ನವದೆಹಲಿ[ಆ.30]: ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ ಎನ್ನುವುದಕ್ಕೆ ‘ಲಿಪ್‌ಸ್ಟಿಕ್‌ ಸೂಚ್ಯಂಕ’ ಪುರಾವೆ ಒದಗಿಸಿದೆ!

ಹೌದು. ಪ್ರತಿಬಾರಿ ಆರ್ಥಿಕ ಹಿಂಜರಿತ ಉಂಟಾದಾಗಲೆಲ್ಲಾ ಲಿಪ್‌ಸ್ಟಿಕ್‌ ಹಾಗೂ ಸೌಂದರ್ಯ ವರ್ಧಕಗಳ ಬೇಡಿಕೆ ಹೆಚ್ಚಾಗುತ್ತವೆ ಇದನ್ನೇ ‘ಲಿಪ್‌ಸ್ಟಿಕ್‌ ಸೂಚ್ಯಂಕ’ ಎಂದು ಕರೆಯಲಾಗುತ್ತದೆ. ಆರ್ಥಿಕ ಹಿಂಜರಿತದಿಂದಾಗಿ ಆಟೋಮೊಬೈಲ್‌ ಹಾಗೂ ರಿಯಲ್‌ ಎಸ್ಟೇಟ್‌ ಮತ್ತಿತರ ಉದ್ದಿಮೆಗಳ ಪ್ರಗತಿ ಕುಂಠಿತವಾಗಿದ್ದರೆ, ಸೌಂದರ್ಯ ವರ್ಧಕ ಸಾಮಗ್ರಿಗಳ ತಯಾರಿಕಾ ಕಂಪನಿಗಳಾದ ಲ್ಯಾಕ್‌ಮಿ ಮತ್ತು ಲೋರಿಯಲ್‌ ಕಂಪನಿಗಳು ಎರಡಂಕಿಯ ಪ್ರಗತಿ ದಾಖಲಿಸಿವೆ. ಈ ಹಿಂದೆ 2001 ಹಾಗೂ 2008ರಲ್ಲಿ ಆರ್ಥಿಕ ಹಿಂಜರಿತ ಉಂಟಾದಾಗಲೂ ಲಿಪ್‌ಸ್ಟಿಕ್‌ ಹಾಗೂ ಇತರ ಸೌಂದರ್ಯ ವರ್ಧಕಗಳ ಮಾರಾಟ ಹೆಚ್ಚಳಗೊಂಡಿತ್ತು.

ಬೇಡಿಕೆ ಹೆಚ್ಚಿದ್ದು ಏಕೆ?:

ಸೌಂದರ್ಯ ವರ್ಧಕಗಳನ್ನು ಬಳಸುವ ಗ್ರಾಹಕರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಇರುವ ಕಾರಣಕ್ಕೆ ಆರ್ಥಿಕ ಹಿಂಜರಿತ ಈ ವಲಯದ ಮೇಲೆ ಅಂತಹ ಪರಿಣಾಮ ಬೀರಿಲ್ಲ. ಮಹಿಳೆಯರು ಬ್ರಾಂಡ್‌ಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿದ್ದಾರೆ ಮತ್ತು ಅವರು ಮೇಲ್ದರ್ಜೆಗೆ ಏರಲು ಬಯಸುತ್ತಾರೆ. ಹೀಗಾಗಿ ಸೌಂದರ್ಯ ವರ್ಧಕಗಳು ಬೇಡಿಕೆ ಕಳೆದುಕೊಂಡಿಲ್ಲ ಎಂದು ಲ್ಯಾಕ್‌ಮಿ ಮುಖ್ಯಸ್ಥೆ ಪ್ರಭಾ ನರಸಿಂಹನ್‌ ಹೇಳಿದ್ದಾರೆ.

ಆದಾಯ ಕಡಿಮೆ ಆದಾಗ ಜನರು ಅಗ್ಗದ ಕಡಿಮೆ ದರ್ಜೆಯ ವಸ್ತುಗಳನ್ನು ಬಳಕೆ ಮಾಡುತ್ತಾರೆ. ಆದರೆ, ಲಿಪ್‌ಸ್ಟಿಕ್‌ಗಳು ಕೆಳ ದರ್ಜೆಯ ವಸ್ತುಗಳ ವಿಭಾಗದಲ್ಲಿ ಬರುವುದಿಲ್ಲ. ಅವು ಕಡಿಮೆ ವೆಚ್ಚದಲ್ಲಿ ಐಷಾರಾಮಿತನವನ್ನು ತೋರ್ಪಡಿಸುವ ಸಾಧನಗಳಾಗಿರುವುದರಿಂದ ಬೆಡಿಕೆಯನ್ನು ಉಳಿಸಿಕೊಂಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.