ಟಾಟಾ ಗ್ರೂಪ್ ನಲ್ಲಿ ಒಂದೇ ಒಂದು ಷೇರು ಹೊಂದಿರುವ ನಿಗೂಢ ವ್ಯಕ್ತಿ ಇವರೇ ನೋಡಿ!
ಕೆಲವು ವರ್ಷಗಳ ಹಿಂದೆ ಟಾಟಾ ಸಮೂಹ ಸಂಸ್ಥೆ ಷೇರುದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಕೇವಲ ಒಂದೇ ಒಂದು ಷೇರು ಒಬ್ಬ ವ್ಯಕ್ತಿಯ ಹೆಸರಿನಲ್ಲಿತ್ತು. ಇವರು ಟಾಟಾ ಕುಟುಂಬಕ್ಕೆ ಸೇರಿದವರು ಕೂಡ ಅಲ್ಲ. ಹಾಗಾದ್ರೆ ಆ ವ್ಯಕ್ತಿ ಯಾರು? ಇಲ್ಲಿದೆ ಮಾಹಿತಿ.
Business Desk: ಕೆಲವು ವರ್ಷಗಳ ಹಿಂದೆ ಟಾಟಾ ಸನ್ಸ್ ಷೇರುದಾರರ ಹೆಸರುಗಳನ್ನು ಬಹಿರಂಗಪಡಿಸಿದ ಸಮಯದಲ್ಲಿ ರಹಸ್ಯವೊಂದು ಬಯಲಿಗೆ ಬಂದಿತ್ತು. ಅದೇನೆಂದ್ರೆ ವೀರೇಂದ್ರ ಸಿಂಗ್ ಚೌಹಾನ್ ಎಂಬ ನಿಗೂಢ ವ್ಯಕ್ತಿ ಟಾಟಾ ಸಮೂಹ ಸಂಸ್ಥೆ ಮಾತೃಸಂಸ್ಥೆ ಟಾಟಾ ಸನ್ಸ್ ನಲ್ಲಿ ಒಂದೇ ಒಂದು ಷೇರು ಹೊಂದಿದ್ದರು. ಒಟ್ಟು 8,235 ಷೇರುಗಳನ್ನು ಟಾಟಾ ಕುಟುಂಬ ಹೊಂದಿದ್ದರೆ, 49,365 ಷೇರುಗಳನ್ನು ವಿವಿಧ ಟಾಟಾ ಕಂಪನಿಗಳು ಹೊಂದಿವೆ. ಇನ್ನು 74,352 ಷೇರುಗಳನ್ನು ಶಾಪೂರ್ಜಿ ಪಲ್ಲೊಂಜಿ ಕುಟುಂಬ ಹೊಂದಿದೆ. ಹಾಗೆಯೇ 2,66,610 ಷೇರುಗಳನ್ನು ಟಾಟಾ ಟ್ರಸ್ಟ್ ಹೊಂದಿದೆ. ಈ ಎಲ್ಲ ಷೇರುದಾರರ ನಡುವೆ ಒಂದೇ ಒಂದು ಷೇರು ಮಾತ್ರ ಉದಯಪುರದ ವೀರೇಂದ್ರ ಸಿಂಗ್ ಚೌಹಾನ್ ಅವರಿಗೆ ಸೇರಿದೆ ಎಂದು ವರದಿ ತಿಳಿಸಿದೆ. ಹಾಗಾದ್ರೆ ಈ ವೀರೇಂದ್ರಸಿಂಗ್ ಚೌಹಾನ್ ಯಾರು? ಇವರೇಕೆ ಟಾಟಾ ಸನ್ಸ್ ಒಂದೇ ಒಂದು ಷೇರು ಹೊಂದಿದ್ದಾರೆ? ಟಾಟಾ ಸಂಸ್ಥೆಗೂ ಇವರಿಗೂ ಇರುವ ನಂಟೇನು?
ಯಾರು ಈ ವೀರೇಂದ್ರ ಸಿಂಗ್ ಚೌಹಾನ್?
ವೀರೇಂದ್ರ ಸಿಂಗ್ ಚೌಹಾನ್ ಅವರ ಪೂರ್ಣ ಹೆಸರು ಮಹಾರಾವಲ್ ವೀರೇಂದ್ರಸಿನ್ಹಾಜಿ ನಟವರ್ ಸಿನ್ಹಜಿ ಚೌಹಾನ್. ಗುಜರಾತ್ ನಲ್ಲಿರುವ ಚೋಟಾ ಉದಯಪುರ ಎಂಬ ಪುಟ್ಟ ರಾಜ್ಯದಲ್ಲಿ ಇವರ ಕುಟುಂಬಸ್ಥರು ಆಡಳಿತ ನಡೆಸುತ್ತಿದ್ದರು. ಇವರು ಪೃಥ್ವಿರಾಜ್ ಚೌಹಾನ್ ಅವರ ಕುಟುಂಬಸ್ಥರು ಎಂದು ಹೇಳಲಾಗಿದೆ. ಇದರ ಆಡಳಿತಗಾರರನ್ನು ಮಹಾರಾವಾಲ್ಸ್ ಎಂದು ಕೂಡ ಕರೆಯಲಾಗುತ್ತದೆ. 1946ರಲ್ಲಿ ತಂದೆಯ ನಿಧನದ ಬಳಿಕ ರಾಜನ ಪಟ್ಟ 11 ವರ್ಷದ ವೀರೇಂದ್ರ ಸಿನ್ಹಾಜೀ ಅವರಿಗೆ ದೊರಕಿತು.
ರತನ್ ಟಾಟಾರ ಒಡಹುಟ್ಟಿದ ತಮ್ಮನಿಗೂ ಮದುವೆಯಾಗಿಲ್ಲ, ಫೋನ್ ಕೂಡ ಬಳಸದೆ ಅತ್ಯಂತ ಸರಳ ಜೀವನ!
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಚೋಟಾ ಉದಯಪುರ ಕೂಡ ಎಲ್ಲ ರಾಜ್ಯಗಳಂತೆ ಸ್ವತಂತ್ರ ಭಾರತಕ್ಕೆ ಸೇರಿಕೊಂಡಿತು. ಕಾಲೇಜು ಶಿಕ್ಷಣದ ಬಳಿಕ ವೀರೇಂದ್ರ ಸಿಂಗ್ ಚೌಹಾನ್ ಉದ್ಯಮಿಯಾಗಿ ಗುರುತಿಸಿಕೊಂಡರು. ಟಾಟಾ ಕಂಪನಿ ರೆಡಿಯೋ ಉತ್ಪಾದೆಗೆ ಸ್ಥಾಪಿಸಿದ ನ್ಯಾಷನಲ್ ಇಕೋ ಸಂಸ್ಥೆಯ ನಿರ್ದೇಶಕರು ಕೂಡ ಆದರು. ಆಗ ಅವರ ವಯಸ್ಸು ಕೇವಲ 25 ವರ್ಷ. ಈ ಸಮಯದಲ್ಲಿ ರತನ್ ಟಾಟಾ ಅವರ ವಯಸ್ಸು ಕೂಡ 25 ವರ್ಷ. ಅವರು ಟಾಟಾ ಸನ್ಸ್ ನಲ್ಲಿ ಉದ್ಯೋಗ ತರಬೇತಿ ಪಡೆಯುತ್ತಿದ್ದರು.
ಟಾಟಾ ಸಂಸ್ಥೆ ಜೊತೆಗೆ ವೀರೇಂದ್ರ ಸಿಂಗ್ ಚೌಹಾನ್ ಸಂಬಂಧ
ಕೆಲವೇ ಸಮಯದಲ್ಲಿ ವೀರೇಂದ್ರ ಸಿಂಗ್ ಚೌಹಾನ್ ಅನೇಕ ಉದ್ಯಮಗಳ ನಿರ್ದೇಶಕರ ಸ್ಥಾನಕ್ಕೇರಿದರು. ಜನಪ್ರಿಯ ಉದ್ಯಮಿಗಳಾದ ಅಜೀಂ ಪ್ರೇಮ್ ಜೀ, ಎಸ್ ಎಸ್ ಕಿರ್ಲೋಸ್ಕರ್, ಬಿಎಂ ಗಿಯಾ, ಎಂಎಸ್ ತಲೌಲಿಕರ್, ನರ್ವೋಜ್ ಬಿ. ವಕಿಲ್ ಹಾಗೂ ಮಹಾರಾಜ್ ಆಫ್ ಬರೋಡ ಅವರ ಜೊತೆಗೆ ವಿವಿಧ ಉದ್ಯಮಗಳ ಮಂಡಳಿಗಳಲ್ಲಿ ಕಾರ್ಯನಿರ್ವಹಿಸಿದ್ದರು. 30 ವರ್ಷ ವಯಸ್ಸಿನಲ್ಲಿ ವೀರೇಂದ್ರ ಸಿಂಗ್ ರತನ್ ಟಾಟಾ ಅವರ ತಂದೆ ನವಲ್ ಟಾಟಾ ಅವರ ಮಾರ್ಗದರ್ಶನದಲ್ಲಿ ಟಾಟಾ ಮಿಲ್ಸ್ ನಿರ್ದೇಶಕರ ಮಂಡಳಿ ಸೇರಿದರು. ಟಾಟಾ ಕುಟುಂಬದ ಇತರ ಸದಸ್ಯರ ಜೊತೆಗೆ ಅವರು ಮಂಡಳಿಯಲ್ಲಿ ಕಾರ್ಯನಿರ್ವಹಿಸಿದರು. ಈ ಮೂಲಕ ಟಾಟಾ ಸಂಸ್ಥೆಯ ನಂಬಿಕಾಸ್ಥ ವ್ಯಕ್ತಿಯಾಗಿ ಬೆಳೆದರು.
ಟಾಟಾ ಜೊತೆಗಿನ ಸ್ಪರ್ಧೆಯ ಕುರಿತು ಟ್ರೋಲ್, ಆನಂದ್ ಮಹೀಂದ್ರಾ ನೀಡಿದ್ರು ಅದ್ಭುತ ಉತ್ತರ..!
ಟಾಟಾ ಸಂಸ್ಥೆ ಷೇರು ಪಡೆದ ವೀರೇಂದ್ರ ಸಿಂಗ್
ಜೆಆರ್ ಡಿ ಟಾಟಾ ಅವರ ಜೊತೆಗಿನ ಆತ್ಮೀಯ ಸಂಬಂಧದ ಕಾರಣದಿಂದ ವೀರೇಂದ್ರ ಸಿಂಗ್ ಅವರಿಗೆ 12 ಅಥವಾ 13 ಟಾಟಾ ಸನ್ಸ್ ಷೇರುಗಳನ್ನು ನೀಡಲಾಗಿತ್ತು ಎಂದು ಅವರ ಮಗ ಜೈ ಪ್ರತಾಪ್ ಸಿನ್ಹಾಜೀ ಮಾಹಿತಿ ನೀಡಿದ್ದಾರೆ. ಇನ್ನು 1998ರಲ್ಲಿ ವೀರೇಂದ್ರ ಸಿಂಗ್ ಅವರು ಬೆಂಗಳೂರಿನಲ್ಲಿ ಬಟ್ಟೆ ಉತ್ಪಾದನಾ ಘಟಕ ಸ್ಥಾಪಿಸಲು ಹಣ ಒಗ್ಗೂಡಿಸಲು ಟಾಟಾ ಸನ್ಸ್ ಷೇರುಗಳನ್ನು ಮಾರಾಟ ಮಾಡಿದ್ದರು. ಆದರೆ, ಒಂದು ಷೇರನ್ನು ಮಾತ್ರ ಹಾಗೇ ಉಳಿಸಿಕೊಂಡಿದ್ದರು. ಟಾಟಾ ಸನ್ಸ್ ನಲ್ಲಿ ನನ್ನದೂ ಷೇರಿದೆ ಎಂದು ಹೇಳಿಕೊಳ್ಳಲು ಹೀಗೆ ಮಾಡಿದ್ದರು. ಇದು ಟಾಟಾ ಸನ್ಸ್ ಕುರಿತ ವೀರೇಂದ್ರ ಸಿಂಗ್ ಅವರ ಪ್ರೀತಿ, ಗೌರವವನ್ನು ತೋರುತ್ತದೆ. ಈಗಾಗಲೇ ವೀರೇಂದ್ರ ಸಿಂಗ್ ಅವರ ಆಸ್ತಿಗೆ ಸಂಬಂಧಿಸಿ ಕುಟುಂಬ ಸದಸ್ಯರ ನಡುವೆ ಜಟಾಪಟಿ ನಡಿಯುತ್ತಿದೆ. ಈ ಎಲ್ಲ ಆಸ್ತಿಗಳಂತೆ ಒಂದು ಟಾಟಾ ಷೇರಿಗೆ ಸಂಬಂಧಿಸಿಯೂ ಕುಟುಂಬ ಸದಸ್ಯರಲ್ಲಿ ವೈಮನಸ್ಸಿದೆ ಎಂದು ಹೇಳಲಾಗಿದೆ.