ಎಐ ಜಗತ್ತಿನ ದಿಗ್ಗಜ ಸ್ಯಾಮ್ ಅಲ್ಟಮ್ಯಾನ್ ಮೆಚ್ಚುಗೆ ಗಳಿಸಿದ ಭಾರತೀಯ ಯುವಕರ ಸ್ಟಾರ್ಟಪ್; ಇದರ ವಿಶೇಷತೆಯೇನು ಗೊತ್ತಾ?
ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಹದಿಹರೆಯದ ಯುವಕರಿಬ್ಬರ ಸಾಧನೆ ಒಪನ್ ಎಐ ಸಂಸ್ಥಾಪಕ ಸ್ಯಾಮ್ ಅಲ್ಟಮ್ಯಾನ್ ಗಮನ ಸೆಳೆದಿದೆ. ಇವರ ಎಐ ಸ್ಟಾರ್ಟಪ್ ಗೆ ಅಲ್ಟಮ್ಯಾನ್ ನೆರವು ನೀಡಿದ್ದಾರೆ ಕೂಡ.
Business Desk: ಭಾರತದಲ್ಲಿ ಸ್ಟಾರ್ಟಪ್ ಸ್ಥಾಪಿಸೋರ ಪ್ರಮಾಣ ಹೆಚ್ಚುತ್ತಿದೆ. ಕಿರಿಯ ವಯಸ್ಸಿನವರು ಕೂಡ ಇಂದು ಸ್ಟಾರ್ಟಪ್ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಅದರಲ್ಲೂ ಹದಿಹರೆಯದ ವಯಸ್ಸಿನ ಮಕ್ಕಳು ಕೂಡ ಸ್ಟಾರ್ಟಪ್ ಕಡೆಗೆ ಆಸಕ್ತಿ ತೋರುತ್ತಿರೋದು ಮುಂದಿನ ದಿನಗಳಲ್ಲಿ ಭಾರತ ಉದ್ಯಮ ರಂಗದಲ್ಲಿ ಮುಂಚೂಣಿಗೆ ಬರುವ ಎಲ್ಲ ಸಾಧ್ಯತೆಗಳನ್ನು ತೆರೆದಿಟ್ಟಿವೆ. ಆರ್ಯನ್ ಶರ್ಮಾ ಹಾಗೂ ಆಯುಷ್ ಪಾಠಕ್ ಎಂಬ ಹದಿಹರೆಯದ ಹುಡುಗರು ತಮ್ಮ ಸ್ಟಾರ್ಟಪ್ 'ಇಂಡ್ಯೂಸ್ಡ್ ಎಐ' ಮೂಲಕ ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಈ ಇಬ್ಬರು ಯುವ ಪ್ರತಿಭೆಗಳು ತಮ್ಮ ಸ್ಟಾರ್ಟಪ್ ಮೂಲಕ ಕೃತಕ ಬುದ್ಧಿಮತ್ತೆ (ಎಐ) ವಲಯದ ಕೆಲವು ಪ್ರಭಾವಿ ವ್ಯಕ್ತಿಗಳ ಗಮನ ಹಾಗೂ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ 2.3 ಮಿಲಿಯನ್ ಡಾಲರ್ ಸಂಪಾದಿಸುವಲ್ಲಿ ಕೂಡ ಇವರಿಬ್ಬರು ಯಶಸ್ವಿಯಾಗಿದ್ದಾರೆ. ಇನ್ನು ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ಜನಪ್ರಿಯ ವ್ಯಕ್ತಿ ಒಪನ್ ಎಐ ಸಂಸ್ಥಾಪಕ ಸ್ಯಾಮ್ ಅಲ್ಟಮ್ಯಾನ್ ಅವರ ಗಮನ ಸೆಳೆದಿದ್ದಾರೆ.
ನೀವು ಕ್ರಿಕೆಟ್ ಆಟ ಕಲಿಯಲು ಬಯಸಿದ್ದರೆ ಸಚಿನ್ ತೆಂಡೂಲ್ಕರ್ ಅವರಿಂದ ಕಲಿಯಲು ಬಯಸುತ್ತೀರಿ ತಾನೇ? ಅವರನ್ನೇ ಮಾದರಿಯಾಗಿಟ್ಟುಕೊಂಡು ಕ್ರಿಕೆಟ್ ಕಲಿಯಲು ಬಯಸುತ್ತೀರಿ. ಹಾಗೆಯೇ ಎಐ ಜಗತ್ತಿನಲ್ಲಿ ಒಪನ್ ಎಐ ಸಂಸ್ಥಾಪಕ ಸ್ಯಾಮ್ ಅಲ್ಟಮ್ಯಾನ್ ಕೂಡ. ತಂತ್ರಜ್ಞಾನದ ವಿಷಯದಲ್ಲಿ ಸ್ಯಾಮ್ ಅಲ್ಟಮ್ಯಾನ್ ಈ ಇಬ್ಬರು ಮಕ್ಕಳಿಗೆ ನೆರವು ನೀಡಲಿದ್ದಾರೆ. ಹಾಗೆಯೇ ಹೂಡಿಕೆ ಸಂಸ್ಥೆಗಳಾದ ಪೀಕ್ ಎಕ್ಸ್ ವಿ, ಎಸ್ ವಿ ಏಂಜೆಲ್ ಹಾಗೂ ಸಂಸ್ಥಾಪಕರು ಒಟ್ಟಾಗಿ ಅವರ ಉದ್ಯಮ ಪಯಣಕ್ಕೆ ನೆರವು ನೀಡುತ್ತಿದ್ದಾರೆ.
ಮಾಡಿದ ತಪ್ಪನ್ನೇ ಮತ್ತೆ ಮಾಡ್ಬೇಡಿ;ಸ್ಟಾರ್ಟ್ ಅಪ್ ಪ್ರಾರಂಭಿಸಿರೋ ಯುವಜನರಿಗೆ ರಿತೇಶ್ ಅಗರ್ವಾಲ್ ಕಿವಿಮಾತು
ಅಲ್ಟಮ್ಯಾನ್ ಗಮನ ಸೆಳೆದ ಆರ್ಯನ್ ಹಾಗೂ ಆಯುಷ್
ಎಐ ಜಗತ್ತಿನಲ್ಲಿ ತಮ್ಮಿಬ್ಬರ ಪಯಣದ ಬಗ್ಗೆ ಪಾಡ್ ಕಾಸ್ಟ್ ನಲ್ಲಿ ಆರ್ಯನ್ ಶರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ. ಒವರ್ ಪವರ್ಡ್ ಎಂಬ ಪಾಡ್ ಕಾಸ್ಟ್ ನಲ್ಲಿ ಸ್ಯಾಮ್ ಅಲ್ಟಮ್ಯಾನ್ ಅವರಿಂದ ಬೆಂಬಲ ಪಡೆಯುವ ತಮ್ಮ ಅಸಂಪ್ರದಾಯಿಕ ಹಾದಿಯ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಕೈಯಲ್ಲಿ ಬಿಡಿಗಾಸು ಇಲ್ಲದೆ ಶೂನ್ಯದಿಂದ ಉದ್ಯಮವನ್ನು ಆರ್ಯನ್ ಹಾಗೂ ಆಯುಷ್ ಪ್ರಾರಂಭಿಸಿದ್ದಾರೆ. ಜಗತ್ತಿನಾದ್ಯಂತ ಇರುವ ಟೆಕ್ ವ್ಯಕ್ತಿಗಳನ್ನು ಕೋಲ್ಡ್ ಇ-ಮೇಲ್ ಗಳ ಮೂಲಕ ಸಂಪರ್ಕಿಸುವ ಕೆಲಸವನ್ನು ಶರ್ಮಾ ಆರಂಭಿಸಿದ್ದಾರೆ. ಸಾಕಷ್ಟು ಸವಾಲುಗಳ ನಡುವೆಯೂ ಇವರಿಬ್ಬರು ಉದ್ಯಮ ಮುನ್ನಡೆಸಿದ್ದಾರೆ. ಅನೇಕ ಜನರು ತಮ್ಮನ್ನು ಸಂಪರ್ಕಿಸೋದನ್ನು ನಿಲ್ಲಿಸುವಂತೆ ಕೂಡ ಹೇಳಿದ್ದರು. ಆದರೂ ಇವರಿಬ್ಬರು ಛಲ ಬಿಡದೆ ಮುಂದೆ ಸಾಗುತ್ತಿದ್ದಾರೆ.
ಆರ್ಯನ್ ಹಾಗೂ ಆಯುಷ್ ಅಲ್ಟಮ್ಯಾನ್ ಅವರನ್ನು ಭೇಟಿಯಾಗಲು ಸ್ಯಾನ್ ಫ್ರಾನ್ಸಿಸ್ಕೋಗೆ ಭೇಟಿ ನೀಡಿದ್ದರು. ಅಲ್ಲಿ ಎಐ ಕ್ಷೇತ್ರದ ದಿಗ್ಗಜರನ್ನು ಭೇಟಿಯಾಗಲು ಸಾಕಷ್ಟು ಪ್ರಯತ್ನಿಸಿದ್ದರು. ಅಂತಿಮವಾಗಿ ಅಲ್ಟಮ್ಯಾನ್ ಅವರನ್ನು ಭೇಟಿಯಾಗಲು ಅವರಿಬ್ಬರಿಗೆ ಸಾಧ್ಯವಾಯಿತು. ಆರ್ಯನ್ ಶರ್ಮಾ ಪ್ರಯತ್ನ ಫಲಿಸಿತು. ಅಲ್ಟಮ್ಯಾನ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿತು. ಈ ಮೂಲಕ ಅವರಿಂದ ಹಾಗೂ ಅವರ ಕನಸಿನ ಕೂಸು ಒಪನ್ ಎಐಯಿಂದ ಸಾಕಷ್ಟು ಕಲಿಯಲು ಕೂಡ ಅವಕಾಶ ಸಿಕ್ಕಿತು.
ಉದ್ಯಮ ಪ್ರಾರಂಭಿಸಲು ಕನಿಷ್ಠ ಎಷ್ಟು ಬಂಡವಾಳ ಬೇಕು? ಸ್ಟಾರ್ಟ್ ಅಪ್ ಪ್ರಾರಂಭಿಸೋರಿಗೆ ವಿನೀತಾ ಸಿಂಗ್ ಟಿಪ್ಸ್ ಹೀಗಿದೆ
ಇನ್ನು ಆಯುಷ್ ಹಾಗೂ ಆರ್ಯನ್ ತಮ್ಮ ಸಂಸ್ಥೆಗೆ ಫಂಡ್ ಸಂಗ್ರಹ ಮಾಡುವಾಗ ಕೂಡ ಅಲ್ಟಮ್ಯಾನ್ ನೆರವು ಸಿಕ್ಕಿತು. ಅವರ ಕಠಿಣ ಪರಿಶ್ರಮ ಹಾಗೂ ಮುಂದಾಲೋಚನೆಯಿಂದ ಪ್ರಭಾವಿತರಾದ ಅಲ್ಟಮ್ಯಾನ್ ಸೀಡ್ ಫಂಡಿಂಗ್ ಸುತ್ತಿನಲ್ಲಿ ಕೂಡ ಭಾಗವಹಿಸಿದರು.
ಇಂಡ್ಯೂಸ್ಡ್ ಎಐ ಏನ್ ಮಾಡುತ್ತೆ?
ವಿವಿಧ ಕಾರ್ಯಗಳನ್ನು ನಿರ್ವಹಿಸುವ ಎಐ ಏಜೆಂಟ್ ಜೊತೆಗೆ ಬೆರೆತಿರುವ ಬ್ರೌಸರ್ ಬಳಸಿಕೊಂಡು ಇಂಡ್ಯೂಸ್ಡ್ ಎಐ ಕಾರ್ಯನಿರ್ವಹಿಸುತ್ತದೆ. ಅವರ ಎಐ ಸಂಪೂರ್ಣವಾಗಿ ಕ್ಲೌಡ್ ನಲ್ಲೇ ಕಾರ್ಯನಿರ್ವಹಿಸುತ್ತದೆ. ಬಳಕೆದಾರರ ಸಾಧನದಲ್ಲಿನ ಇತರ ಕಾರ್ಯಗಳಿಗೆ ಅದು ಅಡ್ಡಿಯುಂಟು ಮಾಡೋದಿಲ್ಲ.