ನಿಮ್ಮ ಡೆಬಿಟ್ ಕಾರ್ಡ್ ಕಳೆದು ಹೋಗಿದ್ಯಾ? ತಪ್ಪದೇ ತಕ್ಷಣ ಈ 7 ಕ್ರಮ ಕೈಗೊಳ್ಳಿ
ಡೆಬಿಟ್ ಕಾರ್ಡ್ ಕಳೆದು ಹೋದ ತಕ್ಷಣ ಬ್ಯಾಂಕಿಗೆ ಈ ಬಗ್ಗೆ ಮಾಹಿತಿ ನೀಡುವ ಜೊತೆಗೆ ತಕ್ಷಣ ಕೆಲವೊಂದು ಕ್ರಮಗಳನ್ನು ಕೈಗೊಳ್ಳೋದು ಅಗತ್ಯ. ಹಾಗಾದ್ರೆ ಡೆಬಿಟ್ ಕಾರ್ಡ್ ಕಳೆದು ಹೋಗಿದ್ರೆ ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ.
Business Desk: ಇಂದು ಬ್ಯಾಂಕ್ ಖಾತೆ ಹೊಂದಿರುವ ಬಹುತೇಕರ ಬಳಿ ಡೆಬಿಟ್ ಕಾರ್ಡ್ ಇದ್ದೇಇರುತ್ತದೆ. ಒಂದು ವೇಳೆ ನಿಮ್ಮ ಡೆಬಿಟ್ ಕಾರ್ಡ್ ಎಲ್ಲದ್ರೂ ಕಳೆದು ಹೋದ್ರೆ ಅದು ನಿಜಕ್ಕೂ ನಿಮಗೆ ಕಹಿ ಅನುಭವವೇ ಆಗಿರುತ್ತದೆ. ಇನ್ನು ಡೆಬಿಟ್ ಕಾರ್ಡ್ ಅನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಡೆಬಿಟ್ ಕಾರ್ಡ್ ಕಳೆದು ಹೋದ್ರೆ ಸುಮ್ಮನಿರುವ ಬದಲು ಆ ಬಗ್ಗೆ ಬ್ಯಾಂಕಿಗೆ ಮಾಹಿತಿ ನೀಡೋದು ಅಗತ್ಯ. ಹಾಗೆಯೇ ನಿಮ್ಮ ಡೆಬಿಟ್ ಕಾರ್ಡ್ ದುರ್ಬಳಕೆಯಾಗದಂತೆ ತಡೆಯಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ಕೂಡ ಅಗತ್ಯ. ಹೀಗಾಗಿ ಡೆಬಿಟ್ ಕಾರ್ಡ್ ಕಳೆದು ಹೋಗಿದ್ರೆ ನಿಮ್ಮ ಹಣಕಾಸು ಹಾಗೂ ವೈಯಕ್ತಿಕ ಮಾಹಿತಿಗಳನ್ನು ಸಂರಕ್ಷಿಸಲುಈ ಕೆಳಗಿನ ಏಳು ಕ್ರಮಗಳನ್ನು ಕೈಗೊಳ್ಳಲು ಮರೆಯಬೇಡಿ.
1.ನಿಮ್ಮ ಬ್ಯಾಂಕಿಗೆ ಈ ಬಗ್ಗೆ ಮಾಹಿತಿ ನೀಡಿ
ನಷ್ಟದ ಬಗ್ಗೆ ನಿಮ್ಮ ಬ್ಯಾಂಕಿಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಾಹಿತಿ ನೀಡಿ. ಬಹುತೇಕ ಬ್ಯಾಂಕುಗಳು 24/7 ಗ್ರಾಹಕರ ಸೇವಾ ಸಹಾಯವಾಣಿ ಹೊಂದಿವೆ. ಹೀಗಾಗಿ ಬ್ಯಾಂಕುಗಳಿಗೆ ನಿಮ್ಮ ಖಾತೆ ಸಂಖ್ಯೆ, ಕಾರ್ಡ್ ಸಂಖ್ಯೆ ಹಾಗೂ ನಿಮಗೆ ನೆನಪಿರುವ ಇತ್ತೀಚಿನ ಯಾವುದೇ ವಹಿವಾಟಿನ ಬಗ್ಗೆ ಮಾಹಿತಿ ನೀಡಿ. ಇದು ಬ್ಯಾಂಕಿಗೆ ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಹಾಗೂ ಅದನ್ನು ನಿರ್ವಹಿಸಲು ನೆರವು ನೀಡುತ್ತದೆ.
ಇಪಿಎಫ್ ಸದಸ್ಯರೇ ಗಮನಿಸಿ, ಜನ್ಮದಿನಾಂಕ ಅಪ್ಡೇಟ್ ಗೆ ಅರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಹೊರಗಿಟ್ಟ ಇಪಿಎಫ್ಒ
2.ಎಫ್ ಐಆರ್ ಫೈಲ್ ಮಾಡಿ
ಕೆಲವು ಪ್ರಕರಣಗಳಲ್ಲಿ ವಿಶೇಷವಾಗಿ ನಿಮಗೆ ಕಳ್ಳತನ ಅಥವಾ ವಂಚನೆ ಚಟುವಟಿಕೆಗಳ ಬಗ್ಗೆ ಅನುಮಾನ ಮೂಡಿದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್ ಐಆರ್ ದಾಖಲಿಸಿ. ಎಫ್ ಐಆರ್ ಕಾನೂನಾತ್ಮಕ ದಾಖಲೆಯಾಗಿ ಕಾರ್ಯನಿರ್ವಹಿಸುವ ಜೊತೆಗೆ ಹೆಚ್ಚುವರಿ ರಕ್ಷಣೆಯನ್ನು ಕೂಡ ಒದಗಿಸುತ್ತದೆ.
3.ಕಾರ್ಡ್ ಅನ್ನು ನಿಷ್ಕ್ರಿಯ ಅಥವಾ ರದ್ದುಗೊಳಿಸಿ
ಕಳೆದು ಹೋಗಿರುವ ನಿಮ್ಮ ಡೆಬಿಟ್ ಕಾರ್ಡ್ ಅನ್ನು ನಿಷ್ಕ್ರಿಯ ಅಥವಾ ಕ್ಯಾನ್ಸಲ್ ಮಾಡಲು ಬ್ಯಾಂಕ್ ಬಳಿ ಮನವಿ ಮಾಡಿ. ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸೋದ್ರಿಂದ ಯಾವುದೇ ವಹಿವಾಟುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸಾಧ್ಯವಾಗುತ್ತದೆ. ನಿಮ್ಮ ಪರಿಸ್ಥಿತಿ ಆಧರಿಸಿ ಬ್ಯಾಂಕಿಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಿ.
4.ಅಟೋಮ್ಯಾಟಿಕ್ ಬಿಲ್ಲಿಂಗ್ ರದ್ದುಗೊಳಿಸಿ
ಒಂದು ವೇಳೆ ನೀವು ಯಾವುದೇ ರಿಕರಿಂಗ್ ಪಾವತಿ ಆಯ್ಕೆಗಳನ್ನು ನಿಮ್ಮ ಕಳೆದು ಹೋಗಿರುವ ಡೆಬಿಟ್ ಕಾರ್ಡ್ ನಲ್ಲಿ ಹೊಂದಿದ್ದರೆ ಅದನ್ನು ತಕ್ಷಣ ರದ್ದುಗೊಳಿಸಿ ಅಥವಾ ಪಾವತಿ ಮಾಹಿತಿಯನ್ನು ನಿಮ್ಮ ಹೊಸ ಕಾರ್ಡ್ ಮಾಹಿತಿಗಳ ಜೊತೆಗೆ ಅಪ್ಡೇಟ್ ಮಾಡಿ. ಇದರಿಂದ ಯಾವುದೇ ಅಡ್ಡಿಗಳು ಅಥವಾ ತಡವಾದ ಶುಲ್ಕ ಪಾವತಿಗಳನ್ನು ರದ್ದುಗೊಳಿಸಬಹುದು.
5.ಫಾಲೋ ಅಪ್ ಮಾಡಿ
ಬ್ಯಾಂಕ್ ಜೊತೆಗಿನ ನಿಮ್ಮ ಮಾತುಕತೆಯನ್ನು ಫಾಲೋ ಅಪ್ ಮಾಡಿ. ದಿನಾಂಕ, ಸಮಯ ಹಾಗೂ ನೀವು ಮಾತನಾಡಿದ ಪ್ರತಿನಿಧಿಯ ಮಾಹಿತಿ ಹೊಂದಿರಿ. ಬ್ಯಾಂಕ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ನಿಮ್ಮ ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿ ಪಡೆಯಿರಿ.
Income Tax Return 2024:ಎಚ್ ಆರ್ ಎ ವಿನಾಯ್ತಿ ಕ್ಲೇಮ್ ಮಾಡೋ ಮುನ್ನ ಈ 5 ವಿಚಾರಗಳನ್ನು ಗಮನಿಸಿ
6.ಸಂಪರ್ಕರಹಿತ ಪಾವತಿ ಸೌಲಭ್ಯ ಹೊಂದಿದ್ದರೆ ವರದಿ ಮಾಡಿ
ಒಂದು ವೇಳೆ ನಿಮ್ಮ ಡೆಬಿಟ್ ಕಾರ್ಡ್ ಸಂಪರ್ಕರಹಿತ ಪಾವತಿ ಸೌಲಭ್ಯ ಹೊಂದಿದ್ದರೆ ಅಥವಾ ಮೊಬೈಲ್ ಪಾವತಿ ಅಪ್ಲಿಕೇಷನ್ ಗೆ ಲಿಂಕ್ ಆಗಿದ್ದರೆ ನಿಮ್ಮ ಡೆಬಿಟ್ ಕಾರ್ಡ್ ನಷ್ಟದ ಬಗ್ಗೆ ಸೇವಾ ಪೂರೈಕೆದಾರರಿಗೆ ಮಾಹಿತಿ ನೀಡಿ. ಇದು ನಿಮ್ಮ ಕಾರ್ಡ್ ಪರ್ಯಾಯ ಪಾವತಿ ವಿಧಾನದ ಮೂಲಕ ಅನಧಿಕೃತ ಬಳಕೆಯನ್ನು ತಪ್ಪಿಸಲು ನೆರವು ನೀಡುತ್ತದೆ.
7.ನಕಲಿ ಅಥವಾ ಬದಲಿ ಕಾರ್ಡ್ ಕೇಳಿ
ನಿಮ್ಮ ಬ್ಯಾಂಕಿನಿಂದ ಹೊಸ ಡೆಬಿಟ್ ಕಾರ್ಡ್ ಗೆ ಮನವಿ ಮಾಡಿ. ಬ್ಯಾಂಕ್ ರಿಪ್ಲೆಸ್ ಮೆಂಟ್ ಕಾರ್ಡ್ ಅನ್ನು ಹೊಸ ಕಾರ್ಡ್ ಸಂಖ್ಯೆ ಹಾಗೂ ಸೆಕ್ಯುರಿಟಿ ಕೋಡ್ ಜೊತೆಗೆ ನೀಡುತ್ತದೆ. ನಿಮ್ಮ ಕಾರ್ಡ್ ಮಾಹಿತಿಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆಯಿಂದ ಇರಿ.