ಓಯೋ ಸ್ಥಾಪಕ ರಿತೇಶ್ ಅಗರ್ವಾಲ್ ಉದ್ಯಮ ಜರ್ನಿ ಸುಲಭದ್ದಾಗಿರಲಿಲ್ಲ. ಬಂಡವಾಳವಿಲ್ಲದೆ ಉದ್ಯಮ ಪ್ರಾರಂಭಿಸಿ ಯಶಸ್ವಿಯಾದ ರಿತೇಶ್, ಸ್ಟಾರ್ಟ್ ಅಪ್ ಪ್ರಾರಂಭಿಸಿರುವ ಯುವಜನರಿಗೆ ತಮ್ಮ 'ಎಕ್ಸ್' ಪೋಸ್ಟ್ ನಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ.
Business Desk:ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಉದ್ಯಮ ಜಗತ್ತಿನ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ. ಆ ಪಯಣದಲ್ಲಿ ಸಾಕಷ್ಟು ಏರಿಳಿತಗಳು, ಸೋಲುಗಳು -ಗೆಲುವುಗಳು ಇದ್ದವು. ಬರಿಗೈಯಲ್ಲಿ ಉದ್ಯಮ ಪ್ರಾರಂಭಿಸಿ ಲಾಭದಾಯಕ ಸಂಸ್ಥೆಯನ್ನಾಗಿ ಅಭಿವೃದ್ಧಿ ಪಡಿಸೋದು ಹೇಗೆ ಎಂಬ ಬಗ್ಗೆ ರಿತೇಶ್ ಅಗರ್ವಾಲ ಯುವಜನರಿಗೆ ಸಲಹೆ ನೀಡಿದ್ದಾರೆ. ಈ ಬಗ್ಗೆ 'ಎಕ್ಸ್' ನಲ್ಲಿ ಪೋಸ್ಟ್ ಹಾಕಿರುವ ಅಗರ್ವಾಲ್, ತಪ್ಪುಗಳನ್ನು ಮಾಡಿ. ಆದರೆ, ಮಾಡಿದ ತಪ್ಪನ್ನೇ ಪದೇಪದೇ ಮಾಡಬೇಡಿ ಎಂಬ ಸಲಹೆ ನೀಡಿದ್ದಾರೆ. ಅಲ್ಲದೆ, ಸ್ಟಾರ್ಟ್ ಅಪ್ ಸಮುದಾಯಕ್ಕೆ ಹೆಚ್ಚಿನ ನೆರವು, ಸಹಕಾರ ನೀಡೋದು ತನಗೆ ಖುಷಿಯ ವಿಚಾರ ಎಂದು ಈ ಸಂದರ್ಭದಲ್ಲಿ ರಿತೀಶ್ ಹೇಳಿದ್ದಾರೆ. ಯುವ ಸ್ಟಾರ್ಟ್ ಅಪ್ ಸಂಸ್ಥಾಪಕರಿಗೆ ಸಲಹೆ ನೀಡಲು ಹಾಗೂ ಗುರುವಾಗಲು ನಾನು ಹೆಚ್ಚು ಉತ್ಸುಕನಾಗಿದ್ದೇನೆ. ಯಾವುದೇ ಬಂಡವಾಳವಿಲ್ಲದೆ ಉದ್ಯಮ ಪ್ರಾರಂಭಿಸಿರುವ ನನ್ನ ಅನುಭವದಿಂದ ಅವರು ಶೀಘ್ರದಲ್ಲಿ ಒಂದಿಷ್ಟು ವಿಚಾರಗಳನ್ನು ಕಲಿಯಬಹುದು. ಸ್ಟಾರ್ಟ್ ಅಪ್ ಸಮುದಾಯಕ್ಕೆ ಮರಳಿ ಏನಾದರೂ ಕೊಡುಗೆ ನೀಡಲು ನಾನು ಸದಾ ಉತ್ಸುಕನಾಗಿದ್ದೇನೆ ಎಂದು ಅಗರ್ವಾಲ್ 'ಎಕ್ಸ್' ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ರಿತೇಶ್ ಅಗರ್ವಾಲ್ ಅವರ ಈ ಪೋಸ್ಟ್ ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಅನೇಕರು ರಿತೇಶ್ ಅವರ ಮಾತುಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಯುವ ಹಾಗೂ ಇನ್ನಷ್ಟೇ ಪ್ರವರ್ಧಮಾನಕ್ಕೆ ಬರಬೇಕಾದ ಉದ್ಯಮಿಗಳಿಗೆ ನೆರವು ನೀಡುತ್ತೇನೆ ಎಂಬ ಅವರ ಮಾತುಗಳನ್ನು ಹೊಗಳಿ ಕಾಮೆಂಟ್ ಮಾಡಿದ್ದಾರೆ. 'ಅತ್ಯುತ್ತಮ ಸಲಹೆ! ನಮ್ಮ ತಪ್ಪುಗಳಿಂದ ಕಲಿಯೋದು ಬೆಳವಣಿಗೆ ಹಾಗೂ ಯಶಸ್ಸಿಗೆ ಕೀಲಿಕೈ. ಯುವ ಸಂಸ್ಥಾಪಕರಿಗೆ ಮಾರ್ಗದರ್ಶನ ಹಾಗೂ ಸಲಹೆ ನೀಡೋದು ನಿಮ್ಮ ಅನುಭವಗಳನ್ನು ಹಂಚಿಕೊಳ್ಳಲು ಇರುವ ಅದ್ಭುತ ಮಾರ್ಗ. ಹಾಗೆಯೇ ಅದೇ ಸಮಸ್ಯೆಯಲ್ಲಿ ಅವರು ಸಿಲುಕದಂತೆ ನೆರವು ನೀಡಲು ಇರುವ ಉತ್ತಮ ಮಾರ್ಗ. ಇದೇ ರೀತಿ ಪ್ರೋತ್ಸಾಹ ನೀಡುತ್ತಿರಿ' ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
'ನಿಜವಾಗಲೂ! ತಪ್ಪುಗಳಿಂದ ಕಲಿಯೋದು ನಮ್ಮ ಬೆಳವಣಿಗೆಗೆ ಅತ್ಯಗತ್ಯ. ಮಾರ್ಗದರ್ಶನ ನೀಡಲು ಹಾಗೂ ಸ್ಟಾರ್ಟ್ ಅಪ್ ಸಮುದಾಯಕ್ಕೆ ಹಿಂತಿರುಗಿ ನೀಡಲು ನಿಮಗಿರುವ ಬಯಕೆ ಮೆಚ್ಚುವಂಥದ್ದು' ಎಂದು ಇನ್ನೊಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇಂದು ಭಾರತದ ಎರಡನೇ ಅತೀಕಿರಿಯ ಬಿಲಿಯನೇರ್ ಆಗಿ ಬೆಳೆದಿರುವ ರಿತೇಶ್ ಅಗರ್ವಾಲ್ ಜನಪ್ರಿಯ ರಿಯಾಲಿಟಿ ಶೋ 'ಶಾರ್ಕ್ ಟ್ಯಾಂಕ್ ಇಂಡಿಯಾ' ಮೂರನೇ ಸೀಸನ್ ತೀರ್ಪುಗಾರರು ಕೂಡ ಆಗಿದ್ದಾರೆ. 1993ರಲ್ಲಿ ಕಟಕ್‌ನ ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಅವರು ಡಿಶಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ, ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿದರು. ಕಾಲೇಜಿನಲ್ಲಿದ್ದಾಗಲೇ, ರಿತೇಶ್ ಕೇವಲ 18 ವರ್ಷ ವಯಸ್ಸಿನವರಾಗಿದ್ದಾಗ ಅಂದರೆ 2012ರಲ್ಲಿ ಒರಾವೆಲ್ ಸ್ಟೇಸ್ ಎಂಬ ಏರ್‌ಬಿಎನ್‌ಬಿ ಎಂಬ ಎಂಬ ಹೋಟೆಲ್ ಬುಕ್ಕಿಂಗ್ ಸ್ಟಾರ್ಟಪ್ ಆರಂಭಿಸಿದರು. 2012ರ ಸೆಪ್ಟೆಂಬರ್ ನಲ್ಲಿ ವೆಂಚರ್ ನರ್ಸರಿ ಎಂಬ ಉತ್ತೇಜನ ಕಾರ್ಯಕ್ರಮದಡಿಯಲ್ಲಿ ಅವರು 30ಲಕ್ಷ ರೂ. ಪಡೆಯುವಲ್ಲಿ ಸಫಲರಾಗುತ್ತಾರೆ. ಅದೇ ವರ್ಷ ರಿತೇಶ್ ಥೈಲ್ ಫೆಲೋಶಿಪ್ ಕಾರ್ಯಕ್ರಮದ ವಿಜೇತರಾಗುತ್ತಾರೆ. ಈ ಫೆಲೋಶಿಪ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಕೂಡ ರಿತೇಶ್ ಅವರದ್ದಾಗಿದೆ. ಇದರಿಂದ ದೊರೆತ 100,000 ಡಾಲರ್ ಬಳಸಿ 2013ರ ಮೇನಲ್ಲಿ ರಿತೇಶ್ ಓಯೋ ರೂಮ್ಸ್ ಸ್ಥಾಪಿಸಿದರು.
ಸಿಮ್ ಮಾರಿ ಜೀವನ ನಡೆಸ್ತಿದ್ದ ವ್ಯಕ್ತಿಯೀಗ ಟಿವಿ ಸ್ಟಾರ್, ಬರೋಬ್ಬರಿ 80,000 ಕೋಟಿ ಕಂಪೆನಿಯ ಮಾಲೀಕ!
ರಿತೇಶ್ ಪದವಿ ಶಿಕ್ಷಣ ಪೂರ್ಣಗೊಳಿಸಲೇ ಇಲ್ಲ. ಸಂಕಷ್ಟದ ಸಮಯದಲ್ಲಿ ಸಿಮ್ ಕಾರ್ಡ್ ಕೂಡ ಮಾರುವ ಕೆಲಸ ಮಾಡಿದ್ದರು. 2013ರ ನಂತರ ಓಯೋ ತುಂಬಾ ವೇಗವಾಗಿ ಬೆಳೆಯಿತು. 2022 ರಲ್ಲಿ, ಮನಿ ಮಿಂಟ್ ರಿತೇಶ್ ಅವರ ನಿವ್ವಳ ಮೌಲ್ಯವು ಬರೋಬ್ಬರಿ 16,462 ಕೋಟಿ ಎಂದು ವರದಿ ಮಾಡಿದೆ.
