ಹೂಡಿಕೆ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ!
ಹೂಡಿಕೆ ಮಾಡುವಾಗ ಬಹುತೇಕರು ಕೆಲವೊಂದು ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡೋದಿಲ್ಲ. ಇದ್ರಿಂದ ಸಾಕಷ್ಟು ತೊಂದರೆ ಕೂಡ ಅನುಭವಿಸುತ್ತಾರೆ. ಹಾಗಾದ್ರೆ ಹೂಡಿಕೆ ಮಾಡುವಾಗ ಹೂಡಿಕೆದಾರರು ಯಾವೆಲ್ಲ ತಪ್ಪುಗಳನ್ನು ಮಾಡಬಾರದು? ಇಲ್ಲಿದೆ ಮಾಹಿತಿ.
Business Desk:ಆದಾಯದಲ್ಲಿ ಒಂದಿಷ್ಟು ಹೂಡಿಕೆ ಮಾಡೋದು ಅಗತ್ಯ. ಆಗ ಮಾತ್ರ ನಮ್ಮ ಭವಿಷ್ಯ ಸುಭದ್ರವಾಗಿರುವ ಜೊತೆಗೆ ಸಂಪತ್ತು ಕೂಡ ವೃದ್ಧಿಯಾಗುತ್ತದೆ. ಆದರೆ, ಹೂಡಿಕೆ ಮಾಡುವ ಸಂದರ್ಭದಲ್ಲಿ ಅನೇಕರು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಇದ್ರಿಂದ ಹೂಡಿಕೆ ಮಾಡಿದ ಹಣಕ್ಕೆ ನಿರೀಕ್ಷಿತ ರಿಟರ್ನ್ಸ್ ಸಿಗೋದಿಲ್ಲ. ಅಲ್ಲದೆ, ಹಣಕಾಸಿನ ನಷ್ಟ ಕೂಡ ಸಂಭವಿಸುತ್ತದೆ. ಹೀಗಾಗಿ ಹೂಡಿಕೆ ಮಾಡುವ ಸಮಯದಲ್ಲಿ ಎಚ್ಚರ ವಹಿಸೋದು ಅಗತ್ಯ. ಹೂಡಿಕೆ ಮಾಡುವ ಮುನ್ನ ಆ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಹೊಂದಿರಬೇಕು. ಹಾಗೆಯೇ ಎಷ್ಟು ರಿಟರ್ನ್ ಸಿಗಬಹುದು, ರಿಸ್ಕ್ ಎಷ್ಟಿದೆ ಎಂಬ ಮಾಹಿತಿಯೂ ಇರಬೇಕು. ಇನ್ನೂ ಕೆಲವರು ಅಧಿಕ ರಿಟರ್ನ್ ಸಿಗುತ್ತದೆ ಎಂಬ ಕಾರಣಕ್ಕೆ ಅಪಾಯ ಹೆಚ್ಚಿರುವ ಯೋಜನೆಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳುವುದು ಕೂಡ ಇದೆ. ಹಿಂದೆಮುಂದೆ ಯೋಚಿಸದೆ ಅಥವಾ ಪೂರ್ಣ ಮಾಹಿತಿ ಹೊಂದಿರದೆ ಹೂಡಿಕೆ ಮಾಡೋದ್ರಿಂದ ಅಪಾಯವೇ ಜಾಸ್ತಿ. ಹಾಗಾದ್ರೆ ಹೂಡಿಕೆ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ ಜನರು ಮಾಡುವ ತಪ್ಪುಗಳೇನು? ಅವುಗಳನ್ನು ನಿರ್ಲಕ್ಷಿಸಲು ಏನೆಲ್ಲ ಕ್ರಮ ಕೈಗೊಳ್ಳಬಹುದು? ಇಲ್ಲಿದೆ ಮಾಹಿತಿ.
ಹೂಡಿಕೆ ಹಂಚಿಕೆಯಲ್ಲಿ ವೈಫಲ್ಯ
ಹೂಡಿಕೆ ವಿಚಾರದಲ್ಲಿ ಎಲ್ಲರೂ ಮಾಡುವ ಸಾಮಾನ್ಯ ತಪ್ಪುಗಳೆಂದ್ರೆ ಒಂದೇ ಕಡೆ ಎಲ್ಲ ಹಣವನ್ನು ಹೂಡಿಕೆ ಮಾಡೋದು. ಇದರ ಬದಲು ನಿಮ್ಮ ಹಣವನ್ನು ಷೇರುಗಳು, ಬಾಂಡ್ ಗಳು, ರಿಯಲ್ ಎಸ್ಟೇಟ್ ಹಾಗೂ ವಿವಿಧ ಆಸ್ತಿಗಳಲ್ಲಿ ಹೂಡಿಕೆ ಮಾಡಿದ್ರೆ ಹಣ ಕಳೆದುಕೊಳ್ಳುವ ಅಪಾಯ ತಗ್ಗುತ್ತದೆ. ಹಾಗೆಯೇ ರಿಟರ್ನ್ಸ್ ಕೂಡ ಹೆಚ್ಚುತ್ತದೆ.
ಮಾರುಕಟ್ಟೆ ಅವಧಿ
ಮಾರುಕಟ್ಟೆ ಏರಿಳಿತಗಳನ್ನು ಕಿರು ಅವಧಿಯಲ್ಲಿ ಅವಲೋಕಿಸಿ ಹೂಡಿಕೆ ನಿರ್ಧಾರ ಮಾಡೋದ್ರಿಂದ ಉತ್ತಮ ರಿಟರ್ನ್ ಸಿಗೋದಿಲ್ಲ. ಅದರ ಬದಲು ದೀರ್ಘಾವಧಿಯ ಹೂಡಿಕೆಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ಹಾಗೆಯೇ ಕಿರು ಅವಧಿಯ ಮಾರುಕಟ್ಟೆ ಚಲನೆಗಳನ್ನು ಆಧರಿಸಿ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳಬೇಡಿ.
Personal Finance : 60ರಲ್ಲಿ ಆರಾಮಾಗಿರ್ಬೇಕೆಂದ್ರೆ 30ರಲ್ಲಿ ಕಷ್ಟಪಡಿ
ಅಧಿಕ ರಿಟರ್ನ್ಸ್ ಬೆನ್ನಟ್ಟಿ ಹೋಗಬೇಡಿ
ಅಧಿಕ ರಿಟರ್ನ್ಸ್ ಪಡೆಯಬೇಕೆಂಬ ಬಯಕೆ ಹೆಚ್ಚಿರಬಹುದು. ಆದರೆ, ಅಧಿಕ ರಿಟರ್ನ್ ಯಾವಾಗಲೂ ಹೆಚ್ಚಿನ ಅಪಾಯ ಹೊಂದಿರುತ್ತದೆ. ಹೀಗಾಗಿ ಹೂಡಿಕೆ ವಿಚಾರದಲ್ಲಿ ಎಚ್ಚರ ಹೊಂದಿರಿ. ಯಾವುದೇ ಹೂಡಿಕೆಯಲ್ಲಿನ ಅಪಾಯ ಹಾಗೂ ರಿವಾರ್ಡ್ಗಳ ಬಗ್ಗೆ ಎಚ್ಚರಿಕೆಯಿಂದ ಪರಿಶೀಲನೆ ನಡೆಸಿ.
ಸಾಕಷ್ಟು ಅಧ್ಯಯನ ನಡೆಸದಿರೋದು
ಯಾವುದೇ ಅಧ್ಯಯನ ನಡೆಸದೆ ಹೂಡಿಕೆ ಮಾಡೋದು ಕೂಡ ತಪ್ಪು. ಹೂಡಿಕೆ ಮಾಡುವ ಮುನ್ನ ಆ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಹೊಂದಿರೋದು ಅಗತ್ಯ. ನೀವು ಹೂಡಿಕೆ ಮಾಡಲು ಇಚ್ಛಿಸುವ ಸಂಸ್ಥೆ ಬಗ್ಗೆ, ಹೂಡಿಕೆಯ ಸುರಕ್ಷತೆ ಬಗ್ಗೆ ಸರಿಯಾದ ಮಾಹಿತಿ ಕಲೆ ಹಾಕಿ ಆ ಬಳಿಕವೇ ಹೂಡಿಕೆ ಮಾಡಿ.
ಭಾವನಾತ್ಮಕ ಹೂಡಿಕೆ ಬೇಡ
ಕೆಲವೊಂದು ವಿಚಾರಗಳಲ್ಲಿ ಭಾವನೆಗಳಿಗಿಂತ ವಾಸ್ತವಕ್ಕೆ ಹೆಚ್ಚಿನ ಮಹತ್ವ ನೀಡೋದು ಅಗತ್ಯ. ಇದು ಹೂಡಿಕೆಗೂ ಅನ್ವಯಿಸುತ್ತದೆ. ಭಯ ಅಥವಾ ಅತೀಯಾಸೆ ತಪ್ಪು ಹೂಡಿಕೆ ನಿರ್ಧಾರಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಹೂಡಿಕೆ ನಿರ್ಧಾರಗಳ ಮೇಲೆ ಭಾವನೆಗಳು ಸವಾರಿ ಮಾಡದಂತೆ ಎಚ್ಚರ ವಹಿಸಿ.
Business Ideas: ಹೆಚ್ಚಿನ ಲಾಭ ಬೇಕಂದ್ರೆ ಈ ವ್ಯವಹಾರ ಶುರು ಮಾಡಿ
ಶುಲ್ಕ ನಿರ್ಲಕ್ಷಿಸಬೇಡಿ
ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವಾಗ ಅನೇಕ ಜನರು ಶುಲ್ಕಗಳ ಕಡೆಗೆ ಗಮನ ನೀಡೋದಿಲ್ಲ. ಹೂಡಿಕೆ ಮಾಡುವ ಯೋಜನೆಗೆ ಸಂಬಂಧಿಸಿದ ಶುಲ್ಕಗಳು ಕೆಲವೊಮ್ಮೆ ನಿಮ್ಮ ರಿಟರ್ನ್ ಮೇಲೆ ಪರಿಣಾಮ ಬೀರಬಲ್ಲವು. ಹೀಗಾಗಿ ಹೂಡಿಕೆ ಸಂದರ್ಭದಲ್ಲಿ ಅದಕ್ಕೆ ಸಂಬಂಧಿಸಿದ ವೆಚ್ಚಗಳ ಬಗ್ಗೆ ಕೂಡ ಮಾಹಿತಿ ಹೊಂದಿರೋದು ಅಗತ್ಯ. ನಿರ್ವಹಣಾ ವೆಚ್ಚಗಳು, ಟ್ರೇಡಿಂಗ್ ವೆಚ್ಚ ಹಾಗೂ ನಿರ್ಗಮನ ಶುಲ್ಕಗಳ ಬಗ್ಗೆ ಮಾಹಿತಿ ಹೊಂದಿರಬೇಕು.