LIC IPO: ಪ್ಯಾನ್ ಮಾಹಿತಿ ನವೀಕರಿಸಲು ಪಾಲಿಸಿದಾರರಿಗೆ ಸೂಚನೆ
ಭಾರತೀಯ ಜೀವ ವಿಮಾ ನಿಗಮ (LIC) ಐಪಿಒಗೆ(IPO) ಸಿದ್ಧತೆ ನಡೆಸುತ್ತಿದ್ದು, ಶೇ.10 ಭಾಗವನ್ನು ಪಾಲಿಸಿದಾರರಿಗೆ ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಪ್ಯಾನ್ ಮಾಹಿತಿ ನವೀಕರಿಸುವಂತೆ ಹಾಗೂ ಡಿಮ್ಯಾಟ್ ಖಾತೆ ತೆರೆಯುವಂತೆ ಪಾಲಿಸಿದಾರರಿಗೆ ಸೂಚಿಸಿದೆ.
ನವದೆಹಲಿ (ಡಿ.4): ಭಾರತೀಯ ಜೀವ ವಿಮಾ ನಿಗಮ (LIC) ಐಪಿಒ(IPO) ಮೂಲಕ ಷೇರು ಮಾರುಕಟ್ಟೆಗೆ ಲಗ್ಗೆಯಿಡಲು ಯೋಜನೆ ರೂಪಿಸುತ್ತಿದ್ದು, ಅದರ ಭಾಗವಾಗಿ ಪಾಲಿಸಿದಾರರು ಕಾಯಂ ಖಾತಾ ಸಂಖ್ಯೆ (PAN) ಮಾಹಿತಿಯನ್ನು ನವೀಕರಿಸೋ (update) ಜೊತೆಗೆ ಡಿ ಮ್ಯಾಟ್ ಖಾತೆಗಳನ್ನು(demat accounts) ತೆರೆದು ಐಪಿಒನಲ್ಲಿ ಪಾಲ್ಗೊಳ್ಳುವಂತೆ ಕೋರಿದೆ. ಈ ಕುರಿತು ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿ, ಪಾಲಿಸಿದಾರರಿಗೆ ಮಾಹಿತಿ ನೀಡಿದೆ. ಐಪಿಒನಲ್ಲಿ ಪಾಲ್ಗೊಳ್ಳಲು ಪಾಲಿಸಿದಾರರು ಎಲ್ಐಸಿ ದಾಖಲೆಗಳಲ್ಲಿ ತಮ್ಮ ಪ್ಯಾನ್ ಸಂಖ್ಯೆ ನವೀಕರಿಸೋದು ಅಗತ್ಯ. ಭಾರತದಲ್ಲಿ ಯಾವುದೇ ಐಪಿಒನಲ್ಲಿ ಪಾಲ್ಗೊಳ್ಳಲು ನೀವು ಮಾನ್ಯತೆ ಪಡೆದ ಡಿಮ್ಯಾಟ್ ಖಾತೆ ಹೊಂದಿರೋದು ಅಗತ್ಯ. ಆದಕಾರಣ ಪಾಲಿಸಿದಾರರು ತಮ್ಮ ಬಳಿ ಮಾನ್ಯತೆ ಹೊಂದಿದ ಡಿಮ್ಯಾಟ್ ಖಾತೆಯಿದೆ ಎಂಬುದನ್ನು ದೃಢೀಕರಿಸೋದು ಅಗತ್ಯ ಎಂದು ಜಾಹೀರಾತಿನಲ್ಲಿ ಎಲ್ಐಸಿ ಸ್ಪಷ್ಟಪಡಿಸಿದೆ. ನಮ್ಮ ಪಾಲಿಸಿದಾರರ ಹಿತಾಸಕ್ತಿಯನ್ನು ಕಾಯೋ ನಿಟ್ಟಿನಲ್ಲಿ ಕಳೆದ ಕೆಲವು ಸಮಯದಿಂದ ನಮ್ಮ ದಾಖಲೆಗಳಲ್ಲಿ ಪ್ಯಾನ್ ಮಾಹಿತಿಯನ್ನು ನವೀಕರಿಸೋವಂತೆ ಕೋರಿ ಜಾಹೀರಾತುಗಳನ್ನು ನೀಡುತ್ತಿದ್ದೇವೆ. ಒಂದು ವೇಳೆ ನೀವು ಈ ತನಕ ನಿಮ್ಮ ಪ್ಯಾನ್ ಕಾರ್ಡ್ ಮಾಹಿತಿಯನ್ನು ನಿಗಮಕ್ಕೆ ಸಲ್ಲಿಸದೇ ಇದ್ದಲ್ಲಿ ಆದಷ್ಟು ಶೀಘ್ರವಾಗಿ ಈ ಕೆಲಸವನ್ನು ಮಾಡಿ ಮುಗಿಸಿ. ಕೆವೈಸಿ ಮಾಹಿತಿಗೆ ಹಾಗೂ ಎಲ್ಐಸಿ ಐಪಿಒನಲ್ಲಿ ಪಾಲ್ಗೊಳ್ಳೋದಕ್ಕೆ ಎರಡಕ್ಕೂ ಪ್ಯಾನ್ ಮಾಹಿತಿ ನೀಡೋದು ಅಗತ್ಯ ಎಂದು ಎಲ್ಐಸಿ ಹೇಳಿದೆ.
18300 ಕೋಟಿ ರೂ. ಸಂಗ್ರಹ ಉದ್ದೇಶದೊಂದಿಗೆ ಪೇಟಿಎಂ ಸಂಸ್ಥೆ ನವೆಂಬರ್ ನಲ್ಲಿ ನಡೆಸಿದ ಐಪಿಒ ದೇಶದ ಅತಿದೊಡ್ಡ ಐಪಿಒ ಎಂಬ ದಾಖಲೆ ನಿರ್ಮಿಸಿತ್ತು. ಆದ್ರೆ ಷೇರುಗಳು ನಿರೀಕ್ಷೆಗಿಂತ ಭಾರಿ ಕಡಿಮೆ ಲಿಸ್ಟ್ ಆಗಿ ಶೇ.27ರಷ್ಟು ಕುಸಿತ ಕಂಡಿತ್ತು. ಎಲ್ಐಸಿ ನಡೆಸಲು ಉದ್ದೇಶಿಸಿರೋ ಐಪಿಒ ಪೇಟಿಎಂಗಿಂತ ದೊಡ್ಡ ಪ್ರಮಾಣದಲ್ಲಿರುತ್ತೆ ಎಂದು ಹೇಳಲಾಗಿದೆ. ಪ್ರಸ್ತಾವಿತ ಯೋಜನೆ ಅನ್ವಯ ಎಲ್ಐಸಿ ಐಪಿಒನಲ್ಲಿ ಶೇ.10 ಭಾಗವನ್ನು ಪಾಲಿಸಿದಾರರಿಗೆ ಮೀಸಲಿಡಲಾಗಿದೆ.
ಕಾಯಂ ಖಾತಾ ಸಂಖ್ಯೆ (PAN) 10 ಸಂಖ್ಯೆಗಳನ್ನು ಹೊಂದಿದ್ದು, ಲ್ಯಾಮಿನೇಟೆಡ್ ಕಾರ್ಡ್ ರೂಪದಲ್ಲಿ ಇದನ್ನು ಆದಾಯ ತೆರಿಗೆ ಇಲಾಖೆ ವಿತರಿಸುತ್ತದೆ. ಯಾವುದೇ ಭಾರತೀಯ ವ್ಯಕ್ತಿ ಪ್ಯಾನ್ ಕಾರ್ಡ್ ಕೋರಿ ಆದಾಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು. ಪ್ಯಾನ್ ಕಾರ್ಡ್ ಆದಾಯ ತೆರಿಗೆ ಸಲ್ಲಿಕೆ ಸಂದರ್ಭದಲ್ಲಿ ಅತ್ಯಗತ್ಯವಾಗಿ ಬೇಕಿರುತ್ತದೆ. ಎಲ್ಐಸಿ ಪಾಲಿಸಿದಾರರು ತಮ್ಮ ಪಾಲಿಸಿಗಳಿಗೂ ಪಾನ್ ಜೋಡಣೆ (link) ಮಾಡಬಹುದು.
ಕೆಲಸ ಇರಲಿ, ಬಿಡಲಿ 60ರ ನಂತರದ ಚಿಂತೆ ಬಿಡಿ! ಇಲ್ಲಿ ಸಿಗಲಿದೆ ಪಿಂಚಣಿ
ಎಲ್ಐಸಿ ಪಾಲಿಸಿಗಳಿಗೆ ಪ್ಯಾನ್ ಲಿಂಕ್ ಮಾಡೋದು ಹೇಗೆ?
ಎಲ್ಐಸಿ ಪಾಲಿಸಿಗಳಿಗೆ ಪ್ಯಾನ್ ಲಿಂಕ್ ಮಾಡೋದು ಕಷ್ಟದ ಕೆಲಸವೇನಲ್ಲ. ಈ ಕೆಳಗೆ ನೀಡಿರೋ ಹಂತಗಳನ್ನು ಅನುಸರಿಸಿ ನೀವು ಪಾಲಿಸಿಗಳಿಗೆ ಪ್ಯಾನ್ ಲಿಂಕ್ ಮಾಡಬಹುದು.
ಹಂತ 1: ಎಲ್ಐಸಿ ಅಧಿಕೃತ ವೆಬ್ ಸೈಟ್ https://licindia.in/ ಭೇಟಿ ನೀಡಿ.
ಹಂತ 2: Online PAN Registration' ಆಯ್ಕೆ ಮಾಡಿ.
ಹಂತ 3: 'Proceed'ಆಯ್ಕೆ ಕ್ಲಿಕಿಸಿ.
ಹಂತ 4: ನಿಮ್ಮ ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಎಲ್ಐಸಿ ಪಾಲಿಸಿ ಸಂಖ್ಯೆ ದಾಖಲಿಸಿ
ಹಂತ 5: Captcha Code ದಾಖಲಿಸಿ. 'Get OTP' ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 6:ನಿಮ್ಮ ಮೊಬೈಲ್ ಗೆ ರವಾನೆಯಾಗೋ OTP ಅನ್ನು ದಾಖಲಿಸಿ.
ಹಂತ 7: ಅರ್ಜಿ ಸಲ್ಲಿಕೆಯಾದ ಬಳಿಕ ಯಶಸ್ವಿಯಾದ ಬಗ್ಗೆ ಮೆಸೇಜ್ ಕಾಣಿಸುತ್ತದೆ.
ಭಾರತದಲ್ಲಿಎಟಿಎಂ ವಿತ್ ಡ್ರಾಕ್ಕಿಂತ ಮೊಬೈಲ್ ಪಾವತಿಯೇ ಹೆಚ್ಚು: ಪ್ರಧಾನಿ
ಎಲ್ಐಸಿ ಏಜೆಂಟ್ ಸಂಪರ್ಕಿಸಿ
ನೀವು ಎಲ್ಐಸಿ ಏಜೆಂಟ್ ಅವರನ್ನು ಸಂಪರ್ಕಿಸಿ, ಅವರ ಸಹಾಯದಿಂದ ಕೂಡ ಪ್ಯಾನ್ ಮಾಹಿತಿಯನ್ನು ಎಲ್ಐಸಿ ಗೆ ನೀಡಬಹುದು. ಒಂದು ವೇಳೆ ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲದಿದ್ರೆ ತಕ್ಷಣ ಅರ್ಜಿ ಸಲ್ಲಿಸಿ.