌತಮ್ ಸಿಂಘಾನಿಯಾ ಮೇಲೆ ಪತ್ನಿ ನವಾಜ್‌ ಮೋದಿ ಮತ್ತೊಂದು ಆರೋಪ ಮಾಡಿದ್ದು, ನೀರು ಆಹಾರವಿಲ್ಲದೆ, ತಿರುಪತಿ ಬೆಟ್ಟದ ಮೆಟ್ಟಿಲು ಹತ್ತುವಂತೆ ನನಗೆ ಫೋರ್ಸ್‌ ಮಾಡಿದ್ದರು ಎಂದಿದ್ದಾರೆ.

ನವದೆಹಲಿ (ನ.27): ರೇಮಂಡ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಮತ್ತು ಅವರ ಪತ್ನಿ ನವಾಜ್ ಮೋದಿ ನಡುವಿನ ವಿಚ್ಛೇದನ ಪ್ರಕ್ರಿಯೆಗಳ ನಡುವೆ, ಹೊಸ ಆಡಿಯೊ ಕ್ಲಿಪ್ ಹೊರಬಿದ್ದಿದ್ದು ಸಖತ್‌ ವೈರಲ್‌ ಆಗಿದೆ. ಈ ಆಡಿಯೋ ಕ್ಲಿಪ್‌ನಲ್ಲಿ ಗೌತಮ್‌ ಸಿಂಘಾನಿಯಾ, ಪತ್ನಿ ನವಾಜ್‌ ಮೋದಿಗೆ ಆಹಾರ, ನೀರು ಇಲ್ಲದೆ ತಿರುಪತಿ ದೇವಸ್ಥಾನದ ಬೆಟ್ಟದ ಮೆಟ್ಟಿಲುಗಳನ್ನು ಹತ್ತಿಸಿದ್ದರು ಎಂದು ಆರೋಪಿಸಲಾಗಿದೆ. ಈ ಆಡಿಯೋ ಕ್ಲಿಪ್‌ನಲ್ಲಿ ನವಾಜ್‌ ಮೋದಿ ಮಾತನಾಡಿದ್ದು, ಮದುವೆಗೂ ಮುನ್ನ ಗೌತಮ್‌ ಸಿಂಘಾನಿಯಾ ಹರಕೆ ಹೊತ್ತಿದ್ದರು. ಅದರಲ್ಲಿ ಹಾಗೇನಾದರೂ ನವಾಜ್‌ ಮೋದಿ ಮದುವೆಗೆ ಒಪ್ಪಿದಲ್ಲಿ ಆಕೆಯನ್ನು ಆಂಧ್ರಪ್ರದೇಶದ ತಿರುಮಲದಲ್ಲಿರುವ ತಿರುಪತಿ ದೇವಸ್ಥಾನಕ್ಕೆ ಮೆಟ್ಟಿಲುಗಳನ್ನು ಏರಿ ಹೋಗುವುದು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಅವರ ಹರಕೆ ತೀರಿಸುವ ಸಲುವಾಗಿ ಆ ಬಳಿಕ, ಪವಿತ್ರ ಬೆಟ್ಟದ ಮೆಟ್ಟಿಲುಗಳನ್ನು ನೀರು ಆಹಾರ ಇಲ್ಲದೆ ಏರುವಂತೆ ನನಗೆ ಒತ್ತಾಯ ಮಾಡಿದ್ದರು ಎಂದು ನವಾಜ್‌ ಮೋದಿ ಅರೋಪ ಮಾಡಿದ್ದಾರೆ.

ತಿರುಪತಿ ದೇವಸ್ಥಾನದ ಎಲ್ಲಾ ಮೆಟ್ಟಿಲಗಳನ್ನು ಏರುವಂತೆ ಆತ ಮಾಡಿದ್ದ. ನನಗೆ ಈಗಲೂ ಅಲ್ಲಿ ಎಷ್ಟು ಮೆಟ್ಟಿಲಿದೆ ಎನ್ನುವುದು ಗೊತ್ತಿಲ್ಲ. ಆದರೆ, ನೀರು, ಆಹಾರ, ಏನೇನೋ ಇಲ್ಲದೆ ನಾನು ಸಂಪೂರ್ಣ ಮೆಟ್ಟಿಲುಗಳನ್ನು ಏರಿದ್ದೆ. ಎರಡರಿಂದ ಮೂರು ಬಾರಿ ನಾನಿ ತಲೆಸುತ್ತಿ ಬೀಳುವಂತೆ ಅನಿಸಿತ್ತು. ಹಾಗಿದ್ದರೂ, ಆತ ನಾನು ಮೆಟ್ಟಿಲುಗಳನ್ನು ಹತ್ತುವಂತೆ ಒತ್ತಾಯ ಮಾಡಿದ್ದ' ಎಂದು ಆಡಿಯೋ ಕ್ಲಿಪ್‌ನಲ್ಲಿ ನವಾಜ್‌ ಮೋದಿ ಹೇಳಿದ್ದಾರೆ.

ನವಾಜ್ ಮೋದಿಯವರ ಆರೋಪಗಳು ತಿರುಪತಿ ದೇವಸ್ಥಾನ ಹಾಗೂ ವೆಂಕಟೇಶ್ವರನ ಭಕ್ತನಾಗಿರುವ ಸಿಂಘಾನಿಯಾ ಅವರ ಸಾರ್ವಜನಿಕ ವ್ಯಕ್ತಿತ್ವದ ಸಂಪೂರ್ಣ ವಿಭಿನ್ನ ಚಿತ್ರವನ್ನು ಚಿತ್ರಿಸುತ್ತವೆ. ತಿರುಪತಿ ದೇವಸ್ಥಾನದ ಭಕ್ತರಾಗಿರುವ ಸಿಂಘಾನಿಯಾ ಮುಂಬೈನಲ್ಲಿ ಹೊಸ ದೇವಾಲಯದ ನಿರ್ಮಾಣಕ್ಕಾಗಿ 100 ಕೋಟಿ ರೂಪಾಯಿ ದೇಣಿಗೆ ನೀಡಿದ್ದು ಮಾತ್ರವಲ್ಲದೆ, ಟಿಟಿಡಿ ಶಿಕ್ಷಣ ಸಂಸ್ಥೆಗಳೊಂದಿಗೆ ಅವರು ಮೊದಲಿನಿಂದಲೂ ತೊಡಗಿಕೊಂಡಿದ್ದಾರೆ. ದೇವರ ಮೇಲಿನ ಭಕ್ತಿಯ ಕಾರಣಕ್ಕೆ ಈ ರೀತಿ ಮಾಡಿದ್ದಾಗಿ ಸಿಂಘಾನಿಯಾ ಈ ಹಿಂದೆ ತಿಳಿಸಿದ್ದರು.

ಅಂಬಾನಿಗಿಂತಲೂ ಶ್ರೀಮಂತ ರೇಮಂಡ್ಸ್ ಒಡೆಯನನ್ನು ಹೊರದಬ್ಬಿದ ಮಗ, ಬಾಡಿಗೆ ಮನೆಯಲ್ಲಿದ್ದು ಈಗ ವಿಚ್ಛೇದಿತ ಸೊಸೆ ಪರ

ಆಡಿಯೋ ಕ್ಲಿಪ್‌ನಲ್ಲಿ, ನವಾಜ್ ಮೋದಿ ಅವರು ಸಿಂಘಾನಿಯಾ ಅವರ ದೈವ ಭಕ್ತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. 'ಭಗವಾನ್‌ ವೆಂಕಟೇಶ್ವರನ ಭಕ್ತನಾಗಿರುವುದಕ್ಕೆ ಕಾರಣವೂ ಇದೆ. ಬೇರೆ ಯಾವುದೇ ದೇವರು ಕೂಡಸ ವೆಂಕಟೇಶ್ವರನಷ್ಟು ಶ್ರೀಮಂತವಲ್ಲ. ಅದಕ್ಕಾಗಿಯೇ ಆತ ತಿರುಪತಿಗೆ ಭಕ್ತ' ಎಂದು ಆಕೆ ಆಡಿಯೋ ಕ್ಲಿಪ್‌ನಲ್ಲಿ ಹೇಳಿದ್ದಾರೆ.

ಮಗನಿಗೆ ಆಸ್ತಿ ಕೊಟ್ಟು ಕೆಟ್ಟೆ; ನಾನು ರಸ್ತೆಯಲ್ಲಿದ್ರೇನೆ ಅವನಿಗೆ ಖುಷಿ: ರೇಮಂಡ್ಸ್‌ ಸಂಸ್ಥಾಪಕ ಬೇಸರ

ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿರುವ ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ, ವೇಗದ ಕಾರುಗಳು ಮತ್ತು ವಿಹಾರ ನೌಕೆಗಳ ಮೇಲಿನ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದಾರೆ, ಅವರು ಪ್ರಸ್ತುತ ನವಾಜ್ ಮೋದಿ ಅವರೊಂದಿಗೆ ವಿವಾದಾತ್ಮಕ ವಿಚ್ಛೇದನದಲ್ಲಿ ಸಿಲುಕಿಕೊಂಡಿದ್ದಾರೆ. ಈ ವಿಚ್ಛೇದನ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಲೈಟ್‌ ಆಗಿದೆ. ವಿಶೇಷವಾಗಿ ಸಿಂಘಾನಿಯಾ ಅವರ ಅಂದಾಜು 11,658 ಕೋಟಿ ರೂ.ಗಳ ನಿವ್ವಳ ಮೌಲ್ಯದ ಶೇಕಡಾ 75 ರಷ್ಟು ಆಸ್ತಿನ್ನು ತಮಗೆ ನೀಡಬೇಕು ಎಂದು ನವಾಜ್‌ ಮೋದಿ ಬೇಡಿಕೆ ಇಟ್ಟ ಬಳಿಕ ಈ ವಿಚ್ಛೇದನ ದೊಡ್ಡ ಸುದ್ದಿ ಮಾಡಿದೆ.