Business Ideas: ಅವಲಕ್ಕಿ ಕುಟ್ಟಿ ಹಣದ ಕಟ್ಟು ಕಟ್ಟಿ!
ಬ್ಯುಸಿನೆಸ್ ಅಂದ್ಮೇಲೆ ಲಾಭ – ನಷ್ಟ ಸಾಮಾನ್ಯ. ಹಾಗಂತ ನಷ್ಟದ ಬ್ಯುಸಿನೆಸ್ ಮುಂದುವರೆಸೋದು ಕಷ್ಟ. ಸದಾ ಬೇಡಿಕೆಯಲ್ಲಿರುವ ವ್ಯಾಪಾರ ಶುರು ಮಾಡಿ ಹೆಚ್ಚಿನ ಆದಾಯ ಗಳಿಸ್ಬೇಕೆಂದ್ರೆ ಬುದ್ಧಿವಂತಿಕೆಯ ಆಯ್ಕೆ ಬೇಕು.
ಕಡಿಮೆ ಹೂಡಿಕೆ (Investment) ಯಲ್ಲಿ ಹೆಚ್ಚಿನ ಆದಾಯ (Income) ಬರುವ ವ್ಯವಹಾರ ಯಾರಿಗೆ ಬೇಡ ಹೇಳಿ ? ಸಾಮಾನ್ಯವಾಗಿ ವ್ಯಾಪಾರ (Business) ಶುರು ಮಾಡುವವರೆಲ್ಲ ಇದನ್ನೇ ಪ್ಲಾನ್ ಮಾಡ್ತಾರೆ. ಕಡಿಮೆ ಹೂಡಿಕೆ ಮಾಡಿ, ಹೆಚ್ಚು ಲಾಭಗಳಿಸುವ ವ್ಯಾಪಾರ ಯಾವುದು ಎಂಬ ಹುಡುಕಾಟವನ್ನು ನೀವೆಲ್ಲ ಮಾಡಿರಬಹುದು. ಸುಲಭವಾಗಿ ಮಾಡಬಹುದಾದ ವ್ಯಾಪಾರದ ಬಗ್ಗೆ ನಾವಿಂದು ಹೇಳ್ತೇವೆ. ಸ್ವಲ್ಪ ಹಣ ಹಾಕಿ ವ್ಯಾಪಾರ ಶುರು ಮಾಡ್ಬೇಕು ಎನ್ನುವವರು ಅವಲಕ್ಕಿ (poha) ಘಟಕವನ್ನು ಆರಂಭಿಸಬಹುದು. ಕಳೆದ ಕೆಲವು ವರ್ಷಗಳಿಂದ ಪೌಷ್ಟಿಕಾಂಶ (Nutrition) ದ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಹೆಚ್ಚಾಗಿದೆ. ಅವಲಕ್ಕಿಯನ್ನು ಪೌಷ್ಟಿಕಾಂಶದ ಆಹಾರವೆಂದು ಪರಿಗಣಿಸಲಾಗುತ್ತದೆ. ಇದು ತಯಾರಿಸುವುದು ಹಾಗೆ ಜೀರ್ಣಿಸಿಕೊಳ್ಳುವುದು ಎರಡೂ ಸುಲಭ. ಅವಲಕ್ಕಿ ಹೆಚ್ಚು ಜನಪ್ರಿಯ ತಿಂಡಿಗಳಲ್ಲಿ ಒಂದು. ಅವಲಕ್ಕಿಗೆ ಸದಾ ಬೇಡಿಕೆಯಿದೆ. ಹಾಗಾಗಿ ನೀವು ಅದರ ವ್ಯಾಪಾರ ಶುರು ಮಾಡ್ಬಹುದು. ಇಲ್ಲಿಯವರೆಗೆ ಯಾವುದೇ ದೊಡ್ಡ ಕಂಪನಿಯು ಸ್ಥಳೀಯ ಮಾರುಕಟ್ಟೆಗಳಲ್ಲಿ ಈ ವ್ಯವಹಾರದ ಮೇಲೆ ಏಕಸ್ವಾಮ್ಯವನ್ನು ಹೊಂದಿಲ್ಲ. ಹಾಗಾಗಿಯೇ ಸಣ್ಣ ಘಟಕಗಳಿಂದ ತಯಾರಿಸಿದ ಪೋಹಾ ಕೂಡ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ.
ಅವಲಕ್ಕಿ ಘಟಕ ಪ್ರಾರಂಭ ಹೇಗೆ? : ಅವಲಕ್ಕಿ ತಯಾರಿಕೆ ಘಟಕವನ್ನು ಪ್ರಾರಂಭಿಸಲು ಹೆಚ್ಚು ಸ್ಥಳಾವಕಾಶ ಬೇಕಾಗಿಲ್ಲ. ನೀವು ಸಣ್ಣ ಪ್ರಮಾಣದಲ್ಲಿ ಕೆಲಸ ಪ್ರಾರಂಭಿಸುತ್ತಿದ್ದರೆ 500 ಚದರ ಅಡಿ ಜಾಗದಲ್ಲಿ ಪ್ರಾರಂಭಿಸಬಹುದು. ಅವಲಕ್ಕಿ ಮಾಡಲು ಅವಲಕ್ಕಿ ಯಂತ್ರ, ಕುಲುಮೆ, ಪ್ಯಾಕಿಂಗ್ ಯಂತ್ರ ಸೇರಿದಂತೆ ಇತರ ಕೆಲವು ಉಪಕರಣಗಳ ಅಗತ್ಯವಿರುತ್ತದೆ. ಯಂತ್ರ, ಕುಲುಮೆ, ಪ್ಯಾಕಿಂಗ್ ಯಂತ್ರವಿಡಲು ನೀವು ಜಾಗ ಹೊಂದಿಸಬೇಕಾಗುತ್ತದೆ. ಇದರೊಂದಿಗೆ ಕಚ್ಚಾ ವಸ್ತುಗಳನ್ನು ಇಡಲು ಸ್ಥಳಾವಕಾಶ ಬೇಕಾಗುತ್ತದೆ. ಅವಲಕ್ಕಿ ತಯಾರಿಸಲು ಅಕ್ಕಿ ಮುಖ್ಯವಾಗಿ ಬೇಕು. ಅಕ್ಕಿ ಭಾರತದಲ್ಲಿ ಸುಲಭವಾಗಿ ಸಿಗುತ್ತದೆ. ಆದ್ರೆ ಅದನ್ನು ಸರಿಯಾಗಿ ಸಂಗ್ರಹಿಸುವ ಅಗತ್ಯವಿರುತ್ತದೆ.
ನೆನಪಿಡಿ, ಇವುಗಳ ಮೇಲೆ ಹಣ ಹೂಡುವುದು ಇನ್ವೆಸ್ಟ್‌ಮೆಂಟ್ ಅಲ್ಲ!
ಎಷ್ಟು ವೆಚ್ಚದಲ್ಲಿ ಅವಲಕ್ಕಿ ಘಟಕ ಶುರು ಮಾಡ್ಬಹುದು ಗೊತ್ತಾ? : ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವರದಿ ಪ್ರಕಾರ, 2.43 ಲಕ್ಷ ರೂಪಾಯಿ ಹೂಡಿಕೆಯಲ್ಲಿ ಅವಲಕ್ಕಿ ತಯಾರಿಕೆ ಘಟಕ ಆರಂಭಿಸಬಹುದು. ಘಟಕ ಸ್ಥಾಪನೆಯ ಜಾಗಕ್ಕೆ ನೀವು 1 ಲಕ್ಷ ರೂಪಾಯಿ ಮೀಸಲಿಟ್ಟರೂ ಜಾಗ ಹೊರತುಪಡಿಸಿ ನೀವು ಅವಲಕ್ಕಿ ಯಂತ್ರ, ಜರಡಿ, ಪ್ಯಾಕಿಂಗ್ ಯಂತ್ರ, ಡ್ರಮ್ ಇತ್ಯಾದಿಗಳಿಗೆ 1 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಬೇರೆ ಬೇರೆ ಯಂತ್ರದ ಬೆಲೆ ಬೇರೆ ಬೇರೆಯಾಗಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಖರೀದಿ ಮಾಡ್ಬಹುದು.
ಅವಲಕ್ಕಿ ಘಟಕದಿಂದ ಸಿಗುವ ಲಾಭವೆಷ್ಟು? : ಯೋಜನಾ ವರದಿ ಪ್ರಕಾರ ಒಂದು ಸಾವಿರ ಕ್ವಿಂಟಾಲ್ ಅವಲಕ್ಕಿ ತಯಾರಿಸಲು ಒಟ್ಟು 8.60 ಲಕ್ಷ ರೂಪಾಯಿ ಖರ್ಚಾಗುತ್ತದೆ. ಒಂದು ಸಾವಿರ ಕ್ವಿಂಟಲ್ ಅವಲಕ್ಕಿ ಸುಲಭವಾಗಿ 10 ಲಕ್ಷ ರೂಪಾಯಿಗೆ ಮಾರಾಟವಾಗುತ್ತದೆ. ಅಂದ್ರೆ ನಿಮಗೆ ಸುಮಾರು 1.40 ಲಕ್ಷ ರೂಪಾಯಿಯಷ್ಟು ಉಳಿತಾಯವಾಗುತ್ತದೆ. ನೀವು ಎಷ್ಟು ಅವಲಕ್ಕಿ ತಯಾರಿ ಮಾಡುತ್ತೀರಿ ಹಾಗೆ ಅದನ್ನು ಹೇಗೆ ಬೇಗಬೇಗ ಮಾರಾಟ ಮಾಡ್ತೀರಿ ಎಂಬುದರ ಮೇಲೆ ಲಾಭವಿದೆ. ಹೆಚ್ಚು ಅವಲಕ್ಕಿ ಮಾರಾಟವಾದ್ರೆ ನಿಮ್ಮ ಗಳಿಕೆ ಕೂಡ ಹೆಚ್ಚಾಗುತ್ತದೆ.
Digital Lending: ನಿಮಗೆ ಹಣದ ತುರ್ತು ಅಗತ್ಯವಿದೆಯಾ? ಮನೆಯಲ್ಲೇ ಕುಳಿತು ಡಿಜಿಟಲ್ ಸಾಲ ಪಡೆಯೋದು ಹೇಗೆ?
ಅವಲಕ್ಕಿ ಘಟಕ ಸ್ಥಾಪಿಸಲು ಸಾಲ : ಕೆವಿಐಸಿ ವರದಿಯ ಪ್ರಕಾರ, ನೀವು ಯೋಜನಾ ವರದಿಯನ್ನು ಸಿದ್ಧಪಡಿಸಿ ಮತ್ತು ಗ್ರಾಮೋದ್ಯೋಗ ಉದ್ಯೋಗ ಯೋಜನೆಯಡಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದ್ರೆ ಸುಮಾರು 90 ಪ್ರತಿಶತದಷ್ಟು ಸಾಲವನ್ನು ಪಡೆಯಬಹುದು. ಗ್ರಾಮೋದ್ಯೋಗವನ್ನು ಉತ್ತೇಜಿಸಲು ಪ್ರತಿ ವರ್ಷ ಕೆವಿಐಸಿಯಿಂದ ಸಾಲವನ್ನು ನೀಡಲಾಗುತ್ತದೆ.