LIC IPO: ಗ್ರಾಹಕರಿಗೆ ಎಸ್ ಬಿಐ ಆಫರ್! ಯೋನೋ ಅಪ್ಲಿಕೇಷನ್ ಮೂಲಕ ಡಿಮ್ಯಾಟ್ ಖಾತೆ ತೆರೆಯಲು ಅವಕಾಶ
*ನಾಳೆಯಿಂದ ಪ್ರಾರಂಭವಾಗಲಿರುವ ಎಲ್ಐಸಿ ಐಪಿಒನಲ್ಲಿ ಪಾಲ್ಗೊಳ್ಳಲು ಗ್ರಾಹಕರಿಗೆ ವಿಶೇಷ ಸೌಲಭ್ಯ ಕಲ್ಪಿಸಿದ SBI
*ಯೋನೋ ಅಪ್ಲಿಕೇಷನ್ ನಲ್ಲಿ ಡಿಮ್ಯಾಟ್ ಖಾತೆ ತೆರೆಯಲು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.
*ಮೊದಲ ವರ್ಷದ DP AMC ಶುಲ್ಕ ಮನ್ನಾ
Business Desk:ಭಾರತದ ಅತೀದೊಡ್ಡ ಐಪಿಒ (IPO) ಎಂದು ಪರಿಗಣಿಸಲ್ಪಟ್ಟಿರುವ ಎಲ್ ಐಸಿ (LIC) ಐಪಿಒ ನಾಳೆ (ಮೇ 4) ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (SBI) ತನ್ನ ಗ್ರಾಹಕರಿಗೆ ಯೋನೋ (YONO) ಅಪ್ಲಿಕೇಷನ್ ಮೂಲಕ ಡಿಮ್ಯಾಟ್ (Demat) ಹಾಗೂ ಟ್ರೇಡಿಂಗ್ ಖಾತೆಗಳನ್ನು(trading account) ತೆರೆಯಲು ಅವಕಾಶ ಕಲ್ಪಿಸಿದೆ.
ಈ ಕುರಿತು ಟ್ವೀಟ್ (Tweet) ಮಾಡಿರುವ ಎಸ್ ಬಿಐ (SBI) 'ನಿಮ್ಮ ಹೂಡಿಕೆ ಪಯಣವನ್ನು ಇಂದು ಪ್ರಾರಂಭಿಸಿ' ಎಂದಿದೆ. 'ನಿಮ್ಮ ಹೂಡಿಕೆಯನ್ನು (Investment) ಎಸ್ ಬಿಐ ಸೆಕ್ಯುರಿಟೀಸ್ (SBI Securities ) ಜೊತೆಗೆ ಪ್ರಾರಂಭಿಸಿ' ಎಂದು ಕೂಡ ಹೇಳಿದೆ. ಎಸ್ ಬಿಐ ಸೆಕ್ಯುರಿಟೀಸ್ ಡಿಮ್ಯಾಟ್ ಹಾಗೂ ಟ್ರೇಡಿಂಗ್ ಖಾತೆ ಮೂಲಕ ಎಲ್ಐಸಿ ಐಪಿಒನಲ್ಲಿ ಹೂಡಿಕೆಗಳನ್ನು (Invest) ಮಾಡಿ ಎಂದು ಎಸ್ ಬಿಐ ಈ ಹಿಂದೆ ಅಧಿಸೂಚನೆ ಹೊರಡಿಸಿತ್ತು ಕೂಡ. ಯೋನೋ (YONO) ಅಪ್ಲಿಕೇಷನ್ ನಲ್ಲಿ ಡಿಮ್ಯಾಟ್ ಖಾತೆ ತೆರೆಯಲು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಹಾಗೆಯೇ ಮೊದಲ ವರ್ಷದ DP AMC ಶುಲ್ಕ ಮನ್ನಾ ಮಾಡುವುದಾಗಿ ಕೂಡ ಎಸ್ ಬಿಐ (SBI) ಘೋಷಿಸಿದೆ. ನೀವು ಎಸ್ ಬಿಐ ಸೆಕ್ಯುರಿಟೀಸ್ ಡಿಮ್ಯಾಟ್ ಖಾತೆಯನ್ನು ಯೋನೋ ಅಪ್ಲಿಕೇಷನ್ ಬದಲು ನೇರವಾಗಿ ತೆರೆದರೆ 850ರೂ. ಶುಲ್ಕ ಪಾವತಿಸಬೇಕಾಗುತ್ತದೆ. ವಾರ್ಷಿಕ ನಿರ್ವಹಣ ಶುಲ್ಕ ಕೂಡ ವಿಧಿಸಲಾಗುತ್ತದೆ.
ಯೋನೋನಲ್ಲಿ ಡಿಮ್ಯಾಟ್ ಖಾತೆ ತೆರೆಯೋದು ಹೇಗೆ?
*ಮೊದಲಿಗೆ YONO SBI ಅಪ್ಲಿಕೇಷನ್ ಅಥವಾ ವೆಬ್ ಸೈಟ್ ತೆರೆಯಬೇಕು.
*ಲಾಗಿ ಇನ್ ವಿವರಗಳನ್ನು ನಮೂದಿಸಿ ಲಾಗಿ ಇನ್ ಆಗಿ
*ಈಗ ಮೆನುನಲ್ಲಿರುವ Investments ವಿಭಾಗಕ್ಕೆ ಭೇಟಿ ನೀಡಿ.
*ಅಲ್ಲಿ ಡಿಮ್ಯಾಟ್ ಖಾತೆ ಮೇಲೆ ಕ್ಲಿಕ್ ಮಾಡಿ.
*ಈಗ ಖಾತೆದಾರರ ಹೆಸರು, ಪ್ಯಾನ್ ಸಂಖ್ಯೆ ಸೇರಿದಂತೆ ಅಗತ್ಯ ವಿವರಗಳನ್ನು ನಮೂದಿಸಿ. ಅರ್ಜಿಯನ್ನು ಸಲ್ಲಿಕೆ ಮಾಡಿ.
ಡಿಮ್ಯಾಟ್ ಖಾತೆ ತೆರೆಯಲು ಸಲ್ಲಿಸಿದ ಅರ್ಜಿಯನ್ನು ಎಸ್ ಬಿಐಸೆಕ್ಯುರಿಟೀಸ್ ಪರಿಶೀಲಿಸುತ್ತದೆ. ಮಾಹಿತಿಗಳು ಸರಿಯಿದ್ದರೆ ಡಿಮ್ಯಾಟ್, ಟ್ರೇಡಿಂಗ್ ಖಾತೆ ತೆರೆಯುತ್ತದೆ. ಡಿಮ್ಯಾಟ್ ಖಾತೆ ತೆರೆದ ಬಳಿಕ ನೀವು ಷೇರುಗಳ ಖರೀದಿ ಹಾಗೂ ಮಾರಾಟ ಮಾಡಬಹುದು. ಎಲ್ಐಸಿ ಐಪಿಒಗೆ ಕೂಡ ಅರ್ಜಿ ಸಲ್ಲಿಸಬಹುದು. ಎಲ್ ಐಸಿ ಐಪಿಒ ಮೇ 4ಕ್ಕೆ ಪ್ರಾರಂಭವಾಗಿ ಮೇ 9ರ ತನಕ ನಡೆಯಲಿದೆ. ಈ ಅವಧಿಯಲ್ಲಿ ಎಲ್ಐಸಿ ಷೇರುಗಳನ್ನು ಖರೀದಿಸಬಹುದು. ಇನ್ನು ಆಂಕರ್ ಹೂಡಿಕೆದಾರರಿಗೆ ನಿನ್ನೆಯಿಂದಲೇ (ಮೇ 2) ಅವಕಾಶ ಕಲ್ಪಿಸಲಾಗಿದೆ. ಇನ್ನು ಷೇರುಗಳನ್ನು ಮೇ 16ಕ್ಕೆ ಡಿಮ್ಯಾಟ್ (Demate) ಖಾತೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಮೇ 17ರಂದು ವಿನಿಮಯ ಕೇಂದ್ರಗಳಲ್ಲಿ ಷೇರುಗಳನ್ನು ಲಿಸ್ಟ್ ಮಾಡಲಾಗುವುದು. ಸರ್ಕಾರ ಎಲ್ಐಸಿ ಪಾಲಿಸಿದಾರರಿಗೆ ಶೇ.10ರಷ್ಟು ಷೇರುಗಳನ್ನು ಮೀಸಲಿಟ್ಟಿದೆ. ಇನ್ನು ಎಲ್ಐಸಿ ಉದ್ಯೋಗಿಗಳಿಗೆ ಶೇ.5ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ರಿಟೇಲ್ ಹೂಡಿಕೆದಾರರಿಗೆ ಶೇ.35ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ.
ಕೇಂದ್ರದಿಂದ ಐಟಿ ರಿಟರ್ನ್ಸ್ ಪರಿಷ್ಕರಣೆಗೆ ಹೊಸ ಫಾರ್ಮ್!
ಎಲ್ಐಸಿ ಐಪಿಒ ಮೂಲಕ ಸರ್ಕಾರ ಶೇ.3.5 ಷೇರುಗಳನ್ನು ಮಾರಾಟ ಮಾಡಿ ಸುಮಾರು 21,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಎಲ್ಐಸಿಯ ಪ್ರತಿ ಷೇರಿಗೆ 902ರೂ.-949ರೂ. ಬೆಲೆ ನಿಗದಿಪಡಿಸಲಾಗಿದೆ. ಎಲ್ ಐಸಿ ಪಾಲಿಸಿದಾರರಿಗೆ (Policyholders) ಪ್ರತಿ ಷೇರಿನ ಮೇಲೆ 60ರೂ. ಡಿಸ್ಕೌಂಟ್ (Discount) ನೀಡಲಾಗಿದೆ. ಇನ್ನು ಎಲ್ಐಸಿ ಸಿಬ್ಬಂದಿ (employees) ಹಾಗೂ ರಿಟೇಲ್ ಹೂಡಿಕೆದಾರರಿಗೆ (Retail Investors) ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿದೆ.