ಬೆಂಗಳೂರಿನ ಈ ಕಾಫಿ ಶಾಪ್ ಈಗ Starbucks ಪ್ರಬಲ ಎದುರಾಳಿ;ಈ ಸಂಸ್ಥೆಗಾಗಿ ಅಮೆರಿಕದ ಉದ್ಯೋಗ ತ್ಯಜಿಸಿದ್ದ ಸಿಇಒ
ಬೆಂಗಳೂರು ಮೂಲದ ಥರ್ಡ್ ವೇವ್ ಕಾಫಿ ಇಂದು ದೇಶಾದ್ಯಂತ 100ಕ್ಕೂ ಅಧಿಕ ಶಾಪ್ ಗಳನ್ನು ಹೊಂದಿದೆ. ಈ ಸ್ಟಾರ್ಟ್ ಅಪ್ ಪ್ರಾರಂಭಿಸಲು ಇದರ ಸ್ಥಾಪಕ ಹಾಗೂ ಸಿಇಒ ಸುಶಾಂತ್ ಗೋಯಲ್ ಅಮೆರಿಕದಲ್ಲಿನ ಅಧಿಕ ವೇತನದ ಉದ್ಯೋಗ ತೊರೆದಿದ್ದರು.

Business Desk: ಇತ್ತೀಚಿನ ಕೆಲವು ವರ್ಷಗಳಿಂದ ಸ್ವಂತ ಉದ್ಯಮ ಪ್ರಾರಂಭಿಸೋರ ಸಂಖ್ಯೆ ಹೆಚ್ಚುತ್ತಿದೆ. ಇಂದಿನ ಯುವಜನಾಂಗ ರಿಸ್ಕ್ ತೆಗೆದುಕೊಳ್ಳಲು ಹಿಂದೆಮುಂದೆ ನೋಡುತ್ತಿಲ್ಲ. ಹೀಗಾಗಿಯೇ ಭಾರತದಲ್ಲಿ ಸ್ಟಾರ್ಟ್ ಅಪ್ ಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಸ್ವಂತ ಉದ್ಯಮ ಸ್ಥಾಪಿಸಲು ಅನೇಕರು ಉತ್ತಮ ವೇತನದ ಉದ್ಯೋಗ ತೊರೆದಿದ್ದಾರೆ ಕೂಡ. ಅಂಥವರಲ್ಲಿ ಸುಶಾಂತ್ ಗೋಯಲ್ ಕೂಡ ಒಬ್ಬರು. ಅಮೆರಿಕದಲ್ಲಿ ಉನ್ನತ ಹುದ್ದೆಯಲ್ಲಿದ್ದ ಸುಶಾಂತ್, ಉದ್ಯೋಗ ತೊರೆದು ಭಾರತಕ್ಕೆ ಹಿಂತಿರುಗಿ ಇಬ್ಬರು ಗೆಳೆಯರ ಜೊತೆಗೆ ಸೇರಿ ಕಾಫಿ ಶಾಪ್ ಚೈನ್ ಪ್ರಾರಂಭಿಸುತ್ತಾರೆ. ಥರ್ಡ್ ವೇವ್ ಕಾಫಿ ಎಂಬ ಹೆಸರಿನ ಈ ಸ್ಟಾರ್ಟ್ ಅಪ್ ಬೆಂಗಳೂರಿಗರಿಗೆ ಚಿರಪರಿಚಿತ. ಏಕೆಂದರೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಥರ್ಡ್ ವೇವ್ ಕಾಫಿ ಶಾಪ್ ಗಳನ್ನು ನೋಡಬಹುದು. ಇನ್ನು ಈ ಥರ್ಡ್ ವೇವ್ ಕಾಫಿ ಕೇಂದ್ರಸ್ಥಾನ ಕೂಡ ಬೆಂಗಳೂರು. ಸುಮಾರು 7 ವರ್ಷಗಳ ಹಿಂದೆ ಪ್ರಾರಂಭವಾದ ಥರ್ಡ್ ವೇವ್ ಇಂದು ಭಾರತದಲ್ಲಿ ವಿದೇಶಿ ಮೂಲದ ಸ್ಟಾರ್ ಬಕ್ಸ್ ಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಇತ್ತೀಚೆಗಷ್ಟೇ ಖಾಸಗಿ ಈಕ್ವಿಟಿ ಸಂಸ್ಥೆ ಕ್ರೆಗಿಸ್ ನಡೆಸಿದ ಸೀರಿಸ್ ಸಿ ಫಂಡಿಂಗ್ ನಲ್ಲಿ ಥರ್ಡ್ ವೇವ್ ಕಾಫಿ 35 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದೆ.
ಥರ್ಡ್ ವೇವ್ ಪ್ರಾರಂಭಿಸುವ ಮುನ್ನ ಸುಶಾಂತ್ ಗೋಯಲ್ ತನ್ನದೇ ಸ್ವಂತ ಡೇಟಾ ವಿಶ್ಲೇಷಣೆ ಸಂಸ್ಥೆ ನಡೆಸುತ್ತಿದ್ದರು. ಅದಕ್ಕೂ ಮುನ್ನ ಅವರು ಅಮೆರಿಕದಲ್ಲಿ ಮೆಕ್ ಕಿನ್ಸೆ ಆಂಡ್ ಕೋ. ಎಂಬ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿ 2016ರಲ್ಲಿ ತ್ವರಿತವಾಗಿ ಕಾಫಿ ಹಾಗೂ ಆಹಾರ ಬ್ರ್ಯಾಂಡ್ ಸ್ಟಾರ್ಟ್ ಅಪ್ ಥರ್ಡ್ ವೇವ್ ಅನ್ನು ಸುಶಾಂತ್ ಪ್ರಾರಂಭಿಸಿದರು. ಇವರಿಗೆ ಆಯುಷ್ ಬತ್ವಾಲ್ ಹಾಗೂ ಅನಿರುದ್ಧ ಶರ್ಮಾ ಸಾಥ್ ನೀಡಿದರು. ಹೀಗೆ ಈ ಮೂವರು ಗೆಳೆಯರು ಜೊತೆಯಾಗಿ ಪ್ರಾರಂಭಿಸಿದ ಥರ್ಡ್ ವೇವ್ ಕಾಫಿ ಭಾರತದಲ್ಲಿ ಜನಪ್ರಿಯ ಜಾಗತಿಕ ಬ್ರ್ಯಾಂಡ್ ಸ್ಟಾರ್ ಬಕ್ಸ್ ಪ್ರಬಲ ಎದುರಾಳಿ ಎಂದು ಹೇಳಲಾಗಿದೆ. ಸ್ಥಳೀಯ ಕಾಫಿ ಸ್ವಾದವನ್ನು ಬಳಸಿಕೊಳ್ಳುವ ಮೂಲಕ ಈ ಸಂಸ್ಥೆ ಭಾರತೀಯರಿಗೆ ಹೆಚ್ಚು ಹತ್ತಿರವಾಗುತ್ತಿದೆ.
ದಿನಕ್ಕೆ 1 ಕೋಟಿ ಗಳಿಸುವ ಡೆಲಿವರಿ ಬಾಯ್‌ಗೆ ವೇತನವಿಲ್ಲ, ಆದ್ರೂ 700 ಕೋಟಿ ರೂ ದಾನ ಮಾಡಿದ!
ಥರ್ಡ್ ವೇವ್ ಕಾಫಿ ಚೈನ್ ಪ್ರಾರಂಭಿಸುವ ಮುನ್ನ ಸುಶಾಂತ್ ಹಾಗೂ ಅವರ ಇಬ್ಬರು ಸ್ನೇಹಿತರಿಗೆ ಈ ಕ್ಷೇತ್ರದ ಬಗ್ಗೆ ಯಾವುದೇ ಜ್ಞಾನ ಅಥವಾ ಅನುಭವ ಇರಲಿಲ್ಲ. ಆದರೆ, ಕಾಫಿ ಕುರಿತು ಆ ಮೂವರಿಗಿದ್ದ ಒಲವು ಇಂಥದೊಂದು ಸಾಹಸಕ್ಕೆ ಕೈಹಾಕುವಂತೆ ಮಾಡಿತ್ತು.
ಥರ್ಡ್ ವೇವ್ ಕಾಫಿ ತನ್ನ ಮುಖ್ಯಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿರೋದು ಅಷ್ಟೇ ಅಲ್ಲ, ಬದಲಿಗೆ ಈ ಸಂಸ್ಥೆಯ ಅರ್ಧಕ್ಕಿಂತಲೂ ಹೆಚ್ಚಿನ ಮಳಿಗೆಗಳು ಕೂಡ ಇಲ್ಲೇ ಇವೆ. ಪ್ರಸ್ತುತ ಈ ಸಂಸ್ಥೆ 100ಕ್ಕೂ ಅಧಿಕ ಶಾಪ್ ಗಳನ್ನು ಹೊಂದಿದೆ. ಈ ಸಂಸ್ಥೆಯ ಮೌಲ್ಯ ಅಂದಾಜು 150 ಮಿಲಿಯನ್ ಡಾಲರ್. ಇನ್ನು ಥರ್ಡ್ ವೇವ್ ಕಾಫಿ ಮುಂಬೈ, ದೆಹಲಿ, ಗುರ್ಗಾಂವ್, ಪುಣೆ, ಹೈದರಾಬಾದ್, ನೊಯ್ಡಾ, ಕೂನೂರ್ ಹಾಗೂ ಚಂಡೀಗಢನಲ್ಲಿ ಕೂಡ ಶಾಪ್ ಗಳನ್ನು ಹೊಂದಿದೆ.
ಲಕ್ಷಾಂತರ ರೂ. ವೇತನದ ಉದ್ಯೋಗ ತೊರೆದು ಕಂಪನಿ ಸ್ಥಾಪಿಸಿದ ದಂಪತಿಗೆ ರತನ್ ಟಾಟಾ ನೆರವು; ಇವರೀಗ 100 ಕೋಟಿ ಒಡೆಯರು
ಅಮೆರಿಕದಲ್ಲಿದ್ದ ಸುಶಾಂತ್ ಗೋಯಲ್
ಸುಶಾಂತ್ ಗೋಯಲ್ ಅಮೆರಿಕದ ಇಲ್ಲಿನೋಸ್ ನಾರ್ಥ್ ವೆಸ್ಟರ್ನ್ ವಿಶ್ವವಿದ್ಯಾಲಯದಿಂದ ಕೆಮಿಕಲ್ ಇಂಜಿನಿಯರಿಂಗ್ ಹಾಗೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವ ಸಮಯದಲ್ಲಿ ಅವರು ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಸೊಸೈಟಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಗ್ಲೋಬಲ್ ಎಂಗೇಜ್ಮೆಂಟ್ ಸಮಿತ್, ಕಲ್ಲೊಗ್ಗ ಇಂಡಿಯಾ ಬ್ಯುಸಿನೆಸ್ ಕಾನ್ಫರೆನ್ಸ್ ಹಾಗೂ ವೆಂಚರ್ ಕ್ಯಾಪಿಟಲ್ ಮತ್ತು ಪ್ರೈವೇಟ್ ಈಕ್ವಿಟಿ ಕ್ಲಬ್ ಗಳಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಇಲ್ಲಿ ಸಿಕ್ಕ ಅನುಭವ ಸ್ಟಾರ್ಟ್ ಅಪ್ ಪ್ರಾರಂಭಿಸುವ ಅವರ ಕನಸಿಗೆ ಬೆಂಬಲ ನೀಡಿದವು.
'ನಾನು ಆಕಸ್ಮಿಕವಾಗಿ ಕೆಫೆ ಪ್ರಾರಂಭಿಸಿದೆ. ಉದ್ಯಮದ ಜೊತೆಗಿನ ನನ್ನ ಪ್ರೀತಿ ಕೋರಮಂಗಲದಲ್ಲಿ ಪ್ರಾರಂಭಗೊಂಡ ಮೊದಲ ಕೆಫೆ ಜೊತೆಗೆ ಶುರುವಾಯ್ತು' ಎನ್ನುತ್ತಾರೆ ಸುಶಾಂತ್ ಗೋಯಲ್.