ನವದೆಹಲಿ[ಜೂ.15]: ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಿರುವ ಕೇಂದ್ರ ಸರ್ಕಾರ ಈಗ ತನ್ನ ಅಧೀನದಲ್ಲಿರುವ ಸಾಮಾನ್ಯ ವಿಮಾ (ಜೀವ ವಿಮಾಯೇತರ) ಕಂಪನಿಗಳನ್ನು ವಿಲೀನಗೊಳಿಸಿ, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ರೀತಿ ಮೆಗಾ ಕಂಪನಿಯೊಂದನ್ನು ಅಸ್ತಿತ್ವಕ್ಕೆ ತರಲು ಮುಂದಾಗಿದೆ.

ದೇಶದಲ್ಲಿ ಒಟ್ಟು 25 ಸಾಮಾನ್ಯ ವಿಮಾ ಕಂಪನಿಗಳಿವೆ. ಆ ಪೈಕಿ 4 ಸರ್ಕಾರಿ ಸ್ವಾಮ್ಯದವು. ಅವೆಂದರೆ: ನ್ಯೂ ಇಂಡಿಯಾ, ಓರಿಯೆಂಟಲ್‌, ನ್ಯಾಷನಲ್‌ ಹಾಗೂ ಯುನೈಟೆಡ್‌ ಇಂಡಿಯಾ. ಇದರಲ್ಲಿ ಕೊನೆಯ ಮೂರು ಕಂಪನಿಗಳನ್ನು ವಿಲೀನಗೊಳಿಸುವುದು. ವಿಲೀನಗೊಂಡ ಆ ಕಂಪನಿಯನ್ನು ನ್ಯೂ ಇಂಡಿಯಾ ಅಶ್ಶೂರೆನ್ಸ್‌ ಕಂಪನಿ ಖರೀದಿಸುವಂತೆ ಮಾಡುವ ಚಿಂತನೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ.

ಗ್ರಾಹಕರಿಗೆ ಗುಡ್‌ ನ್ಯೂಸ್: ATMನಲ್ಲಿ ಹಣ ಇಲ್ಲದಿದ್ರೆ ಬ್ಯಾಂಕ್‌ಗಳಿಗೆ ದಂಡ!

ಈ ಸಂಬಂಧ ಹಣಕಾಸು ಸೇವೆಗಳ ಇಲಾಖೆ ಹಾಗೂ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2019ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ವಿಮಾ ಕಂಪನಿಗಳ ವಿಲೀನ ಪ್ರಕ್ರಿಯೆಯನ್ನು ಘೋಷಣೆ ಮಾಡಿತ್ತು. ಆದರೆ ಆ ವಿಲೀನ ಪ್ರಕ್ರಿಯೆಯೇ ಬೇರೆ ರೀತಿಯಲ್ಲಿತ್ತು. ಓರಿಯೆಂಟಲ್‌, ನ್ಯಾಷನಲ್‌ ಹಾಗೂ ಯುನೈಟೆಡ್‌ ಇನ್ಶೂರನ್ಸ್‌ ಕಂಪನಿಗಳನ್ನು ವಿಲೀನಗೊಳಿಸಿ ಒಂದು ಕಂಪನಿಯನ್ನು ಅಸ್ತಿತ್ವಕ್ಕೆ ತರುವುದು. ನ್ಯೂ ಇಂಡಿಯಾ ಅಶ್ಶೂರನ್ಸ್‌ ಕಂಪನಿಯ ಅಸ್ತಿತ್ವವನ್ನು ಪ್ರತ್ಯೇಕವಾಗಿ ಉಳಿಸಿಕೊಳ್ಳುವ ಮೂಲಕ ಸರ್ಕಾರಿ ಸ್ವಾಮ್ಯದ ಎರಡೇ ಕಂಪನಿಗಳು ಇರುವಂತೆ ನೋಡಿಕೊಳ್ಳುವುದಾಗಿತ್ತು.

ಭ್ರಷ್ಟಾಚಾರಕ್ಕೆ ಕಡಿವಾಣ: ಕಂಪನಿಗಳಿಗೆ ಹೊಸ ನಿಯಮ!

ಈಗಾಗಲೇ ಸಾಕಷ್ಟುಖಾಸಗಿ ವಿಮಾ ಕಂಪನಿಗಳು ಇವೆ. ಎರಡು ಸರ್ಕಾರಿ ವಿಮಾ ಕಂಪನಿಗಳು ಇದ್ದರೆ, ಎರಡರ ಆದಾಯಕ್ಕೂ ಹೊಡೆತ ಬೀಳಲಿದೆ ಎಂಬ ಕಾರಣಕ್ಕೆ ಹೊಸ ಪ್ರಸ್ತಾಪವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಹೇಳಲಾಗಿದೆ.