ಎಲ್ಐಸಿ ಪಾಲಿಸಿ ಮೂಲದಾಖಲೆ ಕಳೆದು ಹೋಗಿದೆಯಾ? ಡೋಂಟ್ ವರಿ ಹೀಗೆ ಮಾಡಿ
ಎಷ್ಟೋ ಬಾರಿ ಜೀವ ವಿಮೆ ಮಾಡಿಸಿದ ಬಳಿಕ ಪಾಲಿಸಿ ದಾಖಲೆಗಳನ್ನು ಎಲ್ಲಿಟ್ಟಿದ್ದೇವೆ ಎಂಬುದನ್ನೇ ಮರೆತು ಬಿಟ್ಟಿರುತ್ತೇವೆ. ಇಲ್ಲವೆ ದಾಖಲೆಗಳನ್ನು ಕಳೆದುಕೊಂಡಿರುತ್ತೇವೆ. ಆದರೆ, ಪಾಲಿಸಿ ಮೆಚ್ಯುರ್ ಆದ ಬಳಿಕ ಪೂರ್ಣ ಮೊತ್ತ ನಮ್ಮ ಕೈಸೇರಲು ಮೂಲದಾಖಲೆ ಅಗತ್ಯ. ಹಾಗಾದ್ರೆ ಜೀವ ವಿಮಾ ಪಾಲಿಸಿ ಮೂಲ ದಾಖಲೆ ಕಳೆದುಹೋಗಿದ್ರೆ ಏನ್ ಮಾಡ್ಬೇಕು?
Business Desk:ಇಂದು ಬಹುತೇಕರು ಜೀವ ವಿಮಾ ಪಾಲಿಸಿಗಳನ್ನು ಹೊಂದಿರುತ್ತಾರೆ. ವಿಮಾ ಪಾಲಿಸಿ ಮಾಡಿಸಿದ ಬಳಿಕ ವಿಮಾ ಸಂಸ್ಥೆ ಅದರ ದಾಖಲೆಗಳನ್ನು ನಮಗೆ ನೀಡುತ್ತದೆ. ಪಾಲಿಸಿಯ ಅವಧಿ ದೀರ್ಘಾವಧಿಯಾಗಿರುವ ಕಾರಣ ಕೆಲವೊಮ್ಮೆ ಮೂಲದಾಖಲೆ ಅಥವಾ ಬಾಂಡ್ ಎಲ್ಲಿಟ್ಟಿದ್ದೇವೆ ಎಂಬುದು ಮರೆತು ಹೋಗಿರುತ್ತದೆ. ಇಲ್ಲವೇ ಅದನ್ನು ಕಳೆದುಕೊಂಡು ಬಿಟ್ಟಿರುತ್ತೇವೆ. ಪಾಲಿಸಿ ಮೆಚ್ಯುರ್ ಆದ ಬಳಿಕ ಅಥವಾ ಪಾಲಿಸಿದಾರರು ಮರಣ ಹೊಂದಿದ ಸಂದರ್ಭದಲ್ಲಿ ಕೆವೈಸಿ ಜೊತೆಗೆ ಪಾಲಿಸಿಯ ಮೂಲ ದಾಖಲೆಗಳನ್ನು ಸಲ್ಲಿಕೆ ಮಾಡಿದ್ರೆ ಮಾತ್ರ ಭರವಸೆ ನೀಡಿರುವ ಮೊತ್ತ ನಿಮ್ಮ ಕೈಸೇರುತ್ತದೆ. ಹಾಗಾದ್ರೆ ಪಾಲಿಸಿಯ ಮೂಲದಾಖಲೆಗಳು ಕಳೆದು ಹೋದ ಸಂದರ್ಭದಲ್ಲಿ ಪಾಲಿಸಿದಾರ ಏನು ಮಾಡ್ಬೇಕು? ಇಂಥ ಸಮಯದಲ್ಲಿ ಪಾಲಿಸಿದಾರ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಪಾಲಿಸಿ ಹಣ ಕ್ಲೈಮ್ ಮಾಡಿಕೊಳ್ಳಬಹುದು. ಈ ಕ್ರಮ ಅಥವಾ ಮಾರ್ಗಗಳು ಕೇವಲ ಭಾರತೀಯ ಜೀವ ವಿಮಾ ನಿಗಮದ ಪಾಲಿಸಿಗಳಿಗೆ ಮಾತ್ರವಲ್ಲ, ಬದಲಿಗೆ ಎಚ್ ಡಿಎಫ್ ಸಿ ಲೈಫ್, ಐಸಿಐಸಿಐ ಪ್ರೊಡೆನ್ಷಿಯಲ್ ಸಂಸ್ಥೆಯ ಪಾಲಿಸಿಗಳಿಗೂ ಅನ್ವಯಿಸುತ್ತವೆ. ಹಾಗಾದ್ರೆ ಆ ಕ್ರಮಗಳು ಯಾವುವು?
*ಮೊದಲಿಗೆ ಎಲ್ಐಸಿ, ಎಚ್ ಡಿಎಫ್ ಸಿ ಅಥವಾ ಐಸಿಐಸಿಐ ಹೀಗೆ ನೀವು ಯಾವ ಸಂಸ್ಥೆಯಿಂದ ಪಾಲಿಸಿ ಖರೀದಿಸಿದ್ದೀರೋ ಆ ಸಂಸ್ಥೆಗೆ ಮಾಹಿತಿ ನೀಡಿ. ನೀವು ಪಾಲಿಸಿ ಖರೀದಿಸಿದ ಏಜೆಂಟ್ ಅನ್ನು ಕೂಡ ಸಂಪರ್ಕಿಸಬಹುದು.
*ಎರಡನೇ ಹಂತವಾಗಿ ದಿನಪತ್ರಿಕೆಯಲ್ಲಿ ಈ ಬಗ್ಗೆ ಒಂದು ಜಾಹೀರಾತು ಪ್ರಕಟಿಸಿ. ಈ ಜಾಹೀರಾತಿನಲ್ಲಿ ನೀವು ಪಾಲಿಸಿ ದಾಖಲೆ ಕಳೆದುಕೊಂಡಿದ್ದೀರಿ ಎಂಬ ಬಗ್ಗೆ ವಿಸ್ತೃತ ಮಾಹಿತಿ ಇರಬೇಕು. ಜೊತೆಗೆ ಇದರಲ್ಲಿ ನಿಮ್ಮ ಹೆಸರು ಹಾಗೂ ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿ ಕೂಡ ಇರಬೇಕು.ಇನ್ನು ನಿಮ್ಮ ಪಾಲಿಸಿ ದಾಖಲೆಗಳು ಎಲ್ಲಿ ಕಳೆದು ಹೋಗಿದ್ದವು ಅದೇ ರಾಜ್ಯದಲ್ಲಿ ಜಾಹೀರಾತು ಪ್ರಕಟಿಸಬೇಕು.
*ಮೂರನೇ ಹಂತದಲ್ಲಿ ಪಾಲಿಸಿ ದಾಖಲೆ ಕಳೆದು ಹೋಗಿರುವ ಬಗ್ಗೆ ದೂರು ದಾಖಲಿಸಬೇಕು. ಹಾಗೆಯೇ ದೂರಿನ ಪ್ರತಿ ಕೂಡ ಪಡೆಯಬೇಕು.
ಹೂಡಿಕೆ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ!
*ನಾಲ್ಕನೇ ಹಂತದಲ್ಲಿ ರಕ್ಷಣೆ ನೀಡುವ ಬಾಂಡ್ ಫೈಲ್ ಮಾಡಬೇಕು. ಇದಕ್ಕಾಗಿ ನೀವು ಸ್ಟ್ಯಾಂಪ್ ಪೇಪರ್ ಮೇಲೆ ಸಹಿ ಮಾಡಬೇಕು. ಪಾಲಿಸಿದಾರ ಹಾಗೂ ವಿಮಾ ಸಂಸ್ಥೆ ಈ ಬಾಂಡ್ ಗಳ ಮೇಲೆ ಸಹಿ ಮಾಡಬೇಕು. ಈ ಬಾಂಡ್ ಗಳಲ್ಲಿ ಮೂಲ ದಾಖಲೆಗಳನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂಬ ಬಗ್ಗೆ ಭರವಸೆ ನೀಡಬೇಕು. ವಿಮಾ ಸಂಸ್ಥೆಯ ಆಸಕ್ತಿಗಳನ್ನು ಈ ಬಾಂಡ್ ಸಂರಕ್ಷಿಸಬೇಕು.
*ಆ ಬಳಿಕ ನೀವು ಅರ್ಜಿ ತುಂಬಿ ಅಗತ್ಯ ದಾಖಲೆಗಳನ್ನು ವಿಮಾ ಕಂಪನಿಗೆ ನೀಡಬೇಕು.
*ನಂತರ ವಿಮಾ ಕಂಪನಿ ನಿಮಗೆ ನಕಲಿ ಪಾಲಿಸಿ ದಾಖಲೆ ನೀಡುತ್ತದೆ. ಈ ದಾಖಲೆಯಲ್ಲಿ ಅದು ನಕಲಿ ಎಂಬ ಬಗ್ಗೆ ಸಂಸ್ಥೆ ಸ್ಪಷ್ಟವಾಗಿ ನಮೂದಿಸಿರುತ್ತದೆ.
India Bank : ಸಾಲದ ಬಡ್ಡಿ ಮಾತ್ರವಲ್ಲ ಇವೆಲ್ಲದ್ರಿಂದ ಹಣ ಗಳಿಸುತ್ತೆ ಬ್ಯಾಂಕ್
ವಾಟ್ಸ್ಆ್ಯಪ್ ಸೇವೆ
ಎಲ್ಐಸಿ ಪೋರ್ಟಲ್ ನಲ್ಲಿ ಪಾಲಿಸಿಗಳನ್ನು ನೋಂದಣಿ ಮಾಡಿಸಿರೋರು ವಾಟ್ಸ್ಆ್ಯಪ್ ನಲ್ಲಿ ನಿಗದಿತ ಸೇವೆಗಳನ್ನು ಮನೆಯಲ್ಲೇ ಕುಳಿತು ಪಡೆಯಬಹುದು. ಪ್ರೀಮಿಯಂ ಬಾಕಿ, ಬೋನಸ್ ಮಾಹಿತಿ, ಪಾಲಿಸಿ ವಿವರ, ಸಾಲದ ಮರುಪಾವತಿ, ಸಾಲದ ಬಡ್ಡಿ ಸೇರಿದಂತೆ ಅನೆಕ ಮಾಹಿತಿಗಳನ್ನು ಪಾಲಿಸಿದಾರ ವಾಟ್ಸ್ಆ್ಯಪ್ ಮೂಲಕ ಪಡೆದುಕೊಳ್ಳಬಹುದು.ನೀವು ಮೊಬೈಲ್ ಮುಖಾಂತರ ಎಲ್ಐಸಿ ವಾಟ್ಸ್ಆ್ಯಪ್ ಸೇವೆಗಳನ್ನು ಪಡೆಯಲು ಎಲ್ಐಸಿ ಪೋರ್ಟಲ್ ನಲ್ಲಿ ಎಲ್ ಐಸಿ ಪಾಲಿಸಿ ನೋಂದಣಿ ಮಾಡಿಸೋದು ಅಗತ್ಯ. ಆ ಬಳಿಕ ನೀವು ನಿಮ್ಮ ವಾಟ್ಸ್ಆ್ಯಪ್ ನಿಂದ 8976862090 ಸಂಖ್ಯೆಗೆ "Hi" ಎಂದು ಮೆಸೇಜ್ ಕಳುಹಿಸಬೇಕು. ಆ ಬಳಿಕ ನಿಮಗೆ ಯಾವೆಲ್ಲ ಸೇವೆಗಳು ಲಭ್ಯವಿವೆ ಎಂಬ ಮಾಹಿತಿ ಸಿಗಲಿದೆ. ಅಲ್ಲಿ ಆಯಾ ಸೇವೆಗೆ ಸಂಬಂಧಿಸಿದ ಸಂಖ್ಯೆ ಆಯ್ಕೆ ಮಾಡಿದರೆ ಅಗತ್ಯವಿರುವ ಮಾಹಿತಿ ಲಭಿಸುತ್ತದೆ.