Microsoft Quits Pakistan: ಮೈಕ್ರೋಸಾಫ್ಟ್ ತೆಗೆದುಕೊಂಡಿರುವ ಈ ನಿರ್ಧಾರವು ಪಾಕಿಸ್ತಾನದ ಆರ್ಥಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಗಳು ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಇಸ್ಲಾಮಾಬಾದ್: ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಯಾಗಿರುವ ಮೈಕ್ರೋಸಾಫ್ಟ್ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದೆ. ಪಾಕಿಸ್ತಾನದಲ್ಲಿನ ತನ್ನ ಎಲ್ಲಾ ಕಾರ್ಯಚರಣೆಯನ್ನು ಮುಚ್ಚಲು ಮೈಕ್ರೋಸಾಫ್ಟ್ ನಿರ್ಧರಿಸಿದೆ. ಮೈಕ್ರೋಸಾಫ್ಟ್ ತೆಗೆದುಕೊಂಡಿರುವ ಈ ನಿರ್ಧಾರ ಪಾಕಿಸ್ತಾನಕ್ಕೆ ದೊಡ್ಡ ಆರ್ಥಿಕ ಹೊಡೆತವನ್ನುಂಟು ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ. ಸುಮಾರು 25 ವರ್ಷಗಳ ಹಿಂದೆ ಅಂದ್ರೆ 2000ರಲ್ಲಿ ಮೈಕ್ರೋಸಾಫ್ಟ್ ತನ್ನ ಕಾರ್ಯಚರಣೆಯನ್ನು ಪಾಕಿಸ್ತಾನದಲ್ಲಿ ಆರಂಭಿಸಿತ್ತು. ಇದೀಗ ಪಾಕಿಸ್ತಾನದಿಂದ ತನ್ನ ಕಾರ್ಪೊರೇಟ್ ಕಾರ್ಯಾಚರಣೆಯನ್ನು ಮುಚ್ಚಲು ಮೈಕ್ರೋಸಾಫ್ಟ್ ನಿರ್ಧರಿಸಿದೆ

ಕಳೆದ 25 ವರ್ಷಗಳಿಂದ ಕಾರ್ಯಚರಣೆ ಹೊಂದಿದ್ದರೂ ಪಾಕಿಸ್ತಾನದಲ್ಲಿ ಮೈಕ್ರೋಸಾಫ್ಟ್ ಯಾವುದೇ ಸ್ಥಾಪಿತ ಪ್ರಧಾನ ಕಚೇರಿಯನ್ನು ಹೊಂದಿರಲಿಲ್ಲ. ಆದರೆ ಶೈಕ್ಷಣಿಕ, ಸರ್ಕಾರಿ ಮತ್ತು ಕಾರ್ಪೊರೇಟ್ ವಲಯಗಳಲ್ಲಿ ಮೈಕ್ರೋಸಾಫ್ಟ್ ತನ್ನ ಪ್ರಾಬಲ್ಯತೆಯನ್ನು ಹೊಂದಿತ್ತು. ಮೈಕ್ರೋಸಾಫ್ಟ್ ತನ್ನ ತಂಡಗಳ ಮೂಲಕ ಪಾಕಿಸ್ತಾನದಲ್ಲಿ ಡಿಜಿಟಲ್ ಕೌಶಲ್ಯ ತರಬೇತಿ, ದೂರಸ್ಥ ಕಲಿಕೆ ಮತ್ತು ತಂತ್ರಜ್ಞಾನದ ತರಬೇತಿಯನ್ನು ನೀಡುತ್ತಿತ್ತು.

ಉನ್ನತ ಶಿಕ್ಷಣ ಸಂಸ್ಥೆಗಳ ಜೊತೆ ಮೈಕ್ರೋಸಾಫ್ಟ್ ಪಾಲುದಾರಿಕೆ

ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗ (HEC) ಮತ್ತು ಪಂಜಾಬ್ ಗ್ರೂಪ್ ಆಫ್ ಕಾಲೇಜುಗಳು (PGC) ನಂತಹ ಸಂಸ್ಥೆಗಳೊಂದಿಗೆ ಮೈಕ್ರೋಸಾಫ್ಟ್ ಪಾಲುದಾರಿಕೆ ಹೊಂದಿದೆ. ಕಂಪನಿಯು 200 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತಂತ್ರಜ್ಞಾನ ಸೇವೆಗಳನ್ನು ಸಹ ಒದಗಿಸಿದೆ. ಜುಲೈ 3ರಿಂದಲೇ ಮೈಕ್ರೋಸಾಫ್ಟ್  ತನ್ನ ಎಲ್ಲಾ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.

ಮೈಕ್ರೋಸಾಫ್ಟ್ ನಿರ್ಧಾರಕ್ಕೆ ಕಾರಣ ಏನು?

ಪಾಕಿಸ್ತಾನದ ಮೈಕ್ರೋಸಾಫ್ಟ್‌ನ ಮಾಜಿ ಕಂಟ್ರಿ ಮ್ಯಾನೇಜರ್ ಜವಾದ್ ರೆಹಮಾನ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಕಂಪನಿ ತೆಗೆದುಕೊಂಡಿರುವ ಈ ನಿರ್ಧಾರ ಸಂಪೂರ್ಣವಾಗಿ ವ್ಯವಹಾರ ಮತ್ತು ಕಾರ್ಯತಂತ್ರಕ್ಕೆ ಸಂಬಂಧಿಸಿದ್ದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಾಗತೀಕ ಕಂಪನಿಗಳಿಗೆ ಇಲ್ಲಿಂದ ಕಾರ್ಯ ನಿರ್ವಹಿಸೋದು ಸವಾಲಿನ ಕೆಲಸ ಆಗಲಿದೆ ಎಂಬ ಅಂಶಗಳನ್ನು ಸಹ ಗಮನಿಸಬೇಕಾಗುತ್ತದೆ ಎಂದು ಜವಾದ್ ರೆಹಮಾನ್ ಹೇಳುತ್ತಾರೆ. ಒಂದು ಯುಗದ ಅಂತ್ಯ ಎಂದು ಜವಾದ್ ರೆಹಮಾನ್ ಹೇಳಿದ್ದಾರೆ.

ಪಾಕಿಸ್ತಾನದ ಮಾರುಕಟ್ಟೆ ತಜ್ಞರ ಪ್ರಕಾರ, ಇಲ್ಲಿನ ರಾಜಕೀಯ ಅಸ್ಥಿರತೆಯೂ ಪ್ರಮುಖವಾದ ಕಾರಣವಾಗಿರುತ್ತದೆ ಎಂದು ಹೇಳುತ್ತಾರೆ. ರಾಜಕೀಯ ಮತ್ತು ಆರ್ಥಿಕ ಅಸ್ಥಿರತೆಯಿಂದಾಗಿ ದೇಶದ ಮಾರುಕಟ್ಟೆ ದುರ್ಬಲವಾಗುತ್ತದೆ. ಮಾರುಕಟ್ಟೆ ಅಸ್ಥಿರತೆಯೇ ಮೊದಲ ಕಾರಣವಾಗಿರುವ ಸಾಧ್ಯತೆ ಆಗಿರುತ್ತದೆ. ಪಾಕ್ ಕರೆನ್ಸಿ ಮೌಲ್ಯ ಜಾಗತೀಕ ಮಾರುಕಟ್ಟೆಯಲ್ಲಿ ಏರಿಳಿತ, ಹೆಚ್ಚಿನ ತೆರಿಗೆ, ತಾಂತ್ರಿಕ ಹಾರ್ಡ್‌ವೇರ್‌ ಕೊರತೆ, ಪದೇ ಪದೇ ಸರ್ಕಾರ ಬದಲಾವಣೆ ಸೇರಿದಂತೆ ಹಲವು ಕಾರಣಗಳು ಮೈಕ್ರೋಸಾಫ್ಟ್‌ನ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಮದು ವಿಶ್ಲೇಷಣೆ ಮಾಡಲಾಗುತ್ತಿದೆ.

ಮೈಕ್ರೋಸಾಫ್ಟ್‌ ಅಧಿಕೃತ ಹೇಳಿಕೆ ಏನು?

ಯುಕೆ ಟೆಕ್ ಸೈಟ್ TheRegister.com ಪ್ರಕಾರ, ಕಂಪನಿಯು ಪಾಕಿಸ್ತಾನದಲ್ಲಿ ತನ್ನ ಕಾರ್ಯಾಚರಣಾ ಮಾದರಿಯನ್ನು ಬದಲಾಯಿಸುತ್ತಿದೆ ಎಂಬ ಹೇಳಿಕೆಯನ್ನು ನೀಡಿದೆ. ಆದ್ರೆ ಮೈಕ್ರೋಸಾಫ್ಟ್ ತೆಗೆದುಕೊಳ್ಳುತ್ತಿರುವ ಈ ನಿರ್ಧಾರ, ಕಂಪನಿ ನೀಡುತ್ತಿರುವ ಸೇವೆ ಅಥವಾ ತನ್ನ ಒಪ್ಪಂದಗಳ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಸ್ಪಷ್ಟಪಡಿಸಿದೆ.

ಆರ್ಥಿಕ ಕೊರತೆ $24.4 ಶತಕೋಟಿಗೆ ಇಳಿಕೆ

2024ರ ಆರ್ಥಿಕ ವರ್ಷದ ಪಾಕಿಸ್ತಾನದ ಆರ್ಥಿಕ ಕೊರತೆ $24.4 ಶತಕೋಟಿಗೆ ತಲುಪಿದೆ. ವಿದೇಶಿ ವಿನಿಮಯ ಮೀಸಲು ಜೂನ್ 2025 ರ ವೇಳೆಗೆ $11.5 ಶತಕೋಟಿಗೆ ಇಳಿಕೆಯಾಗಿದೆ. ಇದು ತಂತ್ರಜ್ಞಾನ ಆಮದು ಮತ್ತು ವಿದೇಶಿ ಹೂಡಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಪ್ರತಿಭೆ, ಮಾನವ ಸಂಪನ್ಮೂಲದ ಜೊತೆಯಲ್ಲಿ ಕಂಪನಿಗಳಿಗೆ ರಾಜಕೀಯ ಮತ್ತು ಆರ್ಥಿಕ ವಿಶ್ವಾಸದ ಅಗತ್ಯವಿದೆ ಎಂಬುದನ್ನು ಇದು ಸೂಚಿಸುತ್ತದೆ.