ಉದ್ಯಮ ಪ್ರಾರಂಭಿಸಲು ಕನಿಷ್ಠ ಎಷ್ಟು ಬಂಡವಾಳ ಬೇಕು? ಸ್ಟಾರ್ಟ್ ಅಪ್ ಪ್ರಾರಂಭಿಸೋರಿಗೆ ವಿನೀತಾ ಸಿಂಗ್ ಟಿಪ್ಸ್ ಹೀಗಿದೆ
ಉದ್ಯಮ ಪ್ರಾರಂಭಿಸೋ ಯೋಚನೆಯಲ್ಲಿರೋರಿಗೆ ಶಾರ್ಕ್ ಟ್ಯಾಂಕ್ ಇಂಡಿಯಾದ ತೀರ್ಪುಗಾರ್ತಿ ವಿನೀತಾ ಸಿಂಗ್ ಅತ್ಯಮೂಲ್ಯ ಸಲಹೆ ನೀಡಿದ್ದಾರೆ. ಇವರ ಪ್ರಕಾರ ಉದ್ಯಮ ಪ್ರಾರಂಭಿಸಲು ಕನಿಷ್ಠ ಬಂಡವಾಳದ ಅಗತ್ಯವೇ ಇಲ್ಲ. ಹೇಗೆ ಅಂತೀರಾ? ಮುಂದೆ ಓದಿ.
Business Desk: ಇತ್ತೀಚಿನ ದಿನಗಳಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂದು ಬಯಸೋರ ಸಂಖ್ಯೆ ಹೆಚ್ಚುತ್ತಿದೆ. ಇಂದಿನ ಯುವಜನತೆ ಕೂಡ ನವೋದ್ಯಮದತ್ತ ಒಲವು ತೋರುತ್ತಿದ್ದಾರೆ. ಐಐಟಿ, ಐಐಎಂನಂತಹ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಓದಿದವರು ಕೂಡ ಪ್ರತಿಷ್ಟಿತ ಕಂಪನಿಗಳಲ್ಲಿನ ದೊಡ್ಡ ಆಫರ್ ಗಳನ್ನು ತಿರಸ್ಕರಿಸಿ ಸ್ಟಾರ್ಟ್ ಅಪ್ ಪ್ರಾರಂಭಿಸುತ್ತಿದ್ದಾರೆ. ಪರಿಣಾಮ ಭಾರತ ಇಂದು ಜಗತ್ತಿನ ಪ್ರಮುಖ ಸ್ಟಾರ್ಟ್ ಅಪ್ ಹಬ್ ಆಗಿ ಬೆಳೆಯುತ್ತಿದೆ. ಹಿಂದೆ ಉದ್ಯಮ ಅಂದ್ರೆ ಭಾರತದಲ್ಲಿ ಹಿಂದೆ ಸರಿಯುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಉದ್ಯಮದಲ್ಲಿ ರಿಸ್ಕ್ ಜಾಸ್ತಿ, ಅಪ್ಪನೋ, ಅಜ್ಜನೋ ಮಾಡಿಟ್ಟ ಆಸ್ತಿಯಿರಬೇಕು ಮುಂತಾದ ಒಂದಿಷ್ಟು ಭಾವನೆಗಳು ಜನರಲ್ಲಿತ್ತು. ಆದರೆ, ಕಾಲ ಬದಲಾಗಿದೆ. ಈಗಿನ ಜನರು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದಾರೆ. ಯಾರದ್ದೋ ಕೈಕೆಳಗೆ ಕೆಲಸ ಮಾಡೋ ಬದಲು ನಾವೇ ಏನಾದ್ರೂ ಪ್ರಾರಂಭಿಸಬೇಕು ಎಂಬ ತುಡಿತ ಹೆಚ್ಚಿದೆ. ಈ ರೀತಿ ನವೋದ್ಯಮದ ಕನಸು ಕಾಣೋರಿಗೆ ಜನಪ್ರಿಯ ರಿಯಾಲ್ಟಿ ಶೋ 'ಶಾರ್ಕ್ ಟ್ಯಾಂಕ್ ಇಂಡಿಯಾ' ದೊಡ್ಡ ಪ್ರೇರಣೆಯಾಗಿದೆ ಎಂದೇ ಹೇಳಬಹುದು. ಅದರಲ್ಲೂ ಈ ಶೋನಲ್ಲಿರುವ ತೀರ್ಪುಗಾರರು ಹೊಸದಾಗಿ ಉದ್ಯಮ ಪ್ರಾರಂಭಿಸೋರಿಗೆ ಒಂದಿಷ್ಟು ಟಿಪ್ಸ್ ನೀಡುತ್ತಲೇ ಇರುತ್ತಾರೆ. ಈಗ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ -3 ತೀರ್ಪುಗಾರರಲ್ಲಿ ಒಬ್ಬರಾಗಿರುವ ವಿನೀತಾ ಸಿಂಗ್ ಕೂಡ ಉದ್ಯಮ ಪ್ರಾರಂಭಿಸೋರಿಗೆ ಉಪಯುಕ್ತ ಟಿಪ್ಸ್ ನೀಡಿದ್ದಾರೆ.
ಶಾರ್ಕ್ ಟ್ಯಾಂಕ್ ಇಂಡಿಯಾ ವೇದಿಕೆಯಲ್ಲಿ ಉದ್ಯಮಕ್ಕೆ ಸಂಬಂಧಿಸಿ ವೀಕ್ಷಕರು ಕೇಳಿರುವ ಪ್ರಶ್ನೆಗಳಿಗೆ ಶುಗರ್' ಕಾಸ್ಮೆಟಿಕ್ಸ್ ಸ್ಥಾಪಕಿ ವಿನೀತಾ ಸಿಂಗ್ ಉತ್ತರಿಸಿದ್ದಾರೆ. ಹೊಸ ನವೋದ್ಯಮಿ ಕನಿಷ್ಠ ಬಂಡವಾಳದೊಂದಿಗೆ ಉದ್ಯಮ ಪ್ರಾರಂಭಿಸೋದು ಹೇಗೆ? ಎಂದು ವೀಕ್ಷಕರೊಬ್ಬರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ವಿನೀತಾ ಸಿಂಗ್ , ನಾನು 16 ವರ್ಷಗಳ ಹಿಂದೆ ಉದ್ಯಮ ಪ್ರಾರಂಭಿಸಿದಾಗ ನನ್ನ ಬಳಿ ಕನಿಷ್ಠ ಬಂಡವಾಳ ಅಂದೇನೂ ಇರಲಿಲ್ಲ. ನಿಜ ಹೇಳಬೇಕೆಂದ್ರೆ ಶೂನ್ಯ ಬಂಡವಾಳವೇ ಇತ್ತು. ಹೀಗಾಗಿ ಉದ್ಯಮ ಪ್ರಾರಂಭಿಸಲು ಇಷ್ಟೇ ಕನಿಷ್ಠ ಬಂಡವಾಳ ಬೇಕು ಎಂದು ಹೇಳಲಾಗದು. ಆದರೆ, ಉದ್ಯಮದ ಪ್ರಾರಂಭಿಕ ಕೆಲವು ವರ್ಷಗಳು ಮಾತ್ರ ಒಂದೊಂದು ಪೈಸೆಗೂ ಕಷ್ಟಪಡಬೇಕಾಗುತ್ತದೆ ಎಂದು ವಿನೀತಾ ಉತ್ತರಿಸಿದ್ದಾರೆ.
ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಬೆಂಗಳೂರು ಸಹೋದರರ ಕಮಾಲ್; ಚ್ಯೂಯಿಂಗ್ ಗಮ್ ಬ್ರ್ಯಾಂಡಿಗೆ ಹರಿದುಬಂತು ಹೂಡಿಕೆ
ಉದ್ಯಮದ ಪ್ರಾರಂಭಿಕ ದಿನಗಳು ಹೇಗೆ ಕಷ್ಟಕರವಾಗಿರುತ್ತವೆ ಎಂಬುದನ್ನು ವಿನೀತಾ ಸಿಂಗ್ ತಮ್ಮ ಸ್ವಂತ ಅನುಭವಗಳನ್ನೇ ನಿದರ್ಶನ ನೀಡುವ ಮೂಲಕ ವಿವರಿಸಿದ್ದಾರೆ. ಉದ್ಯಮ ಪ್ರಾರಂಭಿಸಿದ ದಿನಗಳಲ್ಲಿ ಮನೆಯಲ್ಲಿ ವಾಟರ್ ಫಿಲ್ಟರ್ ಅಥವಾ ಅಕ್ವಾ ಗಾರ್ಡ್ ಹಾಕಿಸಲು ಕೂಡ ನನ್ನ ಬಳಿ ಹಣವಿರಲಿಲ್ಲ ಎಂದು ವಿನೀತಾ ಹೇಳಿದ್ದಾರೆ. ಅಮ್ಮ ಅಕ್ವಾಗಾರ್ಡ್ ಬೇಕೇಬೇಕು ಎಂದು ನನ್ನ ಬಳಿ ಹಟ ಹಿಡಿದು ಹಾಕಿಸಿಕೊಂಡರು. ಆದರೆ, ಅದಕ್ಕೆ ಹಣ ನೀಡಲು ಕೂಡ ಹೆಣಗಾಡಬೇಕಾಯಿತು ಎಂದಿದ್ದಾರೆ. ಆದರೆ, ನೀವು ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಸಹನೆಯಿಂದ ಉದ್ಯಮ ಮುನ್ನಡೆಸಿದಾಗ ಯಶಸ್ಸು ಕಾಣಲು ಸಾಧ್ಯ ಎಂದಿದ್ದಾರೆ.
1 ಕೋಟಿಯ ಕೆಲಸ ತಿರಸ್ಕರಿಸಿ ತನ್ನದೇ ಬ್ರ್ಯಾಂಡ್ ನಿರ್ಮಿಸಿದ ವಿನಿತಾ ಸಿಂಗ್!
ಹಣದ ಹರಿವಿನ ಮೇಲೆ ಹಿಡಿತವಿರಲಿ
ಉದ್ಯಮವನ್ನು ಸಹನೆಯಿಂದ ಮುನ್ನಡೆಸುವ ಜೊತೆಗೆ ನಗದು ಹಣದ ಹರಿವಿನ ಮೇಲೆ ಬಿಗಿಯಾದ ಹಿಡಿತ ಹೊಂದಿದ್ದರೆ, ಹಣಕಾಸಿನ ಶಿಸ್ತು ಕಾಪಾಡಿದರೆ, ಅನಗತ್ಯ ವೆಚ್ಚ ಮಾಡದಿದ್ರೆ ಉದ್ಯಮ ಪ್ರಾರಂಭಿಸಲು ಯಾವುದೇ ಹಣ ಕಡಿಮೆಯಾಗೋದಿಲ್ಲ ಎನ್ನುವುದು ವಿನೀತಾ ಸಿಂಗ್ ಅಭಿಪ್ರಾಯ. ನನ್ನ ಪ್ರಕಾರ ಉದ್ಯಮ ಪ್ರಾರಂಭಿಸಲು ಯಾವುದೇ ಬಂಡವಾಳ ಕಡಿಮೆ ಅಲ್ಲ. 5 ಸಾವಿರ, 10 ಸಾವಿರ, 20 ಸಾವಿರ ಬಂಡವಾಳದಿಂದ ಉದ್ಯಮ ಪ್ರಾರಂಭಿಸಿ ಸಾವಿರಾರು ಕೋಟಿ ಉದ್ಯಮ ಸಾಮ್ರಾಜ್ಯ ಕಟ್ಟಿರುವ ಅನೇಕರನ್ನು ನಾವು ನೋಡಿದ್ದೇವೆ. ಹೀಗಾಗಿ ನೀವು ನಿಮ್ಮ ಲಾಭಾಂಶದ ಜೊತೆಗೆ ವರ್ಕಿಂಗ್ ಕ್ಯಾಪಿಟಲ್ ಹಾಗೂ ನಗದು ಹಣದ ಹರಿವಿನ ಮೇಲೆ ದೃಷ್ಟಿ ನೆಟ್ಟಿರೋದು ಅಗತ್ಯ. ಏಕೆಂದರೆ ಉದ್ಯಮ ಪ್ರಾರಂಭಿಸುವಾಗ ನಿಮ್ಮ ಬಳಿ ಹಣವಿರದಿದ್ರೆ ಮುಂದಿನ ದಿನಗಳಲ್ಲಿ ನಗದು ಹಣ ನಿಮ್ಮ ಉದ್ಯಮಕ್ಕೆ ರಾಣಿಯಾಗಿರುತ್ತದೆ. ಹೀಗಾಗಿ ನಗದು ಹರಿವಿನ ಮೇಲೆ ಹಿಡಿತವಿರಲಿ ಎಂಬ ಸಲಹೆಯನ್ನು ವಿನೀತಾ ಸಿಂಗ್ ನೀಡಿದ್ದಾರೆ.