ಈ ಮಹಿಳೆಗೆ ಉದ್ಯಮ ಪ್ರಾರಂಭಿಸಲು ಅಡುಗೆ ಮನೆಯೇ ಪ್ರೇರಣೆ; ತುಪ್ಪ ಮಾರಾಟದಿಂದ ತಿಂಗಳಿಗೆ 20 ಲಕ್ಷ ರೂ.ಆದಾಯ!
ಸಾಧಿಸುವ ಛಲ,ಕಠಿಣ ಪರಿಶ್ರಮ ಉದ್ಯಮ ರಂಗದಲ್ಲಿ ಯಶಸ್ಸಿನ ಹಾದಿಯನ್ನು ತೋರುತ್ತದೆ ಎಂಬುದಕ್ಕೆ ಮುಂಬೈ ಮೂಲದ 'ಕಿಮ್ಮುಸ್ ಕಿಚನ್' ಸ್ಥಾಪಕಿ ಕಮಲ್ ಜಿತ್ ಕೌರ್ ಅತ್ಯುತ್ತಮ ನಿದರ್ಶನ. ಇವರ ಯಶಸ್ವಿ ಉದ್ಯಮದ ಕಥೆ ಅನೇಕ ಮಹಿಳೆಯರಿಗೆ ಪ್ರೇರಣದಾಯಿ ಕೂಡ. ತುಪ್ಪ ಉತ್ಪಾದಿಸಿ ಮಾರಾಟ ಮಾಡುವ ಮೂಲಕ ಇವರು, ಈಗ ತಿಂಗಳಿಗೆ 20ಲಕ್ಷ ರೂ.ಗಿಂತಲೂ ಅಧಿಕ ಆದಾಯ ಗಳಿಸುತ್ತಿದ್ದಾರೆ.
Business Desk:ಉದ್ಯಮ ಕ್ಷೇತ್ರಕ್ಕೆ ಇಂದು ಮಹಿಳೆ ಸಾಕಷ್ಟು ಕೊಡುಗೆ ನೀಡಿದ್ದಾಳೆ. ಐಟಿ ಕಂಪನಿಯಿಂದ ಹಿಡಿದು ಆಹಾರೋದ್ಯಮದ ತನಕ ಆಕೆಯ ಸಾಧನೆ ಅಸಮಾನ್ಯ. ಉದ್ಯಮಶೀಲ ಕೌಶಲ್ಯಗಳನ್ನು ಹೊಂದಿರುವ ಮಹಿಳೆ ಪ್ರಮುಖ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಗ್ರಾಮೀಣ ಭಾಗದ ಪ್ರಬಲ ಶೈಕ್ಷಣಿಕ ಹಿನ್ನೆಲೆ ಹೊಂದಿರದ ಮಹಿಳೆಯಿಂದ ಹಿಡಿದು ಐಐಟಿ ಅಥವಾ ಐಐಎಂ ಪದವಿ ಹೊಂದಿರುವ ಮಹಿಳೆ ತನಕ ಪ್ರತಿಯೊಬ್ಬರು ತಾವು ಕೈಗೊಂಡ ಉದ್ಯಮದಲ್ಲಿ ಇಂದು ಸಾಕಷ್ಟು ಯಶಸ್ಸು ಕಂಡಿದ್ದಾರೆ ಕೂಡ. ಇಂಥ ಯಶಸ್ವಿ ಮಹಿಳೆಯರಲ್ಲಿ ಕಮಲ್ ಜಿತ್ ಕೌರ್ ಕೂಡ ಒಬ್ಬರು. ಕೋವಿಡ್ ಸಂಕಷ್ಟದ ಸಮಯದಲ್ಲಿ ಅಡುಗೆಮನೆಯಲ್ಲೇ ಕಂಪನಿ ತೆರೆದ ಕಮಲ್ ಜಿತ್ ಕೌರ್ ಉದ್ಯಮ ಇಂದು ಸಾಕಷ್ಟು ವಿಸ್ತಾರವಾಗಿ ಬೆಳೆದಿದೆ. ಅತೀಕಡಿಮೆ ಅವಧಿಯಲ್ಲಿ ಲಾಭದಾಯಕ ಉದ್ಯಮವಾಗಿ ಬೆಳೆದು ನಿಂತಿದೆ. 50ನೇ ವಯಸ್ಸಿನಲ್ಲಿ 'ಕಿಮ್ಮೂಸ್ ಕಿಚನ್' ಸ್ಥಾಪಿಸಿದ ಕೌರ್, ತಾಜಾ ತುಪ್ಪವನ್ನು ಮಾರಾಟ ಮಾಡುತ್ತಿದ್ದಾರೆ. ಇವರ ಸಂಸ್ಥೆಯ ತುಪ್ಪದ ವಿಶೇಷತೆಯೇನೆಂದರೆ ಇದನ್ನು ಬೆಣ್ಣೆಯ ಬದಲು ಮೊಸರಿನಿಂದ ಸಿದ್ಧಪಡಿಸಲಾಗುತ್ತದೆ. ಈ ವಿಶಿಷ್ಟ ತಂತ್ರದ ಮೂಲಕ ಕೌರ್ ಪ್ರತಿ ತಿಂಗಳು 20ಲಕ್ಷ ರೂ.ಗಿಂತಲೂ ಅಧಿಕ ಆದಾಯ ಗಳಿಸುತ್ತಿದ್ದಾರೆ.
ಕಮಲ್ ಜಿತ್ ಕೌರ್ 2020ರಲ್ಲಿ ಮುಂಬೈಯಲ್ಲಿ 'ಕಿಮ್ಮುಸ್ ಕಿಚನ್' ಪ್ರಾರಂಭಿಸಿದರು. ಫಾರ್ಮ್ ಫ್ರೆಶ್ ತುಪ್ಪ ಸಿದ್ಧಪಡಿಸುವ ಕಡೆಗೆ ಈ ಸಂಸ್ಥೆ ಸಂಪೂರ್ಣ ಗಮನ ಕೇಂದ್ರೀಕರಿಸಿತ್ತು. ಕಮಲ್ ಜಿತ್ ಪ್ರಕಾರ ಅವರ ಗ್ರಾಮ ಪಂಜಾಬ್ ನ ಲೂಧೀನದಲ್ಲಿರುವಾಗ ಆಕೆಗೆ ಯಾವುದೇ ಕಾಯಿಲೆಗಳು ಬಾಧಿಸುತ್ತಿರಲಿಲ್ಲ. ಇದಕ್ಕೆ ಕಾರಣ ಅಲ್ಲಿ ಸಿಗುತ್ತಿದ್ದ ಶುದ್ಧ ತುಪ್ಪ ಹಾಗೂ ಹಾಲಿನ ಉತ್ಪನ್ನಗಳು ಎನ್ನೋದು ಅವರ ನಂಬಿಕೆ. ವಿವಾಹವಾಗಿ ಮುಂಬೈಗೆ ಬಂದ ಬಳಿಕ ಇಲ್ಲಿ ಶುದ್ಧ ಹಾಲಿನ ಉತ್ಪನ್ನಗಳನ್ನು ಹುಡುಕೋದು ಕಷ್ಟವಾಗಿತ್ತು. ಹೀಗಾಗಿ ಮನೆಯಲ್ಲೇ ಸಿದ್ಧಪಡಿಸುವ ನಿರ್ಧಾರ ಕೈಗೊಂಡಿದ್ದರು. ಆ ಬಳಿಕ ಇದನ್ನೇ ದೊಡ್ಡ ಪ್ರಮಾಣದಲ್ಲಿ ಸಿದ್ಧಪಡಿಸಿ ಮಾರಾಟ ಮಾಡುವ ಯೋಚನೆ ಹುಟ್ಟಿಕೊಂಡಿತು.
ಅಮೆರಿಕದಲ್ಲಿ ಹೋಟೆಲ್ ಉದ್ಯಮ ಪ್ರಾರಂಭಿಸಿ ಯಶಸ್ವಿಯಾದ ಭಾರತೀಯ ಮಹಿಳೆ; ಯಾರೀಕೆ ಆಯೇಷಾ ಥಾಪರ್?
ಸಾಂಪ್ರದಾಯಿಕ ಬಿಲೋನ ವಿಧಾನದ ಮೂಲಕ ಕೌರ್ ತುಪ್ಪ ಸಿದ್ಧಪಡಿಸುತ್ತಾರೆ. ಇದಕ್ಕಾಗಿ ಅವರು ಹಾಲನ್ನು ಪಂಜಾಬಿನ ಲೂಧಿಯಾನ ನಗರದಿಂದ ತರಿಸಿಕೊಳ್ಳುತ್ತಿದ್ದಾರೆ. ಆದರೆ, ಲೂಧಿಯಾನದಿಂದ ಹಾಲು ತರಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವೇನಲ್ಲ. ಆದರೆ, ಕಮಲ್ ಜಿತ್ ತಾವು ಸಿದ್ಧಪಡಿಸುವ ಹಾಲಿನ ಉತ್ಪನ್ನಗಳ ಪರಿಮಳ ಹಾಗೂ ಗುಣಮಟ್ಟ ಉತ್ತಮವಾಗಿರಬೇಕು ಎಂಬ ಕಾರಣಕ್ಕೆ ಲೂಧಿಯಾನದಿಂದಲೇ ಹಾಲು ತರಿಸಿಕೊಳ್ಳುತ್ತಿದ್ದಾರೆ.
ಬೆಣ್ಣೆಯ ಬದಲು ಮೊಸರಿನಿಂದ ತುಪ್ಪ
ತುಪ್ಪ ಉತ್ಪಾದಿಸಲು ಅನೇಕ ವಿಧಾನಗಳಿವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಕಮಲ್ ಜಿತ್ ವಿಶಿಷ್ಟ ವಿಧಾನದ ಮೂಲಕ ತುಪ್ಪ ಉತ್ಪಾದಿಸುತ್ತಾರೆ. ಅವರು ಬೆಣ್ಣೆಯ ಬದಲು ಬಿಲೋನ ವಿಧಾನದ ಮೂಲಕ ಮೊಸರಿನಿಂದ ತುಪ್ಪ ಉತ್ಪಾದಿಸುತ್ತಾರೆ.
ಅಂದು ಕೃಷಿಗಾಗಿ ಬ್ಯಾಂಕ್ ಉದ್ಯೋಗ ತೊರೆದ ಸಹೋದರರು,ಇಂದು 12 ಕೋಟಿ ರೂ. ವಹಿವಾಟು ನಡೆಸೋ ಸಂಸ್ಥೆಯ ಒಡೆಯರು!
ತಿಂಗಳಿಗೆ 20ಲಕ್ಷ ರೂ. ಗಳಿಕೆ
ಇತ್ತೀಚಿನ ವರ್ಷಗಳಲ್ಲಿ ಕಮಲ್ ಜಿತ್ ಕೌರ್ ಅವರ ತುಪ್ಪಕ್ಕೆ ಬೇಡಿಕೆ ಹೆಚ್ಚಿದೆ. ಬೇರೆ ರಾಷ್ಟ್ರಗಳ ಜನರು ಕೂಡ ಇವರ ತುಪ್ಪಕ್ಕಾಗಿ ಆರ್ಡರ್ ಮಾಡುತ್ತಿದ್ದಾರೆ. ರಿಟೇಲ್ ತುಪ್ಪದ ಬಾಟಲಿಗಳು ಮೂರು ಗಾತ್ರಗಳಲ್ಲಿ ಲಭ್ಯವಿವೆ. 220ಎಂಎಲ್, 500ಎಂಎಲ್ ಹಾಗೂ ಒಂದು ಲೀಟರ್ ಗಾತ್ರದಲ್ಲಿ ಲಭ್ಯವಿವೆ. ಎಷ್ಟು ಪ್ರಮಾಣದಲ್ಲಿ ಆರ್ಡರ್ ಮಾಡಿದ್ದರೆ ಎಂಬ ಆಧಾರದಲ್ಲಿ ತುಪ್ಪದ ಬೆಲೆ ನಿರ್ಧರಿಸುತ್ತಾರೆ. ಕಮಲ್ ಜಿತ್ ಕೌರ್ ಅವರ ಪುತ್ರ ಈ ಸಂಸ್ಥೆಯ ಸಿಟಿಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ನೀಡಿರುವ ಮಾಹಿತಿ ಅನ್ವಯ, 2021ರಲ್ಲಿ ಪ್ರತಿ ತಿಂಗಳು ಅವರು 4500ಕ್ಕೂ ಅಧಿಕ ತುಪ್ಪದ ಬಾಟಲ್ ಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ 20 ಲಕ್ಷ ರೂ.ಗಿಂತಲೂ ಅಧಿಕ ಆದಾಯ ಗಳಿಸಿದ್ದಾರೆ. ಇನ್ನು ಕೌರ್ ಅವರ ಆದಾಯದಲ್ಲಿ ಶೇ.1ರಷ್ಟನ್ನು ಗುರುದ್ವಾರ ಹಾಗೂ ಹಸಿದವರಿಗೆ ಅನ್ನ ನೀಡಲು ಮೀಸಲಿಟ್ಟಿದ್ದಾರೆ.