ಸ್ವಂತ ಉದ್ಯಮ ಸ್ಥಾಪಿಸಿದ ಐಐಟಿ, ಐಐಎಂ ಪದವೀಧರ ಈಗ ಜೈಲುಪಾಲು; ವಂಚನೆ ಆರೋಪದಲ್ಲಿ 20 ವರ್ಷ ಸೆರೆವಾಸ
ಐಐಟಿ, ಐಐಎಂನಂತಹ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಈತ ಸ್ವಂತ ಉದ್ಯಮ ಸ್ಥಾಪಿಸಿದರೂ ನ್ಯಾಯಯುತವಾಗಿ ನಡೆದುಕೊಳ್ಳಲಿಲ್ಲ.ನೂರಾರು ಜನರಿಗೆ ವಂಚಿಸಿದ ಆರೋಪದಲ್ಲಿಈಗ ಈತ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
Business Desk: ಹೂಡಿಕೆದಾರರಿಗೆ ವಂಚಿಸಿದ ಆರೋಪದಲ್ಲಿ ಸುಭಿಕ್ಷಾ ರಿಟೇಲ್ ಚೈನ್ ಸ್ಥಾಪಕರು ಹಾಗೂ ಐಐಎಂನಿಂದ ಪದವಿ ಹೊಂದಿರುವ ಹಾಗೂ ಐಐಟಿ ಹಳೆಯ ವಿದ್ಯಾರ್ಥಿಯಾಗಿರುವ ಆರ್.ಸುಬ್ರಮಣಿಯನ್ 20 ವರ್ಷಗಳ ಜೈಲು ಶಿಕ್ಷೆಗೊಳಗಾಗಿದ್ದಾರೆ. ಚೆನ್ನೈ ವಿಶೇಷ ನ್ಯಾಯಾಲಯ 2023ರ ನವೆಂಬರ್ 20ರಂದು ನೀಡಿದ ತೀರ್ಪಿನಲ್ಲಿ ನೂರಾರು ಹೂಡಿಕೆದಾರರಿಗೆ ವಂಚಿಸಿದ ಆರೋಪದಲ್ಲಿ ಸುಬ್ರಮಣಿಯನ್ ಅವರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ತಮಿಳುನಾಡು ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಹಣಕಾಸು ಸಮಸ್ಥೆಗಳ) ಕಾಯ್ದೆ (ಟಿಎನ್ ಪಿಐಡಿ ಕಾಯ್ದೆ) ಅನ್ವಯ ಕೋರ್ಟ್ ಸುಬ್ರಮಣಿಯನ್ ಅವರನ್ನು ಅಪರಾಧಿ ಎಂದು ಪರಿಗಣಿಸಿದೆ. ಸುಬ್ರಮಣಿಯನ್ ಹಾಗೂ ಇತರರು ವಿಶ್ವಪ್ರಿಯ ಇಂಡಿಯಾ ಲಿಮಿಟೆಡ್ಸ ಹೆಸರಿನಲ್ಲಿ ಪ್ರೈಮ್ ಹೂಡಿಕೆ, ಅಸೆಟ್ ಬ್ಯಾಕ್ಡ್ ಸೆಕ್ಯುರಿಟಿ ಬಾಂಡ್, ಲಿಕ್ವಿಡ್ ಪ್ಲಸ್ ಹಾಗೂ ಸೆಫ್ಟಿ ಫ್ಲಸ್ ಎಂಬ ನಾಲ್ಕು ಕಾರ್ಯಕ್ರಮಗಳ ಮೂಲಕ ಠೇವಣಿಗಳನ್ನು ಸಂಗ್ರಹಿಸಿದ್ದಾರೆ.
ಸುಬ್ರಮಣಿಯನ್ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಠೇವಣಿದಾರರನ್ನು ವಂಚಿಸಿದ್ದಾರೆ. ಹಣ ಮೆಚ್ಯುರ್ ಆದ ತಕ್ಷಣ ಅವರು ಠೇವಣಿದಾರರಿಗೆ ಆ ಹಣವನ್ನು ಕಡಿಮೆ ಅವಧಿಯಲ್ಲಿ ಅಧಿಕ ಗಳಿಕೆ ನೀಡುವ ಹೊಸ ಯೋಜನೆಯಲ್ಲಿ ಮತ್ತೊಮ್ಮೆ ತೊಡಗಿಸುವಂತೆ ಮನವೊಲಿಸುತ್ತಿದ್ದರು. ಆದರೆ, ಆ ಬಳಿಕ ಹೊಸ ಯೋಜನೆ ಮೆಚ್ಯುರ್ ಆದರೂ ಮೊತ್ತವನ್ನು ಠೇವಣಿದಾರರಿಗೆ ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಗನಿಗೆ ಆಸ್ತಿ ಕೊಟ್ಟು ಕೆಟ್ಟೆ; ನಾನು ರಸ್ತೆಯಲ್ಲಿದ್ರೇನೆ ಅವನಿಗೆ ಖುಷಿ: ರೇಮಂಡ್ಸ್ ಸಂಸ್ಥಾಪಕ ಬೇಸರ
ವಿಶ್ವಪ್ರಿಯ ಸುಬ್ರಮಣಿಯನ್ ಅವರ ಮೊದಲ ಉದ್ಯಮವಾಗಿದೆ. ಇದು ಹಣಕಾಸು ಸೇವೆಗಳ ಕಂಪನಿಯಾಗಿದ್ದು, 1991ರ ಮೇನಲ್ಲಿ ಸ್ಥಾಪನೆಗೊಂಡಿದೆ. 1997ರಲ್ಲಿ ಸುಬ್ರಮಣಿಯನ್ ಸುಭಿಕ್ಷಾ ಪ್ರಾರಂಭಿಸಿದ್ದರು. ಅನೇಕ ಹೂಡಿಕೆದಾರರು ವಿಶ್ವಪ್ರಿಯ ಸಂಸ್ಥೆ ಹೂಡಿಕೆ ಯೋಜನೆಗಳ ಕಡೆಗೆ ಆಕರ್ಷಿತರಾಗಿದ್ದರು. ಪ್ರಸ್ತುತ 587 ಹೂಡಿಕೆದಾರರು ತಮ್ಮ ಹಣವನ್ನು ಹಿಂಪಡೆದಿಲ್ಲ. ಕಳೆದ 10 ವರ್ಷಗಳಲ್ಲಿ ಯಾವುದೇ ಹಣವನ್ನು ಠೇವಣಿಯಿಟ್ಟಿಲ್ಲ ಎಂಬ ವಿಚಾರವನ್ನು ಸುಬ್ರಮಣಿಯನ್ ಒಪ್ಪಿಕೊಂಡಿದ್ದಾರೆ. ಎಲ್ಲ ಕಾರ್ಯಕ್ರಮಗಳ ಮೂಲಕ ಠೇವಣಿದಾರರಿಗೆ 137 ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ವಂಚಿಸಲಾಗಿದೆ.
ಸುಬ್ರಮಣಿಯನ್ ಅವರಿಗೆ ಕೋರ್ಟ್ 8.92 ಕೋಟಿ ರೂ. ದಂಡ ವಿಧಿಸಿದೆ. ಇನ್ನು ಆಪಾದಿತ ಸಂಸ್ಥೆಗೆ 191.98 ಕೋಟಿ ರೂ. ದಂಡ ವಿಧಿಸಲಾಗಿದೆ. ಇದರಲ್ಲಿ 180 ಕೋಟಿ ರೂ. ಅನ್ನು ಠೇವಣಿದಾರರಿಗೆ ಪರಿಹಾರ ರೂಪದಲ್ಲಿ ನೀಡುವಂತೆ ಆದೇಶಿಸಲಾಗಿದೆ. ನ್ಯಾಯಾಲಯದ ತೀರ್ಪಿನ ಅನ್ವಯ ಪರಿಹಾರದ ಹಣವನ್ನು ಅಧಿಕೃತ ಸಂಸ್ಥೆಗೆ ವರ್ಗಾಯಿಸಬೇಕು. ಆ ಬಳಿಕ ಅಲ್ಲಿಂದ ಹಣವನ್ನು ಶೋಷಿತ ಹೂಡಿಕೆದಾರರಿಗೆ ವಿತರಿಸುವಂತೆ ಕೋರ್ಟ್ ತಿಳಿಸಿದೆ.
ಸುಬ್ರಮಣಿಯನ್ ವಿರುದ್ಧ ಅನೇಕ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸ್ ಎಕಾನಾಮಿಕ್ ಒಪೆನ್ಸ್ ವಿಂಗ್ (ಇಒಡಬ್ಲ್ಯು) ಸೆಪ್ಟೆಂಬರ್ 2015ರಲ್ಲಿ ಆತ ಹಾಗೂ ಆತ ಸಂಸ್ಥೆ ನಿರ್ದೇಶಕರನ್ನು ಬಂಧಿಸಿತ್ತು.
ಉದ್ಯಮಿಯಾಗಲು ಕ್ರಿಕೆಟ್‌ಗೆ ವಿದಾಯ ಹೇಳಿ, 100 ಕೋಟಿ ರೂ ಕಂಪೆನಿ ಕಟ್ಟಿದ ಆಟಗಾರ!
ಲಾಯರ್ ವೇಷ ತೊಟ್ಟ ಸುಬ್ರಮಣಿಯನ್
ಕೋರ್ಟ್ ನಲ್ಲಿ ತನ್ನ ಪ್ರಕರಣವನ್ನು ಸುಬ್ರಮಣಿಯನ್ ಸ್ವತಃ ವಾದಿಸಿದ್ದಾರೆ. ಅಲ್ಲದೆ, ತಮ್ಮ ಲಿಂಕ್ಡ್ ಇನ್ ಪ್ರೊಫೈಲ್ ನಲ್ಲಿ ಕಾರ್ಪೋರೇಟ್ ಲಾಯರ್ ಎಂದು ಬರೆದುಕೊಂಡಿದ್ದಾರೆ ಕೂಡ. ಐಐಟಿ, ಐಐಎಂನಿಂದ ಪದವಿ ಪಡೆದಿರುವ ಸುಬ್ರಮಣಿಯನ್ ಬಲು ಚಾಲಾಕಿ ಕೂಡ. ಈ ಪ್ರಕರಣವನ್ನು ಕೋರ್ಟ್ ನಲ್ಲಿ ಸುದೀರ್ಘ ಅವಧಿ ನಡೆಯುವಂತೆ ಮಾಡಿದ್ದಾರೆ ಕೂಡ. ಈ ಮೂಲಕ ಠೇವಣಿದಾರರಿಗೆ ಹಣ ಸಂದಾಯ ಮಾಡುವ ಅವಧಿಯನ್ನು ವಿಸ್ತರಿಸಿಕೊಂಡಿದ್ದಾರೆ. ಇವರ ಸಂಸ್ಥೆಯ ಬಹುತೇಕ ಠೇವಣಿದಾರರು ಹಿರಿಯ ನಾಗರಿಕರಾಗಿದ್ದ ಕಾರಣ ಅವರಲ್ಲಿ ಅನೇಕರು ಕೋರ್ಟ್ ತೀರ್ಪು ಬರುವ ಮುನ್ನವೇ ನಿಧನರಾಗಿದ್ದಾರೆ. ಇನ್ನೂ ಅನೇಕರು ಇಳಿ ವಯಸ್ಸಿನಲ್ಲಿ ಕೂಡಿಟ್ಟ ಹಣವನ್ನೆಲ್ಲ ಕಳೆದುಕೊಂಡು ಮಾನಸಿಕ ವ್ಯಾಧಿಗೆ ತುತ್ತಾಗಿದ್ದಾರೆ ಕೂಡ.