ಕರಣ್ ವಾಲಿಯಾ ಎಂಬ ಯುವಕ ಆರು ವರ್ಷಗಳ ಹಿಂದೆ ₹10,000 ಹೂಡಿಕೆ ಮಾಡಿ ಇಂದು ₹1.5 ಕೋಟಿ ಗಳಿಸಿದ್ದಾರೆ. ಮ್ಯೂಚುಯಲ್ ಫಂಡ್‌ಗಳ ಮೂಲಕ ತಮ್ಮ ಹೂಡಿಕೆ ಪಯಣ ಆರಂಭಿಸಿದ ಅವರು, ತಾಳ್ಮೆ ಮತ್ತು ಸಂಶೋಧನೆಯಿಂದ ದೀರ್ಘಾವಧಿಯಲ್ಲಿ ಹಣವನ್ನು ಹೇಗೆ ಬೆಳೆಸಬಹುದು ಎಂಬುದರ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಹಣವನ್ನು ಶೀಘ್ರದಲ್ಲಿ ಡಬಲ್​ ಮಾಡಬೇಕು ಎನ್ನುವ ಆಸೆ ಎಲ್ಲರಿಗೂ ಇದ್ದದ್ದೇ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುವವರು ಅದಕ್ಕಿಂತಲೂ ದುಪ್ಪಟ್ಟು ಜನರು ಇರುತ್ತಾರೆ. ಅವರ ಮೋಸದ ಜಾಲದಲ್ಲಿ ಸಿಲುಕಿ ಎಷ್ಟೋ ವರ್ಷ ತಾವು ಕಷ್ಟಪಟ್ಟು ಕೂಡಿಟ್ಟದ್ದನ್ನೆಲ್ಲಾ ಕಳೆದುಕೊಂಡವರೇ ಬಹುತೇಕ ಮಂದಿ ಇದ್ದಾರೆ. ಆದರೆ ಕೆಲವೊಂದು ಯೋಜನೆ ರೂಪಿಸಿದರೆ, ಜೊತೆಗೆ ಅದೃಷ್ಟವೂ ಕೈಹಿಡಿದರೆ ಕೆಲವೇ ವರ್ಷಗಳಲ್ಲಿ ಹಣವನ್ನು ಗಳಿಸಬಹುದು ಎನ್ನುವುದು ಕೆಲವರು ಅಭಿಮತ. ಇದು ಕೆಲವರಿಗೆ ಆಗಿಯೂ ಆಗತ್ತೆ ಕೂಡ. ಅಂಥವರಲ್ಲಿ ಒಬ್ಬರು ಕರಣ್ ವಾಲಿಯಾ.

ಆರು ವರ್ಷಗಳ ಹಿಂದೆ 10 ಸಾವಿರ ರೂಪಾಯಿ ಹೂಡಿಕೆ ಮಾಡಿರುವ ಇವರು ಇಂದು 1.5 ಕೋಟಿ ರೂಪಾಯಿ ಗಳಿಸಿದ್ದಾರಂತೆ. ಈ ಕುರಿತು ತಮ್ಮ ಜಾಲತಾಣದಲ್ಲಿ ಇದರ ಮಾಹಿತಿಯನ್ನು ಅವರು ಶೇರ್​ ಮಾಡಿಕೊಂಡಿದ್ದು, ಇದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ಟಿಪ್ಸ್​ ಬಗ್ಗೆ ಇವರಲ್ಲಿ ಹಲವು ಕೇಳುತ್ತಿರುವ ಕಾರಣದಿಂದ ಅದನ್ನು ಅವರು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ತಾವು 20 ನೇ ವಯಸ್ಸಿನಲ್ಲಿ ಕೇವಲ 10,000 ರೂ.ಗಳೊಂದಿಗೆ ಪ್ರಾರಂಭಿಸಿದ್ದ ಒಂದು ಹೂಡಿಕೆ ಈಗ 26ನೇ ವಯಸ್ಸಿನಲ್ಲಿ 1.5 ಕೋಟಿ ರೂ.ಗಳಿಗೆ ಬೆಳೆದಿದೆ ಎಂದು ಅವರು ಹೇಳಿದ್ದಾರೆ.

ವಾಲಿಯಾ ಅವರು ಹೇಳಿದ್ದೇನು?

ತಮ್ಮ ಹೂಡಿಕೆ ಪ್ರಯಾಣವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಾಲಿಯಾ, ತಮಗೆ ಈ ಬಗ್ಗೆ ಆರಂಭದಲ್ಲಿ ಯಾವುದೇ ಸುಳಿವು ಇರಲಿಲ್ಲ. ಕೆಲವರು ಇದರ ಬಗ್ಗೆ ತಿಳಿಸಿದರೂ, ಅಳುಕು ಇತ್ತು ಎಂದಿರುವ ಅವರು, ತಾವು ಹೂಡಿಕೆ ಮಾಡಿರುವುದು ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ. ನಾನು ಮೊದಲು ಪ್ರಾರಂಭಿಸಿದಾಗ ಏನು ಮಾಡುತ್ತಿದ್ದೆ ಎಂಬುದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಆದರೆ ಕ್ರಮೇಣ, ಹಣವು ಹೇಗೆ ಬೆಳೆಯುತ್ತದೆ ಮತ್ತು ಹಣದುಬ್ಬರವು ಉಳಿತಾಯದ ಮೇಲೆ ಬೀರುವ ಪರಿಣಾಮದ ಮೂಲಭೂತ ಅಂಶಗಳನ್ನು ಅರ್ಥ ಮಾಡಿಕೊಂಡು ಇದರಲ್ಲಿ ಧುಮುಕಿದೆ ಎಂದಿರುವ ವಾಲಿಯಾ ಅವರು, ಇದರ ಆಗುಹೋಗುಗಳನ್ನು ಚೆನ್ನಾಗಿ ಅರಿತ ಬಳಿಕವಷ್ಟೇ ಮುಂದೆ ಸಾಗಬೇಕು ಎನ್ನುವ ಕಿವಿಮಾತನ್ನೂ ಹೇಳಿದ್ದಾರೆ.

"ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವು ಪ್ರತಿ ವರ್ಷ ಸದ್ದಿಲ್ಲದೆ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಬೆಲೆಗಳು ಏರುತ್ತಲಿರುತ್ತವೆ, ಆದರೆ ಬ್ಯಾಂಕ್​ ಖಾತೆಯಲ್ಲಿನ ಹಣ ಮೌಲ್ಯ ಕಳೆದುಕೊಳ್ಳುತ್ತಿರುತ್ತವೆ. ಇದರಿಂದ ನಾನು ಬೇರೆಯದ್ದೇ ಯೋಚನೆ ಮಾಡಿದೆ. ಈ ಹಿನ್ನೆಲೆಯಲ್ಲಿ, ಸ್ಥಿರ ಠೇವಣಿಗಳು, ಇಕ್ವಿಟಿ ಮತ್ತು ಮ್ಯೂಚುಯಲ್ ಫಂಡ್‌ಗಳು ಸೇರಿದಂತೆ ವಿವಿಧ ಹೂಡಿಕೆ ಆಯ್ಕೆಗಳ ಬಗ್ಗೆ ಸಾಕಷ್ಟು ಅನ್ವೇಷಿಸಿದೆ. ಬೆಲೆಗಳು ಏರುತ್ತಿರುವ ದರಕ್ಕಿಂತ ವೇಗವಾಗಿ ತನ್ನ ಹಣವನ್ನು ಬೆಳೆಯುವಂತೆ ಮಾಡುವುದು ನನ್ನ ಉದ್ದೇಶವಾಗಿತ್ತು. ಆ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನ ಮಾಡಿ ಮುಂದಿನ ಹೆಜ್ಜೆ ಇಟ್ಟೆ ಎನ್ನುತ್ತಾರೆ, ಕರಣ್ ವಾಲಿಯಾ.

ಸಂಯಮ ಬೇಕು

ಷೇರು ಆಯ್ಕೆಯ ವೇಳೆ ಸಂಯಮ ಬೇಕು, ಸಾಕಷ್ಟು ಸಂಶೋಧನೆ ಮತ್ತು ಜ್ಞಾನವೂ ಬೇಕು, ಜೊತೆಗೆ ಒಂದಿಷ್ಟು ಕೌಶಲವೂ ಬೇಕು ಎನ್ನುವ ಅವರು, ತಮ್ಮ ಜರ್ನಿ ಬಗ್ಗೆ ವಿವರಿಸಿದ್ದಾರೆ. ನನ್ನ ಒಬ್ಬ ಸ್ನೇಹಿತ ಮ್ಯೂಚುಯಲ್ ಫಂಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ವಿವರಿಸಿದ ನಂತರ ಮ್ಯೂಚುಯಲ್ ಫಂಡ್‌ಗಳು ಈಕ್ವಿಟಿ ಮಾರುಕಟ್ಟೆಯನ್ನು ಪ್ರವೇಶಿಸಲು ಸರಳ ಮಾರ್ಗವೆಂದು ಕಂಡುಕೊಂಡೆ. ಬಹು ಕಂಪೆನಿಗಳಲ್ಲಿ ಹೂಡಿಕೆದಾರರ ಹಣವನ್ನು ಒಟ್ಟುಗೂಡಿಸುವ ಮೂಲಕ ಮತ್ತು ಅವುಗಳನ್ನು ವೃತ್ತಿಪರವಾಗಿ ನಿರ್ವಹಿಸುವ ಮೂಲಕ, ಮ್ಯೂಚುಯಲ್ ಫಂಡ್‌ಗಳು ಹೆಚ್ಚು ಪ್ರವೇಶಿಸಬಹುದಾದ ಆರಂಭಿಕ ಹಂತ ನೀಡಿತು ಎನ್ನುತ್ತಾರೆ.

ನಂತರ ವಾಲಿಯಾ ಖಾಸಗಿ ಷೇರು ಮತ್ತು ಹೂಡಿಕೆ ಬ್ಯಾಂಕಿಂಗ್‌ನಲ್ಲಿನ ತಮ್ಮ ಅನುಭವದ ಮೂಲಕ ಹೆಚ್ಚು ಸುಧಾರಿತ ಹೂಡಿಕೆ ಕೌಶಲಗಳನ್ನು ಅಭಿವೃದ್ಧಿಪಡಿಸಿದರು. ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕೆಂದು ಅರ್ಥಮಾಡಿಕೊಳ್ಳುವುದು ಮತ್ತು ದೀರ್ಘಕಾಲೀನ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವುದು ಉತ್ತಮ ಎನ್ನುವ ಅವರು, ಸಣ್ಣದಾಗಿ ಪ್ರಾರಂಭಿಸಿ, ಈಗಲೇ ಪ್ರಾರಂಭಿಸಿ ಮತ್ತು ಅದು ಬೆಳೆಯಲು ಬಿಡಿ ಎನ್ನುವ ಮಾತು ಹೇಳಿದ್ದಾರೆ.