ಎಲ್ಐಸಿ ಇತ್ತೀಚೆಗೆ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪಾಲಿಸಿ ಪರಿಚಯಿಸಿದೆ. ಧನ್ ವೃದ್ಧಿ ಹೆಸರಿನ ಈ ಪಾಲಿಸಿಯನ್ನು ಹೇಗೆ ಖರೀದಿಸಬಹುದು? ವಯೋಮಿತಿ ಎಷ್ಟು? ಪ್ರೀಮಿಯಂ ಎಷ್ಟು ಪಾವತಿಸಬೇಕು? ಈ ಎಲ್ಲ ಮಾಹಿತಿ ಇಲ್ಲಿದೆ.
Business Desk:ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಆಗಾಗ ಹೊಸ ಪಾಲಿಸಿಗಳನ್ನು ಪರಿಚಯಿಸುತ್ತಲಿರುತ್ತದೆ. ಇತ್ತೀಚೆಗೆ ಎಲ್ಐಸಿ ಧನ್ ವೃದ್ಧಿ ಎಂಬ ಸಿಂಗಲ್ ಪ್ರೀಮಿಯಂ ನಾನ್ ಲಿಂಕ್ಡ್ ಪಾಲಿಸಿ ಪರಿಚಯಿಸಿದೆ. ಉಳಿತಾಯದ ಬಗ್ಗೆ ಯೋಚಿಸುತ್ತಿರೋರು ಎಲ್ಐಸಿಯ ಈ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಪಾಲಿಸಿ ಹೂಡಿಕೆದಾರರಿಗೆ ವಿಮಾ ರಕ್ಷಣೆ ನೀಡುವ ಜೊತೆಗೆ ಆಕರ್ಷಕ ಹೂಡಿಕೆ ಆಯ್ಕೆ ಕೂಡ ಆಗಿದೆ. ಹಾಗೆಯೇ ಹೂಡಿಕೆದಾರರ ಆರ್ಥಿಕ ಭವಿಷ್ಯವನ್ನು ಕೂಡ ಭದ್ರಪಡಿಸುತ್ತದೆ. ಈ ಯೋಜನೆ 2023ರ ಸೆಪ್ಟೆಂಬರ್ 30ರ ತನಕ ಖರೀದಿಗೆ ಲಭ್ಯವಿರಲಿದೆ. ಎಲ್ಐಸಿ ಧನ್ ವೃದ್ಧಿ ಪ್ಲ್ಯಾನ್ ಪಾಲಿಸಿ ಅವಧಿಯಲ್ಲಿ ಜೀವನ ಭದ್ರತೆ ಹೊಂದಿರುವ ವ್ಯಕ್ತಿ ಮರಣ ಹೊಂದಿದ ಸಂದರ್ಭದಲ್ಲಿ ಆತನ ಕುಟುಂಬಕ್ಕೆ ಆರ್ಥಿಕ ನೆರವು ನೀಡುತ್ತದೆ. ಇನ್ನು ವಿಮಾ ಪಾಲಿಸಿ ಹೊಂದಿರುವ ವ್ಯಕ್ತಿಗೆ ಮೆಚ್ಯುರಿಟಿ ದಿನಾಂಕದಂದು ದೊಡ್ಡ ಮೊತ್ತದ ಹಣವನ್ನು ನೀಡುತ್ತದೆ. ಈ ಪಾಲಿಸಿ ಕ್ಲೋಸ್ ಎಂಡೆಂಡ್ ಉತ್ಪನ್ನವಾಗಿದ್ದು, 2023ರ ಸೆಪ್ಟೆಂಬರ್ 30ರ ತನಕ ಮಾತ್ರ ಖರೀದಿಗೆ ಲಭ್ಯವಿರಲಿದೆ.
ಎಲ್ಐಸಿ ಧನ್ ವೃದ್ಧಿ ಯೋಜನೆ ವಿಶೇಷತೆ
ಎಲ್ಐಸಿ ಧನ್ ವೃದ್ಧಿ ಯೋಜನೆ ಪ್ರಾರಂಭದಲ್ಲಿ ಪಾಲಿಸಿದಾರರು ಒಂದೇ ಪ್ರೀಮಿಯಂನಲ್ಲಿ ಹೂಡಿಕೆ ಮಾಡಬೇಕು. ಆ ಬಳಿಕ ನಿಗದಿತ ಪ್ರಮಾಣದ ರಿಟರ್ನ್ಸ್ ಮೆಚ್ಯುರಿಟಿ ವೇಳೆ ಸಿಗಲಿದೆ. ಈ ಪಾಲಿಸಿ ಸಿಂಗಲ್ ಪ್ರೀಮಿಯಂ, ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ವೈಯಕ್ತಿಕ ಉಳಿತಾಯ ಜೀವ ವಿಮೆ ಆಗಿದೆ. ಇದರ ಅಡಿಯಲ್ಲಿ ಗ್ರಾಹಕರಿಗೆ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಮೊದಲನೆಯದು ಮರಣದ ಸಂದರ್ಭದಲ್ಲಿ ಭರವಸೆ ನೀಡಿರುವ ಮೊತ್ತವು ಆಯ್ಕೆ ಮಾಡಿರುವ ಮೂಲ ಮೊತ್ತದ ಟ್ಯಾಬುಲರ್ ಪ್ರೀಮಿಯಂನ 1.25 ಪಟ್ಟು ಆಗಿರುವಂತೆ. ಎರಡನೆಯದು, ಆಯ್ಕೆ ಮಾಡಿರುವ ಭರವಸೆ ನೀಡಿರುವ ಮೂಲ ಮೊತ್ತದ ಟ್ಯಾಬುಲರ್ ಪ್ರೀಮಿಯಂನ 10 ಪಟ್ಟು. ಆದರೆ, ಇದು ನಿರ್ದಿಷ್ಟ ಅರ್ಹತಾ ಷರತ್ತುಗಳಿಗೆ ಒಳಪಟ್ಟಿರುತ್ತದೆ.
LIC ಬೆಂಬಲಿತ ಈ ಷೇರಿನಲ್ಲಿ ಹೂಡಿಕೆ ಮಾಡಿದವರಿಗೆ ಬಂಪರ್; ಕೇವಲ ಒಂದೇ ವರ್ಷದಲ್ಲಿ ಶೇ.300 ರಿಟರ್ನ್!
ಪಾಲಿಸಿ ಅವಧಿ
ಎಲ್ಐಸಿ ಧನ್ ವೃದ್ಧಿ ಪಾಲಿಸಿ 10,15 ಅಥವಾ 18 ವರ್ಷಗಳ ಅವಧಿಗೆ ಲಭ್ಯವಿದೆ.
ವಯಸ್ಸಿನ ಮಿತಿ
ಈ ಪಾಲಿಸಿ ಖರೀದಿಗೆ ಕನಿಷ್ಠ ವಯೋಮಿತಿ ಆಯ್ಕೆ ಮಾಡಿರುವ ಅವಧಿ ಆಧಾರದಲ್ಲಿ 90 ದಿನಗಳಿಂದ 8 ವರ್ಷಗಳ ತನಕ ಇರುತ್ತದೆ. ಇನ್ನು ಈ ಪಾಲಿಸಿ ಖರೀದಿಗೆ ಗರಿಷ್ಠ ವಯೋಮಿತಿ ಅವಧಿ ಹಾಗೂ ಆಯ್ಕೆಗೆ ಅನುಗುಣವಾಗಿ 32ರಿಂದ 60 ವರ್ಷಗಳ ತನಕ ಇರುತ್ತದೆ.
ಭರವಸೆ ನೀಡಿರುವ ಕನಿಷ್ಠ ಹಾಗೂ ಗರಿಷ್ಠ ಮೊತ್ತ
ಈ ಪಾಲಿಸಿ ಅಡಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ 1,25,000ರೂ. ಇನ್ನು 5,000ರೂ. ಗುಣಿತದ ಆಧಾರದಲ್ಲಿ ಹೆಚ್ಚಿಸುವ ಆಯ್ಕೆ ನೀಡಲಾಗಿದೆ.
ಎಲ್ಐಸಿ ಈ ಪಾಲಿಸಿ ಖರೀದಿಸಿದ್ರೆ ವರ್ಷಕ್ಕೆ 1,20,496 ರೂ. ವರ್ಷಾಶನ ಖಚಿತ
ಸಾಲ ಸೌಲಭ್ಯ
ಎಲ್ ಐಸಿ ಪಾಲಿಸಿ ಮೇಲೆ ಸಾಲ ಪಡೆಯಲು ಕೂಡ ಅವಕಾಶವಿದೆ. ಪಾಲಿಸಿ ಪ್ರಾರಂಭವಾದ ಮೂರು ತಿಂಗಳ ಬಳಿಕದ ಅವಧಿಯಿಂದ ಯಾವುದೇ ಸಮಯದಲ್ಲಿ ನೀವು ವಿಮೆ ಆಧಾರವಾಗಿರಿಸಿ ಸಾಲ ಪಡೆಯಬಹುದಾಗಿದೆ. ಸಾಮಾನ್ಯವಾಗಿ ಎಲ್ಐಸಿಯ ಎಲ್ಲ ಪಾಲಿಸಿಗಳ ಮೇಲೂ ಸಾಲ ಸೌಲಭ್ಯ ಪಡೆಯುವ ಅವಕಾಶ ನೀಡಲಾಗಿದೆ.
ಈ ಪಾಲಿಸಿ ಖರೀದಿ ಹೇಗೆ?
ಎಲ್ಐಸಿ ಧನ್ ವೃದ್ಧಿ ಪಾಲಿಸಿಯನ್ನು ಎಲ್ಐಸಿ ಏಜೆಂಟ್ ಗಳ ಮೂಲಕ ಖರೀದಿಸಬಹುದು. ಎಲ್ಐಸಿಯ ಸಮೀಪದ ಶಾಖೆಗೆ ಭೇಟಿ ನೀಡುವ ಮೂಲಕ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. ಇನ್ನು ಆನ್ ಲೈನ್ ನಲ್ಲಿ ಎಲ್ಐಸಿ ಅಧಿಕೃತ ವೆಬ್ ಸೈಟ್ www.licindia.in ಮೂಲಕ ಕೂಡ ಖರೀದಿಸಬಹುದು.
