ನವದೆಹಲಿ[ಜೂ.13]: ಕಾರ್ಪೊರೇಟ್‌ ವಲಯದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ವಿಶೇಷ ಪರೀಕ್ಷೆ ಪಾಸಾದರಷ್ಟೇ ಕಂಪನಿಯ ಸ್ವತಂತ್ರ ನಿರ್ದೇಶಕರನ್ನು ನೇಮಕ ಮಾಡಬಹುದು ಎಂಬ ನಿಯಮ ಜಾರಿಗೆ ತರಲು ಮೋದಿ ಸರ್ಕಾರ ಮುಂದಾಗಿದೆ. ಅಲ್ಲದೇ ಸಮರ್ಪಕವಾಗಿ ಆಡಿಟ್ಸ್‌ (ಲೆಕ್ಕ ಪರಿಶೋಧನೆ) ನಿರ್ವಹಸಲು ವಿಫಲವಾಗಿದ್ದಕ್ಕೆ ಮತ್ತು ಹೆಚ್ಚುತ್ತಿರುವ ಸಾಲದ ಬಗ್ಗೆ ಎಚ್ಚರಿಸಲು ವಿಫಲವಾದ ಡೆಲೋಯಿಟ್‌ ಹಾಸ್ಕಿನ್ಸ್‌ ಆ್ಯಂಡ್‌ ಸೆಲ್ಸ್‌ಗೆ 5 ವರ್ಷ ನಿಷೇಧ ಹೇರಲು ಸರ್ಕಾರ ನಿರ್ಧರಿಸಿದೆÜ ಎಂದು ಕಾರ್ಪೊರೇಟ್‌ ವ್ಯವಹಾರಗಳ ಇಲಾಖೆ ಉನ್ನತ ಅಧಿಕಾರಿ ಇಂಜತಿ ಶ್ರೀನಿವಾಸ್‌ ಹೇಳಿದ್ದಾರೆ.

ಸ್ವತಂತ್ರ ನಿರ್ದೇಶಕರಾಗಲು ಬಯಸುವವರಿಗೆ ಭಾರತೀಯ ಕಂಪನಿ ಕಾನೂನು, ನೈತಿಕತೆ, ಬಂಡವಾಳ ಮಾರುಕಟ್ಟೆನಿಯಮಗಳ ಕುರಿತು ಇರುವ ಜ್ಞಾನದ ಮೌಲ್ಯಮಾಪನ ನಡೆಸಲು ಪರೀಕ್ಷೆ ನಡೆಸಲಾಗುವುದು. ಕಂಪನಿಯಲ್ಲಿ ಅವರ ಪಾತ್ರ ಹಾಗೂ ಜವಾಬ್ದಾರಿಯ ಬಗ್ಗೆ ಅರಿವು ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಕಂಪನಿಯ ನಿರ್ದೇಕ ಹುದ್ದೆಯ ಆಕಾಂಕ್ಷಿಗಳು ತಾವು ಯಾವಾಗ ಪರೀಕ್ಷೆಯನ್ನು ಪೂರ್ಣಗೊಳಿಸುತ್ತೇವೆ ಎಂಬ ಬಗ್ಗೆ ಸಮಯವನ್ನು ನಿಗದಿಪಡಿಸಬೇಕು.

ಅನಿಯಮಿತ ಅವಧಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು. ಕಂಪನಿಯ ಮಂಡಳಿಗಳಲ್ಲಿ ಇರುವ ಅನುಭವಿ ನಿರ್ದೇಶಕರನ್ನು ಪರೀಕ್ಷೆಯಿಂದ ಹೊರಗೆ ಇಡಲಾಗುವುದು. ಆದರೆ, ಸರ್ಕಾರ ಸಿದ್ಧಪಡಿಸುವ ದತ್ತಾಂಶಗಳಲ್ಲಿ ತಮ್ಮನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಶ್ರೀನಿವಾಸ್‌ ಹೇಳಿದ್ದಾರೆ.

ಈಗಿರುವ ನಿಯಮದ ಪ್ರಕಾರ, ನೋಂದಾಯಿತ ಕಂಪನಿಗಳು ತಮ್ಮ ಮಂಡಳಿಯ ಮೂರನೇ ಒಂದರಷ್ಟುಸ್ವತಂತ್ರ ನಿರ್ದೇಶಕರನ್ನು ನೇಮಿಸಿಕೊಳ್ಳಬೇಕು. ಇವರು ಕಂಪನಿಯ ಜೊತೆ ನೇರವಾದ ಸಂಪರ್ಕ ಹೊಂದಿರುವುದಿಲ್ಲ.