ಉದ್ಯಮಿ ಅನಿಲ್ ಅಂಬಾನಿ ಇಡಿ ಶಾಕ್, ರಿಲಯನ್ಸ್ ಪವರ್ ಕಾರ್ಯಾಕಾರಿ ನಿರ್ದೇಶಕ ಅರೆಸ್ಟ್ ಆಗಿದ್ದಾರೆ. 2023ರ ನಕಲಿ ಬ್ಯಾಂಕ್ ಗ್ಯಾರೆಂಟಿ ಪ್ರಕರಣದಡಿ ಇಡಿ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.

ನವದೆಹಲಿ (ಅ.11) ಉದ್ಯಮಿ ಅನಿಲ್ ಅಂಬಾನಿ ಈಗಾಗಲೇ ಹಲವು ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಅನಿಲ್ ಅಂಬಾನಿ ಸಂಕಷ್ಟ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ನಡುವೆ ಇಡಿ ಅಧಿಕಾರಿಗಳ ಕಾರ್ಯಾಚರಣೆಗೆ ಅನಿಲ್ ಅಂಬಾನಿ ಬೆಚ್ಚಿ ಬಿದ್ದಿದ್ದಾರೆ. 2023ರ ನಕಲಿ ಗ್ಯಾರೆಂಟಿ ಪ್ರಕರಣ ಸಂಬಂಧ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್ ಲಿಮಿಟಡ್ ಸಿಎಫ್ಒ ಹಾಗೂ ಕಾರ್ಯಾಕಾರಿ ನಿರ್ದೇಶಕ ಅಶೋಕ್ ಕುಮಾರ್ ಅರೆಸ್ಟ್ ಆಗಿದ್ದಾರೆ. ವಿಚಾರಣೆ ಬಳಿಕ ಅಶೋಕ್ ಪಾಲ್ ಬಂಧಿಸಿರುವ ಇಡಿ ಅಧಿಕಾರಿಗಳು ಇಂದು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಸಿಎಫ್ಒ ಸಂಕಷ್ಟ

ರಿಲಯನ್ಸ್ ಪವರ್ ಲಿಮಿಟೆಡ್ ಕಂಪನಿಯ ಚೀಫ್ ಫಿನಾನ್ಶಿಯಲ್ ಆಫೀಸರ್ (ಸಿಎಫ್ಒ) ಆಗಿರುವ ಅಶೋಕ್ ಪಾಲ್ ಇದೀಗ ಇಡಿ ಕಸ್ಟಡಿಯಲ್ಲಿದ್ದಾರೆ. ನಕಲಿ ಬ್ಯಾಂಕ್ ಗ್ಯಾರೆಂಟಿ ಕುರಿತು ಸತತ ವಿಚಾರಣೆ ಎದುರಿಸುತ್ತಿದ್ದಾರೆ. ಜನವರಿ 29, 2023ರಲ್ಲಿ ರಿಲಯನ್ಸ್ ಪವರ್ ಲಿಮಿಟೆಡ್ ಕಂಪನಿಯಲ್ಲಿ ಸಿಎಫ್ಒ ಆಗಿ ಬಡ್ತಿ ಪಡೆದಿದ್ದರು.

ಏನಿದು ಪ್ರಕರಣ?

ಅನಿಲ್ ಅಂಬಾನಿ ಉದ್ಯಮಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಇಡಿ ಸೇರಿದಂತೆ ಇತರ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದೆ. ಈ ಪೈಕಿ ದಾಖಲಾಗಿರುವ ದೆಹಲಿ EOWನಲ್ಲಿ ದಾಖಲಾಗಿರುವ ಎಫ್ಐಆರ್ ( ಸಂಖ್ಯೆ 0131/2024 dated 11.11.2024) ಪ್ರಕಾರ, ರಿಲಯನ್ಸ್ ಪವರ್ ಲಿಮಿಟೆಡ್ ಬ್ಯಾಂಕ್‌ನಿಂದ ಹಣ ಪಡೆಯಲು ನಕಲಿ ಬ್ಯಾಂಕ್ ಗ್ಯಾರೆಂಟಿ ಹಾಗೂ ಶೇಕಡಾ 8 ರಷ್ಟು ಕಮಿಷನ್ ಆರೋಪಗಳು ಕೇಳಿಬಂದಿತ್ತು. ಇದಕ್ಕಾಗಿ ನಕಲಿ ಬಿಲ್‌ಗಳನ್ನು ಸಲ್ಲಿಕೆ ಮಾಡಲಾಗಿತ್ತು. ಈ ಸಮಯದಲ್ಲಿನ ಬ್ಯಾಂಕ್ ವಹಿವಾಟುಗಳು ಹಲವು ಅನುಮಾನ ಮೂಡಿಸಿತ್ತು. ಸಾವಿರಾರು ಕೋಟಿ ರೂಪಾಯಿ ಹಣದ ವ್ಯವಹಾರ ಅಕ್ರಮವಾಗಿ ನಡೆದಿರುವುದು ಪತ್ತೆಯಾಗಿದೆ. ನಕಲಿ ವಿಳಾಸ ಬಳಕೆ, ಹಲವು ಖಾತೆಗಳ ಮೂಲಕ ಹಣದ ವ್ಯವಹಾರ, ಕಂಪನಿಯ ಪ್ರಮುಖರು ಟೆಲಿಗ್ರಾಂ ಆ್ಯಪ್ಲೀಕೇಶನ್ ಮೂಲಕ ಚಾಟ್ ನಡೆಸಿದ್ದಾರೆ. ಇಷ್ಟೇ ಅಲ್ಲ ಈ ಚಾಟ್‌ ಡಿಸ್ಅಪೀಯರ್ ಆಗುವಂತೆ ಮಾಡಲಾಗಿತ್ತು.

2025ರ ಜುಲೈ ತಿಂಗಳಲ್ಲಿ ನಡೆದಿತ್ತು ರೇಡ್

2025ರ ಜುಲೈ 24 ರಂದು ಇಡಿ ಅಧಿಕಾರಿಗಳು ರಿಲಯನ್ಸ್ ಪವರ್ ಲಿಮಿಟೆಡ್ ಮುಖ್ಯಕಚೇರಿ ಮೇಲೆ ದಾಳಿ ನಡೆಸಿ ಹಲವು ವಸ್ತುಗಳ ಸೀಝ್ ಮಾಡಿದ್ದರು. ಬ್ಯಾಂಕ್ ಗ್ಯಾರೆಂಟಿಯಾಗಿ 68.2 ಕೋಟಿ ರೂಪಾಯಿ ಸಲ್ಲಿಕೆಮಾಡಲಾಗಿತ್ತು. ಇದಕ್ಕಾಗಿ ಹಲವು ನಕಲಿ ದಾಖಲೆ ನೀಡಿರುವುದು ದಾಳಿ ವೇಳೆ ಪತ್ತೆಯಾಗಿತ್ತು. ನಕಲಿ ಗ್ಯಾರೆಂಟಿಗಾಗಿ ದಾಖಲೆ ಮಾತ್ರವಲ್ಲ, ವಿಳಾಸ, ಇಮೇಲ್ ಸೇರಿದಂತೆ ಹಲವು ನಕಲಿ ಮಾಡಿ ಬ್ಯಾಂಕ್‌ಗೆ ಸಲ್ಲಿಕೆ ಮಾಡಲಾಗಿತ್ತು ಅನ್ನೋದು ದಾಖಲೆ ಪರಿಶೀಲನೆ ವೇಳೆ ಪತ್ತೆಯಾಗಿತ್ತು.