Asianet Suvarna News Asianet Suvarna News

ಹಣದುಬ್ಬರ ತಗ್ಗಿಸೋ ಹೊಣೆಗಾರಿಕೆ ಬರೀ ಕೇಂದ್ರದ್ದಲ್ಲ, ರಾಜ್ಯಗಳ ಪಾಲೂ ಇದೆ: ನಿರ್ಮಲಾ ಸೀತಾರಾಮನ್

*ಇಂಧನ ಬೆಲೆ ತಗ್ಗಿಸದ ರಾಜ್ಯಗಳಲ್ಲಿ ಹಣದುಬ್ಬರ ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಿದೆ ಎಂದ ವಿತ್ತ ಸಚಿವೆ
*ಹಣದುಬ್ಬರ ಇಳಿಕೆಯಲ್ಲಿ ರಾಜ್ಯಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ 
*ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡ ನಿರ್ಮಲಾ ಸೀತಾರಾಮನ್ 
 

Lowering inflation cannot be the sole responsibility of Centre says Nirmala Sitharaman
Author
First Published Sep 9, 2022, 12:51 PM IST

ನವದೆಹಲಿ (ಸೆ.9): ಇಂಧನ ಬೆಲೆ ತಗ್ಗಿಸದ ರಾಜ್ಯಗಳಲ್ಲಿ ಹಣದುಬ್ಬರ ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಲ್ಲದೆ, ಹಣದುಬ್ಬರ ತಗ್ಗಿಸೋದು ಬರೀ ಕೇಂದ್ರ ಸರ್ಕಾರದ ಜವಾಬ್ದಾರಿಯಲ್ಲ,ಇದರಲ್ಲಿ ರಾಜ್ಯಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಚಿವೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಹಣದುಬ್ಬರವನ್ನು ಕೇಂದ್ರ ಸರ್ಕಾರವೊಂದೇ ನಿರ್ವಹಣೆ ಮಾಡಬೇಕು ಎಂದರೆ ಆಗೋದಿಲ್ಲ. ಯಾವಾಗ ರಾಜ್ಯ ಸರ್ಕಾರಗಳು ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮ ಕೈಗೊಳ್ಳದಿದ್ದಾಗ, ಭಾರತದ ಆ ಭಾಗ ಹಣದುಬ್ಬರದ ಒತ್ತಡದಿಂದ ನಿರಾಳತೆ ಪಡೆಯಲು ಬಯಸುತ್ತದೆ' ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ನವದೆಹಲಿಯಲ್ಲಿ ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳ ಭಾರತೀಯ ಸಂಶೋಧನಾ  ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ವಿತ್ತ ಸಚಿವೆ ಈ ಹೇಳಿಕೆ ನೀಡಿದ್ದಾರೆ. ಜುಲೈ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ.6.71ಕ್ಕೆ ಇಳಿಕೆಯಾಗಿತ್ತು. ಜೂನ್ ತಿಂಗಳಲ್ಲಿ ಇದು  ಶೇ.7.01ರಷ್ಟಿತ್ತು. ಈ ಇಳಿಕೆಯ ಹೊರತಾಗಿಯೂ ಸತತ ಏಳು ತಿಂಗಳಿಂದ ಚಿಲ್ಲರೆ ಹಣದುಬ್ಬರ ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) ಸಹನ ಮಿತಿಗಿಂತ ಹೆಚ್ಚಿದೆ. 

ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.95ಕ್ಕೆ ಏರಿಕೆಯಾಗಿದ್ರೆ, ಫೆಬ್ರವರಿಯಲ್ಲಿ ಶೇ.6.07ಕ್ಕೆ ಹೆಚ್ಚಳವಾಗಿತ್ತು. ಆರ್ ಬಿಐ ಚಿಲ್ಲರೆ ಹಣದುಬ್ಬರ ಸಹನ ಮಿತಿಯನ್ನು ಶೇ.2ರಿಂದ ಶೇ.6ರ ನಡುವೆ ನಿಗದಿಪಡಿಸಿದೆ. ಹೀಗಾಗಿ ಆಗಸ್ಟ್ ನಲ್ಲಿ ಕೂಡ ಆರ್ ಬಿಐ ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ.  ಈ ಹಿನ್ನೆಲೆಯಲ್ಲಿ ಸದ್ಯದ ರೆಪೋ ದರವು ಶೇಕಡಾ 5.40 ಕ್ಕೆ ಏರಿಕೆಯಾಗಿದೆ. ಆರ್ಥಿಕ ವರ್ಷ 2023 ಕ್ಕೆ ಆರ್‌ಬಿಐ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 6.7 ರಷ್ಟು ಹಾಗೂ  ನೈಜ GDP ಬೆಳವಣಿಗೆಯನ್ನು 7.2 ರಷ್ಟು ಅಂದಾಜು ಮಾಡಿದೆ. 

ಬ್ಯಾಂಕ್‌ಗಳಿಗೆ 23000 ಕೋಟಿ ಮರಳಿಸುವಲ್ಲಿ ಇಡಿ ಯಶಸ್ವಿ

ಇನ್ನು ಹಣದುಬ್ಬರ ಹೆಚ್ಚಳಕ್ಕೆ ಹಲವಾರು ಕಾರಣವಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ತಗ್ಗಿಸದ ರಾಜ್ಯಗಳಲ್ಲಿ ಹಣದುಬ್ಬರ ರಾಷ್ಟ್ರೀಯ ಮಟ್ಟಕ್ಕಿಂತ ಹೆಚ್ಚಿರೋದು ಕಂಡುಬಂದಿದೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.  ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಮೇನಲ್ಲಿ ಕೇಂದ್ರ ಸರ್ಕಾರ ಪ್ರತಿ ಲೀಟರ್ ಗೆ ಕ್ರಮವಾಗಿ 8ರೂ. ಹಾಗೂ 6ರೂ. ತಗ್ಗಿಸಿತ್ತು. ಇದ್ರಿಂದ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 9.5ರೂ. ತಗ್ಗಿದ್ರೆ, ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ  7ರೂ. ಇಳಿಕೆಯಾಗಿತ್ತು. ವ್ಯಾಟ್ ಹಾಗೂ ಇತರ ಶುಲ್ಕಗಳ ಹಿನ್ನೆಲೆಯಲ್ಲಿ ಇಂಧ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತವೆ. 

ಆಮದು ಸುಂಕ ಕಡಿತಗೊಳಿಸಿದ ಬಾಂಗ್ಲಾ; ಭಾರತದಲ್ಲಿ ದಿಢೀರ್ ಏರಿಕೆ ಕಂಡ ಅಕ್ಕಿ ಬೆಲೆ

ಪಾಶ್ಚಿಮಾತ್ಯ ರಾಷ್ಟ್ರಗಳ ವಿರೋಧದ ನಡುವೆಯೂ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಸರ್ಕಾರದ ನಿರ್ಧಾರವನ್ನು ಕೂಡ ಈ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜನೀತಿಯನ್ನು ಕೂಡ ಅವರು ಹೊಗಳಿದ್ದಾರೆ. ಜಗತ್ತಿನ ಎಲ್ಲ ರಾಷ್ಟ್ರಗಳೊಂದಿಗೆ ನಮ್ಮ ಸಂಬಂಧವನ್ನು ಉಳಿಸಿಕೊಳ್ಳುವ ಜೊತೆಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವಿತ್ತ ಸಚಿವೆ ತಿಳಿಸಿದ್ದಾರೆ. 'ನಾವು ವೇಗವಾಗಿ ಈ ಪ್ರಕ್ರಿಯೆಯನ್ನು ಮುಗಿಸಲು ಯಶಸ್ವಿಯಾಗಿದ್ದೇವೆ. ಈ ಹಿಂದೆ ರಷ್ಯಾದಿಂದ ನಮ್ಮ ಕಚ್ಚಾ ತೈಲ ಆಮದು ಶೇ.2 ಹಾಗೂ ಕೆಲವು ಸಂದರ್ಭಗಳಲ್ಲಿ ಅದಕ್ಕಿಂತ ಕಡಿಮೆ ಇತ್ತು. ಇದನ್ನು ಕೆಲವೇ ತಿಂಗಳುಗಳಲ್ಲಿ ಶೇ.12-13ಕ್ಕೆ ಹೆಚ್ಚಿಸಲು ಸಾಧ್ಯವಾಗಿದೆ' ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

Follow Us:
Download App:
  • android
  • ios